ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೭

ಬಾಲವನ

ಬಾರಬೆಡೋಸ್ ಚೆರ್ರಿ

image_
ಡಾ. ಯಶಸ್ವಿನಿ ಶರ್ಮ
9535228694
1

ಚೆರ್ರಿ ಆಹಾ ಅನ್ನುವಂತ ರುಚಿ. ನಿಮಗೆಲ್ಲಾ ಇಷ್ಟವಾದ ಹಣ್ಣು. ಅಮೆರಿಕಾ ಇದರ ತವರಾದರೂ ನಮ್ಮಲ್ಲೂ ಹೊಂದಿಕೊಂಡಿದೆ. ನಮ್ಮ ಮನೆಯಂಗಳ ಕೈತೋಟಗಳಲ್ಲಿ ಇದನ್ನು ಬೆಳೆಸಬಹುದು. ಇದರ ವೈಜ್ಞಾನಿಕ ಹೆಸರು ಮಾಲ್ಫಿಜಿಯಾ ಎಮರ್ಜಿನೆಟಾ ಇದಕ್ಕೆ ಇಂಗ್ಲೀಷ್ನಲ್ಲಿ ಬಾರ್ಬೆಡೋಸ್ ಚೆರ್ರಿ ಅಥವಾ ಅಸಿರೋಲ್ಲಾ ಎನ್ನುತ್ತಾರೆ. ಇದು ಸುಮಾರು ೬ ರಿಂದ ೧೦ ಅಡಿ ಎತ್ತರಕ್ಕೆ ಬೆಳೆಯುವ ಈ ಸಸ್ಯ. ಎಲೆಗಳು ಚಿಕ್ಕದಾಗಿ ದಟ್ಟ ಹಸಿರು ಬಣ್ಣದಲ್ಲಿರುತ್ತವೆ. ಮಾರ್ಚ್ನಿಂದ ನವೆಂಬರ್ವರೆಗೆ ಚಿಕ್ಕ ೫ ದಳಗಳುಳ್ಳ ತಿಳಿ ಗುಲಾಬಿ ಬಣ್ಣದ ಹೂಗಳನ್ನು ಬಿಡುತ್ತದೆ. ನಾಟಿ ಮಾಡಿದ ೩ ವರ್ಷಗಳಲ್ಲಿ ಗಿಡದ ತುಂಬ ಚಿಕ್ಕ ಗೋಲಿ ಗಾತ್ರದ ಕಡುಕೆಂಪು ಹಣ್ಣುಗಳನ್ನು ಬಿಡುತ್ತದೆ. ಇವು ಸ್ವಲ್ಪ ಸಿಹಿ ಹಾಗೂ ಹುಳಿಯಾಗಿರುತ್ತವೆ. ಸವಿಯಲು ಬಲುರುಚಿ ಹಾಗೂ ಮಕ್ಕಳಿಗೆ ಬಹುಪ್ರಿಯವಾದ ಹಣ್ಣು ಮತ್ತು ಹಣ್ಣುಗಳಲ್ಲೇ ಅತಿ ಹೆಚ್ಚು ಜೀವಸತ್ವ ’ಸಿ’ ಹೊಂದಿವೆ. ಪ್ರತಿ ೧೦೦ ಗ್ರಾಂ. ಹಣ್ಣಿನಲ್ಲಿ ಸುಮಾರು ೧೬೭೭ ಮಿ. ಗ್ರಾಂ. ವಿಟಮಿನ್ ಸಿ ಅಂಶ ಹೊಂದಿದೆ. ಇದಲ್ಲದೇ ಜೀವಸತ್ವ ಎ, ಬಿ; ಖನಿಜಗಳಾದ ಕ್ಯಾಲ್ಸಿಯಂ, ಮೆಗ್ನೇಷಿಯಂ ಮತ್ತು ಕಬ್ಬಿಣಾಂಶವನ್ನು ಕೂಡ ಹೊಂದಿರುತ್ತವೆ. ತಾಜಾ ಹಣ್ಣುಗಳನ್ನು ಸಂಸ್ಕರಿಸಿ ಉಪಯೋಗಿಸಬಹುದು. ಜ್ಯೂಸ್, ಜಾಮ್, ಸಿರಪ್ ಹಾಗೂ ಶಿಶುಮಕ್ಕಳ ಆಹಾರ ತಯಾರಿಕೆಯಲ್ಲಿ ಹಣ್ಣುಗಳನ್ನು ಉಪಯೋಗಿಸುತ್ತಾರೆ. ಇದು ಅತಿ ಹೆಚ್ಚು ’ಆಂಟಿ ಆಕ್ಸಿಡೆಂಟ್’ ಗುಣ ಹೊಂದಿದ್ದು, ತ್ವಚೆ ಹಾಗೂ ಕೇಶಕಾಂತಿ ವೃದ್ಧಿಸುವುದು. ಇದನ್ನು ಅಡುಗೆಯಲ್ಲಿಯೂ ಸಹ ಬಳಸಬಹುದು. ಅಸಿರೋಲಾದಿಂದ ಸಿಹಿಗೊಜ್ಜು ಸಲಾಡ್ ತಯಾರಿಸುತ್ತಾರೆ. ಇದರಿಂದ ತಯಾರಿಸಿದ ಖಾದ್ಯಗಳು ಸ್ವಾದಿಷ್ಟಕರವಾಗಿರುವುದಲ್ಲದೇ, ಪೌಷ್ಟಿಕಾಂಶದಿಂದ ಕೂಡಿರುತ್ತವೆ. ಬೇಸಿಗೆಯಲ್ಲಿ ಪಕ್ಷಿಗಳಿಗೆ ಈ ಹಣ್ಣು ಪ್ರಿಯ ಆಹಾರವಾಗಿದೆ. ಗಿಡವನ್ನು ಕಾಂಡದ ತುಂಡುಗಳಿಂದ ಅಥವಾ ಗೂಟಿ ವಿಧಾನದಿಂದ ವಂಶಾಭಿವೃದ್ಧಿ ಮಾಡಬಹುದು. ಮಳೆಗಾಲದಲ್ಲಿ ನಾಟಿ ಮಾಡಿದರೆ ಚೆನ್ನಾಗಿ ಬೇರು ಬಿಡುತ್ತದೆ.

ಇದು ಅಲಂಕಾರಿಕವಾಗಿಯೂ ಕೈತೋಟದ ಅಂಚಿನಲ್ಲಿ ಸಸ್ಯವಾಗಿ, ’ಬೋನ್ಸಾಯ್’, ಕುಬ್ಬ ಸಸ್ಯವಾಗಿ ಬಳಸಲು ಅತೀ ಸೂಕ್ತವಾಗಿದೆ. ನೀರು ಬಸಿದು ಹೋಗುವ ಮರಳು ಮಿಶ್ರಿತ ಕೆಂಪು ಅಥವಾ ಕಪ್ಪು ಮಣ್ಣು ಹಾಗೂ ಬಿಸಿಲಿನ ಪ್ರದೇಶದಲ್ಲಿ ಇದು ಹುಲುಸಾಗಿ ಬೆಳೆಯುತ್ತದೆ.

ಬಾರಬೆಡೋಸ್ ಚೆರ್ರಿ ಖಾದ್ಯಗಳು:

ಸಿಹಿಗೊಜ್ಜು: ಹಣ್ಣನ್ನು ಸ್ವಲ್ಪ ಬೇಯಿಸಿ ಬೀಜ ತೆಗೆದು, ಸ್ವಲ್ಪ ಬೆಲ್ಲ, ಉಪ್ಪು, ಹಸಿಮೆಣಸಿನಕಾಯಿ ಹಾಕಿ ರುಬ್ಬಿಕೊಳ್ಳಬೇಕು. ಇಂಗು, ಸಾಸಿವೆ, ಕರಿಬೇವು ಸೇರಿಸಿ ಒಗ್ಗರಣೆ ಹಾಕಿದರೆ ಸ್ವಾದಿಷ್ಟ ಗೊಜ್ಜು ರೆಡಿ! ಇದು ಚಪಾತಿ, ದೋಸೆ, ಬ್ರೆಡ್ ಜೊತೆ ಸವಿಯಲು ಬಲುರುಚಿ.

ಹಸಿ: ಹಣ್ಣನ್ನು ಬೇಯಿಸಿ ಬೀಜ ತೆಗೆದು ತಾಜಾ ಮೊಸರು, ಬೆಲ್ಲ, ಉಪ್ಪು, ಮಿಶ್ರಮಾಡಿ. ಒಣಮೆಣಸು, ಸಾಸಿವೆ, ಇಂಗು, ಕರಿಬೇವಿನ ಒಗ್ಗರಣೆ ಹಾಕಬೇಕು. ಅನ್ನದ ಜೊತೆ ಸಹ ಸೇವಿಸಬಹುದು.

ಜಾಮ್: ಚೆರ್ರಿ ಹಣ್ಣನ್ನು ಬೇಯಿಸಿ ಬೀಜ ತೆಗೆದು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಹಣ್ಣಿನ ರಸದ ಪ್ರಮಾಣದಷ್ಟೇ ಸಕ್ಕರೆ ಸೇರಿಸಿ ೨೦ ರಿಂದ ೨೫ ನಿಮಿಷ ಸಣ್ಣಉರಿಯಲ್ಲಿ ಕುದಿಸಿ. ಜಾಮ್ ದಪ್ಪವಾಗುತ್ತಿದ್ದಂತೆ ಸ್ವಲ್ಪ ಏಲಕ್ಕಿ ಪುಡಿ ಸೇರಿಸಿ ತಣಿಸಬೇಕು. ಇದನ್ನು ಕೆಡದಂತೆ ೬ ತಿಂಗಳ ಕಾಲ ಗಾಜಿನ ಭರಣಿಯಲ್ಲಿ ಶೇಖರಿಸಿಡಬಹುದು.

8