ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಔಷಧಿ ಸಸ್ಯಗಳು

ತುಳಸಿ

ಡಾ. ಯಶಸ್ವಿನಿ ಶರ್ಮ
9535228694
1

ಲ್ಯಾಮಿಯೇಸೀ’ ಕುಟುಂಬಕ್ಕೆ ಸೇರಿದ ಶ್ರೀತುಳಸಿ ಎಲ್ಲರ ಮನೆಯ ಅಂಗಳದಲ್ಲಿ ಶೋಭಿಸುತ್ತದೆ. ’ಆಸಿಮಮ್ ಸ್ಯಾಂಕ್ಟಮ್’ ಎಂಬ ವೈಜ್ಞಾನಿಕ ಹೆಸರಿರುವ ತುಳಸಿಯನ್ನು ಔಷಧಿಗಳಲ್ಲಿ ಮತ್ತು ಸುಗಂಧ ದ್ರವ್ಯಗಳಲ್ಲಿ ಬಳಸುತ್ತಾರೆ. ತುಳಸಿಯಲ್ಲಿ ವಿಷ್ಣುತುಳಸಿ ಅಥವಾ ಶ್ರೀತುಳಸಿ ಮತ್ತು ಕೃಷ್ಣತುಳಸಿ ಎಂಬ ಎರಡು ವಿಧಗಳಿವೆ. ಔಷಧಿಗಳಲ್ಲಿ ಕೃಷ್ಣತುಳಸಿಯೇ ಶ್ರೇಷ್ಠ. ತುಳಸಿಯ ಎಲೆ ಹಾಗೂ ಹೂ ಗುಚ್ಚವನ್ನು ಬಟ್ಟಿ ಇಳಿಸಿ ಸುಗಂಧ ತೈಲವನ್ನು ಬೇರ್ಪಡಿಸಲಾಗುತ್ತದೆ. ಇದು ತಿಳಿಹಳದಿ ಬಣ್ಣದಲ್ಲಿದ್ದು ಸುವಾಸನೆಯುಕ್ತವಾಗಿರುತ್ತದೆ. ತುಳಸಿ ಸುಗಂಧ ತೈಲದಲ್ಲಿ ಹೆಚ್ಚಿನ ಪ್ರಮಾಣದ ಯುಜೆನಾಲ್ (ಶೇ.೭೧ರಷ್ಟು) ಅಂಶವಿರುವುದರಿಂದ ನೆಗಡಿ, ಕೆಮ್ಮು, ಅಸ್ತಮಾ, ಹಲ್ಲು ನೋವುಗಳಲ್ಲಿ, ಆಂಟಿಸೆಪ್ಟಿಕ್ ಆಗಿ ಉಪಯೋಗಿಸುತ್ತಾರೆ

ಮನೆ ಮನೆಗಳಲ್ಲಿ ಬೆಳೆಯುವ ತುಳಸಿ ದಳಗಳನ್ನು ಸಲಾಡ್, ಶರಬತ್, ವಿನೆಗಾರ್, ವೈನ್ ಹಾಗೂ ಮದ್ಯಪಾನದ ಸುವಾಸನೆಗಾಗಿ ಬಳಸುತ್ತಾರೆ. ಚಿಕ್ಕಮಕ್ಕಳಿಗೆ ನೆಗಡಿ, ಕೆಮ್ಮು ಆದಲ್ಲಿ ಎರಡು ಹನಿ ತುಳಸಿ ರಸವನ್ನು ಜೇನುತುಪ್ಪದೊಂದಿಗೆ ಬಳಸುವುದುಂಟು. ತುಳಸಿ ರಸ ಹೃದಯ, ಯಕೃತ್ತು ಮತ್ತು ಪಿತ್ತಕೋಶಕ್ಕೆ ಶಕ್ತಿ ನೀಡುವುದಲ್ಲದೇ, ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ತುಳಸಿ ರಸ ಹಾಗೂ ಸುಗಂಧ ತೈಲವನ್ನು ಚರ್ಮ ರೋಗಗಳಲ್ಲಿ, ರೂಮ್ ಫ್ರೆಶನರ್ಗಳಲ್ಲಿ, ಸೋಂಕು ನಿವಾರಕಗಳಲ್ಲಿ ಬಳಸುತ್ತಾರೆ. ತುಳಸಿ ಬೀಜಗಳನ್ನು ನೀರಿನಲ್ಲಿ ನೆನೆಸಿದಾಗ ನೀರು ಹೀರಿಕೊಂಡು ಲೋಳೆಯಂತೆ ಆಗುತ್ತದೆ. ಇದು ತಂಪುಕಾರಕ ವಾಗಿದ್ದು, ಹಾಲು ಸಕ್ಕರೆಯೊಂದಿಗೆ ಸೇವಿಸು ವುದರಿಂದ ಅಲ್ಸರ್ ನಿವಾರಣೆಗೆ ಪರಿಣಾಮಕಾರಿ ಯಾಗಿ ಕೆಲಸ ಮಾಡುತ್ತದೆ

ಬೀಜಗಳಿಂದ ಇವನ್ನು ಸುಲಭವಾಗಿ ಸಸ್ಯಾಭಿವೃದ್ಧಿ ಮಾಡಬಹುದು. ಬೀಜಗಳು ತುಂಬಾ ಚಿಕ್ಕದಾಗಿರುವುದರಿಂದ ಇದನ್ನು ಮರಳಿನೊಂದಿಗೆ ಬೆರೆಸಿ ನರ್ಸರಿ ಮಡಿಯಲ್ಲಿ ತೆಳುವಾಗಿ ಬಿತ್ತನೆ ಮಾಡಿ ಹುಲ್ಲಿನ ಹೊದಿಕೆ ಹಾಕಬೇಕು. ಫೆಬ್ರವರಿ ಮಾರ್ಚ್ ಸಸಿಮಡಿ ತಯಾರಿಸಲು ಉತ್ತಮ ಕಾಲ. ಏಪ್ರಿಲ್ ತಿಂಗಳಲ್ಲಿ ೪೦ x ೪೦ ಸೆಂ.ಮೀ. ಅಂತರದಲ್ಲಿ ನಾಟಿ ಮಾಡಿ ನೀರು ಹಾಯಿಸಬೇಕು. ಹೆಕ್ಟೇರಿಗೆ ೨೦ ಟನ್ ಕೊಟ್ಟಿಗೆ ಗೊಬ್ಬರದ ಜೊತೆ ೩೦ ಕೆ.ಜಿ. ಸಾರಜನಕ, ೬೦ ಕೆ.ಜಿ. ರಂಜಕ ಮತ್ತು ೩೦ ಕೆ.ಜಿ. ಪೊಟ್ಯಾಷ್ಯುಕ್ತ ಗೊಬ್ಬರ ನೀಡಬೇಕು. ಒಂದು ಕಟಾವಿನ ನಂತರ ೩೦ ಕೆ.ಜಿ. ಸಾರಜನಕವನ್ನು ಮೇಲುಗೊಬ್ಬರವಾಗಿ ನೀಡಬೇಕು. ನಾಟಿ ಮಾಡಿದ ೯೦-೯೫ ದಿನಗಳಿಗೆ ಮೊದಲನೆ ಕೊಯ್ಲು ಮಾಡಬಹುದು. ನಂತರ ೬೦ ದಿನಗಳ ಅಂತರದಲ್ಲಿ, ಹೂವಾಡುವ ಸಮಯದಲ್ಲಿ ಎಲೆ ಹಾಗೂ ಹೂ ಗುಚ್ಚವನ್ನು ಕೊಯ್ಲು ಮಾಡಬೇಕು. ಹೆಕ್ಟೇರಿಗೆ ೧೦ ೧೫ ಟನ್ ಎಲೆಯ ಇಳುವರಿ ಪಡೆಯಬಹುದು. ಪ್ರತಿ ೩ ಕೊಯ್ಲಿನ ನಂತರ ಹೊಸದಾಗಿ ನಾಟಿ ಮಾಡಬೇಕು. ಕೊಯ್ಲು ಮಾಡಿದ ೬-೮ ತಾಸುಗಳ ಒಳಗೆ ಎಲೆಗಳನ್ನು ಭಟ್ಟಿ ಇಳಿಸಬೇಕು. ಹೆಕ್ಟೇರಿಗೆ ೨೦-೨೫ ಕೆ.ಜಿ. ಸುಗಂಧ ತೈಲದ ಇಳುವರಿ ಬರುತ್ತದೆ