ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ವಿಭಿನ್ನ ಚಿಂತನೆ

ವಿರಳ ನೀರಾವರಿ

image_
ಬಿ ಎಮ್ ಚಿತ್ತಾಪೂರ
9448821755

ಹನಿ ನೀರಾವರಿ ಪದ್ಧತಿ ನೀರಿನ ಕೊರತೆಯ ಪ್ರದೇಶಗಳಿಗೆ ಪರಿಣಾಮಕಾರಿಯಾದ ಸಮರ್ಥ ನೀರಾವರಿ ಪದ್ಧತಿಯಾಗಿ ಜನಪ್ರಿಯವಾಗುತ್ತಿರುವುದು ಇದೀಗ ಇತಿಹಾಸವಾದರೆ ‘ವಿರಳ ನೀರಾವರಿ (deficit irrigation)’ ಎಂಬ ವಿನೂತನ ನೀರಾವರಿ ಪದ್ಧತಿಯೂ ನೀರಿನ ಲಭ್ಯತೆ ಕಡಿಮೆಯಾದ ಸಂದರ್ಭಗಳಲ್ಲಿ ಗಮನ ಸೆಳೆಯುತ್ತಿದೆ.’ಬೆಳೆಯ ಸಸ್ಯಕ್ರಿಯೆ (ಆವಿಯಾಗುವಿಕೆ+ಭಾಷ್ಪೀಭವನ) ಗಳಿಗೆ ಬೇಕಾಗುವ ಪ್ರಮಾಣಕ್ಕಿಂತಲೂ ಕಡಿಮೆ ನೀರು ನೀಡುವುದೇ ಈ ಕ್ರಮದ ವಿಶೇಷತೆ. ಲಭ್ಯ ನೀರಿನ ಸಮರ್ಥ ಬಳಕೆಯಲ್ಲಿ ಈ ಕ್ರಮವು ತುಂಬ ಪರಿಣಾಮಕಾರಿಯೆನ್ನಲಾಗುತ್ತಿದೆ. ಮುಖ್ಯವಾಗಿ ಬೆಳೆಯ ಬೇರುಗಳ ಬೆಳವಣಿಗೆಯನ್ನು ವೃದ್ಧಿಸಿ ಮಣ್ಣಿನ ಪದರಿನಲ್ಲಿಯ ಶೇಖರಿತ ನೀರಿನ ಗರಿಷ್ಠ ಬಳಕೆಯನ್ನು ಹೆಚ್ಚಿಸುವಲ್ಲಿ ಈ ಕ್ರಮ ಸಹಕಾರಿ. ಗೋಧಿ ಬೆಳೆಗೆ ಆರು ಬಾರಿ ನೀಡಬೇಕಾದ ನೀರುಗಳಲ್ಲಿ ಎರಡು ನೀರನ್ನು ಕಡಿಮೆ ಮಾಡಿ ಇಳುವರಿಯಲ್ಲಿ ಯಾವ ವ್ಯತ್ಯಾಸವಾಗದಂತೆ ನೀರು ನಿರ್ವಹಣೆ ಮಾಡುವ ಕ್ರಮ ಇದಾಗಿದೆ. ಇಲ್ಲಿ ಬೆಳೆಗೆ ಸಂದಿಗ್ಧ ಹಂತಗಳಲ್ಲಿ ನೀರು ನೀಡಿ ಇತರ ಹಂತಗಳಲ್ಲಿ ನೀರು ನಿಗದಿಗೊಳಿಸುವುದು ಮುಖ್ಯ. ಅದರಂತೆ ಈ ಸಂದಿಗ್ಧ ಹಂತಗಳ ಆಯ್ಕೆಯು ಅಷ್ಟೇ ಮಹತ್ವದ್ದು. ಉದಾಹರಣೆಗೆ ಗೋಧಿ ಬೆಳೆಯಲ್ಲಿ ಬೆಳೆಯ ಇಪ್ಪತ್ತೊಂದು ದಿನಗಳಲ್ಲಿ ಬರುವ ತುರಾಯಿ ಬೇರು ಆರಂಭಿಕ ಹಂತ ಪ್ರಮುಖ ಸಂದಿಗ್ಧ ಹಂತ. ಈ ಹಂತದಲ್ಲಿ ನೀರು ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಅದರಂತೆಯೆ ಬೇಸಿಗೆ ಶೇಂಗಾ ಬೆಳೆಯಲ್ಲಿ ಮೊಳಕೆ ಬಂದ ನಂತರದ ೨೦ - ೨೫ ದಿನಗಳಲ್ಲಿ ಬೆಳೆಗೆ ನೀರು ನೀಡಬಾರದು. ಇದರಿಂದ ನೀರಿನ ಉಳಿತಾಯವಲ್ಲದೆ ಅನಾವಶ್ಯಕವಾಗಿ ಆಗಬಹುದಾದ ವಿಪರೀತ ಸಸ್ಯ ಬೆಳವಣಿಗೆ ನಿಯಂತ್ರಣವಾಗಿ ಉತ್ತಮ ಫಸಲು ಪಡೆಯಬಹುದಾಗಿದೆ.

ಭಾಗಾಂಶ ಬೇರು ಒಣಗಿಸುವಿಕೆ (partial root drying)’ ಎಂಬ ಕ್ರಮವನ್ನು ಇದೀಗ ದ್ರಾಕ್ಷಿಯಂತಹ ತೋಟಗಾರಿಕೆ ಬೆಳೆಗಳಿಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಇಲ್ಲಿ ಹನಿ ನೀರಾವರಿಯ ಲ್ಯಾಟರಲ್ ಲೈನುಗಳನ್ನು ದ್ರಾಕ್ಷಿ ಸಾಲಿನ ಎರಡೂ ಬದಿಗಳಲ್ಲೂ ಅಳವಡಿಸಿರಬೇಕು. ಆದರೆ ನೀರನ್ನು ಮಾತ್ರ ಒಂದು ಸಮಯಕ್ಕೆ ಒಂದು ಬದಿಯಿಂದ ಮಾತ್ರ ಹರಿಬಿಡಬೇಕು. ಇನ್ನೊಂದು ಲೈನನ್ನು ಬಂದು ಮಾಡಿರಬೇಕು. ಮುಂದಿನ ಬಾರಿ ನೀರು ಬಿಡಬೇಕಾದಾಗ ಈ ಮೊದಲು ನೀರು ಹರಿಸಿದ ಭಾಗದಲ್ಲಿ ನೀರನ್ನು ಸ್ಥಗಿತಗೊಳಿಸಿ ನೀರು ಹರಿಸಿರದ ಇನ್ನೊಂದು ಲೈನಿನಿಂದ ನೀರು ಬಿಡಬೇಕು. ಹೀಗೆ ಪ್ರತಿ ಬಾರಿಯೂ ಪರ್ಯಾಯ ಲೈನುಗಳಿಂದ ನೀರು ಹಾಯಿಸಬೇಕು. ಇದರಿಂದ ಪ್ರತಿಶತ ನಲವತ್ತರಷ್ಟು ನೀರು ಉಳಿತಾಯವಾಗಿ ಇಳುವರಿಯಲ್ಲಿ ಹೆಚ್ಚಿನ ವ್ಯತ್ಯಾಸವಾಗದೆ ಉತ್ತಮ ನೀರಿನ ಬಳಕೆ ಸಾಧ್ಯವಾಗುತ್ತದೆ. ಏನಿಲ್ಲವೆಂದರೂ ನೀರಿನ ಕೊರತೆಯ ಸಮಯದಲ್ಲಿ ಮುಖ್ಯವಾಗಿ ಬೆಳೆಯನ್ನು ಉಳಿಸಿಕೊಳ್ಳುವುದಲ್ಲದೆ ತಕ್ಕಮಟ್ಟಿನ ಲಾಭ ಕೂಡ ಗಳಿಸಬಹುದು

ನೀರು ಹರಿಸಿರದ ಭಾಗದಲ್ಲಿ ಭೂಮಿ ಆರುವುದರಿಂದ ಆ ಭಾಗದಲ್ಲಿನ ಬೇರುಗಳು ನೀರು ಹುಡುಕಿಕೊಂಡು ಆಳದವರೆಗೂ ಪಸರಿಸುತ್ತವೆ. ಅದೇ ಸಮಯದಲ್ಲಿ ಭೂ ಮೇಲ್ಭಾಗದ ಸಸ್ಯಕ್ಕೆ ನೀರಿನ ಕೊರತೆಯ ಸಂದೇಶವನ್ನು ಕಳುಹಿಸುತ್ತವೆ. ತತ್ಪರಿಣಾಮವಾಗಿ ನೀರಿನ ಕೊರತೆಗೆ ಸನ್ನದ್ದವಾಗಲು ಬೆಳೆಯು ತನ್ನ ಪತ್ರರಂಧ್ರಗಳನ್ನು ಭಾಗಶಃ ಮುಚ್ಚಿ ಆಗಬಹುದಾದ ಹೆಚ್ಚಿನ ಭಾಷ್ಪೀಭವನವನ್ನು ಹತೋಟಿಯಲ್ಲಿ ಇಡುತ್ತವೆ. ಈ ಸಮಯದಲ್ಲಿ ನೀರು ನೀಡಿದ ಭಾಗದಿಂದ ಬೇರುಗಳು ನೀರನ್ನು ಹೀರಿ ದ್ಯುತಿ ಸಂಶ್ಲೇಷಣೆಯಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳುವುದರ ಜೊತೆಗೆ ಭೂಮಿ ಒಣಗುತ್ತಿರುವ ಭಾಗದ ಬೇರುಗಳಿಗೂ ಭಾಗಶಃ ನೀರನ್ನೂ ಒದಗಿಸುವಲ್ಲಿ ಸಹಕರಿಸುತ್ತವೆ. ಈ ಕ್ರಮದಿಂದಾಗಿ ಕಬ್ಬಿನ ಬೆಳೆಯಲ್ಲಿ ಪ್ರತಿಶತ ೨೬ರಷ್ಟು ನೀರಿನ ಉಳಿತಾಯವಾಗುವುದಲ್ಲದೇ ಪ್ರತಿಶತ ಹತ್ತರಷ್ಟು ಇಳುವರಿ ಹೆಚ್ಚಾದುದು ಕೂಡ ವರದಿಯಾಗಿದೆ. ಈಗಾಗಲೇ ಹತ್ತಿಯಂತಹ ಬೆಳೆಗಳಲ್ಲಿ ಶಿಫಾರಸ್ಸು ಮಾಡಿದ ‘ಪರ್ಯಾಯ ಕ್ರಮದಲ್ಲಿ ಪರ್ಯಾಯ ಕಾಲುವೆ ನೀರಾವರಿ (alternate furrow irrigation alternately)’ ಪದ್ಧತಿಯಿಂದ ಪ್ರತಿಶತ ೨೫ ರಿಂದ ೪೦ ರಷ್ಟು ಕಡಿಮೆ ನೀರನ್ನು ಬಳಸಿ ಇಳುವರಿಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲದಂತೆ ನೀರಿನ ಕೊರತೆಯಲ್ಲೂ ಉತ್ತಮ ನೀರಿನ ಉತ್ಪಾದಕತೆಯನ್ನು ಹೊಂದಬಹುದಾಗಿದ್ದು ರೈತರು ಇಂತಹ ಪರ್ಯಾಯ ಕ್ರಮಗಳ ಕುರಿತು ಚಿಂತಿಸಬಹುದಾಗಿದೆ