ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ನಾಟಿಪಶುವೈದ್ಯ

ಮಾಸು ಬೀಳದಿದ್ದರೆ ಏನು ಮಾಡಬೇಕು?

ಡಾ. ರವಿಕುಮಾರ್, ಪಿ
೯೦೦೮೫೯೮೮೩೨

ಸಾಮಾನ್ಯವಾಗಿ ಹಸು, ಎಮ್ಮೆಗಳು ಕರು ಹಾಕಿದ ಕೆಲವೇ ಗಂಟೆಗಳಲ್ಲಿ ಮಾಸಿನ ಚೀಲ ಗರ್ಭಾಶಯದಿಂದ ಸಂಪೂರ್ಣವಾಗಿ ಹೊರಬೀಳುತ್ತದೆ. ಮಾಸು ಹೊರಬಿದ್ದಾಗಲೇ ಜನನ ಪ್ರಕ್ರಿಯೆ ಮುಗಿಯಿತೆಂದು ಅರ್ಥ. ಆದರೆ ಹಲವು ಸಂದರ್ಭಗಳಲ್ಲಿ ಮಾಸು ಹೊರಬೀಳುವುದು ವಿಳಂಬವಾಗಬಹುದು. ಪಶುವೈದ್ಯಕೀಯ ಜ್ಞಾನದ ಪ್ರಕಾರ ಮಾಸು ಬೀಳಲು ಕರು ಹಾಕಿದ ನಂತರ ೨೪ ಗಂಟೆಗಳ ಕಾಲ ಕಾಯಬೇಕು. ನಂತರವೂ ಬೀಳದಿದ್ದರೆ ಪಶುವೈದ್ಯಕೀಯ ನೆರವು ಅತ್ಯಗತ್ಯ. ಗರ್ಭಾಶಯದ ಸೋಂಕು, ಕರು ಹಾಕುವಾಗ ಬಂದೊದಗುವ ತೊಂದರೆಗಳು, ನಿಶ್ಯಕ್ತಿ, ಗರ್ಭಾವಧಿಯಲ್ಲಿ ಅಸಮರ್ಪಕ ಆರೈಕೆ, ಪೋಷಕಾಂಶಗಳ ಕೊರತೆ ಹೀಗೆ ಹಲವಾರು ಕಾರಣಗಳಿಂದ ಮಾಸು ಹೊರಬೀಳುವುದು ವಿಳಂಬವಾಗಬಹುದು. ನಮ್ಮಲ್ಲಿ ಅನೇಕ ರೈತರಲ್ಲಿ ಇಂದಿಗೂ ಸಹಾ ಒಂದು ಮೂಢನಂಬಿಕೆಯಿದೆ; ಮಾಸು ಬೀಳುವವರೆಗೆ ಹುಟ್ಟಿದ ಕರುಗಳಿಗೆ ಹಾಲು ಕುಡಿಸಬಾರದೆಂದು. ಇದು ಸರ್ವಥಾ ತಪ್ಪು. ಕರು ಹಾಕಿದ ಅರ್ಧ ಗಂಟೆಯೊಳಗಾಗಿ ತಾಯಿಯ ಹಾಲನ್ನು ಯಥೋಚಿತವಾಗಿ ಕುಡಿಸಲೇಬೇಕು. ಇದು ಕರುಗಳ ಬೆಳವಣಿಗೆಗೆ ಹಾಗೂ ರೋಗನಿರೋಧಕ ಶಕ್ತಿಗೆ ಅತ್ಯವಶ್ಯಕ. ಇನ್ನೂ ಕೆಲವರು ನತಾಡುತ್ತಿರುವ ಮಾಸಿಗೆ ಭಾರದ ವಸ್ತುಗಳು; ಇಟ್ಟಿಗೆ, ಕಲ್ಲು ಇತ್ಯಾದಿಗಳನ್ನು ಕಟ್ಟುತ್ತಾರೆ. ಇದು ಸಹಾ ತಪ್ಪು. ಇದರಿಂದಾಗಿ ಗರ್ಭಾಶಯದ ಮೇಲೆ ಒತ್ತಡವುಂಟಾಗಿ ಹಲವು ರೀತಿಯ ಸೋಂಕುಗಳಿಗೆ ದಾರಿಯಾಗಬಹುದು

ಪಶುವೈದ್ಯರ ಬರವಿಗೆ ಮುನ್ನ ಈ ಕೆಳಕಂಡ ಮನೆಮದ್ದುಗಳನ್ನು ಅಗತ್ಯವಾಗಿ ಬಳಸಬಹುದು. ಆದರೆ ಔಷಧಿ ನೀಡಿದ ಎರಡು ಗಂಟೆಯ ನಂತರವೂ ಮಾಸು ಬೀಳದಿದ್ದಲ್ಲಿ ತಕ್ಷಣ ಪಶುವೈದ್ಯರ ಮೊರೆ ಹೋಗಬೇಕು. ಹೆಚ್ಚು ಕಾಲ ಮಾಸು ಗರ್ಭಾಶಯದಲ್ಲೇ ಉಳಿದರೆ ಸೋಂಕು ಉಂಟಾಗಿ ಕೆಲವೊಮ್ಮೆ ಮಾರಣಾಂತಿಕವಾಗಬಹುದು

  • ಒಂದು ದೊಡ್ಡ ಉತ್ರಾಣಿ ಗಿಡವನ್ನು ಬೇರುಸಹಿತ ಕಿತ್ತು ಬೇರು ಮೇಲೆ ಮಾಡಿ ಜೋತಾಡುತ್ತಿರುವ ಮಾಸಿನ ಚೀಲಕ್ಕೆ ಕಟ್ಟಬೇಕು. ಮಾಸು ಬಿದ್ದ ನಂತರ ಗಿಡವನ್ನು ಕೊಟ್ಟಿಗೆಯಿಂದ ಹೊರಹಾಕಬೇಕು
  • ತಲಾ ಅರ್ಧ ಕೆ.ಜಿಯಷ್ಟು ಮಾವಿನ ಎಲೆ, ಬಿದಿರಿನ ಎಲೆ ಮತ್ತು ಹಾಲವಾಣದ ಎಲೆಗಳನ್ನು ರಾಸುಗಳ ಬಾಯಿಗೆ ನೇರವಾಗಿ ಕೊಟ್ಟು ತಿನ್ನಿಸಬೇಕು. ತಿನ್ನದಿದ್ದಲ್ಲಿ ಅರೆದು ಉಂಡೆ ಮಾಡಿ ಬಾಯಿಯಲ್ಲಿಡಬೇಕು
  • ನಾಲ್ಕು ಚಮಚ ಅಜವಾನವನ್ನು ನೀರಿನಲ್ಲಿ ರುಬ್ಬಿ ಅರ್ಧ ಲೀಟರ್ ನೀರಿಗೆ ಒಂದು ಉಂಡೆ ಬೆಲ್ಲ ಹಾಕಿ ಕರು ಹಾಕಿದ ತಕ್ಷಣ ಕುಡಿಸುವುದರಿಂದ ಮಾಸು ಬೇಗ ಹೊರಬೀಳಲು ಅನುಕೂಲವಾಗಬಹುದು
  • ಐದು ಬೆಳ್ಳುಳ್ಳಿ ದಳ, ಐದು ಬೋಳು ಕಾಳು ಮತ್ತು ಒಂದು ಮುಷ್ಟಿ ಬಿಲ್ವಪತ್ರೆ ಜಜ್ಜಿ ಬಿಸಿನೀರಿನಲ್ಲಿ ಕದಡಿ ಕುಡಿಸುವುದೂ ಉಪಯುಕ್ತವಾಗಬಹುದು
  • ಗಮನಿಸಿ: ಮೇಲೆ ತಿಳಿಸಿದ ಔಷಧಿಗಳಲ್ಲಿ ಯಾವುದಾದರೊಂದನ್ನು ಪ್ರಯೋಗಿಸಿದ ೧-೨ ಗಂಟೆಗಳಲ್ಲಿ ಮಾಸು ಬೀಳದಿದ್ದರೆ ಕೂಡಲೇ ಪಶುವೈದ್ಯರನ್ನು ಸಂಪರ್ಕಿಸಬೇಕು

    8910