ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೭

ಔಷಧಿ ಸಸ್ಯಗಳು

ಬಹೂಪಯೋಗಿ ನೆಲ್ಲಿ

image_
ಡಾ. ಯಶಸ್ವಿನಿ ಶರ್ಮ
9535228694
1

ಫಿಲಾಂಥsಸ್ ಎಂಬ್ಲಿಕಾ ಎಂದು ವೈಜ್ಞಾನಿಕವಾಗಿ ಕರೆಯಲ್ಪಡುವ ನೆಲ್ಲಿ ಯುಫೋರ್ಬಿಯೇಸೀ ಕುಟುಂಬ ವರ್ಗಕ್ಕೆ ಸೇರಿದೆ. ಸಂಸ್ಕೃತದಲ್ಲಿ ಇದನ್ನು ಆಮ್ಲುಕಿ ಅಥವಾ ಧಾತ್ರಿ ಎನ್ನುವರು. ಹಣ್ಣುಗಳು ಅತಿಹೆಚ್ಚು ವಿಟಮಿನ್ ಸಿ ಅಂಶ ಹೊಂದಿದ್ದು, ಯಕೃತ್ತಿಗೆ ಶಕ್ತಿ ಕೊಡುವ ಟಾನಿಕ್ನಂತೆ ಕೆಲಸ ಮಾಡುತ್ತದೆ. ಹಣ್ಣಿನಲ್ಲಿರುವ ಫಿಲೆಂಬ್ಲಿನ್ ಎಂಬ ರಾಸಾಯನಿಕ ಅಂಶವು ಕೇಂದ್ರೀಯ ನರಮಂಡಲಕ್ಕೆ ಶಕ್ತಿ ಕೊಡುವುದಲ್ಲದೇ ಮನಸ್ಸಿನ ಉದ್ವಿಗ್ನತೆ ಶಾಂತಗೊಳಿಸುತ್ತದೆ. ನೆಲ್ಲಿಕಾಯಿಯನ್ನು ಹಲವಾರು ಆಯುರ್ವೇದಿಕ್ ಔಷಧಿಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಇದನ್ನು ರಕ್ತಹೀನತೆ ಮತ್ತು ರಕ್ತಸ್ರಾವ ತಡೆಗಟ್ಟಲು, ಮಲಬದ್ಧತೆ ನಿವಾರಿಸಲು, ಹಲ್ಲು ನೋವು, ಆಮಶಂಕೆ ತಡೆಗಟ್ಟಲು ಹಾಗೂ ಚರ್ಮದ ಕಾಂತಿವರ್ಧನೆಗಾಗಿ ಪರಿಣಾಮಕಾರಿಯಾಗಿ ಉಪಯೋಗಿಸಲಾಗುತ್ತದೆ.

ಮಾರುಕಟ್ಟೆಯಲ್ಲಿ ದೊರೆಯುವ ನೆಲ್ಲಿಕಾಯಿಯ ಉತ್ಪನ್ನಗಳೆಂದರೆ

  • ತ್ರಿಫಲಾ ಚೂರ್ಣ (ನೆಲ್ಲಿ, ಅಣಲೆ ಹಾಗೂ ತಾರೆಕಾಯಿ ಪುಡಿ ಮಿಶ್ರಣ): ಮಲಬದ್ಧತೆ ನಿವಾರಣೆಗೆ
  • ಆಮ್ಲಾರಿಷ್ಟ, ಬ್ರಹ್ಮರಸಾಯನ ಹಾಗೂ ಚ್ಯವನಪ್ರಾಶ: ರಕ್ತ ಹೀನತೆ ನಿವಾರಣೆಗೆ ಹಾಗೂ ಮಾನಸಿಕ ವಿಕಾಸಕ್ಕಾಗಿ
  • ಮಧುಮೇಹ ಚೂರ್ಣ: ಡಯಾಬಿಟಿಸ್ ಚಿಕಿತ್ಸೆಯಲ್ಲಿ ಉಪಯೋಗಿಸುತ್ತಾರೆ.
  • ಕೈಗಾರಿಕೆ ಮತ್ತು ಗೃಹ ಉದ್ದಿಮೆಗಳಲ್ಲಿ ನೆಲ್ಲಿಕಾಯಿಗೆ ಬಹುಬೇಡಿಕೆ ಎಂದೇ ಹೇಳಬಹುದು. ಇದರಿಂದ ಆರೋಗ್ಯ ಹಾಗೂ ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸುತ್ತಾರೆ. ಉದಾ: ಶಾಂಪೂ, ಕೇಶ ತೈಲ, ಹಲ್ಲು ಪುಡಿ, ಮುಖದ ಕ್ರೀಮ್ ಇತ್ಯಾದಿ. ನೆಲ್ಲಿಕಾಯಿಯಿಂದ ತಯಾರಿಸಲಾದ ಜಾಮ್, ಮುರಬ್ಬ, ಗುಳಂಬ, ಕಾಂಡೀ, ಸುಪಾರಿ, ಉಪ್ಪಿನಕಾಯಿಗಳು ಸವಿಯಲು ಬಲು ರುಚಿಯಾಗಿರುವುದಲ್ಲದೇ ಆರೋಗ್ಯಕರವೂ ಹೌದು. ನೈಸರ್ಗಿಕವಾಗಿ ಇದು ಭಾರತದ ಎಲೆ ಉದುರುವ ಅರಣ್ಯದಲ್ಲಿ ಕಂಡುಬರುತ್ತಿದ್ದು, ವಾಣಿಜ್ಯವಾಗಿ ಉತ್ತರಪ್ರದೇಶ, ಹಿಮಾಚಲ ಪ್ರದೇಶ ಹಾಗೂ ಕರ್ನಾಟಕದಲ್ಲಿ ಬೆಳೆಯುತ್ತಾರೆ. ನೆಲ್ಲಿಕಾಯಿ ಬಹು ಗಡುಸಾದ ಸಸ್ಯವಾಗಿದ್ದು ಅತೀ ತಂಪಾದ ವಾತಾವರಣ ಅಲ್ಲದೇ ಉಷ್ಣ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯುತ್ತದೆ. ಇದನ್ನು ಒಣ ಪ್ರದೇಶದಲಲ್ಲದೆ, ಬಂಜರು ಭೂಮಿಯಲ್ಲೂ ಲಾಭದಾಯಕವಾಗಿ ಬೆಳೆಯಬಹುದು. ಸಂರಕ್ಷಿತ ನೀರಾವರಿ ಒದಗಿಸಿದಲ್ಲಿ ಹೆಚ್ಚು ಇಳುವರಿ ಪಡೆಯಬಹುದು.ಬನಾರಸಿ, ಚಕೈಯ್ಯಾ, ಫ್ರಾನ್ಸಿಸ್ ಸ್ಥಳೀಯ ತಳಿಗಳಾಗಿದ್ದು ಇಳುವರಿ ಕಡಿಮೆ ಹಾಗೂ ನಾರಿನಂಶ ಹೆಚ್ಚಿರುತ್ತದೆ. ಸಂಸ್ಕರಣೆಗಾಗಿ ಸುಧಾರಿತ ತಳಿಗಳಾದ ಕಂಚನ್, ಅಮೃತ, ನೀಲಮ್, ಬಲವಂತ್, ಎನ್.ಎ.-೯ ತಳಿಗಳನ್ನು ಬೆಳೆಯುವುದು ಸೂಕ್ತ. ಉತ್ತಮ ಪರಾಗಸ್ಪರ್ಶ ಹಾಗೂ ಅಧಿಕ ಇಳುವರಿಗಾಗಿ ೨-೩ ತಳಿಗಳನ್ನು ಒಟ್ಟಿಗೆ ಬೆಳೆಯುವುದು ಲಾಭದಾಯಕ.

    ಆರೋಗ್ಯಕರವಾದ ೬ ತಿಂಗಳಿಂದ-ಒಂದು ವರ್ಷದ ಕಣ್ಣುಕಸಿ ಅಥವಾ ಬೆಣೆಕಸಿ ಮೂಲಕ ತಯಾರಿಸಿದ ಸಸಿಗಳನ್ನು ನಾಟಿ ಮಾಡಲು ಉಪಯೋಗಿಸಬೇಕು. ೧೨ ಅಡಿ ಅಂತರದಲ್ಲಿ ೩ ಅಡಿ ಉದ್ದ, ಅಗಲ ಹಾಗೂ ಆಳವಿರುವ ಗುಣಿಗಳನ್ನು ತೆಗೆದು, ೧೫-೨೦ ಕೆ.ಜಿ ತಿಪ್ಪೆಗೊಬ್ಬರ ಹಾಗೂ ೦.೫ ಕೆ.ಜಿ ಸೂಪರ್ ಫಾಸ್ಪೇಟ್ ಗೊಬ್ಬರದೊಂದಿಗೆ ಮಳೆಗಾಲದಲ್ಲಿ ನಾಟಿ ಮಾಡುವುದು ಉತ್ತಮ. ವರ್ಷಕ್ಕೆ ೨ ಬಾರಿ ಅಂದರೆ ಸೆಪ್ಟೆಂಬರ್-ಅಕ್ಟೋಬರ್ ಮತ್ತು ಮೇ-ಜೂನ್ ತಿಂಗಳಲ್ಲಿ ಗೊಬ್ಬರ ಬಳಸಿ ನೀರು ಹಾಯಿಸಬೇಕು. ಹಣ್ಣುಗಳ ಮೇಲೆ ಕಪ್ಪು ಇಲ್ಲವೇ ಕೆಂಪು ಚುಕ್ಕೆಯಾಗಿ ಉದುರುತ್ತಿದ್ದರೆ, ಪ್ರತಿ ಗಿಡಕ್ಕೆ ೨೦ ಗ್ರಾಂ ಬೋರಾನ್ ಗೊಬ್ಬರ ಒದಗಿಸಬೇಕು. ಮೊದಲ ಎರಡು ವರ್ಷಗಳಲ್ಲಿ ನೆಲದಿಂದ ೩ ಅಡಿ ಎತ್ತರದವರೆಗೆ ಬರುವ ಎಲ್ಲಾ ಕೊಂಬೆಗಳನ್ನು ಚಿವುಟಿ ಹಾಕಬೇಕು. ನಂತರ ೪-೫ ಆರೋಗ್ಯಕರ ಕೊಂಬೆಗಳನ್ನು ಬೆಳೆಯಲು ಬಿಡಿ. ಮೊದಲ ೮ ವರ್ಷಗಳಲ್ಲಿ ಉದ್ದು, ಹೆಸರು, ಅಲಸಂದೆ, ಹುರುಳಿ ಬೆಳೆಗಳನ್ನು ಅಂತರ ಬೆಳೆಗಳಾಗಿ ಬೆಳೆಯಬಹುದು. ೫ ವರ್ಷಗಳ ನಂತರ ಗಿಡಗಳು ಕಾಯಿಬಿಡಲು ಪ್ರಾರಂಭಿಸುತ್ತವೆ. ಕಾಯಿಗಳು ಗಾಢ ಹಸಿರು ಬಣ್ಣದಿಂದ ತಿಳಿ ಹಸಿರು ಅಥವಾ ಹಳದಿ ಬಣ್ಣಕ್ಕೆ ತಿರುಗಿದಾಗ ಕೊಯ್ಲು ಮಾಡಬೇಕು. ೧೦ ವರ್ಷದ ಒಂದು ಗಿಡ ಸುಮಾರು ೫೦-೭೦ ಕೆ.ಜಿ. ಹಣ್ಣುಗಳನ್ನು ನೀಡುತ್ತದೆ ಹಾಗೂ ೭೦ ವರ್ಷಗಳ ಕಾಲ ಇಳುವರಿ ನೀಡುತ್ತದೆ.