ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಕೃಷಿರಂಗ

ಉಂಡು ಸಂತಸದಿಂದಿರು

ಡಾ. ವಿ. ನಾಗಭೂಷಣ,
೯೯೦೨೨೦೪೯೯೪

ಶಾಮಣ್ಣ : ಅಂತೂ ಬೆಳಗಾ ಬೆಳಗಾ ಶಾಲೇಲಿ ಪಾಠ ಕೇಳ್ದಂಗಾತು ಅನ್ನು

ಶಂಕ್ರಪ್ಪ : ಒಳ್ಳೇದೇ ಆತು, ಶಾನೆ ಇಸ್ಯ ತಿಳ್ಕಂಡಾಗೆ ಆತು ಬಿಡು

ಶಾಮಣ್ಣ:ಹೊಟ್ಟೆಗೆ ಚೆಂದಾಗಿ ಹಾಕಿದ್ರೆ ಎತ್ತಾಗ್ಲಿ-ಹಸಾ ಆಗ್ಲಿ ವೈನಾಗೇ ಇರ್ತ ದೆ.ನನ್ನ ಹಸಾನೂ ಹಂಗೇ ಇತ್ತು

ರಾಮಣ್ಣ. ಪಸ್ಟ್ ಟೈಮು ಇಂಗ್ಲೀಸ್ ಹಸಾ ತಂದಾಗ್ಲೇ ಡಾಕ್ಟ್ರು ಅಂದಿದ್ರು. ಬಾಳಾ ಉಸಾರಾಗಿ ನೋಡ್ಕ ಶಾಮಣ್ಣ, ಅಂತ ಬರೀ ಒಣ ಮೇವು ಹಾಕಿದ್ರೆ ಆಗಲ್ಲ. ಹಸಿಮೇವು ಹಿಂಡಿ ಬೂಸಾ ಎಲ್ಲಾ ಬೇಕಾಯ್ತದೆ ಅಂತ.

ಶಂಕ್ರಪ್ಪ : ನೀನು ಕ್ಯಾಟ್ಲ್ಫೀಡ್ ಕೊಂಡ್ಕಂಡು ಬಂದು ಹಾಕ್ತೀಯಾ?

ಶಾಮಣ್ಣ : ಮೊದ್ಲು ಕೊಂಡ್ಕಂಡು ಬತ್ತಿದ್ದೆ. ಆಮೇಲೆ ಡಾಕ್ಟ್ರು ಹೇಳಿದ್ರು ಹಿಂಡಿ ಬೂಸಾ ನುಚ್ಚು ಎಲ್ಲಾ ತಂದು ನೀನೇ ಮನೇಲಿ ತಯಾರು ಮಾಡು ಅಂತ. ಈಗ ಮನೇಲೇ ಮಾಡ್ಕತ್ತಿದ್ದೀನಿ

ಶಂಕ್ರಪ್ಪ : ಮನೇಲೇ ಮಾಡ್ಬೋದಾ?

ಶಾಮಣ್ಣ : ಏನಿಲ್ಲ. ಬಾಳಾ ಸುಲಭ ಕಣಣ್ಣಾ ನುಚ್ಚು - ಹಿಂಡಿ - ಬೂಸಾ ಮೂರನ್ನು ಒಂದೊಂದು ಭಾಗ ಹಾಕದು, ಮಿಕ್ಸ್ ಮಾಡಿ ಇಟ್ಕಳಾದು. ಕರ್ಯಬ ದನಕ್ಕೆ ನುಚ್ಚು ಜಾಸ್ತಿ ಹಾಕದು. ಬರಡು ದನಕ್ಕೆ ಬೂಸಾ ಜಾಸ್ತಿ ಹಾಕದು. ಜತೆಗೆ ಒಂದಿಷ್ಟು ಖನಿಜ ಮಿಶ್ರಣ, ಉಪ್ಪು ಅಷ್ಟೇ. ಅಂಗ್ಡಿ ಫೀಡಿಗಿಂತಾ ಚೆನ್ನಾಗಿರ್ತಿದೆ. ಖರ್ಚೂ ಕಮ್ಮಿ.

ಶಂಕ್ರಪ್ಪ:ನೀನೇನೋ ಬಿಡು ಇಂಗ್ಲೀಸ್ ಹಸ ಸಾಕ್ಕಂಡಿದೀಯಾ. ಅಷ್ಟೆಲ್ಲಾ ಕಾಳಜಿ ಬೇಕು. ನನ್ನ ತಾವ್ ಒಂದೇ ಸೀಮೆ ಹಸ ಅದೆ, ಅದನ್ನ ಚಂದಾಗಿ ಮಡಗಿವ್ನಿ. ಮಿಕ್ಕಿದ್ದೆಲ್ಲ ಜವಾರಿಹಸ, ಕಡಿಮೆ ಹಾಲು ಕೊಡ್ತವೆ. ಅದಕ್ಕೆ ಇದೆಲ್ಲಾ ಯಾಕೆ ಬೇಕು ಅಂತೀನಿ

ಶಾಮಣ್ಣ:ಅದೇ ತಪ್ಪು ನೋಡು. ಹಾಲು ಎಷ್ಟೇ ಕೊಡ್ಲಿ ಪ್ರಮಾಣ ಮಾತ್ರ ವ್ಯತ್ಯಾಸ ಆಗುತ್ತೆ. ಎಲ್ಲಾ ಜಾನುವಾರುಗಳಿಗೂ ಸಮತೋಲನ ಆಹಾರ ಬೇಕೆ ಬೇಕು

ಶಂಕ್ರಪ್ಪ:ನೀನು ಹೇಳದೂ ಸರಿ ಅನ್ನು. ಮಾತಾಡ್ತಾ ಮಾತಾಡ್ತಾ ಬಾಳಾ ಹೊತ್ತಾತು. ಅಲ್ಲಿ ಸಭೆ ನಡೀತಿದೆ. ನಮ್ ಸೀಮೆ ಹಸಾನೂ ಸ್ಪರ್ಧೆನಾಗೆ ಇತ್ತು. ಗೆದ್ದೈತಾ ಅಂತ ನೋಡಾವ ಬಾ

ಶಾಮಣ್ಣ : ಅಂಗಾ? ನಿನ್ನ ಹಸಾ ನಾನೂ ನೋಡಿವ್ನಿ. ಬಹುಮಾನ ಬಂದೇ ಬತ್ತದೆ. ಅಲ್ಲಿಗೆ ಹೋಗೋಣ ಬಾ ನಿರ್ಗಮನ

ದೃಶ್ಯ – ೪ (ಬಹುಮಾನ ವಿತರಣಾ ಸಮಾರಂಭ)

ನಿರೂಪಕ:ಎಲ್ಲರಿಗೂ ನಮಸ್ಕಾರ. ಜಾತ್ರೆಯ ಕಲಾಪವೆಲ್ಲಾ ಮುಗಿಯುತ್ತಾ ಬಂದಿದೆ. ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ನಡೆಯುತ್ತದೆ. ಪಶುವೈದ್ಯರು ಈ ಕಾರ್ಯಕ್ರಮ ನಡೆಸಿಕೊಡಬೇಕಾಗಿ ಕೋರುತ್ತೇನೆ. ಹಾಗೆಯೇ ಜಾನುವಾರು ಸಾಕಾಣಿಕೆ ಬಗ್ಗೆ ಎರಡು ಮಾತನಾಡಬೇಕೆಂದು ವಿನಂತಿ

ಡಾಕ್ಟರು : ರೈತ ಭಾಂದವರಿಗೆ ನಮಸ್ಕಾರ. ಈ ಸಂದರ್ಭದಲ್ಲಿ ಹೆಚ್ಚಿಗೆ ಮಾತನಾಡಲು ಇಷ್ಟವಿಲ್ಲ. ಯಾಕೆಂದರೆ ಎಲ್ಲರು ಬಹುಮಾನದ ಬಗ್ಗೆ ತಿಳಿಯಲು ಕಾತರದಲ್ಲಿದ್ದೀರಿ. ಜಾನುವಾರು ಸಾಕಾಣಿಕೆಯಲ್ಲಿ ಮುಖ್ಯವಾಗಿ ಬೇಕಾಗಿರುವುದು ಮೇವು. ನೀವು ದನಕರುಗಳಿಗೆ ಹೇಗೆ ಉಣಿಸುತ್ತೀರೋ ಹಾಗೆಯೇ ಅವು ನಮಗೆ ಸ್ಪಂದಿಸುತ್ತವೆ. ಅವು ’ಉಂಡು ಸಂತಸದಿಂದಿದ್ದರೆ’ ನಮ್ಮ ಬಾಳೂ ಕೂಡ ಸಂತಸಮಯ. ಇನ್ನು ಸ್ಪರ್ಧೆಯ ವಿಷಯಕ್ಕೆ ಬಂದರೆ ನೀವೆಲ್ಲಾ ಬಹಳ ಉತ್ಸಾಹದಿಂದ ಸ್ಪರ್ಧೆಯಲ್ಲೂ ಭಾಗವಹಿಸಿದ್ದೀರಿ. ತುಂಬಾ ರೈತರು ಸ್ಪರ್ಧೆಗಾಗಿ ತಮ್ಮ ತಮ್ಮ ರಾಸುಗಳನ್ನು ಬಹಳ ಚೆನ್ನಾಗಿ ತಯಾರು ಮಾಡಿಕೊಂಡು ಬಂದಿದ್ದಾರೆ. ಹೈನು ದನಗಳಲ್ಲಿ ಹಾಲು ಉತ್ಪಾದನೆ, ದೇಹ ಸೌಷ್ಠವ, ಆರೋಗ್ಯ ಇತ್ಯಾದಿ ಗುಣಲಕ್ಷಣಗಳನ್ನು ಗಮನಿಸಿ ಯಾರಿಗೂ ಅನ್ಯಾಯವಾಗದಂತೆ ಉತ್ತಮವಾದುದನ್ನೇ ಆಯ್ಕೆ ಮಾಡಿದ್ದೇವೆ. ಈ ಸಲ ಎತ್ತುಗಳ ವಿಭಾಗದಲ್ಲಿ ಪುಟ್ಟೇಗೌಡರ ಹಳ್ಳಿಕಾರ್ ಎತ್ತಿನ ಜೋಡಿಗೆ ಮೊದಲನೇ ಬಹುಮಾನ ಬಂದಿದೆ. ಪೂಜ್ಯ ಸ್ವಾಮಿಗಳವರು ದಯಮಾಡಿ ಬಹುಮಾನವನ್ನು ವಿತರಿಸಬೇಕೆಂದು ವಿನಂತಿ ಮಾಡಿಕೊಳ್ಳುತ್ತಿದ್ದೇನೆ

(ಪುಟ್ಟೇಗೌಡ ಬಂದು ಬಹುಮಾನವನ್ನು ತೆಗೆದು ಕೊಳ್ಳುವನು) ಅದೇ ರೀತಿ ಹೈನು ಆಕಳುಗಳ ವಿಭಾಗದಲ್ಲಿ ಮಲ್ಲಿಗೆಹಳ್ಳಿ ಶಂಕ್ರಪ್ಪನವರ ಸೀಮೆ ಆಕಳಿಗೆ ಮೊದಲನೆ ಬಹುಮಾನ ಬಂದಿದೆ. ಪೂಜ್ಯ ಸ್ವಾಮಿಗಳವರು ದಯಮಾಡಿ ಬಹುಮಾನವನ್ನು ವಿತರಿಸಬೇಕೆಂದು ವಿನಂತಿ ಮಾಡಿಕೊಳ್ಳುತ್ತಿದ್ದೇನೆ. (ಶಂಕ್ರಪ್ಪ ಬಂದು ಬಹುಮಾನವನ್ನು ತೆಗೆದು ಕೊಳ್ಳುವನು) ಬಾಳ ಜನ ರೈತರು ತಮ್ಮ ಜಾನುವಾರುಗಳನ್ನು ಸರಿಯಾಗಿ ನಿಗಾ ಮಾಡಿಲ್ಲ. ಹಾಗಾಗಿ ಅವುಗಳನ್ನು ಆರಿಸಿಲ್ಲ. ಅದಕ್ಕೆ ಬೇಜಾರು ಮಾಡ್ಕೋಬೇಡಿ. ಮುಂದಿನ ವರ್ಷದ ಜಾತ್ರೇಲಿ ನೀವೆಲ್ಲಾ ಬಹುಮಾನ ಗಳಿಸಿ ನಿಮ್ಮ ರಾಸುಗಳ ಆರೋಗ್ಯ ಕಾಪಾಡ್ಕಳಿ. ಆಹಾರ ಚೆನ್ನಾಗಿ ಕೊಡಿ. ಮೇವಿನ ಬೆಳೆನೂ ಬೆಳೀರಿ ಅಂತ ಹೇಳ್ತಾ ನನ್ನ ಮಾತು ಮುಗಿಸ್ತೀನಿ.

ನಿರೂಪಕ : ಈಗ ಎತ್ತುಗಳ ವಿಭಾಗದಲ್ಲಿ ಬಹುಮಾನ ಪಡೆದ ಪುಟ್ಟೇಗೌಡರು ಎರಡು ಮಾತು ಆಡ್ತಾರೆ

ಪುಟ್ಟೇಗೌಡ : ಡಾಕ್ಟರ್ ಸಾಹೇಬರು ಮತ್ತು ಸ್ವಾಮಿಯೋರು ಹೇಳ್ದಂಗೆ ನಾವು ದನಗಳಿಗೆ ಹೆಂಗೆ ಮೇವು ಹಾಕ್ತೀವಿ ಹಂಗೆ ಅವು ನಮ್ಮನ್ನ ಕಾಪಾಡ್ತಾವೆ. ನನ್ನ ವಿಷಯ ಬಂದಾಗ ನಾನು ಸುಮಾರು ಜಾತಿ ಹುಲ್ಲು ಬೆಳೆಸಿದೀನಿ. ಅದ್ರ ಜತೆಗೆ ಹುರುಳಿ, ಅಲಸಂದೆ, ಕುದುರೆ ಮಸಾಲೆ ಕೂಡ ಬೆಳೆಸಿದ್ದೀನಿ. ಅಂಗೆ ಹುಲ್ಲು, ಬಳ್ಳಿ ಎಲ್ಡೂ ಮಿಕ್ಸ್ ಮಾಡಿ ಹಾಕ್ತೀನಿ. ಮಳೆಗಾಲ್ದಾಗೆ ಜೋಳ ಕೊಯ್ದು ರಸಮೇವು ಮಾಡ್ತೇನೆ. ಬ್ಯಾಸ್ಗೆ ಬಂದಾಗ ದನಗಳಿಗೆ ತಿನ್ನಕ್ಕೆ ಹಾಕ್ಬೋದು. ಅಂಗೇನಾರಾ ಮಳೆಗಾಲ ಕೈ ಕೊಟ್ಟು ತಾಪತ್ರಯ ಆದ್ರೆ ಸಾಕಷ್ಟು ಮೇವಿನ ಮರ ಬೆಳಸಿದ್ದೀನಿ. ಇನ್ನು ಹಿಂಡಿ - ಬೂಸಾ ತಂದೆ ತರ್ತೇಗನೆ. ಒಟ್ಟಾರೆ ಊಟ ತಿಂಡೀಗೆ ಕೊರತೇನೆ ಮಾಡಲ್ಲ ನೋಡ್ರಪ್ಪ.ಅಷ್ಟೆ

ನಿರೂಪಕ : ಈಗ ಕಡೇಲಿ ನಮ್ಮ ಸ್ವಾಮೀಜಿಯವರು ಎರಡೇ ಎರಡು ಮಾತು ಆಡ್ತಾರೆ.

ಸ್ವಾಮೀಜಿ : ಡಾಕ್ಟ್ರು ಬಾಳಾ ಚೆನ್ನಾಗಿ ಜಾನುವಾರು ಸಾಕಾಣಿಕೆ ಬಗ್ಗೆ ತಿಳಿಸಿಕೊಟ್ರು. ಗೋ ಸಂಪತ್ತು ನಮ್ಮ ರಾಷ್ಟ್ರದ ಸಂಪತ್ತು ನಮ್ಮ ತಾಯಿ ಇದ್ದಾಂಗ. ಗಾವೋ ವಿಶ್ವಸ್ಯ ಮಾತರಃ ಅಂತಾರ. ತಾಯೀನ ಚೆನ್ನಾಗಿ ನೋಡ್ಕಂಡ್ರೆ ಆಕೆ ನಮಗೆ ಆಹಾರ ಕೊಟ್ಟು ಕಾಪಾಡ್ತಾಳೆ. ಎಲ್ರಿಗೂ ಒಳ್ಳೇದು ಮಾಡ್ಲಿ

ಮುಕ್ತಾಯ