ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಅರಿವೆ ಗುರು

ಮುಜಂಟಿ -ಮುಳ್ಳಿಲ್ಲದ ಜೇನುನೊಣ

ಡಾ. ಎಸ್. ಟಿ. ಪ್ರಭು,
9448182225,
1

ನಮ್ಮ ದೇಶದಲ್ಲಿ ಆರು ಜಾತಿಯ (ತುಡುವೆ, ಹೆಜ್ಜೇನು, ಕೋಲುಜೇನು, ಮೆಲ್ಲಿಫೆರಾ, ಮುಜಂಟಿ ಮತ್ತು ಹಿಮಾಲಯ ಜೇನು) ಜೇನುನೊಣಗಳಿದ್ದು ಮುಜಂಟಿ ಜೇನು ಉಳಿದ ಐದು ಬಗೆಗಳಿಗಿಂತ ಭಿನ್ನವಾಗಿದ್ದು ಬೇರೆ ನೊಣಗಳಿಗಿರುವಂತೆ ’ಚುಚ್ಚುವ ಮುಳು’ (ಗೂಡಿನ ರಕ್ಷಣೆಗೋಸ್ಕರ) ಬೆಳವಣಿಗೆ ಹೊಂದಿರುವುದಿಲ್ಲ. ಆದ್ದರಿಂದಲೇ ಇವನ್ನು ಮುಳ್ಳಿಲ್ಲದ ಜೇನುನೊಣ ಎಂದು ಕರೆಯುತ್ತಾರೆ. ಆದರೆ, ತಮ್ಮ ಬಾಯಿಂದಲೇ ಸ್ವಲ್ಪ ಮಟ್ಟಿಗೆ ಕಚ್ಚುವುದರ ಮೂಲಕ, ಕಿವಿ, ಮೂಗು, ಕಣ್ಣು, ತಲೆಕೂದಲಿನಲ್ಲಿ ನುಗ್ಗುವ ಮೂಲಕ ಇವು ತಮ್ಮ ಗೂಡಿನ ರಕ್ಷಣೆಯನ್ನು ಪರಿಣಾಮಕಾರಿಯಾಗಿ ಮಾಡಿಕೊಳ್ಳುತ್ತವೆ. ಆದರೆ ಇತರೆ ಜೇನು ನೊಣಗಳಂತೆ ಗೂಡಿನ ತಂಟೆಗೆ ಹೋದವರಿಗೆ ಹೆಚ್ಚು ನೋವು ಉಂಟು ಮಾಡುವುದಿಲ್ಲ. ಜೇನುನೊಣಗಳಲ್ಲೆಲ್ಲ ಇದು ಗಾತ್ರದಲ್ಲಿ ಅತ್ಯಂತ ಚಿಕ್ಕದಾಗಿದೆ. ಮುಜಂಟಿ ಜೇನಿನ ಗಾತ್ರ ೨ ರಿಂದ ೧೬ ಮಿ. ಮೀ. ಮಾತ್ರ ಇರುತ್ತದೆ. ಮುಜಂಟಿ ಜೇನಿಗೆ ’ನಸುರು ಜೇನು’, ’ಮಿಶ್ರಿ ಜೇನು’, ’ರಾಳಜೇನು’ ಇತ್ಯಾದಿ ಸ್ಥಳೀಯ ಹೆಸರುಗಳಿವೆ. ಜೇನು ತುಪ್ಪದ ಸಂಗ್ರಹಣೆ, ಮೇಣದ ಉತ್ಪಾದನೆ ಮತ್ತು ಬಳಕೆ, ಕೆಲಸದ ಹಂಚಿಕೆ ಮುಂತಾದ ಗುಣಗಳಲ್ಲಿ ಈ ಪ್ರಭೇದಕ್ಕೂ ಮತ್ತು ಉಳಿದ ಜೇನುಗಳ ಪ್ರಭೇದಕ್ಕೂ ಅತ್ಯಂತ ಸಾಮ್ಯವಿದೆ. ದಕ್ಷಿಣ ಭಾರತದಲ್ಲಿ ಕಂಡುಬರುವ ಮುಳ್ಳಿಲ್ಲದ ಜೇನಿನ ವೈಜ್ಞಾನಿಕ ಹೆಸರು ಟ್ರೈಗೊನ ಇರಿಡಿಪೆನ್ನಿಸ್ (ಖಿಡಿigoಟಿಚಿ iಡಿiಜiಠಿeಟಿಟಿis) ಮತ್ತು ಇವು ’ಎಪಿಡೇ’ ಎಂಬ ಕುಟುಂಬಕ್ಕೆ ಸೇರಿವೆ. ಈ ಜೇನು ಆಫ್ರಿಕಾ, ದಕ್ಷಿಣ ಅಮೇರಿಕಾ, ಏಷಿಯಾ, ಆಸ್ಟ್ರೇಲಿಯಾ, ನ್ಯೂಗಿನಿಯ ಮತ್ತು ಸೊಲೊಮನ್ ದ್ವೀಪಗಳ ಪ್ರದೇಶಗಳಲ್ಲಿ ಮತ್ತು ಭಾರತದ ಉಷ್ಣವಲಯದ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಈ ಪ್ರಭೇದಗಳು ಕಪ್ಪು ಬಣ್ಣದ ದೇಹವನ್ನು ಹೊಂದಿದ್ದು ಮುಖದ ಮೇಲೆ ಮತ್ತು ಪಕ್ಕಗಳಲ್ಲಿ ಬಿಳಿ ಕೂದಲುಗಳಿರುತ್ತವೆ

3

ಗೂಡಿನ ರಚನೆ : ಮುಜಂಟಿ ಜೇನು ತಮ್ಮ ಗೂಡುಗಳನ್ನು ಅತ್ಯಂತ ಇಕ್ಕಟ್ಟಿನ ಸ್ಥಳಗಳಾದ, ಗೋಡೆಗಳ ಮತ್ತು ನೆಲದಲ್ಲಿನ ಬಿರುಕುಗಳಲ್ಲಿ, ಮರದ ಪೊಟರೆಗಳಲ್ಲಿ, ಮರ ಮತ್ತು ಕಲ್ಲು ಬಂಡೆಗಳ ಸಂದುಗಳಲ್ಲಿ ಕಟ್ಟುತ್ತವೆ. ಹಲವು ವರ್ಷಗಳವರೆಗೆ ಒಂದೇ ಗೂಡಿನಲ್ಲಿ ವಾಸ ಮಾಡುತ್ತವೆ. ಇವುಗಳ ಗೂಡು ೫ ವಿವಿಧ ಭಾಗಗಳಿಂದ ಮಾಡಲ್ಪಟ್ಟಿರುತ್ತದೆ. ೧) ಮರಿಗಳ ಕಣ ೨) ಜೇನು ಮತ್ತು ಪರಾಗ ಸಂಗ್ರಹ ಕಣಗಳು ೩) ಇನ್ವೋಲೂಕ್ರಮ್ ೪) ಬಾಟುಮೆನ್ ೫) ಪ್ರವೇಶ ದ್ವಾರ. ಎರಿಗಳ ರಚನೆಗೆ ತಮ್ಮ ದೇಹದಿಂದ ಸ್ರವಿಸುವ ಮೇಣ ಮತ್ತು ಸಸ್ಯಗಳಿಂದ ಶೇಖರಿಸಿದ ಅಂಟಿನ ಮಿಶ್ರಣದಿಂದ ತಯಾರಾದ ಕಪ್ಪಾದ ಅಂಟು ಪದಾರ್ಥ (ಸೆರುಮೆನ್)ವನ್ನು ಬಳಸುತ್ತವೆ. ಮರಿಗಳ ಕಣಗಳು ಪದರಗಳಾಗಿ ಅಥವಾ ಗುಂಪಿನಲ್ಲಿ ರಚಿಸುತ್ತವೆ. ಕಣಗಳ ರಚನೆ ಕಡಲೆಕಾಳು ಹಾಗೂ ಜೋಳದ ಕಾಳಿನ ಗಾತ್ರಗಳಷ್ಟಿದ್ದು, ಕಡಲೆಕಾಳು ಗಾತ್ರದ ಕಣಗಳಲ್ಲಿ ಪರಾಗ ಮತ್ತು ಜೇನು ಸಂಗ್ರಹಣೆ ಇರುತ್ತದೆ. ಜೋಳದ ಕಾಳಿನ ಗಾತ್ರದ ಕಣಗಳಲ್ಲಿ ಮೊಟ್ಟೆ ಮತ್ತು ಮರಿಗಳು ಇರುತ್ತವೆ. ಈ ಜೇನುನೊಣಗಳನ್ನು ಕುರಿತಾದ ವೈಜ್ಞಾನಿಕ ಅಧ್ಯಯನ ಅತ್ಯಂತ ಕಡಿಮೆಯೇ ಇದ್ದು, ಇವುಗಳ ಸಾಕಾಣಿಕೆ ಅಥವಾ ಜೇನು ತುಪ್ಪದ ಸಂಗ್ರಹಣೆಗೆ ಯಾವುದೇ ವಿಧಾನಗಳನ್ನು ಅಭಿವೃದ್ದಿ ಪಡಿಸಲಾಗಿಲ್ಲ. ಇದರ ಜೇನು ತುಪ್ಪದ ಸಂಗ್ರಹಣೆ ಸಾಮರ್ಥ್ಯ ಅತ್ಯಂತ ಕಡಿಮೆ ಇದ್ದು ಒಂದು ವರ್ಷದಲ್ಲಿ ಪ್ರತೀ ಕುಟುಂಬದಿಂದ ಕೇವಲ ೧೦೦ ರಿಂದ ೨೫೦ ಗ್ರಾಂಗಳಷ್ಟು ಜೇನು ತುಪ್ಪವನ್ನು ಪಡೆಯಬಹುದೆಂದು ಅಂದಾಜು ಮಾಡಲಾಗಿದೆ. ಪ್ರಾಚೀನ ಕಾಲದಲ್ಲಿಯೇ ಭಾರತದಲ್ಲಿ ಈ ಜೇನಿನ ಸಾಕಾಣಿಕೆ ಇದ್ದು, ಇದರ ಜೇನು ತುಪ್ಪವು ಅನೇಕ ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿ ಬಳಕೆಯಲ್ಲಿತ್ತೆನ್ನುವುದಕ್ಕೆ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖನಗಳಿವೆ. ತಮ್ಮ ಗೂಡಿನಿಂದ ೨೦೦ ರಿಂದ ೪೦೦ ಮೀಟರ್ ಸುತ್ತಳತೆಯಿಂದ ಆಹಾರ ಸಂಗ್ರಹಿಸಬಲ್ಲ ಈ ಜೇನುನೊಣಗಳಿಂದ ಪಡೆಯಬಹುದಾದ ಜೇನು ತುಪ್ಪದ ಪ್ರಮಾಣ ಅತ್ಯಂತ ಕಡಿಮೆ ಇದ್ದಾಗ್ಯು ಕೂಡ ಬೆಳೆಗಳ ಪರಾಗಸ್ಪರ್ಶ ಕ್ರಿಯೆಯಲ್ಲಿ ಉಳಿದ ನೊಣ ಗಳಂತೆಯೇ ಮಹತ್ತರ ಪಾತ್ರವನ್ನು ವಹಿಸಿ ಹೆಚ್ಚು ಇಳುವರಿಗೆ ಕಾರಣವಾಗಿವೆ

5

ಲಿಂಗ ವೈವಿಧ್ಯತೆ: ಇತರೆ ಜೇನುನೊಣಗಳಲ್ಲಿರುವಂತೆ ಮುಜಂಟಿಯಲ್ಲೂ ಸಹ ಮೂರು ಜಾತಿಯ ಲಿಂಗ ಆಧಾರಿತ ಹುಳುಗಳು ಕಂಡುಬರುತ್ತವೆ. ಅವುಗಳೆಂದರೆ, ’ರಾಣಿ ನೊಣ’, ’ಕೆಲಸಗಾರ’ ಹುಳುಗಳು ಮತ್ತು ’ಗಂಡು’ ನೊಣಗಳು (ಡ್ರೋನ್). ರಾಣಿನೊಣವು ಗಾತ್ರದಲ್ಲಿ ಇತರೆ ಹುಳುಗಳಿಗಿಂತ ಸ್ವಲ್ಪ ದೊಡ್ಡದಾಗಿದ್ದು ರೆಕ್ಕೆಗಳು ಸಂಪೂರ್ಣವಾಗಿ ದೇಹವನ್ನು ಮುಚ್ಚುವುದಿಲ್ಲ. ಕೆಲಸಗಾರ ಹುಳುಗಳಲ್ಲಿ ರೆಕ್ಕೆಯು ದೇಹವನ್ನು ಸಂಪೂರ್ಣವಾಗಿ ಮುಚ್ಚುತ್ತವೆ ಮತ್ತು ಹೊಟ್ಟೆಯು ಚೂಪಾಗಿರುತ್ತದೆ. ಗಂಡು ಹುಳುಗಳಲ್ಲಿ ಮೀಸೆಯು ಉಳಿದವುಗಳಗಿಂತ ಉದ್ದವಾಗಿರುತ್ತವೆ ಮತ್ತು ಹೊಟ್ಟೆಯ ತುದಿಯು ಚೂಪಾಗಿರದೆ ದುಂಡಾಗಿರುತ್ತದೆ.

ಸಂತಾನೋತ್ಪತ್ತಿ: ಮುಜಂಟಿ ಜೇನುಗಳಲ್ಲಿ ಕುಟುಂಬದ ಸಂತಾನೋತ್ಪತ್ತಿ ಬಹಳ ನಿಧಾನ ವಾಗಿರುತ್ತದೆ. ಹೊಸದಾದ ಇನ್ನೊಂದು ಗೂಡು ರಚನೆಯಾಗುವ ಮುನ್ನ ಅದರ ಸ್ಥಳವನ್ನು ಹುಡುಕುವುದು ಮುಖ್ಯವಾಗಿರುತ್ತದೆ. ಹೊಸ ಗೂಡು ಕಟ್ಟಲು ಕೆಲಸಗಾರ ಹುಳುಗಳು ಸ್ಥಳವನ್ನು ಗುರುತಿಸಿದ ಮೇಲೆ ಗೂಡು ಕಟ್ಟಲು ಬೇಕಾಗುವ ಸಾಮಗ್ರಿಯನ್ನು ಮೊದಲು ಈಗಿರುವ ಗೂಡಿನಿಂದ ವರ್ಗಾವಣೆ ಮಾಡುತ್ತವೆ. ಹೊಸ ಆಹಾರ ಕಣಗಳನ್ನು ರಚನೆಮಾಡಿ ನಂತರ ಆಹಾರ ಕಣಗಳಿಗೆ ಆಹಾರವನ್ನೂ ಸಹ ಸರಬರಾಜು ಮಾಡುತ್ತವೆ. ಇದಾದ ನಂತರ ಹೊಸ ರಾಣಿಯು ಹೊಸ ಗೂಡಿಗೆ ಸ್ವಲ್ಪ ಪ್ರಮಾಣದ ಕೆಲಸಗಾರ ಮತ್ತು ಗಂಡು ಹುಳುಗಳೊಂದಿಗೆ ಬರುತ್ತದೆ. ಸ್ವಲ್ಪ ದಿನಗಳಲ್ಲೇ ಇನ್ನಷ್ಡು ಕೆಲಸಗಾರ ಹುಳುಗಳು ಹೊಸ ಗೂಡನ್ನು ಸೇರಿಕೊಳ್ಳುತ್ತವೆ. ಹೊಸ ರಾಣಿ ಗಂಡು ಹುಳುವಿನ ಜೊತೆ ಲೈಂಗಿಕ ಕ್ರಿಯೆಯನ್ನು ಕೆಲವೇ ದಿನಗಳಲ್ಲಿ ಪೂರ್ಣಗೊಳಿಸುತ್ತದೆ. ನಂತರ ನಿರಂತರವಾಗಿ ತನ್ನ ಜೀವಿತಾವಧಿಯವರೆಗೂ ಮೊಟ್ಟೆಗಳನ್ನು ಇಡಲು ಪ್ರಾರಂಭಿಸುತ್ತದೆ. ರಾಣಿಯು ತನ್ನ ಜೀವನದಲ್ಲಿ ಒಂದೇ ಸಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತದೆ ಮತ್ತು ನಂತರ ಮೊಟ್ಟೆ ಇಡಲು ಪ್ರಾರಂಭಿಸಿದ ಮೇಲೆ ಹೊಟ್ಟೆಯ ಗಾತ್ರ ದೊಡ್ಡದಾಗಿ ಹಾರಾಡುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಇದು ಯಾವಾಗಲೂ ಹಳೆಯ ಗೂಡಿನಲ್ಲಿ ಉಳಿದುಕೊಳ್ಳುತ್ತದೆ.

8

ಮುಜಂಟಿ ಜೇನು ಸಾಕಾಣಿಕೆ : ಮುಜಂಟಿ ಜೇನು ಇತರೆ ಜೇನಿನ ಪ್ರಭೇದಗಳಂತೆ ತಮ್ಮ ಗೂಡಿನ ಉಷ್ಣತೆಯನ್ನು ಕಾಪಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಆದ್ದರಿಂದಲೇ ಅವು ಉಷ್ಣಪ್ರದೇಶಕ್ಕಷ್ಟೇ ಸೀಮಿತವಾಗಿರುತ್ತವೆ. ಮುಜಂಟಿ ಜೇನು ಸಾಕಾಣಿಕೆ ಮಾಡುವುದನ್ನು ’ಮೆಲಿಪೋನಿ ಕಲ್ಚರ್’ಎಂದು ಕರೆಯುತ್ತಾರೆ. ಮುಜಂಟಿ ಜೇನು ಸಾಕಾಣಿಕೆ ಹಲವು ಶತಮಾನಗಳಷ್ಟು ಪುರಾತನ ಕಾಲದಿಂದಲೂ ಬ್ರೆಜಿಲ್, ಲ್ಯಾಟಿನ್ ಅಮೆರಿಕ ಮೆಕ್ಸಿಕೊ, ಕೋಸ್ಟಾರಿಕಾ ಮತ್ತು ಆಸ್ತ್ರೇಲಿಯಾದಲ್ಲಿ ನಡೆಯುತ್ತಿದೆ. ಮುಜಂಟಿ ಜೇನು ಕೃಷಿ ಅಭಿವೃದ್ದಿಪಡಿಸಲು ಮತ್ತು ಮುಜಂಟಿಯನ್ನು ಪರಾಗಸ್ಪರ್ಶ ಉದ್ದೇಶಕ್ಕಾಗಿ ಬಳಸಲು ದಕ್ಷಿಣ ಭಾರತದಲ್ಲಿ ಹೇರಳವಾದ ಅವಕಾಶಗಳಿವೆ. ಕೇರಳದಲ್ಲಿ ಸಾಮಾನ್ಯವಾಗಿ ಮುಜಂಟಿಯನ್ನು ಮನೆಗಳ ಹಿತ್ತಲಲ್ಲಿ ಬಂಬು ಅಥವಾ ಮಣ್ಣಿನ ಮಡಕೆ ಅಥವಾ ತೆಂಗಿನ ಚಿಪ್ಪಿನಲ್ಲಿ ಜೇನು ತುಪ್ಪಕ್ಕಾಗಿ ಸಾಕುತ್ತಾರೆ. ಎರಡು ಭಾಗ ಮಾಡಿದ ತೆಂಗಿನ ಚಿಪ್ಪನ್ನು ಒಂದರ ಮೇಲೊಂದು ಇಡುವುದರಿಂದ ಯಾವಾಗಲೂ ಗೂಡಿನ ಮೇಲ್ಭಾಗದಲ್ಲಿ ಜೇನುತುಪ್ಪ ಸಂಗ್ರಹಣೆ ಆಗುವುದರಿಂದ ಜೇನುತುಪ್ಪ ತೆಗೆಯಲು ಸುಲಭವಾಗುತ್ತದೆ

ಜೇನುತುಪ್ಪ : ಮುಜಂಟಿ ಜೇನುನೊಣವು ಸಂಗ್ರಹಣೆ ಮಾಡುವ ಜೇನುತುಪ್ಪದ ಪ್ರಮಾಣ ಬಹಳ ಕಡಿಮೆ. ಒಂದು ಗೂಡಿನಿಂದ ಒಂದು ವರ್ಷಕ್ಕೆ ಸುಮಾರು ೧೦೦ ರಿಂದ ೨೫೦ ಗ್ರಾಂ ಮಾತ್ರ ಜೇನುತುಪ್ಪ ಸಂಗ್ರಹವಾಗುತ್ತದೆ. ಆದರೆ ಮುಜಂಟಿ ಜೇನುತುಪ್ಪಕ್ಕೆ ಯಾವಾಗಲೂ ಹೆಚ್ಚಿನ ಬೆಲೆ ಸಿಗುತ್ತದೆ. ಸಾಮಾನ್ಯವಾಗಿ ಸಿಗುವ ಇತರೆ ಜೇನುತುಪ್ಪಕ್ಕಿಂತ ೩ ರಿಂದ ೪ ಪಟ್ಟು ಹೆಚ್ಚು ಬೆಲೆ ಸಿಗುತ್ತದೆ. ಮುಜಂಟಿ ಜೇನುತುಪ್ಪವು ಅವುಗಳ ಗೂಡಿನಲ್ಲಿ ವಿಶೇಷವಾಗಿ ಮೇಣ ಮತ್ತು ಇತರೆ ಅಂಟಿನ ಮಿಶ್ರಣದಿಂದ ತಯಾರಾದ ತುಪ್ಪದ ಕುಡಿಕೆಗಳಲ್ಲಿ ಶೇಖರವಾಗಿರುತ್ತದೆ. ತುಪ್ಪದ ಕಣಗಳನ್ನು ಮುಚ್ಚಳದಿಂದ ಮುಚ್ಚಿರುತ್ತವೆ. ಮುಜಂಟಿ ಜೇನುತುಪ್ಪವು ದಪ್ಪ ಅಥವಾ ಮಂದವಾಗಿರದೆ ನೀರಾಗಿರುತ್ತದೆ. ಈ ಜೇನುತುಪ್ಪದಲ್ಲಿ ಆಮ್ಲಗಳು ಜಾಸ್ತಿ ಇರುವುದರಿಂದ ಮಾಮೂಲಿ ಜೇನುತುಪ್ಪಕ್ಕಿಂತ ಈ ಜೇನುತುಪ್ಪ ಸ್ವಲ್ಪ ಹುಳಿಯಾಗಿರುತ್ತದೆ. ಆದರೆ, ಮುಜಂಟಿ ಜೇನುತುಪ್ಪಕ್ಕೆ ಔಷಧೀಯ ಗುಣಗಳು ಬಹಳ ಇರುವುದರಿಂದ ಈ ಜೇನುತುಪ್ಪಕ್ಕೆ ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿ ಅತ್ಯಂತ ಬೇಡಿಕೆಯಿದೆ. ಸುಟ್ಟಗಾಯಗಳು, ಒಳಗಿನ ಗಾಯಗಳು ಮತ್ತು ಕಣ್ಣಿನ ರೋಗಗಳಿಗೆ ವಿಶೇಷವಾಗಿ ಮುಜಂಟಿ ಜೇನುತುಪ್ಪವನ್ನು ಬಳಸಬಹುದು. ಮುಜಂಟಿ ಜೇನುಗೂಡುಗಳಿಂದ ಕೇವಲ ಜೇನುತುಪ್ಪವಲ್ಲದೇ, ಪರಾಗ ಮತ್ತು ಪ್ರೋಪೋಲಿಸ್ ಎಂಬ ಉತ್ಪನ್ನಗಳನ್ನು ಸಹ ಪಡೆಯಬಹುದಾಗಿದ್ದು ಇವುಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ

11

ಪರಾಗಸ್ಪರ್ಶ ಕ್ರಿಯೆ : ಮುಜಂಟಿ ಜೇನು ಪರಾಗಸ್ಪರ್ಶ ಕಾರ್ಯದಲ್ಲಿ ಅತ್ಯುತ್ತಮವಾಗಿದ್ದು ಅವುಗಳನ್ನು ಮರಗಳ ಜಾತಿ ಮತ್ತು ಔಷಧೀಯ ಸಸ್ಯಗಳ ಪರಾಗಸ್ಪರ್ಶಕ್ರಿಯೆಗಳಲ್ಲಿ ತೊಡಗಿಸಿಕೊಳ್ಳಬಹುದು. ಇವುಗಳು ಗಾತ್ರದಲ್ಲಿ ಕಡಿಮೆಯಿರುವುದರಿಂದ ಅತೀ ಸಣ್ಣ ಹೂಗಳಿಗೂ ಸಹ ಪ್ರವೇಶಮಾಡಿ ಪರಾಗಸ್ಪರ್ಶ ಕ್ರಿಯೆಯನ್ನು ನಿರ್ವಹಿಸಬಲ್ಲವು. ಮುಜಂಟಿ ಜೇನುನೊಣಗಳ ಹಾರಾಟ ಕೇವಲ ಕಡಿಮೆ ಜಾಗಗಳಿಗೆ ಸೀಮಿತವಾಗಿರುವುದರಿಂದ ಪರಾಗಸ್ಪರ್ಶಕ್ಕಾಗಿ ಹಸಿರುಮನೆಗಳಲ್ಲಿ ಸೂಕ್ತವಾಗಿ ಇವನ್ನು ಬಳಸಿಕೊಳ್ಳಬಹುದು. ಮುಜಂಟಿ ಜೇನು ಪ್ರಕೃತಿಯಲ್ಲಿರುವ, ಮುಖ್ಯವಾಗಿ ಅರಣ್ಯ ಪ್ರದೇಶಗಳಲ್ಲಿ ಸಸ್ಯಗಳ ವೈವಿಧ್ಯತೆಯನ್ನು ಕಾಪಾಡಲು ಪ್ರಮುಖ ಪಾತ್ರವಹಿಸುತ್ತವೆ. ವಿಶೇಷವಾಗಿ ನೆಲ್ಲಿಕಾಯಿ ಬೆಳೆಯಲ್ಲಿ ಮುಜಂಟಿ ಜೇನುನೊಣಗಳನ್ನು ಪರಾಗಸ್ಪರ್ಶಕ್ಕೆ ಬಳಸಬಹುದು. ಮುಂದಿನ ದಿನಗಳಲ್ಲಿ ಮುಜಂಟಿಯನ್ನು ಇನ್ನೂ ಅನೇಕ ಬೆಳೆಗಳಲ್ಲಿ ಯಶಸ್ವಿಯಾಗಿ ಪರಾಗಸ್ಪರ್ಶ ಉದ್ದೇಶಕ್ಕೆ ಉಪಯೋಗಿಸಿಕೊಳ್ಳುವ ದಿನಗಳು ದೂರವಿಲ್ಲ

ಸಾಮಾಜಿಕ ಅಭಿವೃದ್ದಿ : ಎಲ್ಲರಿಗೂ, ಈ ಮುಳ್ಳಿಲ್ಲದ ಜೇನುನೊಣಗಳನ್ನು ಸಾಕಲು ಹೆಚ್ಚು ಪ್ರಿಯವಾಗಲು ಕಾರಣವಾಗುವ ಉತ್ತಮ ಗುಣಗಳೆಂದರೆ; ಇವು ಮಾನವನಿಗೆ ಹೆಚ್ಚು ತೊಂದರೆ ಮಾಡುವುದಿಲ್ಲ, ಬಹಳ ವರ್ಷಗಳ ಕಾಲ ಒಂದೇ ಗೂಡಿನಲ್ಲಿ ನೆಲೆ ನಿಲ್ಲುತ್ತವೆ ಮತ್ತು ವಲಸೆ ಹೋಗುವ ಚಾಳಿ ಇರುವುದಿಲ್ಲ. ಆದ್ದರಿಂದ ಈ ಜೇನು ಸಾಕಾಣಿಕೆಯನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಮುಖ್ಯವಾಗಿ ಹೆಣ್ಣುಮಕ್ಕಳು ಕೈಗೊಳ್ಳಲು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಬಹಳ ಸೂಕ್ತವಾಗಿ ಉಪಕಸುಬು ರೀತಿಯಲ್ಲಿ ಅಳವಡಿಸಿಕೊಳ್ಳಲು ಇದು ತುಂಬಾ ಒಳ್ಳೆಯದು. ಅಂತಿಮ ಅನಿಸಿಕೆ : ಅತೀ ಹೆಚ್ಚಿನ ಜೇನುಸಂಕುಲಗಳ ವೈವಿಧ್ಯತೆ ನಮ್ಮ ದೇಶದಲ್ಲಿ ದೊರಕುವುದರಿಂದ ಮತ್ತು ಉತ್ತಮ ಉಷ್ಣವಾತಾವರಣವಿರುವ ಕಾರಣದಿಂದ ಮುಜಂಟಿ ಜೇನುಸಾಕಾಣಿಕೆಗೆ ವ್ಯಾಪಕ ಅವಕಾಶವಿದೆ. ಆದರೆ, ಇತರೆ ಜೇನು ನೊಣಗಳಲ್ಲಿ ಅಭಿವೃದ್ದಿಯಾದಂತೆ ಮುಜಂಟಿ ಜೇನು ಸಾಕಾಣಿಕೆಯಲ್ಲಿ ಅಷ್ಟೇನೂ ಬೆಳವಣಿಗೆ ಆಗಿಲ್ಲವಾದ್ದರಿಂದ ಇವುಗಳ ಸಂಶೋಧನಾ ಅಭಿವೃದ್ದಿಗೆ ಮತ್ತು ವಿಸ್ತರಣಾ ಚಟುವಟಿಕೆಗಳಿಗೆ ಹೆಚ್ಚು ಹೆಚ್ಚು ಒತ್ತು ನೀಡುವುದು ತುಂಬಾ ಅವಶ್ಯಕವಾಗಿದೆ