ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಸಾಂದ್ರ ಪದ್ಧತಿಯಲ್ಲಿ ಗೇರು ಕೃಷಿ

ಡಾ. ಲಕ್ಷ್ಮಣ
9480838970
1

ಕೃಷಿಯ ಸದ್ಯದ ಪರಿಸ್ಥಿತಿಯಲ್ಲಿ ಹಲವಾರು ರೈತರು ಲಾಭದಾಯಕ ಕೃಷಿಯತ್ತ ಮನಸ್ಸು ಮಾಡುತ್ತಿದ್ದಾರೆ. ಯಾವುದಾದರೊಂದು ಲಾಭದಾಯಕ ಬೆಳೆಯನ್ನು ತಮ್ಮ ತೋಟದಲ್ಲಿ ಬೆಳೆದು ಹೆಚ್ಚಿನ ಆದಾಯ ಪಡೆಯುವ ಗುರಿ ಹೊಂದಿದ್ದಾರೆ. ವಾಣಿಜ್ಯ ಬೆಳೆಗಳಾದ ಅಡಿಕೆ, ಕರಿಮೆಣಸು, ಗೋಡಂಬಿ, ರಬ್ಬರ್, ಕೋಕೋ ಮತ್ತು ಇನ್ನು ಹಲವು ಬೆಳೆಗಳನ್ನು ಬೆಳೆಯಲು ಮುಂದಾಗುತ್ತಿದ್ದಾರೆ. ಆದರೆ ಬೆಲೆಯ ಏರುಪೇರಿನಿಂದಾಗಿ ಒಂದು ವರ್ಷ ದಕ್ಕಿದಂತಹ ಲಾಭ ಮರು ವರ್ಷ ದಕ್ಕದೇ ಇರಬಹುದು. ಈ ಸಮಸ್ಯೆ ಹೋಗಲಾಡಿಸಲು ಇರುವ ಒಂದೇ ಮಾರ್ಗವೆಂದರೆ ಸಮಗ್ರ ತೋಟ, ಅಂದರೆ ಬಹು ಬೆಳೆ ಪದ್ಧತಿ ಅನುಸರಿಸುವುದು. ಈ ನಿಟ್ಟಿನಲ್ಲಿ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಕಡಮಜಲು ಸುಭಾಸ್ ರೈ ಯವರು ತಮ್ಮ ತೊಟದಲ್ಲಿ ಗೇರು, ಕರಿಮೆಣಸು, ತೆಂಗು, ಅಡಿಕೆ, ಕೋಕೋ ಮತ್ತು ರಬ್ಬರ್ ಬೆಳೆಯುವ ಮೂಲಕ ಸಮಗ್ರ ತೋಟವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಮಯ ಮತ್ತು ಹಣವನ್ನು ಎಂದಿಗೂ ವ್ಯರ್ಥ ಮಾಡಬಾರದೆನ್ನುವ ಅವರ ಮಾತು, ಅವರು ತಮ್ಮ ತೋಟವನ್ನು ಬೆಳೆಸಿದ ರೀತಿಯಲ್ಲಿಯೇ ತೋರುತ್ತದೆ.

ಹೊಸತನದ ಕಡೆಗೆ ಸುಭಾಸ್ ರೈ ಅವರ ಚಿತ್ತ

ಹೊಸ ಬೆಳೆ, ತಳಿ ಮತ್ತು ತಂತ್ರಜ್ಞಾನ ಬಳಸಲು ಇವರು ಮುಂದಾಗಿದ್ದಾರೆ. ಗೇರು ಕೃಷಿಯಲ್ಲಿ ಸಾಮಾನ್ಯವಾಗಿ ಗಿಡದಿಂದ ಗಿಡಕ್ಕೆ ೭.೫ ಮೀ. ನಿಂದ ೮ ಮೀ. ವರೆಗೆ ಅಂತರ ಕಾಯ್ದುಕೊಳ್ಳಲಾಗುತ್ತದೆ. ಆದರೆ ಸುಭಾಸ್ ರೈ ಯವರು ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರಿನ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಸಾಂದ್ರ (೫ಮೀ.ಘಿ೫ಮೀ). ಹಾಗೂ ಘನ ಸಾಂದ್ರ ಪದ್ಧತಿಯಲ್ಲಿ (೩ಮೀ.ಘಿ೩ಮೀ.) ಉಳ್ಳಾಲ -೩, ಭಾಸ್ಕರ, ವಿ.ಆರ್.ಐ-೩ ಹಾಗೂ ಎನ್.ಆರ್.ಸಿ.ಸಿ ಸೆಲೆಕ್ಷನ್-೨ ತಳಿಯನ್ನು ನಾಟಿ ಮಾಡಿದ್ದಾರೆ. ಹೀಗೆ ಅವರು ೧೦ ಎಕರೆಯಲ್ಲಿ ಗೇರು ಕೃಷಿಯನ್ನು ಮಾಡುತ್ತಿದ್ದಾರೆ. ಸಾಂದ್ರ ಪದ್ಧತಿಯಲ್ಲಿ ಎಕರೆಗೆ ೧೬೦ ಹಾಗೂ ಘನ ಸಾಂದ್ರ ಪದ್ಧತಿಯಲ್ಲಿ ೪೪೪ ಗಿಡಗಳನ್ನು ನಾಟಿ ಮಾಡಿದ್ದಾರೆ. ಹೀಗಾಗಿ ಸಾಮಾನ್ಯ ಪದ್ಧತಿಗಿಂತ ೨-೬ ಪಟ್ಟು ಹೆಚ್ಚು ಗಿಡಗಳನ್ನು ನೆಟ್ಟಂತಾಯಿತು. ಇವರ ಗೇರು ತೋಟವು ಗುಡ್ಡಗಾಡು ಪ್ರದೇಶದಲ್ಲಿ ಬೆಳೆದು ನಿಂತು ಗುಡ್ಡಕ್ಕೆ ಹಸಿರು ಹೊದಿಸಿದೆ. ಗುಡ್ಡದಲ್ಲಿ ಸಮತಟ್ಟಾದ ಅಂತಸ್ತುಗಳನ್ನು ಮಾಡಿ ಗೇರು ಗಿಡಗಳನ್ನು ನೆಡಲಾಗಿದೆ. ಗಿಡಗಳ ಹತ್ತಿರ ತಗ್ಗು ತೆಗೆದು ಮಳೆಗಾಲದಲ್ಲಿ ನೀರು ಭೂಮಿಯಲ್ಲಿ ಇಂಗುವ ಹಾಗೆ ಮಾಡಿದ್ದಾರೆ. ಈಗ ಗೇರು ಗಿಡವು ಮೂರರಿಂದ ನಾಲ್ಕು ವರ್ಷದ ಗಿಡಗಳಾಗಿವೆ. ಸಾಂದ್ರ ಪದ್ಧತಿಯಾಗಿರುವುದರಿಂದ ಪ್ರತಿ ವರ್ಷ ಕೊಯ್ಲು ಮುಗಿದ ಮೇಲೆ ಚಾಟಣಿ ಮಾಡಿ, ಗಿಡಗಳನ್ನು ಸವರಿ ಹೊಸ ಚಿಗುರು ಬರಲಿಕ್ಕೆ ಅನುವು ಮಾಡಿಕೊಡುತ್ತಾರೆ. ಅವರ ಅನುಭವದ ಪ್ರಕಾರ ವಿ.ಆರ್.ಐ-೩ ತಳಿಯು ಚಾಟಣಿಗೆ ಚೆನ್ನಾಗಿ ಸ್ಪಂದಿಸಿ ಹೆಚ್ಚಿನ ಹೊಸ ಚಿಗುರು ಬಿಡುತ್ತದೆ. ಸಾಮಾನ್ಯ ಪದ್ಧತಿಗಿಂತ ಹೆಚ್ಚು ನೀರು ಹಾಗೂ ಗೊಬ್ಬರ ನೀಡುತ್ತಾರೆ. ಮಳೆಯ ನೀರಲ್ಲದೇ ಹನಿ ನೀರಾವರಿ ಮೂಲಕ ನೀರು ಒದಗಿಸುತ್ತಾರೆ. ಅವರ ತೋಟದಲ್ಲಿ ಸಿಗುವಂತಹ ಎಲೆ ಮತ್ತು ಇನ್ನಿತರ ಕೃಷಿ ತ್ಯಾಜ್ಯವನ್ನು ಗಿಡಗಳ ಬುಡಕ್ಕೆ ಹಾಕಿ ಕೊಳೆಯುವಂತೆ ಮಾಡಿ ಗೊಬ್ಬರ ಕೊಡುತ್ತಿದ್ದಾರೆ. ನಾಟಿ ಮಾಡಿದ ಮೂರನೇ ವರ್ಷಕ್ಕೆ ಇಳುವರಿಯನ್ನು ಪಡೆದಿದ್ದಾರೆ. ಕಳೆದ ವರ್ಷ ಎಕರೆಗೆ ೧೦ ಕ್ವಿಂಟಾಲ್ ಇಳುವರಿ ಪಡೆದು ಈ ವರ್ಷ ೨೦ ಕ್ವಿಂಟಾಲ್ ಪಡೆಯುವ ನಿರೀಕ್ಷೆ ಹೊಂದಿದ್ದಾರೆ. ಟೀ ಸೊಳ್ಳೆ ಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದ್ದಾರೆ.

5

ಸಾಂದ್ರ ಹಾಗೂ ಘನ ಸಾಂದ್ರ ಪದ್ಧತಿಯಲ್ಲಿ ಹೆಚ್ಚು ಗಿಡಗಳನ್ನು ನಾಟಿ ಮಾಡುವುದರಿಂದ ಗೇರು ತೋಟವನ್ನು ಚೆನ್ನಾಗಿ ನಿರ್ವಹಣೆ ಮಾಡಿದ್ದಲ್ಲಿ ಸಾಮಾನ್ಯ ಪದ್ಧತಿಗಿಂತ ಹೆಚ್ಚಿನ ಲಾಭ ಪಡೆಯಲು ಸಾಧ್ಯ ಈ ಭಾಗದ ಇನ್ನೊಂದು ವಾಣಿಜ್ಯ ಬೆಳೆಯಾದ ಅಡಿಕೆಯನ್ನು ೧೨ ಎಕರೆಯಲ್ಲಿ ಬೆಳೆಯುತ್ತಿದ್ದಾರೆ. ಮಂಗಳಾ, ಸುಮಂಗಳಾ ತಳಿಗಳನ್ನು ನಾಟಿ ಮಾಡಿ ಈ ವರ್ಷ ಎಕರೆಗೆ ೯-೧೦ ಟನ್ ಇಳುವರಿಯನ್ನು ಪಡೆದಿದ್ದಾರೆ. ಇನ್ನು ಈ ಅಡಿಕೆಗೆ, ಕಸಿ ಮಾಡಿದ ಕರಿಮೆಣಸಿನ ಪನಿಯೂರ್ -೧ ತಳಿಯನ್ನು ನಾಟಿ ಮಾಡಿದ್ದಾರೆ. ಒಂದು ಬಳ್ಳಿಗೆ ಅರ್ಧದಿಂದ ಒಂದು ಕಿ.ಗ್ರಾಂ.ವರೆಗೆ ಇಳುವರಿಯನ್ನು ಪಡೆಯುತ್ತಿದ್ದಾರೆ. ಇನ್ನುಳಿದ ಬೆಳೆಗಳಾದ ತೆಂಗು ಹಾಗೂ ಕೋಕೋದಿಂದಲೂ ಕೂಡ ಒಳ್ಳೆಯ ಇಳುವರಿ ಪಡೆದಿದ್ದಾರೆ. ಈ ರೀತಿಯಲ್ಲಿ ಸುಭಾಸ್ ರೈ ಅವರು ಹೊಸ ತಳಿ, ಬೆಳೆ ಹಾಗೂ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ. ಇವರ ಈ ಕ್ರಮಕ್ಕೆ ಹಲವಾರು ಪ್ರಶಸ್ತಿಗಳು, ಸನ್ಮಾನಗಳು ಸಂದಿವೆ. ವಿಜ್ಞಾನಿಗಳು, ರೈತರು, ಕೃಷಿ ವಿದ್ಯಾರ್ಥಿಗಳು ಇವರ ತೋಟಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

789