ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೭

ನಾಟಿಪಶುವೈದ್ಯ

ಗಬ್ಬದ ರಾಸುಗಳಲ್ಲಿ ಮೈ ಹೊರ ಹಾಯುವುದು

ಡಾ.ರವಿಕುಮಾರ್, ಪಿ
9008598832
1

ಹೈನುಗಾರಿಕೆ ಒಂದು ಲಾಭದಾಯಕ ಉದ್ಯಮವಾದರೂ ಹಲವು ಸಮಸ್ಯೆಗಳು ರೈತನನ್ನು ಆಗಾಗ ಹೈರಾಣಾಗಿಸುತ್ತವೆ. ಇನ್ನೇನು ನಮ್ಮ ಹಸು ಗರ್ಭ ಧರಿಸಿದೆ, ಇನ್ನು ಕೆಲವೇ ತಿಂಗಳಲ್ಲಿ ಕರು ಹಾಕಿ ಮನೆಯಲ್ಲಿ ಹಾಲಿನ ಹೊಳೆ ಹರಿಯುತ್ತದೆ ಎಂಬ ಸಂಭ್ರಮದಲ್ಲಿರುವ ರೈತ ಬೆಳಗೆದ್ದು ಹಸುವಿಗೆ ಮೇವು ಹಾಕಲು ಹೋದಾಗ ಕಂಗಾಲಾಗಿ ದಿಗಿಲು ಬೀಳುವಂತೆ ಮಾಡುವ ಸಮಸ್ಯೆಯೆಂದರೆ ನೆಣೆ ಬರುವುದು ಅಥವಾ ಮೈ ಹೊರ ಹಾಯುವುದು. ಹಸುವಿನ ಗರ್ಭಾಶಯ ಭಾಗಶಃ ಅಥವಾ ಸಂಪೂರ್ಣವಾಗಿ ಯೋನಿದ್ವಾರದಿಂದ ಹೊರಬಂದು ಕಾಣಿಸಿಕೊಳ್ಳುವುದು ಈ ರೋಗದ ಪ್ರಮುಖ ಲಕ್ಷಣ. ಇದು ಎಮ್ಮೆಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದಾದರೂ ಹಲವು ವೇಳೆ ಮಿಶ್ರತಳಿ ಹಸುಗಳಲ್ಲಿಯೂ ಗರ್ಭದ ಅವಧಿಯಲ್ಲಿ ಅಥವಾ ಕರು ಹಾಕಿದ ನಂತರ ಕಾಣಿಸಿಕೊಳ್ಳಬಹುದು.

ಕಾರಣಗಳು: ರಾಸುಗಳ ಮೈ ಹೊರ ಹಾಯುವುದಕ್ಕೆ ಕಾರಣಗಳು ಹಲವಾರು. ಗರ್ಭಾಶಯವನ್ನು ಹಿಡಿದು ನಿಲ್ಲಿಸುವ ಸ್ನಾಯುಗಳು ಹಾಗೂ ಅಸ್ತಿರಜ್ಜುಗಳ ಬಲಹೀನತೆ. ಮೊದಲ ಎರಡು ಮೂರು ಸೂಲುಗಳಲ್ಲಿ ಈ ಸಮಸ್ಯೆ ಕಾಣಿಸದೇ ಹೋದರೂ ನಂತರದ ಸೂಲುಗಳಲ್ಲಿ ಸಮಸ್ಯೆ ಹೆಚ್ಚು. ಹಲವು ರಾಸುಗಳಲ್ಲಿ ಇದಕ್ಕೆ ಆನುವಂಶಿಕ ಕಾರಣಗಳೂ ಇರಬಹುದು. ಎಮ್ಮೆಗಳ ದೇಹ ರಚನೆಯಲ್ಲಿರುವ ಹಲವು ವ್ಯತ್ಯಾಸಗಳಿಂದಾಗಿ ಅವುಗಳಲ್ಲಿ ಈ ಸಮಸ್ಯೆ ಹೆಚ್ಚು. ಗರ್ಭಾವಧಿಯಲ್ಲಿ ರಾಸುಗಳ ಪೋಷಣೆ ಅತಿ ಮುಖ್ಯ. ಆ ಸಮಯದಲ್ಲಿ ಸರಿಯಾದ ಪೋಷಕಾಂಶಗಳು ಲಭ್ಯವಾಗದಿದ್ದರೆ ರಾಸುಗಳ ಗರ್ಭಕೋಶ ಹಾಗೂ ಸಂಬಂಧಿಸಿದ ಅಸ್ತಿರಜ್ಜುಗಳು ಬಲಹೀನವಾಗಿ ನೆಣೆ ಬರಬಹುದು. ಕರು ಹಾಕುವಾಗ ತೊಂದರೆಯಾದಾಗ ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಅಸಮರ್ಪಕವಾಗಿ ಹಾಗೂ ಒರಟೊರಟಾಗಿ ಕರುವನ್ನು ಎಳೆದಾಡಿದರೆ ನಂತರ ಮೈ ಹೊರ ಹಾಯುವ ಸಂಭವನೀಯತೆ ಹೆಚ್ಚಾಗಿರುತ್ತದೆ.

4

ಹೇಗೆ ತಪ್ಪಿಸಬಹುದು?: ಮೊದಲೇ ಹೇಳಿದಂತೆ ಗರ್ಭದ ಅವಧಿಯಲ್ಲಿ ಜಾನುವಾರುಗಳಿಗೆ ವಿಶೇಷ ಪೋಷಣೆ ಅಗತ್ಯ. ಹಸುಗಳನ್ನು ಖರೀದಿಸುವಾಗ ಅವುಗಳಿಗೆ ಅಥವಾ ಹಿಂದಿನ ಪೀಳಿಗೆಯಲ್ಲಿ ಈ ಸಮಸ್ಯೆ ತಲೆದೋರಿತ್ತೇ ಎಂದು ಖಚಿತಪಡಿಸಿಕೊಳ್ಳಬೇಕು. ಒಂದೊಮ್ಮೆ ನೆಣೆ ಬರುವ ಲಕ್ಷಣಗಳು ತಲೆದೋರಿದರೆ ಅವುಗಳಿಗೆ ಮೇವನ್ನು ಒಮ್ಮೆಲೇ ಹಾಕದೆ ಸ್ವಲ್ಪ ಸ್ವಲ್ಪವಾಗಿ ಆಗಾಗ ಹಾಕುತ್ತಿರಬೇಕು. ಅಂತಹ ರಾಸುಗಳನ್ನು ಹೊರಗಡೆ, ವಿಶೇಷವಾಗಿ ಗುಡ್ಡಗಾಡು ಪ್ರದೇಶದಲ್ಲಿ ಮೇಯಲು ಬಿಡಬಾರದು. ಸಾಧ್ಯವಾದಷ್ಟು ರಾಸುಗಳ ಮುಂಭಾಗ ಇಳಿಜಾರಿನಲ್ಲಿರುವಂತೆ ಕಟ್ಟಬೇಕು. ಒಂದೊಮ್ಮೆ ನೆಣೆ ಬಂದ ಪಕ್ಷದಲ್ಲಿ ಗಾಬರಿಯಾಗದೆ ತಕ್ಷಣ ಪಶುವೈದ್ಯರನ್ನು ಕರೆಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು. ತಮ್ಮಷ್ಟಕ್ಕೆ ತಾವೇ ಚಿಕಿತ್ಸೆ ಕೊಡಬಾರದು. ಸಾಧ್ಯವಾದಷ್ಟು ಹೊರಚಾಚಿದ ಗರ್ಭಾಶಯ ಗಲೀಜಾಗದಂತೆ ನೋಡಿಕೊಳ್ಳಬೇಕು. ಪಶುವೈದ್ಯರು ಬರುವವರೆಗೆ ಕಾಲಕಾಲಕ್ಕೆ ಸ್ವಚ್ಛ ತಣ್ಣೀರಿನಿಂದ ತೊಳೆಯುತ್ತಿರಬೇಕು, ಐಸ್ ತುಂಡುಗಳನ್ನು ಬೆರೆಸಿದ ನೀರಾದರೆ ಇನ್ನೂ ಉತ್ತಮ. ಹೊರಚಾಚಿದ ಗರ್ಭಾಶಯ ಊದಿಕೊಳ್ಳದಂತೆ ಅದಕ್ಕೆ ಸಕ್ಕರೆಯನ್ನು ಬೇಕಾದರೆ ಸವರಬಹುದು. ಕಡ್ಡಾಯವಾಗಿ ಹಸುವನ್ನು ಮುಂಭಾಗ ಇಳಿಮುಖವಾಗಿರುವಂತೆ ಕಟ್ಟಬೇಕು.

ಕೆಲವು ಮನೆಮದ್ದುಗಳು:

  • ಮುಟ್ಟಿದರೆ ಮುನಿ ಸೊಪ್ಪು: ಒಂದೆರಡು ಬೊಗಸೆಯಷ್ಟು ಮುಟ್ಟಿದರೆ ಮುನಿ ಸೊಪ್ಪನ್ನು ಚೆನ್ನಾಗಿ ಜಜ್ಜಿ ಉಂಡೆ ಮಾಡಿ ರಾಸಿನ ಬಾಯಿಗಿಟ್ಟು ತಿನ್ನಿಸಬೇಕು. ಸ್ವಲ್ಪ ರಸ ತೆಗೆದು ನೆಣೆ ಬಂದ ಜಾಗಕ್ಕೆ ಸವರಬೇಕು. ದಿನಕ್ಕೆರಡು ಬಾರಿಯಂತೆ ಮೂರು ದಿನ ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಕಾಣಬಹುದು
  • ಶತಾವರಿ ಗಡ್ಡೆ: ಎರಡು ಬೊಗಸೆಯಷ್ಟು ಶತಾವರಿ ಗಡ್ಡೆಯ ತುಂಡುಗಳನ್ನು ಬೆಣ್ಣೆಯಷ್ಟು ಮೃದುವಾಗಿ ಅರೆದು ಕೈಗೆ ಶೇಂಗಾ ಎಣ್ಣೆ ಬಳಿದುಕೊಂಡು ತಯಾರಿಸಿದ ಔಷಧಿಯನ್ನು ನೆಣೆಯ ಭಾಗಕ್ಕೆ ಸವರಿ ನಿಧಾನವಾಗಿ ಒಳಗೆ ಒತ್ತಿ ಸೇರಿಸಬೇಕು. (ಗ್ರಂಥ ಋಣ: ಬೈಫ್ ಸಂಸ್ಥೆಯ ಪ್ರಕಟಣೆ: ಮೂಲಿಕಾ ಪಶುವೈದ್ಯ)
  •