ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಇಂಜಿನಿಯರಿಂಗ್ ವಿದ್ಯಾರ್ಥಿಯ ಹೈನುಗಾರಿಕೆಯ ಕನಸು ನನಸಾದಾಗ

ರಘು ಸಂವೇದನ್
9902191549
1

ಪ್ರತಿದಿನಂತೆ ಬೆಳಿಗ್ಗೆ ೬.೩೦ ಕ್ಕೆ ನಾನು ನಂದಿನಿ ಡೈರಿಗೆ ಹಾಲು ಹಾಕಲು ಹೋಗಿದ್ದೆ. ಡೈರಿ ಬಾಗಿಲು ಇನ್ನೂ ತೆರೆದಿರಲಿಲ್ಲ. ಹಾಗೇ ಇರುತ್ತ ನನ್ನ ಮಗಳು ಧೃತಿ ಅಪ್ಪ ನೋಡಲ್ಲಿ ನಮಗಿಂತ ದೊಡ್ಡ ಕ್ಯಾನಲ್ಲಿ ಹಾಲು ತಂದಿದ್ದಾರೆ ಅಂದಳು. ಆಗ ನಾನು ನೋಡಿದಾಗ ಒಬ್ಬ ಹುಡುಗ ೧೦ ಲೀಟರ್ನ ಎರಡು ಕ್ಯಾನ್ ಹಿಡಿದು ಬಂದ. ನನಗೆ ಆಶ್ಚರ್ಯ-ಸಂತೋಷ ಎರಡೂ ಆಯಿತು. ನಮ್ಮ ಊರಿನಲ್ಲಿ ಇವ ಯಾರು ಹೈನುಗಾರಿಕೆ ಮಾಡಿದಾವ ಎಂದು ಆಶ್ಚರ್ಯ ಮತ್ತು ನನಗಿಂತ ಕಿರಿಯ ಕೃಷಿಯಲ್ಲಿ ತೊಡಗಿಕೊಂಡು ಹೈನುಗಾರಿಕೆ ಮಾಡಿದನಲ್ಲ ಎಂಬ ಸಂತೋಷ. ನನಗೆ ಕುತೂಹಲ ತಡೆಯಲಾಗಲಿಲ್ಲ. ಅವನಿಗೆ ಕೇಳೇ ಬಿಟ್ಟೆ. ನಿಮ್ಮ ಹೆಸರೇನು, ಯಾವ ಊರು, ಎಲ್ಲಿ ಡೈರಿ ಮಾಡಿದ್ದೀರಿ ಅಂತ. ಸಾರ್ ನನ್ನ ಹೆಸರು ಶರತ್ ಅಂತ. ಇಲ್ಲೆ ಸಂತೆಕಡೂರುನಿಂದ ಮುಂದೆ ಮೂರನೇ ಮೈಲಿಕಲ್ಲು ಬರುತ್ತಲ, ಅಲ್ಲಿಂದ ಒಳಗೆ ೨ ಕಿಲೋ ಮೀಟರ್ ಹೋದರೆ ಅಲ್ಲಿ ಒಬ್ಬರ ಜಮೀನು ಗುತ್ತಿಗೆ ಪಡೆದು ಶೆಡ್ ನಿರ್ಮಿಸಿ ಹೈನುಗಾರಿಕೆ ಮಾಡುತ್ತಿದ್ದೇನೆ. ನನಗೆ ಮೊದಲಿಂದ ಹೈನುಗಾರಿಕೆ ಮಾಡಬೇಕು ಎಂದು ತುಂಬಾ ಆಸೆ ಇತ್ತು. ಅದನ್ನು ಈಗ ಕಾರ್ಯರೂಪಕ್ಕೆ ತಂದಿದ್ದೇನೆ ಎಂದ. ಬನ್ನಿ ಸಾರ್ ನಮ್ಮ ಡೈರಿಗೆ ಹೋಗೋಣ ಎಂದು ಕರೆದು ಹೊರಡಿಸೆ ಬಿಟ್ಟ

ಬೈಕಿನಲ್ಲಿ ಹಾಲಿನ ಡೈರಿಯಿಂದ ಹೊರಟು ಎನ್.ಆರ್.ಪುರ ರಸ್ತೆಯಲ್ಲಿ ೩ ಕಿ.ಮೀ. ಸಾಗಿ ಅಲ್ಲಿ ಹೋಗಿ ನಿಂತಾಗ ಕಂಡಿದ್ದು ಅಡಿಕೆ ತೋಟದ ಮಧ್ಯ ೨೦ಘಿ೨೫ರಲ್ಲಿ ತುಂಬಾ ಚೊಕ್ಕವಾಗಿ ಅಧಿಕ ಕಡಿಮೆ ಖರ್ಚಿನಲ್ಲಿ ನಿರ್ಮಿಸಿದ ಹೈನುಗಾರಿಕೆಯ ಶೆಡ್. ಅಲ್ಲೆ ನಿಂತು ಕ್ಯಾಮರಾ ತೆಗೆದು ಡೈರಿಯಲ್ಲಿನ ರಾಸುಗಳ, ಅಡಿಕೆ ತೋಟ ಮತ್ತು ಬೆಳೆ ತೋಟದ ಮಧ್ಯದಲ್ಲಿ ಸೊಂಪಾಗಿ ಬೆಳೆದಿದ್ದ ಮೇವಿನ ಹುಲ್ಲಿನ ಛಾಯಾಚಿತ್ರ ತೆಗೆದುಕೊಂಡೆ ಮಾತು ಮುಂದುವರೆಸುತ್ತಾ, ಆಯಿತು ಇಲ್ಲಿಗೇನೋ ಕರೆದುಕೊಂಡು ಬಂದೆ. ನಿನ್ನ ಪೂರ್ಣ ಪರಿಚಯವಾಗಲಿಲ್ಲಲೋ ಎಂದೆ. ಸಾರ್ ನನ್ನ ಪೂರ್ಣ ಹೆಸರು ಶರತ್ ಬಾಬು, ನಮ್ಮ ತಂದೆ ವಿಜಯಕುಮಾರ್, ಬಿ.ಸಿ.ಎಂ. ಹಾಸ್ಟೆಲ್ನಲ್ಲಿ ಕೆಲಸ ಮಾಡುತ್ತಾರೆ. ನಾನು ಎಸ್.ಎಸ್.ಎಲ್.ಸಿ ಮುಗಿಸಿದ ಮೇಲೆ ಐ.ಟಿ.ಐ ಮಾಡಿದೆ, ಆಮೇಲೆ ಡಿಪ್ಲೊಮಾ ಮಾಡಿದೆ. ನಂತರ ಓದು ಸಾಕು ಅಂತ ಇಲ್ಲೆ ಕಾಲ್ ಸೆಂಟರ್ನಲ್ಲಿ ಕೆಲಸಕ್ಕೆ ಸೇರಿದೆ. ಅದು ಯಾಕೋ ಹಿಡಿಸಲಿಲ್ಲ. ಮುಂದೆ ೬ ತಿಂಗಳು ಸಿಸಿಟಿವಿ ಕ್ಯಾಮರಾ ಉದ್ಯಮದ ಅಂಗಡಿ ಕೆಲಸ ಕಲಿತೆ. ನಾನೇ ಯಾಕೆ ಒಂದು ಅಂಗಡಿ ಮಾಡಬಾರದು ಅನಿಸಿ ಸಿಸಿ ಟಿವಿ, ಬಯೋಮೆಟ್ರಿಕ್ ಉಪಕರಣಗಳನ್ನು ಮಾರಾಟ ಮಾಡುವ ಬಿಜಿನೆಸ್ ಮಾಡ್ತಿದ್ದೀನಿ. ಆಗ ಬರಿ ೧೦,೦೦೦ ರೂಪಾಯಿಯಲ್ಲಿ ಅಣ್ಣನ ಜೊತೆಗೂಡಿ ಅಂಗಡಿ ಪ್ರಾರಂಭಿಸಿ ಇಲ್ಲಿವರೆಗೂ ನಡೆಸಿಕೊಂಡು ಬಂದಿದ್ದೇವೆ

4

೨೦೧೪ರಲ್ಲಿ ಮತ್ತೆ ಓದು ಮುಂದುವರೆಸಬೇಕು ಎನಿಸಿ ಸಿಇಟಿ ಎಕ್ಸಾಮ್ ಬರೆದೆ ಇಂಜಿನಿಯರಿಂಗ್ ಸೇರಿದೆ. ಉದ್ಯಮ ಜೊತೆಯಲ್ಲಿ ಓದು ಹೀಗೆ ಸಾಗಿಬಂದು, ಈಗ ೬ ತಿಂಗಳ ಕೆಳಗೆ ತಲೆಯಲ್ಲಿ ಇದೆ. ಹೈನುಗಾರಿಕೆ ಮಾಡಬೇಕೆಂಬ ಕನಸನ್ನು ತಂದೆ-ತಾಯಿ ಬಳಿ ಹೇಳಿದಾಗ, ಅವರು ನನ್ನ ಕನಸಿಗೆ ಒತ್ತಾಸೆಯಾಗಿ ನಿಂತು ಬ್ಯಾಂಕಿನಿಂದ ೪.೫ ಲಕ್ಷ ಸಾಲ ಮಾಡಿ ಮೂಲ ಬಂಡವಾಳ ಒದಗಿಸಿಕೊಟ್ಟರು. ಈ ಜಾಗ ನಮ್ಮ ತೀರಾ ಪರಿಚಯದವರದಾಗಿದ್ದು ಅವರಲ್ಲಿ ಶೆಡ್ ನಿರ್ಮಿಸಲು ವರ್ಷಕ್ಕೆ ೨೫,೦೦೦/- ರೂ.ರಂತೆ ಬಾಡಿಗೆ ಮಾತನಾಡಿಕೊಂಡು, ಅಡಿಕೆ ತೋಟದ ಮಧ್ಯೆ ಮೇವಿನ ಹುಲ್ಲು ಬೆಳೆದುಕೊಂಡು, ದೊಡ್ಡಬಳ್ಳಾಪುರದಿಂದ ೨ ಹಾಗೂ ಶಿವಮೊಗ್ಗದಲ್ಲಿ ೨ ಹಸು ಕೊಂಡು ತಂದೆ. ಹಾಲು ಕರೆಯುವ ಮಷಿನ್ ಮತ್ತು ನೀರಿನ ಸೌಲಭ್ಯ ಎಲ್ಲಾ ಮಾಡಿಕೊಂಡಿದ್ದೇನೆ. ಬೆಳಿಗ್ಗೆ ೨೫ ಲೀಟರ್, ಸಂಜೆ ೨೫ ಲೀಟರ್ ನಂದಿನಿ ಹಾಲಿನ ಡೈರಿಗೆ ಹಾಲು ಹಾಕುತ್ತಿದ್ದೇನೆ ಸಾರ್ ಎಂದ

6

ಸರಿ ಮೂರು ದೋಣಿಯಲ್ಲಿ ಸಾಗುತ್ತಿದ್ದೀಯಲ್ಲ, ಹೇಗೆ ನಿರ್ವಹಿಸುತ್ತೀಯ. ಬೆಳಿಗ್ಗೆ ೫.೩೦ ರಿಂದ ೭ರವರೆಗೆ ಡೈರಿ ಕೆಲಸ ಆಮೇಲೆ ಕಾಲೇಜಿಗೆ ಹೋಗುತ್ತೀನಿ. ಅಂತಿಮ ವರ್ಷ ಆಗಿರುವುದರಿಂದ ಪ್ರಾಜೆಕ್ಟ್ ಕೆಲಸ ಮಾಡಿಕೊಳ್ಳುತ್ತೇನೆ. ಮಧ್ಯದಲ್ಲಿ ಅಂಗಡಿಯ ಕೆಲಸ ಮಾಡುತ್ತೀನಿ. ಮತ್ತೆ ಸಂಜೆ ೫ ರಿಂದ ೭ ಡೈರಿ ಕೆಲಸ ಹೀಗೆ ಯಾವುದನ್ನು ಬಿಡದೆ ಮಾಡುತ್ತಿದ್ದೀನಿ ಸಾರ್ ಎಂದ. ಆಯಿತು ಇಂಜಿನಿಯರಿಂಗ್ ಮುಗಿದ ಮೇಲೆ ಕೆಲಸಕ್ಕೆ ಬೆಂಗಳೂರಿಗೆ ಹೋಗಬೇಕೆ ಅಂದು ಕೊಂಡಿದಿಯೊ ಹೇಗೆ ಎಂದೆ. ಇಲ್ಲ ಸಾರ್, ಇಲ್ಲೆ ಮನೆ ಬಾಗಿಲಲ್ಲೆ ನೆಮ್ಮದಿಯ ಜೀವನ ಕಂಡುಕೊಂಡಿದ್ದೀನಿ. ಇದೇ ಶೆಡ್ನಲ್ಲಿ ಇನ್ನು ೬ ಹಸು ತಂದು ಹೈನುಗಾರಿಕೆ ವಿಸ್ತರಿಸಿಕೊಳ್ಳುತ್ತೇನೆ ಡೈರಿ ನನ್ನ ಕೈ ಹಿಡಿದಿದೆ. ಅದನ್ನು ನಾನು ಬಿಡಲ್ಲ. ಪುರಲೆ ಹತ್ತಿರ ನಮ್ಮದೇ ಒಂದು ಎಕರೆ ಜಮೀನು ಇದೆ. ಮುಂದೆ ಇದನ್ನೆಲ್ಲ ಅಲ್ಲಿಗೆ ಶಿಫ್ಟ್ ಮಾಡ್ತೀನಿ ಎಂದ

ಆಯಿತಪ್ಪ ನಿನ್ನ ಹೈನುಗಾರಿಕೆಯ ದಾರಿ ಹೀಗೆ ಅಡೆ ತಡೆ ಇಲ್ಲದೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಅಭಿನಂದಿಸಿ ಅಲ್ಲಿಂದ ಹೊರಟೆ. ಆಗ ನನ್ನ ಮನಸ್ಸಿನಲ್ಲಿ ಮೂಡಿದ ಮಾತು ಇದು. ಇವತ್ತು ಕೃಷಿ ಕುಟುಂಬದಿಂದಲೇ ಬಂದು ಕೃಷಿ ಜಮೀನು ಇದ್ದು ಕೃಷಿಯಿಂದ ವಿಮುಖರಾಗುತ್ತಿರುವ ರೈತರ ನಡುವೆ, ಯುವ ಸಮೂಹ ಕೃಷಿಯೆಡೆಗೆ ಆಕರ್ಷಿತರಾಗುತ್ತಿರುವುದು ಮತ್ತು ಅದನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡಿರುವುದು ಒಂದು ಉತ್ತಮ ಬೆಳವಣಿಗೆ. ಅಂತಹ ಎಲ್ಲ ಯುವ ರೈತರಿಗೆ ಅವರು ಮಾಡುವ ಕಾರ್ಯದಲ್ಲಿ ಯಶಸ್ಸು ಸಿಗಲಿ, ಹತ್ತು ಹಲವು ಪ್ರಯೋಗಾತ್ಮಕ ವಿಷಯ ಅಳವಡಿಸಿಕೊಂಡು ಹೆಚ್ಚಿನ ಸಾಧನೆ ಮಾಡಿ ಇನ್ನೂ ಹಲವರನ್ನು ಕೃಷಿಯೆಡೆಗೆ ಬರುವಂತೆ ಪ್ರೇರೇಪಿಸಲಿ ಎಂಬುದು ನನ್ನ ಆಶಯ