ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಕೃಷಿ ಪದವೀಧರನ ಕೃಷಿ ಪಯಣ

ಎಂ.ಎಚ್.ಸವಿತ
9448862221
1

ಹಲವು ಉದ್ಯೋಗಗಳನ್ನು ಮಾಡಿ ಯಶಸ್ವಿಯೂ ಆಗಿ ಪುನಃ ಕೃಷಿಗೆ ಬಂದ ಕೃಷಿ ಪದವೀಧರ ಈ ಲೇಖನದ ಹೀರೋ. ಯುವಕರಿಗೆ ಮಾದರಿ. ಕೃಷಿ ಪದವಿ ಮುಗಿಸಿ ಖಾಸಗಿ ಕಂಪನಿಯಲ್ಲಿ ಎರಡು ವರ್ಷ ಕೆಲಸ ಮಾಡುತ್ತಿದ್ದ ಇವರನ್ನು ನಟನೆಯಲ್ಲಿನ ಆಸಕ್ತಿ ಪುನಃ ಓದಲು ಹಚ್ಚಿತು. ಫಿಲಂ ಇನ್ಸ್ಟಿಟ್ಯೂಟ್ನ ಡಿಪ್ಲಮಾ ಸೇರಿ ನಂತರ ಹಲವು ಸೀರಿಯಲ್ನಲ್ಲಿ ನಟಿಸಿದರೂ ಅಂದುಕೊಂಡಷ್ಟು ಸಾಧನೆ, ಸೂಕ್ತ ಪರಿಸರ ದೊರೆಯದೆ, ಇಡೀ ಕುಟುಂಬವನ್ನು ಎತ್ತಿ ಹಿಡಿಯಲಾಗುತ್ತಿಲ್ಲ ಎಂದು ಸಿಕ್ಕ ಎಲ್ಲಾ ಅವಕಾಶಗಳನ್ನು ಬಳಸುತ್ತಾ ಮೇಲೇರಿದರು. ಬೆಂಗಳೂರು ನಗರದಲ್ಲಿ ಡಿಶ್ ಟಿವಿ ಜಾಲ ನಡೆಸಿ, ಹೋಟೆಲ್ ಉದ್ಯಮಕ್ಕೆ ಕೈಹಾಕಿ ಎಲ್ಲದರಲ್ಲೂ ಅತ್ಯುತ್ತಮ ಸಾಧನೆ ಮಾಡಿ ತನ್ನೆಲ್ಲಾ ಸಹೋದರರೂ ನೆಲೆ ನಿಲ್ಲಲು ಶಕ್ತಿಯಾದ ಈ ಯುವಕನ ಮನಸ್ಸು ಕೃಷಿಯ ಕಡೆ ಸೆಳೆಯುತ್ತಲೇ ಇತ್ತು.

3

ಕೃಷಿಗೆ ಬಂಡವಾಳ ಇದ್ದರೆ ಬೇಗ ಸಾಧನೆ ಮಾಡಿ ತೋರಿಸಬಹುದು. ಬಂಡವಾಳವಿದ್ದು ಆಸಕ್ತಿಯಿಂದ ಕೃಷಿಗೆ ಬಂದರೆ ಅವರು ಮಾಡುವುದು ವೃತ್ತಿ ಬಂಡವಾಳವಿಲ್ಲದೆ ಕೃಷಿ ಮಾಡಲು ಬಂದವ ತಪಸ್ವಿ. ಆದರೆ ನಾವು ಋಷಿಗಳು ಆಗಲು ಸಾಧ್ಯವಿಲ್ಲ. ಆದ್ದರಿಂದ ಬಂಡವಾಳ ಮಾಡಿಕೊಂಡು ನನ್ನ ಪ್ಯಾಶನ್ ವೃತ್ತಿಯಾದ ಕೃಷಿಗೆ ಬಂದಿದ್ದೇನೆ. ನನಗೆ ಕೃಷಿ ಕೆಲಸ, ಕೆಲಸ ಅನ್ನಿಸೋದೆ ಇಲ್ಲ, ಇದೊಂದು ನೆಮ್ಮದಿಯ ತಾಣ ಅನ್ನಿಸುತ್ತದೆ ಎನ್ನುತ್ತಾ ಸಿದ್ದೇಶ್ ಕುಮಾರ್ ಪಾಟೀಲ್ ಮಾತು ಮುಗಿಸುತ್ತಿದ್ದಂತೆ ನಮ್ಮ ಜೊತೆಯಲ್ಲಿ ಬಂದ ವಿಜ್ಞಾನಿ ಓಂಕಾರಪ್ಪ ಆದಾಯಕ್ಕಾಗಿ ಬೆಂಗಳೂರು ಆರೋಗ್ಯಕ್ಕಾಗಿ ನಮ್ಮೂರು ಎಂದು ದನಿಗೂಡಿಸಿದಾಗ ಎಲ್ಲರೂ ನಗೆಗಡಲಲ್ಲಿ ತೇಲಿದರು

5

ಇವರು ಉತ್ತಮವಾದ ಡೈರಿ ನಿರ್ವಹಣೆ ಮಾಡುತ್ತಿದ್ದು, ೧೧ ಹೆಚ್.ಎಫ಼್ ಒಂದು ಗಿರ್ ಹೋರಿ ಇದೆ. ನಿತ್ಯ ೯೦ರಿಂದ ೧೦೦ ಲೀಟರ್ ಹಾಲು ಡೈರಿಗೆ ಕೊಡುತ್ತಾರೆ. ಹಾಲು ಕರೆಯಲು, ಕುಡಿಯುವ ನೀರೊದಗಿಸುವ ವ್ಯವಸ್ಥೆ, ಸೈಲೇಜ್ಗಳು ಇರುವುದರಿಂದ ಕಡಿಮೆ ಕೂಲಿ ಆಳಿನಲ್ಲಿ ಡೈರಿ ನಡೆಸಲು ಸಹಕಾರಿಯಾಗಿದೆ ಎನ್ನುತ್ತಾರೆ. ನಿರಂತರ ಜ್ಯೋತಿ ಇರುವುದು ಡೈರಿಗೆ ಅನುಕೂಲ ವಾಗಿದೆಯಂತೆ. ಇವರ ಸಮಗ್ರ ಬೇಸಾಯದಲ್ಲಿ ೫ ಎಕರೆ ಮೇವಿನ ಬೆಳೆಗೆ ಮೀಸಲಿದೆ. ಜೊತೆಗೆ ಅಡಿಕೆ, ದಾಳಿಂಬೆ ತೋಟವಿದೆ. ಮಣ್ಣು ಮತ್ತು ನೀರಿನ ಗುಣಮಟ್ಟದ ತೊಂದರೆಯಿಂದಾಗಿ ಅಡಿಕೆ ಬೆಳೆ ಅಷ್ಟಾಗಿಲ್ಲ ಎನ್ನುತ್ತಾರೆ. ತಮ್ಮ ೧೫ ಎಕರೆ ದಾಳಿಂಬೆಯಲ್ಲಿ ಒಂದು ಉತ್ತಮ ಬೆಳೆ ತೆಗೆದರೂ ಮತ್ತೊಮ್ಮೆ ಸ್ವಲ್ಪ ತೊಂದರೆ ಕೊಟ್ಟಿತ್ತು. ಈಗ ಇದರ ನಿರ್ವಹಣಾ ಕೌಶಲ್ಯ ಹೆಚ್ಚಾಗಿದೆ ಎನ್ನುವ ಇವರು ೩೫ ಎಕರೆಯಲ್ಲಿ ಮೆಕ್ಕೆ ಜೋಳ, ತೊಗರಿ ಇತ್ಯಾದಿ ಬೆಳೆಯುತ್ತಾರೆ

7

ಸಿದ್ದೇಶ್ ಕುಮಾರ್ರವರನ್ನು ನೇಗಿಲ ಮಿಡಿತಕ್ಕಾಗಿ ಭೇಟಿ ಮಾಡಲು ಪ್ರಮುಖ ಕಾರಣ ಕೃಷಿ ಪದವೀಧರರು ಕೃಷಿಗೆ ಬರುತ್ತಿಲ್ಲ ಅನ್ನುವುದರ ಮಧ್ಯ ಇವರಲ್ಲಿರುವ ಕೃಷಿ ಆಸಕ್ತಿ. ಏನೆಲ್ಲಾ ಉದ್ಯೋಗ ಮಾಡಿದರೂ ಕೃಷಿಯೇ ನೆಮ್ಮದಿಯನ್ನು ಕಟ್ಟಿಕೊಡಬಲ್ಲದು ಎನ್ನುವ ಈ ಯುವಕನ ಸಂದೇಶ ಓದುಗರಿಗೆ ತಲುಪಲಿ ಎಂಬುದಾಗಿದೆ. ಇವರು ತಮ್ಮ ಡೈರಿಯನ್ನು ಉತ್ತಮವಾಗಿ ನಿರ್ವಹಿಸು ತ್ತಿರುವುದರಿಂದ ಆಸಕ್ತರು ಭೇಟಿ ನೀಡಬಹುದು

ಸಂಪರ್ಕ ವಿಳಾಸ: ಶ್ರೀ ಸಿದ್ದೇಶ್ ಕುಮಾರ್, ಬಿ. ಪಾಟೀಲ್, ೯೮೪೫೫೮೩೩೫೬, ಗಣ್ಣಾಯಕನಹಳ್ಳಿ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ