ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಚಿಂತನೆ

ಕೇವಲ ಉತ್ತಮ ಮಳೆಗಾಲವೊಂದೇ ಸಾಲದು:ಕೇವಲ ಉತ್ತಮ ಮಳೆಗಾಲವೊಂದೇ ಸಾಲದು

image_
ಡಾ.ಎ.ಎಸ್.ಕುಮಾರ ಸ್ವಾಮಿ

ಸತತ ಬರಗಾಲಗಳಿಗೆ ತುತ್ತಾಗಿ ಬಳಲಿರುವ ರೈತನ ಕಣ್ಣೀರನ್ನೊರೆಸುವ ಶಕ್ತಿಯುಳ್ಳ ಮಳೆಯು ಈ ವರ್ಷ ಆಶಾಭಾವನೆಯನ್ನು ಮೂಡಿಸಿದೆ. ಕರ್ನಾಟಕದ ರೈತರು ಆಗಾಗ್ಗೆ ಬರುವ ಬರಗಾಲಗಳಿಗೆ ಹೊಂದಿಕೊಂಡಿದ್ದಾರೆ. ಆದರೆ, ಕಳೆದ ನಾಲ್ಕೈದು ವರ್ಷಗಳಲ್ಲಿ ಅವರು ಎದುರಿಸಿದ ಸಂಕಷ್ಟದ ಪರಿಸ್ಥಿತಿಯು ತೀರಾ ವಿಭಿನ್ನವಾಗಿದೆ. ಎಡೆ ಬಿಡದೇ ಮೂರು-ನಾಲ್ಕು ವರ್ಷಗಳಿಂದ ಬಂದ ಬರಗಾಲವು ೨೦೧೬ ರಲ್ಲಿ ಭೀಕರ ಸ್ವರೂಪವನ್ನು ತಾಳಿತು. ಈ ವರ್ಷದ ಬರಗಾಲವು ರೈತರಿಗೆ ಕೇವಲ ಒಂದು ವರ್ಷದ ಆದಾಯದ ನಷ್ಟವನ್ನುಂಟು ಮಾಡಲಿಲ್ಲ, ಬದಲಿಗೆ ಇಡೀ ಕೃಷಿ ವ್ಯವಸ್ಥೆಯನ್ನೇ ದುರ್ಗತಿಗೀಡುಮಾಡಿದೆ. ಇದೇ ಸಂದರ್ಭದಲ್ಲಿ ಕಳೆದ ಕೆಲವು ದಶಕಗಳಿಂದ ರೈತರು ಅತಿ ಕಡಿಮೆ ಮತ್ತು ಅನಿಶ್ಚಯ ಆದಾಯದಿಂದ ಅನುಭವಿಸುತ್ತಿದ್ದ ಆರ್ಥಿಕ ಸಂಕಷ್ಟವೂ ಸಹ ಎಲ್ಲಾ ಪರಿಹಾರಗಳ ಮಿತಿಯನ್ನೂ ಮೀರಿ ಅಗಾಧವಾಗಿ ಬೆಳೆದು ಇನ್ನು ರೈತರ ಸಮಸ್ಯೆಗಳಿಗೆ ಪರಿಹಾರವೇ ಇಲ್ಲವೇನೋ ಎನ್ನುವಂತಾಗಿದೆ.

ರೈತರು ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ಕೃಷಿ ಸಂಪನ್ಮೂಲಗಳೂ ಸಹ ನಶಿಸಿ ಹೋಗುತ್ತಿವೆ. ಮಣ್ಣಿನ ಉತ್ಪಾದಕತೆ ಕಡಿಮೆಯಾಗುತ್ತಿದೆ. ರೈತರ ಬಳಿಯಲ್ಲಿನ ಬೀಜ ಸಂಗ್ರಹಗಳೂ ಖಾಲಿಯಾಗಿವೆ. ಅಂತರ್ಜಲವು ಎಲ್ಲಾ ನಿರೀಕ್ಷೆಗಳನ್ನೂ ಮೀರಿ ಬತ್ತುತ್ತಿದೆ. ಅತಿ ಮುಖ್ಯವಾಗಿ ಕೃಷಿ ಕಾರ್ಮಿಕರು ದುರ್ಲಭವಾಗುತ್ತಿದ್ದಾರೆ ಮತ್ತು ಅತ್ಯಮೂಲ್ಯ ಪಾರಂಪರಿಕ ಕೃಷಿ ತಿಳುವಳಿಕೆಯನ್ನು ಹೊಂದಿರುವ ಗ್ರಾಮೀಣ ಯುವಕರು ಕೃಷಿಯಿಂದ ವಿಮುಖರಾಗಿ ನಗರಗಳೆಡೆಗೆ ಮುಖ ಮಾಡುತ್ತಿದ್ದಾರೆ. ಖಾಸಗೀಕರಣ, ಜಾಗತೀಕರಣ ಮತ್ತು ಉದಾರೀಕರಣಗಳ (ಖಾಜಾಉ) ಇಂದಿನ ದಿನಗಳಲ್ಲಿ ಕೃಷಿಯು ಒಂದು ಬಂಡವಾಳ ಆಧಾರಿತ ಆರ್ಥಿಕ ಚಟುವಟಿಕೆಯಾಗಿ ರೂಪುಗೊಂಡಿದೆ. ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ರೈತರು ಕೃಷಿಯಲ್ಲಿ ಸ್ವಂತ ಬಂಡವಾಳವನ್ನು ಹೂಡುವ ಮಟ್ಟದಲ್ಲಿ ಖಂಡಿತ ಇಲ್ಲ. ಅವರು ಸಾಲ ಮಾಡಿ ಬಂಡವಾಳ ಹೂಡಬೇಕೆಂದರೆ ಸುಲಭವಾಗಿ ಸಾಲ ದೊರೆಯುತ್ತಿಲ್ಲ. ಬ್ಯಾಂಕ್, ಸೊಸೈಟಿ ಮುಂತಾದ ಸಂಸ್ಥೆಗಳಿಂದ ಬಹಳ ಕಡಿಮೆ ಸಂಖ್ಯೆಯ ರೈತರಿಗೆ ಮಾತ್ರ ಸಾಲ ದೊರೆಯುವುದು. ಹಿಂದೆ ಸಾಲ ಮಾಡಿದ ಬಹಳ ಜನ ರೈತರು ಈಗ ನಾನಾ ಕಾರಣಗಳಿಂದ ಈ ಸಂಸ್ಥೆಗಳ ದೃಷ್ಟಿಯಲ್ಲಿ ಸಾಲ ಯೋಗ್ಯರಾಗಿಲ್ಲ. ದೊರೆತರೂ ಸಹ ಅದು ಕೇವಲ ಕಾಗದದ ಮೇಲೆ ಮಾತ್ರ; ಏಕೆಂದರೆ, ಮಂಜೂರಾದ ಸಾಲದ ಹೆಚ್ಚಿನ ಭಾಗವನ್ನು ಹಿಂದಿನ ಸಾಲದ ತೀರುವಳಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತದೆ.

ಈ ವರ್ಷ ನೈಋತ್ಯ ಮಾನ್ಸೂನ್ ಉತ್ತಮವಾಗಿರಲಿದೆಯೆನ್ನುವ ಮುನ್ಸೂಚನೆ ದೊರೆತಿದೆ. ಮುಂಗಾರು ಪೂರ್ವ ಬೇಸಿಗೆ ಮಳೆಗಳೂ ಸಹ ಆಶಾದಾಯಕವಾಗಿವೆ. ಒಂದು ವೇಳೆ ಉತ್ತಮ ಮಳೆ ಬಂದು ಸಮಯಕ್ಕೆ ಸರಿಯಾಗಿ, ಎಂದರೆ, ಜೂನ್ ತಿಂಗಳಿನಲ್ಲಿ ಬಿತ್ತನೆ ಮಾಡಬೇಕೆಂದರೆ ಅಷ್ಟರೊಳಗೆ ಭೂಮಿ ತಯಾರಿಸಿಟ್ಟುಕೊಂಡಿರಬೇಕಲ್ಲದೇ, ಬಿತ್ತನೆ ಬೀಜ, ಗೊಬ್ಬರ ಮತ್ತು ಅವಶ್ಯಕವಿರುವಲ್ಲಿ ಕಳೆನಾಶಕಗಳನ್ನು ಕೊಂಡು ತಂದಿರಬೇಕು. ಇದಕ್ಕೆ ಎಕರೆಗೆ ಸುಮಾರು ಆರು-ಏಳು ಸಾವಿರ ರೂ.ಗಳ ಬಂಡವಾಳ ಹೂಡಬೇಕು. ಇಂತಹ ಸಂದರ್ಭಗಳಲ್ಲಿ ರೈತರ ನೆರವಿಗೆ ಬರುವುದು ಸ್ವಸಹಾಯ ಸಂಘಗಳ ಕಿರು ಸಾಲ ಯೋಜನೆಗಳು. ಬಿತ್ತನೆಯ ಸಮಯದಲ್ಲಿ ಈ ಕಿರುಸಾಲಗಳು ಎಲ್ಲರಿಗೂ ಸುಲಭವಾಗಿ ದೊರೆಯುವಂತೆ ಮಾಡಿದರೆ ಉತ್ತಮ. ಇನ್ನೊಂದು ಮುಖ್ಯ ವಿಷಯವೆಂದರೆ, ಕಳೆದ ಕೆಲವು ವರ್ಷಗಳಿಂದ ರೈತರು ಖಾಸಗಿ ಕಂಪನಿಗಳ ಹೈಬ್ರಿಡ್ ಬೀಜಗಳಿಗೆ ಮೊರೆ ಹೋಗಿದ್ದಾರೆ. ಈ ಬೀಜಗಳನ್ನು ಸರ್ಕಾರದ ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಧನದೊಂದಿಗೆ ಮಾರಾಟ ಮಾಡುತ್ತಿರುವರಾದರೂ ಸಹ ಇವುಗಳ ಬೆಲೆಗಳು ವಾಸ್ತವಿಕವಾಗಿರದೇ ಶೋಷಣಾತ್ಮಕವಾಗಿವೆಯೆನ್ನಿಸುತ್ತದೆ. ಇದೇ ಗುಣಮಟ್ಟದ, ರಾಷ್ಟ್ರೀಯ ಬೀಜ ನಿಗಮ ಹಾಗೂ ಕರ್ನಾಟಕ ರಾಜ್ಯ ಬೀಜ ನಿಗಮಗಳ ಬೀಜಗಳಿಗೆ ಹೋಲಿಸಿದರೆ ಇವುಗಳ ಬೆಲೆಗಳು ಅತಿ ಹೆಚ್ಚು ಎನಿಸುತ್ತದೆ. ಏನೇ ಪಾರದರ್ಶಕ ಪ್ರಕ್ರಿಯೆಯ ಟೆಂಡರ್ ಮೂಲಕ ಇವುಗಳ ಬೆಲೆಯನ್ನು ಸರ್ಕಾರವು ನಿಗದಿಪಡಿಸಿದ್ದರೂ ಸಹ, ಬೀಜ ಕಂಪನಿಗಳ ಶೋಷಣಾತ್ಮಕ ಪ್ರವೃತ್ತಿಗೆ ಕಡಿವಾಣ ಹಾಕಿ, ವಾಸ್ತವಿಕ ನೆಲೆಗಟ್ಟಿನಲ್ಲಿ ಬೀಜಗಳ ದರವನ್ನು ನಿಗದಿಪಡಿಸಿದರೆ ಸರ್ಕಾರವು ನಮ್ಮ ರಾಜ್ಯದ ರೈತರಿಗೆ ಅಮೋಘ ಸೇವೆಯನ್ನು ನೀಡಿದಂತಾಗುತ್ತದೆ. ಇಲ್ಲದೇ ಹೋದರೆ, ಯಥಾಸ್ಥಿತಿ ನಮ್ಮ ರೈತರು ಬಿತ್ತನೆಯ ಸಮಯದಲ್ಲಿ ಬಂಡವಾಳ ಜೋಡಿಸಲು ಯಾವ ರೀತಿಯ ಹೊಸ ಸಮಸ್ಯೆಗಳನ್ನು ಮೇಲೆಳೆದುಕೊಳ್ಳುವರೋ, ಯಾವ ರೀತಿಯ ಸಾಲಗಳ ಉರುಳಿಗೆ ಕೊರಳನ್ನೊಡ್ಡುವರೋ ಊಹಿಸಲಸಾಧ್ಯ. ಬೀಜ ಕಂಪನಿಗಳ ಮೇಲೆ ಈ ರೀತಿಯ ನ್ಯಾಯಯುತ ನಿಯಂತ್ರಣ ಸಾಧ್ಯವಾಗದೇ ಹೋದರೆ, ಕೊನೆಯ ಪಕ್ಷ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಬೀಜಗಳನ್ನು ಸಾಲದ ರೂಪದಲ್ಲಿ ಒದಗಿಸುವ ಸಾಧ್ಯತೆಗಳನ್ನು ಸರ್ಕಾರವು ಪರಿಶೀಲಿಸಬೇಕು.

ಉತ್ತಮ ಗುಣಮಟ್ಟದ ಬೀಜದ ಬಳಕೆಯ ಬಗ್ಗೆ ಎಷ್ಟು ತಿಳಿ ಹೇಳಿದರೂ, ಇನ್ನೂ ಹೆಚ್ಚಿನ ಭಾಗ ರೈತರು ಕಡಿಮೆ ಬೆಲೆಗೆ ಹಾಗೂ ಸಾಲದ ರೂಪದಲ್ಲಿ ದೊರೆಯುವುದೆನ್ನುವ ಕಾರಣಕ್ಕೆ ಅನಧಿಕೃತ ಮೂಲಗಳ ಕಳಪೆ ಬೀಜಗಳನ್ನೇ ಬಳಸುತ್ತಿದ್ದಾರೆ. ಇದರ ಬಗ್ಗೆ ಪ್ರಚಾರ ಸಾಲದು. ಉತ್ತಮ ಬೀಜದ ಬಳಕೆ, ಅಧಿಕೃತ ಮೂಲಗಳಿಂದ ಖರೀದಿ, ಹಣಪಾವತಿಯ ರಸೀದಿಯ ಎಚ್ಚರಿಕೆಯ ಜೋಪಾನ ಮುಂತಾದ ವಿಷಯಗಳ ಬಗ್ಗೆ ಬಿತ್ತನೆ ಪೂರ್ವ ಸಮಯದಲ್ಲಿ ಪ್ರಚಾರದ ಅಬ್ಬರ ತೀವ್ರವಾಗಬೇಕು. ಸಾಧನೆಗಳನ್ನು ಎಲ್ಲಾ ದಿನ ಪತ್ರಿಕೆಗಳಲ್ಲಿಯೂ ತುಂಬು ಪುಟಗಳಲ್ಲಿ ನೀಡುವ ಪ್ರಚಾರದಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಈ ಪ್ರಚಾರಕ್ಕೆ ಕೊಡಬೇಕು. ಉತ್ತಮ ಬೀಜ ಬಳಕೆಯ ವಿಷಯದಲ್ಲಿ ರೈತರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇನ್ನೂ ಬಹಳವಿದೆ. ಮಳೆಗಾಲ ದುರ್ಬಲವಿರಲಿ, ಪ್ರಬಲವಿರಲಿ, ಎಲ್ಲಾ ವರ್ಷಗಳಲ್ಲಿಯೂ ಮಳೆನೀರಿನ ಸಂಗ್ರಹಕ್ಕೆ, ಆ ಮೂಲಕ ಅಂತರ್ಜಲ ಮರುಪೂರಣಕ್ಕೆ ಮತ್ತು ಹೆಚ್ಚಾದ ನೀರು ಸುರಕ್ಷಿತವಾಗಿ ನೀರಿನ ದಾರಿಗಳಲ್ಲಿ ಹರಿದು ಕೆರೆ ಕಟ್ಟೆಗಳನ್ನು ತುಂಬುವ ವ್ಯವಸ್ಥೆಗೆ ಹೆಚ್ಚಿನ ಒತ್ತು ಕೊಡಬೇಕು.

ಮಳೆ ನೀರಿನ ಸಂಗ್ರಹಕ್ಕೆ ಮೊದಲಿನಿಂದಲೂ ಇದ್ದ ಕೆರೆ, ಕಟ್ಟೆ ಮುಂತಾದ ರಚನೆಗಳ ದುರವಸ್ಥೆಯಿಂದ ಮಳೆಗಾಲದಲ್ಲಿ ಅಧಿಕ ನೀರು ಹರಿದು ಕೆಳಗಿನ ಪ್ರದೇಶಗಳಲ್ಲಿ ನೆರೆ ಬರುವುದಲ್ಲದೇ, ಮಳೆಗಾಲದ ನಂತರ ನೀರಿಗೆ ಪರದಾಡುವ ಸ್ಥಿತಿ ಇದೆ. ಉತ್ತಮ ಮಳೆಗಾಲದ ವರ್ಷಗಳಲ್ಲಿಯೂ ಸಹ ಹಿಂಗಾರು ಮತ್ತು ಬೇಸಿಗೆ ಹಂಗಾಮುಗಳಲ್ಲಿ ನೀರಿನ ಬವಣೆ ತಪ್ಪಿಲ್ಲ.ಅನವಶ್ಯಕವಾಗಿ ಅಧಿಕ ಕೊಳವೆ ಬಾವಿಗಳನ್ನು ಕೊರೆಸುವುದು, ಅವೈಜ್ಞಾನಿಕವಾಗಿ ಅಧಿಕ ಶಕ್ತಿಯ ಮೋಟಾರ್ ಮತ್ತು ಪಂಪುಗಳನ್ನು ಬಳಕೆ ಮಾಡುವುದು, ಅಧಿಕ ನೀರುಣಿಸಿ ಬೆಳೆ ಮತ್ತು ಮಣ್ಣನ್ನು ಹಾಳು ಮಾಡಿಕೊಳ್ಳುತ್ತಿರುವುದು, ನೀರು ಮತ್ತು ವಿದ್ಯುತ್ನ ದುರ್ಬಳಕೆ ಮುಂತಾದ ರೈತರಲ್ಲಿ ಸಾಮಾನ್ಯವಾಗಿ ಕಂಡುಬರುವ ನ್ಯೂನತೆಗಳು. ಎಷ್ಟೇ ಉತ್ತಮ ಮಳೆ ಬಂದರೂ ಸಹ ಅಂತರ್ಜಲದ ಮಟ್ಟ ಸುಧಾರಿಸಲು ಬಿಡುವುದಿಲ್ಲ. ಈ ವಿಷಯಗಳ ಬಗ್ಗೆಯೂ ತೀವ್ರ ಪ್ರಚಾರದ ಮೂಲಕ ರೈತರಿಗೆ ಮನದಟ್ಟು ಮಾಡಿಕೊಡಬೇಕು. ಈ ಸನ್ನಿವೇಶದಲ್ಲಿ ಒಂದು ಉತ್ತಮ ಮಳೆಗಾಲವನ್ನು ಎಲ್ಲರೂ ಹರ್ಷದಿಂದ ಸ್ವಾಗತಿಸುತ್ತಾರೆ. ಆದರೆ, ದುರ್ಬಲ ಮಣ್ಣು, ಸೊರಗಿದ ಅಂತರ್ಜಲ, ಕೃಷಿಯಿಂದ ವಿಮುಖವಾಗುತ್ತಿರುವ ಯುವ ಮಾನವ ಸಂಪನ್ಮೂಲ, ಕಾರ್ಮಿಕರ ದುರ್ಲಭ್ಯತೆ, ಬಂಡವಾಳ ಹೂಡಲಾಗದ ಅಸಹಾಯಕತೆ ಹಾಗೂ ಅನಿಶ್ಚಿತ ಮಾರುಕಟ್ಟೆ ಬೆಲೆಗಳು ಇರುವಾಗ ಎಷ್ಟರಮಟ್ಟಿಗೆ ಉತ್ತಮ ಮಳೆಗಾಲದ ಸದುಪಯೋಗವನ್ನು ಪಡೆದುಕೊಳ್ಳಬಲ್ಲೆವು ಎನ್ನುವ ಪ್ರಶ್ನೆಯು ಕಾಡುತ್ತದೆ.

ದುರ್ಬಲವಾಗಿರುವ ಕೃಷಿ ವ್ಯವಸ್ಥೆಯನ್ನು ಸಬಲಗೊಳಿಸಲು ಕೇವಲ ಉತ್ತಮ ಮಾನ್ಸೂನ್ ಸಾಲದು; ಜರ್ಜರಿತನಾಗಿರುವ ರೈತನ ಕಣ್ಣೀರನ್ನೊರೆಸಿ ತಾತ್ಕಾಲಿಕ ಸಾಂತ್ವನ ನೀಡಬಹುದಷ್ಟೇ. ಭವಿಷ್ಯದಲ್ಲಿಯಾದರೂ ಉತ್ತಮ ಮಳೆಗಾಲದ ಅನುಕೂಲ ಪಡೆದುಕೊಳ್ಳಲು ಅಣಿಯಾಗುವಂತೆ ಮೂಲಭೂತವಾಗಿ ಕೃಷಿ ವ್ಯವಸ್ಥೆಯನ್ನು ಪ್ರಬಲಗೊಳಿಸ ಬೇಕು. ಬಹು ಸಂಕೀರ್ಣವಾದ ಕೃಷಿ ವ್ಯವಸ್ಥೆಯ ಎಲ್ಲಾ ಸಮಸ್ಯೆಗಳಿಗೂ ಕೇವಲ ಮಳೆಯಲ್ಲಿಯೇ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದು ಬೇಡ.