ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಮಣ್ಣ ಮಡಿಲಲ್ಲಿ

ತಾಂತ್ರಿಕ ಮಾರ್ಗದರ್ಶನದಿಂದ ಉತ್ಪಾದನಾ ವೆಚ್ಚ ಕಡಿಮೆ ಮಾಡಿದ ಮಲಿಯಪ್ಪ

ಸಂಪಾದಕರು
1

ಅಹಾ ರುದ್ರ ಹೇ ದೇವ, ಶ್ರೀ ವೀರಭದ್ರದೇವರು ಯಜ್ಞ ಕುಂಡದೆಡೆಗೆ ಹೇಗೆ ಬರುತ್ತಾನೆಂದರೆ ಅಂತ ನಾವು ಮಲಿಯಪ್ಪನವರ ತೋಟ ಪ್ರವೇಶಿಸುತ್ತಿದ್ದಾಗ ಬಂದ ಮೈಕಾಸುರನ ಧ್ವನಿ ಕೇಳಿ ನಾವೆಲ್ಲಿಗೆ ಬಂದೆವು ಎಂಬ ಗಲಿಬಿಲಿಯಾಯಿತು. ನಮ್ಮ ಮುಖ ಭಾವ ಗಮನಿಸಿದ ಮಲಿಯಪ್ಪನವರು ಸಾರ್ ಬನ್ನಿ ಇದು ನಮ್ಮ ತೋಟದ ಪಕ್ಷಿ ಓಡಿಸುವ ವ್ಯವಸ್ಥೆ. ಹಣ್ಣಿನ ಕಾಲ ಅಲ್ವೆ ಪಕ್ಷಿ ಕಾಟ ಜಾಸ್ತಿ ಅಂದ್ರು. ಆಹಾ ಎಂತಾ ಸರಳ ಮನೋರಂಜನಾತ್ಮಕ ಉಪಾಯ. ಇವರು ಅನ್ಶೆಡ್ಯೂಲ್ ಪವರ್ ಕಟ್ ತರ ಅನ್ಶೆಡೂಲ್ ಆಗಿ ಆಫ಼್ ಆನ್ ಮತ್ತು ವೈವಿಧ್ಯಮಯ ಸಂಗೀತಗಳ ಮಿಶ್ರಣ ಮಾಡಿದ್ದಾರಂತೆ. ಒಂದೇ ರೀತಿಯ ಶಬ್ದ ಸದಾ ಬರುತ್ತಿದ್ದರೆ ಪಕ್ಷಿಗಳೂ ಅದಕ್ಕೆ ಹೊಂದಿಕೊಂಡು ಬಿಡುತ್ತವೆ ಎಂದೇ ಈ ವೈವಿಧ್ಯತೆ. ಅವರ ತೋಟಕ್ಕೆ ಕಾಲಿಡುತ್ತಿದ್ದಂತೆ ಎಲ್ಲೆಲ್ಲೂ ಹಣ್ಣುಗಳನ್ನು ಹೊತ್ತು ನಿಂತ ಗಿಡಗಳು ಮನಸ್ಸಿಗೆ ಮುದ ನೀಡುವಲ್ಲಿ ಅನುಮಾನವೇ ಇಲ್ಲ. ಇವರು ಕಳೆದ ೮ ವರ್ಷದಿಂದ ದಾಳಿಂಬೆ ಬೆಳೆಯುತ್ತಿದ್ದಾರೆ. ಆ ಮೊದಲು ಸೂರ್ಯಕಾಂತಿ, ಮೆಕ್ಕೆಜೋಳ ಬೆಳೆಗಳನ್ನು ಹಿರಿಯರಿಂದ ಮುಂದುವರೆಸಿಕೊಂಡು ಬಂದಿದ್ದರು. ದಾಳಿಂಬೆ ಡಾಕ್ಟರ್(ದಾಳಿಂಬೆ ಡಾಕ್ಟರ್ ಎಂದರೆ ಯಾರೆಂದು ತಿಳಿಯಲು ನೇಗಿಲ ಮಿಡಿತ ಸಂಪುಟ ೧, ಸಂಚಿಕೆ ೧೨, ಡಿಸೆಂಬರ್ ೨೦೧೫ರ ಸಂಪಾದಕೀಯ ಓದಿ) ಈಶ್ವರಪ್ಪ ಎನ್ನುವವರಿಂದ ಪ್ರೇರಣೆ ಪಡೆದು ದಾಳಿಂಬೆ ಕೃಷಿ ಪ್ರಾರಂಭಿಸಿದರಂತೆ. ಎರಡು ವರ್ಷ ಮಾತ್ರ ಅವರ ಮಾರ್ಗದರ್ಶನ ನಂತರ ಅನುಭವದ ಕಲಿಕೆ ನಂತರ ಬಬ್ಬೂರು, ಕೆವಿಕೆಯವರ ಮಾರ್ಗದರ್ಶನಕ್ಕೆ ವರ್ಗಾವಣೆ. ದಾಳಿಂಬೆ ಕುರಿತು ತಾಲ್ಲೂಕು ಸಮಾವೇಶ ವೊಂದರಲ್ಲಿ ಡಾ. ಸರ್ವಜ್ಞ ಸಾಲಿಮಠರ ಪರಿಚಯ ಆದ ಮೇಲೆ ಬಬ್ಬೂರು ಕೆವಿಕೆ ಸಂಪರ್ಕಕ್ಕೆ ಬಂದ ಇವರ ದಾಳಿಂಬೆ ಬೆಳೆ ಖರ್ಚು ವಾರ್ಷಿಕ ಎರಡು ಲಕ್ಷದಷ್ಟು ಕಡಿಮೆಯಾಗಿ ಇಳುವರಿ ಹೆಚ್ಚಾಗಿರುವುದಲ್ಲದೇ ಹಾಗೂ ರೋಗಗಳ ಬಾಧೆ ಕಡಿಮೆಯಾಗಿದೆಯಂತೆ. ಎಂತಹ ಅದ್ಭುತ ಸಾಧನೆ. ಉತ್ಪಾದನಾ ವೆಚ್ಚ ಕಡಿಮೆ ಮಾಡುವುದು ಎಂದರೆ ಲಾಭ ಹೆಚ್ಚಾಯಿತು ಹಾಗೂ ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಬಹುದು ಎಂದಲ್ಲವೆ?

3

ಮಲಿಯಪ್ಪನವರದ್ದು ಸಮಗ್ರ ಕೃಷಿ. ಕೃಷಿ ಬೆಳೆ, ತೋಟದ ಬೆಳೆ, ಮೇವಿನ ಬೆಳೆ ಜೊತೆಗೆ ಹಸು ಸಾಕಣೆ ಮತ್ತು ಬ್ರಾಯಲರ್ ಕೋಳಿ ಸಾಕಣೆ ಸಹ ಇದೆ. ಕೋಳಿಗೆ ಬೇಕಾಗುವ ಆಹಾರವನ್ನು ತಾವೇ ಬೆಳೆದು ತಮ್ಮದೇ ಕೋಳಿ ಆಹಾರ ತಯಾರಿಸುವ ಘಟಕದಲ್ಲಿ ಸಿದ್ಧಪಡಿಸಿಕೊಡುತ್ತಾರೆ. ಮೊದಲು ಕೋಳಿ ಗೊಬ್ಬರವನ್ನು ದಾಳಿಂಬೆ ತೋಟಕ್ಕೆ ಬಳಸುತ್ತಿದ್ದರು. ಆದರೆ ಮಣ್ಣು ವಿಜ್ಞಾನಿ ಸಾಲಿಮಠ ಅವರ ಮಾರ್ಗದರ್ಶನ ಸಿಕ್ಕ ಮೇಲೆ ಕೋಳಿ ಗೊಬ್ಬರ ಬಳಸುವ ವಿಧಾನ ಬದಲಾಗಿದ್ದು ಗಿಡಗಳು ಆರೋಗ್ಯವಾಗಿವೆ. ಈಗ ೧೦ ಲೋಡ್ ಕೋಳಿ ಗೊಬ್ಬರ, ೧೦ ಲೋಡ್ ಕೊಟ್ಟಿಗೆ ಗೊಬ್ಬರ, ೧೦ ಲೋಡ್ ಕುರಿ ಗೊಬ್ಬರ ಎಲ್ಲಾ ಜೆಸಿಬಿಯಲ್ಲಿ ಮಿಕ್ಸ್ ಮಾಡುತ್ತಾರೆ. ಹೀಗೆ ಮಾಡುವಾಗ ಟ್ರೈಕೋಡರ್ಮಾ, ಸೂಡೊಮಾನಾಸ್, ವ್ಯಾಮ್ ಜೀವಾಣುಗಳು ಮತ್ತು ಜಿಂಕ್, ಜಿಪ್ಸಮ್, ಸೂಪರ್ ಫಾಸ್ಪೇಟ್ ಪೋಷಕಾಂಶಗಳನ್ನು ಸೇರಿಸುತ್ತಾರೆ. ನಂತರ ಮಡಿ ಮಾಡಿ ಮಡಿಗಳ ಮೇಲೆ ಕಟ್ಟೆ ಕಟ್ಟಿ ನೀರು ನಿಲ್ಲಿಸುತ್ತಾರೆ. ನಂತರ ಒಂದು ವರ್ಷ ಕಳಿತ ಗೊಬ್ಬರಕ್ಕೆ ಬಳಸುವ ೧೫-೨೦ ದಿನಗಳ ಮೊದಲು ಮತ್ತೊಮ್ಮೆ ಜೈವಿಕ ಗೊಬ್ಬರಗಳಿಂದ ಸಮೃದ್ಧಗೊಳಿಸಿ ಗಿಡಕ್ಕೆ ೪ ಪುಟ್ಟಿ ಹಾಕುತ್ತಾರೆ. ಈ ವಿಧಾನ ತುಂಬಾ ಪರಿಣಾಮಕಾರಿಯಾಗಿದೆ ಎನ್ನುತ್ತಾರೆ.

5

ಮಲಿಯಪ್ಪನವರದ್ದು ಕೂಡು ಕುಟುಂಬ ೩೦ ಜನ ಸದಸ್ಯರಿರುವ ಈ ಕುಟುಂಬವನ್ನು ಎಸ್.ಎಸ್.ಎಲ್.ಸಿ. ಓದಿದ ನಾನು ನಿರ್ವಹಣೆ ಮಾಡುತ್ತಿದ್ದೇನೆ. ನಮ್ಮದು ನೌಕರಿ ಭಾಗ್ಯವಿಲ್ಲದ ಕೂಡು ಕುಟುಂಬ ಅಂತ ಹೆಮ್ಮೆಯಿಂದ ಹೇಳುತ್ತಾರೆ. ಅವರ ಕುಟುಂಬದಲ್ಲಿ ಯಾರೂ ನೌಕರಿ ಅರಸಿ ಹೋಗದೆ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಮನೆಯವರೆಲ್ಲಾ ಕೆಲಸ ಮಾಡುತ್ತಾರೆ ಆದ್ರೂ ಅವರು ಹೇಳೋದು ಕೋಳಿ, ದಾಳಿಂಬೆ, ಈರುಳ್ಳಿ ಬಿಟ್ರೆ ಉಳಿದದ್ರಲ್ಲಿ ಅಲ್ಲಿಂದ ಅಲ್ಲಿಗೆ ಇವುಗಳು ಮಾತ್ರ ನಮಗೆ ಲಾಭ ತಂದು ಕೊಡೋದು ಅಂತಾರೆ. ಕೃಷಿಗೆ ನೀರೊದಗಿಸಲು ೩ ಬೋರ್ ಇವೆ. ವಿದ್ಯುತ್ ಸಮಸ್ಯೆಯಿಂದ ಒಂದಕ್ಕೆ ಸೋಲಾರ್ ಅಳವಡಿಸಿದ್ದೇನೆ ಅಂತಾರೆ. ಪ್ರವೀಣ್ಕುಮಾರ್ ಅವರಿಂದ ಸೋಲಾರ್ ಹಾಕಿಸಿದೆ ಎನ್ನುತ್ತಾ ಇದಕ್ಕೆ ಹೊಸದಾಗಿ ಕಾರ್ಪೋರೇಶನ್ ಬ್ಯಾಂಕ್ ಆರ್ಥಿಕ ನೆರವು ನೀಡಿದ್ದನ್ನು ಸ್ಮರಿಸುತ್ತಾರೆ.

7

ಓದಿದ್ದು ಕಡಿಮೆ ಆದರೆ ತಂತ್ರಜ್ಞಾನ ಅರಿತು ಅಳವಡಿಸಲು ಮುಂಚೂಣಿಯಲ್ಲಿ ಇರುತ್ತಾರೆ ಎನ್ನುವುದು ಅವರ ತೋಟ ನೋಡಿದವರ ಅರಿವಿಗೆ ಬರುತ್ತದೆ. ಜೊತೆಗೆ ಸಾತ್ವಿಕ ಬದುಕು. ನಾವೂ ಪೂರ್ಣ ಕ್ಷೇತ್ರ ಪರಿಚಯ ಮಾಡಿಕೊಂಡು ಬರುವ ಹೊತ್ತಿಗೆ ಎಲ್ಲರಿಗೂ ದಾಳಿಂಬೆ ಹಣ್ಣಿನ ಚೀಲ ಕೊಟ್ಟರು. ಆದರೆ ನಾನು ಯಾವುದೇ ರೈತರ ಹೊಲದಿಂದ ಉಚಿತ ಏನನ್ನೂ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿ ೫೦೦ ರೂ. ಕೊಟ್ಟು ಸಾಕಷ್ಟು ದಾಳಿಂಬೆಯೊಂದಿಗೆ ವಾಹನ ಏರಿದೆ. ಆಗ ಅವರೊಂದು ಮಾತು ಕೇಳಿದರು ನೋಡಿ ಸಾರ್ ಕೃಷಿ ಆದಾಯಕ್ಕೆ ತೆರಿಗೆ ಇಲ್ಲ ಅಂತಾರೆ ನಾನು ದಾಳಿಂಬೆ ಮಾರಿದ ದುಡ್ಡು ತೆಗೆದುಕೊಂಡು ಹೋದ್ರೆ ಇದು ಕೃಷಿ ವರಮಾನವೆ? ಹ್ಯಾಗೆ ಹೇಳುತ್ತೀರಿ? ಅಂದ್ರೆ ನನ್ನ ಹತ್ರ ದಾಖಲೆ ಇರುವುದಿಲ್ಲ ಕೊಳ್ಳುವವರ್ಯಾರೂ ರಶೀದಿ ಕೊಡುವುದಿಲ್ಲ. ಇದೊಂದು ದೊಡ್ಡ ಸಮಸ್ಯೆ. ಇದಕ್ಕೆ ತಮ್ಮಲ್ಲಿ ಏನಾದರೂ ಪರಿಹಾರ ಇದೆಯೇ ಎಂದು ಕೇಳಿದರು. ನನಗೂ ಈ ಬಗ್ಗೆ ಸ್ಪಷ್ಟ ಕಲ್ಪನೆ ಇರಲಿಲ್ಲ ತಿಳಿದು ಹೇಳುತ್ತೇನೆ ಎಂದು ಹಿಂದಿರುಗಿ ಈ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಆದಷ್ಟು ಬೇಗ ಅವರಿಗೆ ಹೇಳುವ ಜವಾಬ್ದಾರಿಯೂ ನಮ್ಮ ಮೇಲಿದೆ.

ಡೆಲಿವರಿ ಚಲನ್ ಮುದ್ರಿಸಿ ಕೊಡಬಹುದು: ರೈತರು ತಮ್ಮ ಉತ್ಪನ್ನ ಮಾರಾಟ ಮಾಡಿದಾಗ ಹಣ ಎಷ್ಟು ಎಂದು ನಮೂದಿಸಿರದಿದ್ದರೂ ಉತ್ಪನ್ನದ ತೂಕ ಆಧರಿಸಿ ಡೆಲಿವರಿ ಚಲನ್ ಕೊಡುವ ಪದ್ಧತಿಯನ್ನು ಉತ್ಪಾದಕರ ಗುಂಪಿನಿಂದ ಮಾಡಿಕೊಂಡಲ್ಲಿ ಕೃಷಿ ಆದಾಯ ಗುರುತಿಸಲು ಸಹಕಾರಿ ಆಗಬಹುದೆಂಬುದು ನನ್ನ ಸಲಹೆ. ಈ ಬಗ್ಗೆ ಬೆಳೆ ಉತ್ಪಾದಕರ ಸಂಘಗಳನ್ನು ರೈತರು ಮಾಡಿಕೊಳ್ಳುವುದು ಉಚಿತ. ಈ ಬಗ್ಗೆ ವ್ಯಾಪಕ ಚರ್ಚೆ ಮಾಡಬಹುದು.