ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೭

ಚಿತ್ರ ಲೇಖನ

ಪೇರಲದ ಹಿಟ್ಟುತಿಗಣೆ ಮತ್ತು ನಿರ್ವಹಣೆ

image_
ಡಾ. ಎಸ್. ಟಿ. ಪ್ರಭು,
9448182225
1

ಫೆರ್ರಿಸಿಯಾ ವಿರ್ಗಾಟ (Ferrisia virgata) ಎಂಬ ವೈಜ್ಞಾನಿಕ ಹೆಸರುಳ್ಳ ಈ ಕೀಟವನ್ನು ಪಟ್ಟಿಯುಳ್ಳ ಹಿಟ್ಟುತಿಗಣೆ (stripped mealybug) ಅಥವಾ ಬಿಳಿಬಾಲದ ಹಿಟ್ಟುತಿಗಣೆ ಎಂದು ಕರೆಯುತ್ತಾರೆ. ಇದು ಪೇರಲ ಬೆಳೆಯನ್ನಷ್ಟೇ ಅಲ್ಲದೇ ಇತರೆ ಬೆಳೆಗಳಾದ ಹತ್ತಿ, ಬೆಂಡಿ, ಗೋಡಂಬಿ, ಟೊಮಾಟೊ, ತೊಂಡೆ, ವೀಳ್ಯದೆಲೆ, ತಂಬಾಕು, ದ್ರಾಕ್ಷಿ ಮುಂತಾದ ಬೆಳೆಗಳನ್ನು ಬಾಧಿಸುತ್ತದೆ.ಹಿಟ್ಟು ತಿಗಣೆ ಕೀಟಗಳು ಅತೀ ಸಣ್ಣದಾದ, ಮೃದುವಾದ, ಮೊಟ್ಟೆಯಾಕಾರದ ರಸ ಹೀರುವ ಕೀಟಗಳಾಗಿವೆ. ಈ ಕೀಟಗಳ ಮೈಮೇಲೆ ಯಾವಾಗಲೂ ಬಿಳಿ ಹಿಟ್ಟಿನಂತಹ ಪುಡಿ ಲೇಪನಗೊಂಡಂತೆ ಕಾಣುತ್ತವೆ. ಪ್ರೌಢ ಮತ್ತು ಮರಿ ಹಿಟ್ಟು ತಿಗಣೆಗಳು ಸಸ್ಯಗಳ ಕಾಂಡ, ಎಲೆ, ಮೊಗ್ಗು, ಹೂ ಮತ್ತು ಕಾಯಿಗಳ ಮೇಲೆ ಹೀಗೆ ಇಡೀ ಗಿಡವನ್ನೇ ಆವರಿಸಿ ಸತತವಾಗಿ ರಸ ಹೀರುತ್ತಾ ಬೆಳೆಯನ್ನು ದುರ್ಬಲಗೊಳಿಸುತ್ತವೆ. ಈ ಕೀಟಗಳ ದೇಹದ ತುಂಬೆಲ್ಲಾ ಗ್ರಂಥಿಗಳಿದ್ದು ಮೇಣದಂತ ಬಿಳಿ ಪದಾರ್ಥವನ್ನು ಸ್ರವಿಸುತ್ತವೆ. ಕೀಟಗಳು ಬೆಳೆದಂತೆಲ್ಲಾ ಮೇಣವು ಹೆಚ್ಚಾಗುತ್ತಾ ದೇಹದ ಮೇಲೆ ದಟ್ಟವಾದ ಬಿಳಿ ಹೊದಿಕೆಯನ್ನು ರಚಿಸುತ್ತವೆ ಹಾಗಾಗಿ ಇವುಗಳಿಗೆ ಹಿಟ್ಟುತಿಗಣೆಗಳೆಂದೇ ಹೆಸರು. ಈ ಬಿಳಿ ಮೇಣದ ಹೊದಿಕೆ ತಮ್ಮ ಮೃದುವಾದ ದೇಹವನ್ನು ಹೊರಗಿನ ವಾತಾವರಣದಿಂದ ರಕ್ಷಿಸುತ್ತದೆ. ಇದೇ ಕಾರಣಕ್ಕಾಗಿ ಈ ಕೀಟಗಳನ್ನು ನಿರ್ವಹಣೆ ಮಾಡುವುದು ಸಹ ಕಷ್ಟಸಾಧ್ಯವಾದ ಕೆಲಸವಾಗಿದೆ.

3

ಹಿಟ್ಟು ತಿಗಣೆಗಳ ಹಾವಳಿ ಅತಿಯಾದಾಗ ಮತ್ತು ದೀರ್ಘವಾದ ರಸಹೀರುವಿಕೆಯ ಪರಿಣಾಮವಾಗಿ ಗಿಡಗಳ ಬೆಳವಣಿಗೆ ಕುಂಠಿತಗೊಂಡು ನಿತ್ರಾಣವಾಗುತ್ತವೆ. ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಮುರುಟಿಕೊಂಡು ಉದುರಿ ಬೀಳುತ್ತವೆ. ಇದರಿಂದ ಬೆಳೆಗಳ ಇಳುವರಿ ಗಣನೀಯವಾಗಿ ಕಡಿಮೆಯಾಗುತ್ತದೆ. ಸತತವಾದ ರಸ ಹೀರುವಿಕೆ ಪ್ರಕ್ರಿಯೆಯಿಂದ, ಈ ಕೀಟಗಳು ಅವಶ್ಯಕ್ಕಿಂತ ಹೆಚ್ಚಾದ ಆಹಾರವನ್ನು ತಮ್ಮ ದೇಹದಿಂದ ನಿರಂತರವಾಗಿ ವಿಸರ್ಜನೆ ಮಾಡುತ್ತಾ ಎಲೆಗಳ ಮೇಲೆ ಸಿಹಿಯಾದ ಅಂಟಿನಂತಹ ದ್ರವರೂಪದ (ಹನೀ ಡ್ಯೂ) ವಸ್ತುವನ್ನು ಹೊರಹಾಕುತ್ತವೆ. ಈ ಸಿಹಿ ಪದಾರ್ಥವು ಸಸ್ಯದ ಎಲೆಗಳ ಮೇಲೆ ತುಂತುರು ಹನಿಯಾಗಿ ಬೀಳುತ್ತದೆ. ಇರುವೆಗಳು ಈ ಸಿಹಿಗೆ ಆಕರ್ಷಿತವಾಗಿ ತಿನ್ನಲು ಮುಗಿಬೀಳುತ್ತವೆ. ಹಾಗೆಯೇ ಕ್ರಮೇಣ ಈ ಅಂಟಿನ ಮೇಲೆ ಕಪ್ಪು ಬಣ್ಣದ ಕಾಡಿಗೆ ಶಿಲೀಂಧ್ರ ಬೆಳೆದು ಎಲೆಗಳ ಹಸಿರು (ಪತ್ರಹರಿತ್ತು) ಮುಚ್ಚುವಂತೆ ಆವರಿಸಿಕೊಳ್ಳುತ್ತದೆ. ಇದರಿಂದ ಬೆಳೆಗಳ ಆಹಾರ ಉತ್ಪಾದನಾ ಶಕ್ತಿ ಕಡಿಮೆಯಾಗುತ್ತದೆ.

5

ಹಿಟ್ಟು ತಿಗಣೆ ನಿರ್ವಹಣೆ: ಇವುಗಳ ನಿರ್ವಹಣೆ ತುಂಬಾ ಕಷ್ಟ, ಆದ್ದರಿಂದ ಸಮಗ್ರವಾಗಿ ಹಲವಾರು ಪದ್ದತಿಗಳನ್ನು ಅನುಸರಿಸಿ ಹತೋಟಿ ಮಾಡಬೇಕಾಗುತ್ತದೆ.

 • ಹಿಟ್ಟು ತಿಗಣೆಗಳ ಹಾವಳಿಗೆ ತುತ್ತಾದ ಗಿಡಗಳನ್ನು ಮತ್ತು ಅವುಗಳ ಟೊಂಗೆಗಳನ್ನು ಕೀಟಗಳ ಸಮೇತ ಕತ್ತರಿಸಿ ಸುಟ್ಟು ನಾಶಮಾಡಬೇಕು ಮತ್ತು ಹೊಲದಲ್ಲಿ ಮತ್ತು ಬದುಗಳ ಮೇಲಿರುವ ಆಶ್ರಯ ಸಸ್ಯಗಳನ್ನು ಸ್ವಚ್ಛಗೊಳಿಸಬೇಕು.
 • ಪೇರಲದ ಟೊಂಗೆಗಳು ನೆಲಕ್ಕೆ ತಾಗುವಂತಿದ್ದರೆ ಅವುಗಳನ್ನು ಕತ್ತರಿಸಬೇಕು.
 • ಬೆಳೆಗಳ ಅಥವಾ ಸಸ್ಯದ ಭಾಗಗಳನ್ನು ಸಾಗಾಣಿಕೆ ಮಾಡುವಾಗ ಹಿಟ್ಟು ತಿಗಣೆಗಳು ಇಲ್ಲದಿರುವಂತೆ ನೋಡಿಕೊಳ್ಳಬೇಕು.
 • ಹಿಟ್ಟುತಿಗಣೆಗಳ ಸಂಗಾತಿಗಳಾದ ಇರುವೆ-ಗೊದ್ದಗಳನ್ನು ನಾಶಪಡಿಸಬೇಕು. ಇವುಗಳು ಹಿಟ್ಟುತಿಗಣೆ ಹರಡುವಿಕೆಗೆ ನೆರವಾಗುತ್ತವೆ.

  ಪೇರಲ ಗಿಡದ ಬುಡದಲ್ಲಿ ಮಣ್ಣನ್ನು ವರ್ಷಕ್ಕೆ ೨ ಬಾರಿ ಕೊಚ್ಚಿ ತಿರುವಬೇಕು. ನಂತರ ಅವಶ್ಯವಿರುವ ಗೊಬ್ಬರಗಳನ್ನು ಭೂಮಿಗೆ ನೀಡಬೇಕು.

  ಪೇರಲ ಗಿಡದ ಬುಡಗಳನ್ನು ಪಾಲಿಥೀನ್ ಹಾಳೆಯಿಂದ ಸುತ್ತಬೇಕು. ಇದರಿಂದ ಹಿಟ್ಟುತಿಗಣೆಗಳು ನೆಲದಿಂದ ಗಿಡ ಹತ್ತುವುದನ್ನು ತಡೆಯಬಹುದು.

  ಹಿಟ್ಟು ತಿಗಣೆಗಳ ಹತೋಟಿಗೆ ಬೇರೆಲ್ಲಾ ವಿಧಾನಗಳಿಗಿಂತ ಜೈವಿಕ ಹತೋಟಿ ವಿಧಾನ ಬಹಳ ಮುಖ್ಯ. ನೈಸರ್ಗಿಕವಾಗಿ ಪ್ರಕೃತಿಯಲ್ಲಿ ಹಿಟ್ಟುತಿಗಣೆಗಳನ್ನು ಭಕ್ಷಿಸುವ ಹಲವಾರು ಪರಭಕ್ಷಕ ಮತ್ತು ಪರೋಪಜೀವಿಗಳು ಅವುಗಳನ್ನು ಹತೋಟಿಗೆ ತರುವಲ್ಲಿ ನೆರವಾಗುತ್ತವೆ. ಮೂರು ಜಾತಿಯ ಗುಲಗಂಜಿ ಹುಳುಗಳು ಹಿಟ್ಟು ತಿಗಣೆಗಳನ್ನು ಭಕ್ಷಿಸಿ ಅವುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತವೆ. ಇವುಗಳಲ್ಲಿ, ಕ್ರಿಪ್ಟೋಲಾಯಿಮಸ್ ಮಾಂಟ್ರೋಜರಿ ಎಂಬ ಗುಲಗಂಜಿ ಹುಳುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯೋಗಾಲಯದಲ್ಲಿ ವೃದ್ಧಿಗೊಳಿಸಿ ಹಿಟ್ಟುತಿಗಣೆಗಳ ಮೇಲೆ ಭಕ್ಷಣೆ ಮಾಡಲು ಬಿಡಬಹುದು.

  ಕೀಟಗಳನ್ನು ನಾಶ ಮಾಡುವ ಶೀಲೀಂಧ್ರಗಳಲ್ಲಿ ವರ್ಟಿಸೀಲೀಯಂ ಲೆಖಾನಿ ಮತ್ತು ಬೆವೂರಿಯಾ ಬೆಸ್ಸಿಯಾನ ಶಿಲೀಂಧ್ರಗಳು ಸಹ ಹಿಟ್ಟು ತಿಗಣೆ ಹತೋಟಿಯಲ್ಲಿ ಪರಿಣಾಮಕಾರಿಯಾಗಿದೆ. (ಪ್ರತಿ ಲೀಟರ್ ನೀರನಲ್ಲಿ ೧೦ ಗ್ರಾಂ ಶಿಲೀಂಧ್ರ (2 X 108 ಸಿ. ಎಫ್. ಯು. ಪ್ರತಿ ಗ್ರಾಂಗೆ)

  15

  ಹಿಟ್ಟು ತಿಗಣೆ ಕೀಟಗಳನ್ನು ಹತೋಟಿಯಲ್ಲಿಡಲು ಈ ಕೆಳಗಿನ ಯಾವುದಾದರೊಂದು ಕೀಟನಾಶಕವನ್ನು ಅಂದರೆ; ಶೇಕಡ ೫ರ ಬೇವಿನ ಬೀಜದ ಕಷಾಯ ೫ ಮಿ.ಲೀ. ಅಥವಾ ಬೇವಿನ ಎಣ್ಣೆ ೫ ಮಿ.ಲೀ. ಅಥವಾ ಹೊಂಗೆ ಎಣ್ಣೆ ೫ ಮಿ.ಲೀ. ಅಥವಾ ಡೈಕ್ಲೊರೋವಾಸ್ ೭೬ ಇ.ಸಿ. ಮತ್ತು ಮೀನಿನ ಎಣ್ಣೆ ಸಾಬೂನು ೨ ಗ್ರಾಂ ಮಿಶ್ರಣ ಅಥವಾ ಕಡಿಮೆ ವಿಷವುಳ್ಳ ಮೆಲಾಥಿಯಾನ್ ೨ ಮಿ.ಲೀ. ಅಥವಾ ಅಸಿಫೇಟ್ ೧ ಗ್ರಾಂ ಅಥವಾ ಬುಪ್ರೋಫೇಜಿನ್ ೨೫ ಎಸ್.ಸಿ. ೧ ಮಿ.ಲೀ. ಅಥವಾ ಕೊನೆ ಆಯ್ಕೆಯಾಗಿ ಹೆಚ್ಚು ವಿಷಕಾರಕ ಕೀಟನಾಶಕಗಳಾದ ಕ್ಲೋರ್ಪೈರಿಫಾಸ್ ೩ ಮಿ.ಲೀ. ಅಥವಾ ಪ್ರೊಫೆನೋಫಾಸ್ ೩ ಮಿ.ಲೀ. ಅಥವಾ ಥಯೋಡಿಕಾರ್ಬ್ ೨ ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಬೆಳೆಗೆ ಸಿಂಪರಿಸಬೇಕು.