ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೭

ಬೀಜ ಪ್ರಪಂಚ

ಮುರಗಲ (ಕೋಕಂ/ಪುನರ್ಪುಳಿ)

image_
ಡಾ. ಕೆ. ಎಸ್. ಶೇಷಗಿರಿ
9741769213
1

ಕೋಕಂ ಬೆಳೆಯು ಭಾರತದ ಪಶ್ಚಿಮಘಟ್ಟ ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತಿದ್ದು ಪ್ಲಾಂಟೇಶನ್ ಬೆಳೆಯಾಗಿ ಬೆಳೆಯಲು ಸೂಕ್ತವಾದ ಮೈನರ್ ಹಣ್ಣಿನ/ಸಾಂಬಾರು ಬೆಳೆ. ಇದರ ಉಗಮ ಸ್ಥಾನ ಭಾರತ. ವೈಜ್ಞಾನಿಕವಾಗಿ ಇದನ್ನು ಗಾರ್ಸಿನಿಯಾ ಇಂಡಿಕ ಎಂದು ಕರೆಯಲಾಗುತ್ತಿದ್ದು ಇದು ಗಟ್ಟಿಫೆರೆ ಕುಟುಂಬಕ್ಕೆ ಸೇರಿದೆ. ಇದೊಂದು ಶೀಘ್ರವಾಗಿ ೧೦-೧೫ ಮೀ. ಎತ್ತರಕ್ಕೆ ಬೆಳೆಯುವ ಗಡಸು ಮರವಾಗಿದ್ದು, ಬಾಗಿರುವ ರೆಂಬೆಗಳನ್ನು ಹೊಂದಿರುತ್ತದೆ. ಕೋಕಂ ತಿರುಳನ್ನು ಹುಣಸೆ ಹುಳಿಗೆ ಪರ್ಯಾಯವಾಗಿ ಬಳಸಬಹುದಾಗಿದ್ದು ಇದರಿಂದ, ’ಅಮ್ಸಲ್, ಕೋಕಮ್ ಅಮ್ರತ್ ಮತ್ತು ಕೋಕಂ ಸ್ಕ್ವಾಶ್’ ಮುಂತಾದ ಉಪ ಉತ್ಪನ್ನಗಳನ್ನು ತಯಾರಿಸುತ್ತಾರೆ. ಪ್ರತಿ ೧೦೦ ಗ್ರಾಂ ತಿರುಳಿನಿಂದ ೮೦ ಗ್ರಾಂ ತೇವಾಂಶ, ೨.೪ ಗ್ರಾಂ ಆಂತೊಸಯನಿನ್, ೧.೦ ಗ್ರಾಂ ಸಸಾರಜನಕ, ೧.೭ ಗ್ರಾಂ ಟ್ಯಾನಿನ್, ೪.೧ ಗ್ರಾಂ ಸಕ್ಕರೆ, ೧.೪ ಗ್ರಾಂ ಕಚ್ಚಾಕೊಬ್ಬು, ೦.೯ ಗ್ರಾಂ ಪೆಕ್ಟಿನ್ ಮತ್ತು ೫.೯ ಗ್ರಾಂ ಆರ್ಗಾನಿಕ್ ಆಮ್ಲ ದೊರೆಯುತ್ತದೆ. ಇದನ್ನು ಆಹಾರದಲ್ಲಿ ಬಳಕೆಯಿಂದ ಹಲವಾರು ಆರೋಗ್ಯಕಾರಕ ಲಾಭಗಳಿವೆ. ಇದರ ಸೇವನೆ ಅಜೀರ್ಣ ನಿವಾರಕವಾಗಿದ್ದು ಮಲಬದ್ದತೆಯನ್ನು ಕಡಿಮೆ ಮಾಡುತ್ತದೆ. ದೇಹದ ಚರ್ಮ ಸುಕ್ಕುಗಟ್ಟುವಿಕೆಯನ್ನು ಕಡಿಮೆ ಮಾಡಿ ಗಾಯಗಳು ಬೇಗ ಒಣಗಲು ಇದು ಸಹಕಾರಿ. ಉದರದಲ್ಲಿ ವಾಯು ಸಂಗ್ರಹವನ್ನು ತಡೆಗಟ್ಟಿ ಆಂಟಿ ಆಕ್ಸಿಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತದೆ. ಕೋಕಂ ದುಂಡಾಣು ಮತ್ತು ವೈರಾಣು ನಿರೋಧಕ ಗುಣ ಹೊಂದಿದ್ದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ದೇಹ ತೂಕ ಕಡಿಮೆ ಮಾಡುವ ಸಾಮರ್ಥ್ಯವನ್ನು ಕೂಡ ಹೊಂದಿದೆ.

ಕೋಕಂ ಮರ ನವೆಂಬರ್-ಫೆಬ್ರವರಿಯಲ್ಲಿ ಹೂವು ಬಿಟ್ಟು ಏಪ್ರಿಲ್-ಮೇ ತಿಂಗಳಲ್ಲಿ ಹಣ್ಣುಗಳು ಕೊಯ್ಲಿಗೆ ಸಿದ್ದವಾಗುತ್ತವೆ. ಸುಮಾರು ೧೫ ವರ್ಷಗಳ ಮರ ೩೦-೫೦ ಕಿ.ಗ್ರಾಂ ಹಣ್ಣು ನೀಡಬಲ್ಲದು. ದುಂಡಾದ ಮಾಗಿದ ಹಣ್ಣುಗಳು ೨.೫-೩.೦ ಸೆಂ.ಮೀ. ವ್ಯಾಸ ಹೊಂದಿದ್ದು ದಟ್ಟ ಕೆಂಪು/ನೇರಳೆಬಣ್ಣ ಮತ್ತು ತಿರುಳಿನಲ್ಲಿ ೩-೮ ದೊಡ್ಡ ಬೀಜಗಳಿರುತ್ತವೆ. ಕೋಕಂನಲ್ಲಿ ಗಂಡು ಮತ್ತು ಹೆಣ್ಣು ಮರಗಳಿದ್ದು ಗಂಡು ಮರದಲ್ಲಿ ಕಾಯಿ ಕಚ್ಚುವುದಿಲ್ಲ. ಆದರೆ ಬೀಜದ ಸಸಿಗಳಿಂದ ತೋಟ ಮಾಡಿದರೆ ಹೆಣ್ಣು ಹೂವುಗಳ ಪರಾಗ ಸ್ಪರ್ಶ ಕ್ರಿಯೆಗೆ ಗಂಡು ಮರಗಳು ಅಗತ್ಯ. ವಾಣಿಜ್ಯ ಉದ್ದೇಶದ ತೋಟಗಳಲ್ಲಿ ಸಾಮಾನ್ಯವಾಗಿ ಕಸಿಗಿಡಗಳನ್ನು ಬಳಸುತ್ತಾರೆ. ಕೋಕಂನಲ್ಲಿ ಬೀಜದಿಂದ ಬೆಳೆಸಿದ ಬೇರುಗಿಡಗಳಿಗೆ ಹೆಣ್ಣು ಗಿಡಗಳಿಂದ ತಂದ ೯ ತಿಂಗಳ ಬೆಳವಣಿಗೆಯ ಕಸಿಕೊಂಬೆಗಳನ್ನು ಉಪಯೋಗಿಸಿ ಮೆದುಕಾಂಡಕಸಿ ಮಾಡಿ ಕಸಿಗಿಡಗಳನ್ನು ಬೆಳೆಸುತ್ತಾರೆ. ಅಕ್ಟೋಬರ್ ತಿಂಗಳು ಕಸಿಕಟ್ಟಲು ಸೂಕ್ತ ಕಾಲ. ಒಂದು ಎಕರೆ ಪ್ರದೇಶಕ್ಕೆ ೬ ಮೀ. x ೬ ಮೀ. ಅಂತರದಲ್ಲಿ ೧೧೦-೧೧೫ ಕಸಿ ಗಿಡಗಳು ಬೇಕಾಗುತ್ತವೆ