ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಎರೆಜಲವೆಂಬ ಜೀವಜಲ

ಡಾ. ಪ್ರಕಾಶ,
೮೨೭೭೦೫೯೩೯೨
1

ಸಾವಯವ ವಸ್ತುಗಳಾದ ಒಣಗಿದ ಕಸಕಡ್ಡಿ, ತಪ್ಪಲು, ಮತ್ತು ದನಗಳ ಸಗಣಿಯನ್ನು ಎರೆಹುಳು ತಿಂದು, ಅತೀ ಶಕ್ತಿಯುತವಾದ ಎರೆಗೊಬ್ಬರವನ್ನು ಎರೆಹುಳುಗಳು ನೀಡುತ್ತವೆ. ಎರೆಹುಳುಗಳು ಮೈಯನ್ನು ತೊಳೆಯುವುದರಿಂದ ದೊರೆಯುವ ದ್ರವರೂಪದ ಜಲವೇ ಎರೆಜಲವೆಂಬ ಜೀವಜಲ. ಈ ಎರೆಜಲವು ವಿವಿಧ ಪೋಷಕಾಂಶ, ಬೆಳೆಯ ಬೆಳೆವಣಿಗೆಗೆ ಬೇಕಾಗುವ ಪ್ರಚೋದಕಗಳು (ಹಾರ್ಮೊನ್ಸ್) ಉಪಕಾರಿ ಸೂಕ್ಷ್ಮಾಣುಜೀವಿಗಳಿಂದ ಸಮೃದ್ಧಿಯಾಗಿದ್ದು ಜೀವಜಲವಾಗಿದೆ. ಈ ಜಲವು ವಿವಿಧ ಲಘು ಮತ್ತು ಮುಖ್ಯ ಪೋಷಕಾಂಶಗಳನ್ನು ಒಳಗೊಂಡಿದೆ. ಮುಖ್ಯವಾಗಿ ಸಾರಜನಕ, ರಂಜಕ, ಪೊಟ್ಯಾಶ್, ಕಬ್ಬಿಣ, ಮ್ಯಾಂಗನಿಸ್, ಜಿಂಕ್ ಮತ್ತು ಸತು ಇದಲ್ಲದೆ ಎಲ್ಲ ಬೆಳೆಗಳ ಬೆಳವಣಿಗೆಗೆ ಬೇಕಾಗುವ ಹಾರ್ಮೊನುಗಳಾದ ಜಿಬ್ಬರಲಿನ್ಸ್ ಸೈಟೋಕೈನಿನ್ಸ್ ಮತ್ತು ಉಪಕಾರಿ ಸೂಕ್ಷ್ಮಾಣುಗಳಿಂದ ಸಮೃದ್ಧಿಯಾಗಿದ್ದು ಬೆಳೆಯ ಬೆಳವಣಿಗೆಗೆ ಬೇಕಾಗುವ ಉತ್ಕೃಷ್ಠವಾದ ಶಕ್ತಿಯನ್ನು ಒದಗಿಸುವುದಲ್ಲದೆ ಪರಿಸರದ ಮತ್ತು ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳಿಗೆ ಯಾವುದೇ ತರಹದ ಹಾನಿಯನ್ನು ಉಂಟು ಮಾಡದೆ ಎಲ್ಲ ಬೆಳೆಗಳ ಬೆಳವಣಿಗೆಯನ್ನು ಉತ್ತೇಜಿಸಿ, ಬೆಳೆಗಳಿಗೆ, ಕೀಟ, ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವುದರೊಂದಿಗೆ ಬೆಳೆಯ ಇಳುವರಿಯನ್ನು ಅಧಿಕವಾಗಿಸುತ್ತದೆ

3

ಈ ಎರೆಜಲವೆಂಬ ಜೀವ ಜಲವನ್ನು ಬೆಳೆಯಲ್ಲಿ ಉಪಯೋಗಿಸುವುದರಿಂದ ಆಗುವ ಪ್ರಯೋಜನಗಳು ಅನೇಕ

ಎರೆಜಲವನ್ನು ಬೆಳೆಯವರ್ಧಕವಾಗಿ ಎಲ್ಲಾ ಬೆಳೆಗಳಲ್ಲಿ ಉಪಯೋಗಿಸಬಹುದಾಗಿದೆ. ಇದನ್ನು ಮುಖ್ಯವಾಗಿ ವಿವಿಧ ತರಕಾರಿ ಬೆಳೆಗಳಾದ ಬದನೆ, ಈರುಳ್ಳಿ, ಸವತೆ, ಮೆಣಸಿನಕಾಯಿ ಮತ್ತು ಇತರೆ ತರಕಾರಿ ಬೆಳೆಗಳ ಮೇಲೆ ಬೆಳೆವರ್ಧಕವಾಗಿ ಉಪಯೋಗಿಸಬಹುದು. ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ಲಿಂಬೆ, ಬಾಳೆ, ದ್ರಾಕ್ಷಿ ಮತ್ತು ಸೋಯಾಅವರೆ ಬೆಳೆಗಳಲ್ಲಿ ಇದನ್ನು ಉಪಯೋಗಿಸಬಹುದು. ದ್ರಾಕ್ಷಿ ಗೊಂಚಲಗಳನ್ನು ಎರೆಜಲದಲ್ಲಿ ಅದ್ದುವುದರಿಂದ ಹಣ್ಣಿನ ಗಾತ್ರ ಹೆಚ್ಚಿಸಬಹುದು. ಇದನ್ನು ಎರೆಹುಳು ಗೊಬ್ಬರ ತಯಾರಿಕೆಯಲ್ಲಿ ಉಪಯೋಗಿಸುವುದರಿಂದ ಉತ್ಕೃಷ್ಠವಾದ ಗೊಬ್ಬರವನ್ನು ಪಡೆಯಬಹುದಾಗಿದೆ.

6

ಎರೆಜಲದಲ್ಲಿ ದೊರೆಯುವ ಪೋಷಕಾಂಶಗಳು

ಎರೆಜಲವು ಕೆಲವು ಮುಖ್ಯ ಪೋಷಕಾಂಶಗಳು ಸಮೃದ್ದಿಯಾಗಿದ್ದು. ಸಾರಜನಕ-೦.೧೭,ರಂಜಕ-೧.೦-೧.೦೮,ಪೊಟ್ಯಾಶ್-೧.೧೯-೧.೪೫, ಮೆಗ್ನಿಸಿಯಂ-೧೦.೦-೧೩.೦ ppm, ಕಬ್ಬಿಣ-0೬.೭೫-೭.೬೫ ppm, ಸತು-೨೨.೪-೩೬.೩೦ ppm, ತಾಮ್ರ-ಸ್ವಲ್ಪ

9

ಎರೆಜಲದಲ್ಲಿರುವ ಪೊಷಕಾಂಶದ ಪ್ರಮಾಣವು ಬೆಳಸಿದ ಕಚ್ಚಾವಸ್ತುವಿನ ಮೇಲೆ ನಿರ್ಧಾರ ವಾಗಿರುತ್ತದೆ. ಎರೆಜಲವನ್ನು ಎಲ್ಲಾ ಬೆಳೆಗಳ ಮೇಲೆ ಬೆಳೆವರ್ಧಕವಾಗಿ ಉಪಯೋಗಿಸವುದರಿಂದ ಮುಖ್ಯವಾಗಿ ತರಕಾರಿ, ಬೆಳೆಗಳಾದ ಈರುಳ್ಳಿ, ಬದನೆ, ಮೆಣಸಿನಕಾಯಿ, ಮತ್ತು ಹಣ್ಣಿನ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ನಿಂಬೆ, ಬಾಳೆ ಮತ್ತು ಪಪಾಯದಲ್ಲಿ ಸಿಂಪರಣೆಯ ಮೂಲಕ ಒದಗಿಸುವುದರಿಂದ ಅಥವಾ ಗಿಡದ ಬುಡಕ್ಕೆ ಹಾಕುವುದರಿಂದ ಗಿಡದ ಬೆಳೆವಣಿಗೆ ಮತ್ತು ಇಳುವರಿಯಲ್ಲಿ ಹೆಚ್ಚಾದದ್ದು ಕಂಡುಬಂದಿದೆ. ಎರೆಜಲವನ್ನು ತರಕಾರಿಗಳಾದ ಈರುಳ್ಳಿ ಮತ್ತು ಬದನೆಯ ಮೇಲೆ ಪ್ರಯೋಗಿಸುವುದರಿಂದ ಎಲೆಗಳ ಸಂಖ್ಯೆ ಮತ್ತು ಗಿಡದ ಎತ್ತರವನ್ನು ಹೆಚ್ಚಿಸಬಹುದು

ಈ ಜೀವಜಲವನ್ನು ಪಡೆದನಂತರ ಅದನ್ನು ಶೇಖರಿಸಿಟ್ಟು ಬಹುದಿನಗಳವರೆಗೆ ಉಪಯೋಗ ಮಾಡಬಹುದು. ಸಂಶೋಧನೆಯ ಪ್ರಕಾರ ಎರೆಜಲವನ್ನು ಪಡೆದು ಎಂಟು ತಿಂಗಳವರೆಗೆ ಇಟ್ಟಾಗ ಆರು ತಿಂಗಳವರೆಗೆ ಎರೆಜಲದಲ್ಲಿರುವ ಪೋಷಕಾಂಶಗಳಾದ ಸಾರಜನಕ, ರಂಜಕ ಮತ್ತು ಪೊಟ್ಯಾಶ್ ಪ್ರಮಾಣದಲ್ಲಿ ಸ್ವಲ್ಪ ಮಟ್ಟಿಗೆ ಮಾತ್ರ ಕಡಿಮೆಯಾಗಿರುವುದು ಕಂಡುಬಂದಿದ್ದು ಎರೆಜಲವನ್ನು ತಯಾರಿಸಿದ ಆರರಿಂದ ಏಳು ತಿಂಗಳವರೆಗೆ ಉಪಯೋಗಿಸಬಹುದಾಗಿದೆ. ಈ ರೀತಿಯಾಗಿ ಬೆಳೆಗಳಿಗೆ ಜೀವತುಂಬುವ ಜಲವಾಗಿರುವ ಈ ಎರೆಜಲವನ್ನು ರೈತ ಬಾಂಧವರು ಹೆಚ್ಚು ಪ್ರಮಾಣದಲ್ಲಿ ಬಳಸಿಕೊಂಡು ಬೆಳೆಗಳನ್ನು ಸರ್ವತೋಮುಖವಾಗಿ ಬೆಳೆಸಿ ಅಧಿಕ ಇಳುವರಿಯನ್ನು ಪಡೆದು, ಸುಸ್ಥಿರ ಕೃಷಿಯ ಕಡೆಗೆ ಹೆಜ್ಚೆಹಾಕೋಣ.