ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಸಂಪಾದಕೀಯ

ಕರ್ತವ್ಯಕ್ಕೆ ಕಷ್ಟ ಕರಗಿಸುವ ಶಕ್ತಿ ಇದೆ

image_
ಕೆ ಸಿ ಶಶಿಧರ
shashidhar.kumbar@gmail.com
1

ಜೂನ್ ೫, ವಿಶ್ವ ಪರಿಸರ ದಿನ ಆಚರಣೆಗೆ ಜಾಗೃತರೆಲ್ಲರೂ ಒಲವು ತೋರಿಸುತ್ತಾರೆ. ಇಂಥ ಜಾಗೃತಿಗಳಿಂದಾಗಿ ಸ್ವಚ್ಛ ಪರಿಸರ, ಸುಂದರ ಪರಿಸರ, ಹಸಿರು ಪರಿಸರ ಹೀಗೆ ನಮ್ಮ ಪರಿಸರ ಕಾಳಜಿ ಹೆಚ್ಚಾಗುತ್ತಿದೆ. ಆದರೆ ಇವುಗಳನ್ನು ಸಾಕಾರಗೊಳಿಸುವ ವಿಚಾರ ಬಂದಾಗ ನಮ್ಮೆಲ್ಲರ ನೋಟ ಇನ್ನೊಬ್ಬರೆಡೆಗೆ ತಿರುಗುತ್ತದೆ. ಅಂದ್ರೆ ಸರ್ಕಾರ ಜನಪ್ರತಿನಿಧಿಗಳು ಇತ್ಯಾದಿ. ಸ್ವಚ್ಛ ಭಾರತ ಯೋಜನೆಯಡಿ ಗ್ರಾಮ ಸ್ವಚ್ಛ ಮಾಡಿ ಬಂದ ತಂಡವೊಂದರ ಸದಸ್ಯ ಹಲವು ದಿನಗಳ ನಂತರ ಆ ಗ್ರಾಮಕ್ಕೆ ಭೇಟಿ ಮಾಡಿದ ಆಗ ಆ ಊರವರೊಬ್ಬರು ಕೇಳಿದರಂತೆ ನೀವು ಮತ್ತೆ ಯಾವಾಗ ಬರುತ್ತೀರಿ? ಅದಕ್ಕೆ ಅವ ಕೇಳಿದ ಯಾಕೆ? ನೀವು ಬಂದು ಹೋದ ಮೇಲೆ ಗ್ರಾಮ ತುಂಬಾ ಚೆನ್ನಾಗಿತ್ತು, ಬಹಳ ದಿನ ಆಯ್ತು ಮತ್ತೆ ಕಸ ಆಗಿದೆ ಅದಕ್ಕೆ ಕೇಳಿದೆ. ಆಗ ಈ ಸ್ವಯಂ ಸೇವಕ ನಿಮ್ಮಲ್ಲಿ ಜಾಗೃತಿ ಮೂಡಿಸಲು ನಾವು ಬಂದಿದ್ದೆವು ಅಷ್ಟೆ, ನಿತ್ಯ ಬಂದು ನಿಮ್ಮೂರನ್ನು ಬೇರೆಯವರು ಸ್ವಚ್ಛ ಮಾಡಲಾದೀತೆ ಎಂದಾಗ ಅಯ್ಯೋ ಸ್ವಚ್ಛವಾಗಿ ಇಡೊ ಜಾಗೃತಿ ನಮಗಿಲ್ಲ ಅಂದುಕೊಂಡಿದ್ರಾ, ನಮಗೂ ಇದೆ: ಆದ್ರೆ ಮಾಡಕೆ ಟೈಂ ಇಲ್ಲ ಅದಕ್ಕೆ ಕೇಳಿದೆ ಅಂತ ಗೊಣಗುತ್ತಾ ಸಾಗಿದನಂತೆ.

ಪರಿಸರ ಪ್ರೇಮ ಅನ್ನುವುದು ನಮ್ಮಲ್ಲಿ ಆಚರಣೆಗಿಂತ ತೋರಿಕೆಯಾಗಿರುವುದೇ ಹೆಚ್ಚು

ಇದು ಪುನಃ ನನಗೆ ನೆನಪಾಗಿದ್ದೇಕೆ ಎನ್ನುವಿರೊ? ಮೇ ಮೊದಲ ವಾರದಲ್ಲಿ ಜರ್ಮನಿಯ ಕೊಲೆನ್ಗೆ ಭೇಟಿ ನೀಡಿದ್ದೆ. ಈ ನಗರದ ಅಂಚಿನಲ್ಲಿರುವ ಹೋಟೆಲ್ನಲ್ಲಿದ್ದ ನಾನು ಮತ್ತು ಗೆಳೆಯ ಶ್ರೀಕಂಠ ಮೂರ್ತಿ ಮುಂಜಾನೆ ಪ್ರದೇಶ ಪರ್ಯಟನೆಗೆ ಹೊರಟಾಗ ಅಲ್ಲಿ ಒಂದು ಸುಂದರ ಪಾರ್ಕ್ ನೋಡಿ ಆಹಾ ಎಷ್ಟು ಚೆನ್ನಾಗಿ ನಿರ್ವಹಣೆ ಮಾಡಿದ್ದಾರೆ ಎಂದು ಸ್ವಲ್ಪ ಕೂಲಂಕಷವಾಗಿ ನೋಡ ಹೊರಟರೆ ಅದೊಂದು ಸ್ಮಶಾನ !!!. ಪ್ರತಿಯೊಂದು ಸಮಾಧಿಯೂ ಅಲಂಕೃತಗೊಂಡು ಗಮನ ಸೆಳೆಯುತ್ತಿದ್ದವು. ಅಲ್ಲಿಯೇ ಬಂದ ನಾಗರಿಕನನ್ನು ನಿಲ್ಲಿಸಿ ಕೇಳಿದೆವು ಇದರ ನಿರ್ವಹಣೆ ಯಾರು ಮಾಡುತ್ತಾರೆ ಎಂದು ಅದಕ್ಕೆ ಅವ ಹೇಳಿದ ಸಮಾಧಿ ಯಾರಿಗೆ ಸೇರಿದ್ದೊ ಅವರೆ ನಿರ್ವಹಿಸುತ್ತಾರೆ. ಸಮಗ್ರ ಸ್ವಚ್ಛತೆಗೆ ಸ್ಮಶಾನದಲ್ಲಿ ಸಮಾಧಿ ಕಟ್ಟಿದವರೇ ನಿರ್ವಹಿಸುತ್ತಾರೆ ಎಂದ. ನಮ್ಮಲ್ಲಿ ಸತ್ತವನ ಗುದ್ದಿಗೆ ಇಟ್ಟ ಮೇಲೆ ಆ ಕಡೆ ತಿರುಗಿ ನೋಡದವರೆ ಹೆಚ್ಚು. ಕೆಲವರು ತಿಥಿಯ ದಿನ ಮಾತ್ರ ಎಡೆಗೆ ಹೋಗುವುದುಂಟು. ಇನ್ನು ಕೆಲವರು ಸಮಾಧಿ ದಿಕ್ಕಿಗೆ ಮನೆಯಿಂದಲೇ ಎಡೆ ಶಾಸ್ತ್ರ ಮಾಡುವವರೂ ಉಂಟು. ಆದರೆ ಸತ್ತವರನ್ನ ಸ್ಮಶಾನಕ್ಕೆ ಕೊಂಡೊಯ್ದಾಗ ಮಾತ್ರ ಸ್ಮಶಾನ ನಿರ್ವಹಣೆ, ಅಲ್ಲಿಯ ಕೆಟ್ಟ ಪರಿಸರದ ಬಗ್ಗೆ ಉದ್ದುದ್ದ ಮಾತನಾಡಿ ಗುದ್ದಿಗೆ ಹೆಣವಿಟ್ಟು ಯಾತ್ರೆಗೆ ಕೊಂಡೊಯ್ದ ಎಲ್ಲಾ ಹೂ ಹಣ್ಣು, ಹಗ್ಗ, ಹಾಸಿಗೆ, ಬಟ್ಟೆ ಕಟ್ಟು ಚಟ್ಟವನ್ನೆಲ್ಲ ಅಲ್ಲೇ ಬಿಸಾಡಿ, ಹೆಣ ಹಾಕಿದ ಮೇಲೆ ಹಿಂತಿರುಗಿ ನೋಡಬಾರದೆಂಬ ಕಟ್ಟಲೆ ಕಟ್ಟಿಕೊಂಡು ಬಂದವರಿಗೆ ಮತ್ತೆ ಈ ಪರಿಸರ ನೆನಪಾಗುವುದು ಮತ್ತೊಂದು ಹೆಣ ಒಯ್ದಾಗ ಮಾತ್ರ

ಇದು ಸ್ಮಶಾನಕ್ಕೆ ಮಾತ್ರವಲ್ಲ ನಮ್ಮೆಲ್ಲ ಕಾರ್ಯಗಳಲ್ಲಿ ಕಾಣುವ ಸಿನಿಕತನ. ಸ್ವಚ್ಛತೆ ಇರಲಿ, ಹಸಿರು ಬೆಳೆಸುವುದಿರಲಿ ಪರಿಸರ ಕಾಳಜಿಯಿರಲಿ ನಾನೇನು ಕಾರ್ಯ ಮಾಡಿದ್ದೇನೆ ಎಂಬುದೇ ಮಹತ್ವವೇ ಹೊರತು ಇವುಗಳನ್ನು ಮುಂಚೂಣಿಯಲ್ಲಿಟ್ಟು ನಾನೆಷ್ಟು ಸಲ ಪತ್ರಿಕೆಗಳಲ್ಲಿ ಬಂದೆ, ನನಗೆಷ್ಟು ಪರಿಸರ ಪ್ರಶಸ್ತಿ ಬಂದಿವೆ ಅನ್ನುವುದು ಮುಖ್ಯವಾಗದು. ಯಾವಾಗಲೂ ಹಕ್ಕಿನ ಬಗ್ಗೆ ಚಿಂತಿಸುವ ನಾವು ನಮ್ಮ ಕರ್ತವ್ಯಗಳ ಬಗ್ಗೆಯೂ ಚಿಂತಿಸಿದಲ್ಲಿ ಸ್ವಚ್ಛ ಭಾರತ ಹಸಿರು ಭಾರತ ಸುಂದರ ಪರಿಸರ ಎಲ್ಲವೂ ಸಾಕಾರಗೊಳ್ಳುತ್ತವೆ

ಇದೊಂದು ಸ್ಮಶಾನ ಯಾತ್ರೆಯ ಉದಾಹರಣೆ ಮಾತ್ರ. ನಮ್ಮೆಲ್ಲ ಚಿಂತನೆ ಹಾಗೂ ಕೆಲಸಗಳಲ್ಲಿ ಕರ್ತವ್ಯ ಪ್ರಜ್ಞೆ ಜಾಗೃತವಾದಲ್ಲಿ ನಮ್ಮ ಪರಿಸರ ಕಟ್ಟಿಕೊಡಲು ಯೋಜನೆಗಳಾಗಲಿ, ನೆರವುಗಳಾಗಲಿ ಬೇಕಿಲ್ಲ. ಕಳೆದ ಸಾಲಿನ ಬರದಿಂದ ಕಂಗೆಟ್ಟ ನಮಗೆ ಅದು ಸರಿಯಾದ ಕರ್ತವ್ಯ ಪ್ರಜ್ಞೆ ಮೂಡಿಸಲು ನೆರವಾಗಿ ಈ ವರ್ಷದ ಮಳೆ, ನೀರು ಉಳಿಸಿ ಉಪಯೋಗಿಸುವ ನಿಟ್ಟಿನಲ್ಲಿ ಸಾಗಲು ಕಾರಣವಾದರೆ ಮುಂದಿನ ಬರಗಳು ನಮ್ಮ ಕರ್ತವ್ಯದ ಶಕ್ತಿಗೆ ಕರಗಿ ಹೋಗುವುದರಲ್ಲಿ ಸಂಶಯವಿಲ್ಲ