ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಬೀಜ ಪ್ರಪಂಚ

ದ್ರಾಕ್ಷಿ

image_
ಡಾ. ಕೆ ಡಸ್ ಶೇಷಗಿರಿ
9741269214

ಸುಮಾರು ಆರರಿಂದ ಎಂಟು ಸಾವಿರ ವರ್ಷಗಳ ಇತಿಹಾಸವಿರುವ ದ್ರಾಕ್ಷಿ ಎಲ್ಲರ ಮೆಚ್ಚಿನ ಹಣ್ಣು. ಇದರ ತವರು ಮೆಡಿಟರೇನಿಯನ್ ಅಥವಾ ಮಧ್ಯ ಏಶಿಯಾ ಪ್ರಾಂತ್ಯ ಎಂಬ ಮಾಹಿತಿ ಲಭ್ಯವಿದೆ. ಕೃಷಿಯಲ್ಲಿರುವ ಹೆಚ್ಚಿನ ದ್ರಾಕ್ಷಿ ತಳಿಗಳು ವೈಜ್ಞಾನಿಕವಾಗಿ ವೈಟಿಸ್ ವೈನಿಪೆರಾ ಎಂದು ಕರೆಯಲಾಗುವ ಒರಟಾದ ಗಡಸು ಬಳ್ಳಿಗೆ ಸೇರಿವೆ. ದ್ರಾಕ್ಷಿಯನ್ನು ತಾಜಾ ಹಣ್ಣಾಗಿ, ವೈನ್, ಜಾಮ್, ಜೆಲ್ಲಿ, ಜ್ಯೂಸ್, ಒಣದ್ರಾಕ್ಷಿ ತಯಾರಿಸಲು ಬಳಸುತ್ತಾರೆ. ಪ್ರತಿ ೧೦೦ಗ್ರಾಂ ದ್ರಾಕ್ಷಿ ಹಣ್ಣಿನ ತಿರುಳಿನಿಂದ ೬೭ ಕ್ಯಾಲೊರಿ ಶಕ್ತಿ, ೧೭ಗ್ರಾಂ ಶರ್ಕರಪಿಷ್ಟ, ೧೬ಗ್ರಾಂ ಸಕ್ಕರೆ, ೦.೯ಗ್ರಾಂ ನಾರು, ೦.೬ಗ್ರಾಂ ಸಸಾರಜನಕ, ೧೯೧ಮಿ.ಗ್ರಾಂ ಪೊಟಾಸಿಯಮ್, ೨ಮಿ.ಗ್ರಾಂ ಸೊಡಿಯಮ್ ಮತ್ತು ಅನುಕ್ರಮವಾಗಿ ಶೇ.೬ ಹಾಗು ೫ರಷ್ಟು ’ಸಿ’ ಮತ್ತು ಬಿ-೬ ಜೀವಸತ್ವ ದೊರೆಯುತ್ತದೆ. ನಮ್ಮ ದಿನನಿತ್ಯದ ಆಹಾರದಲ್ಲಿ ದ್ರಾಕ್ಷಿ ಸೇವನೆಯಿಂದ ಹಲವು ಆರೋಗ್ಯ ಲಾಭಗಳಿವೆ. ದ್ರಾಕ್ಷಿ ಉತ್ಕರ್ಶಣ ನಿರೋಧಕತೆಯನ್ನು ಹೊಂದಿದೆ. ಇದರಲ್ಲಿರುವ ಪಾಲಿ ಫಿನಾಲ್ಗಳು ಹೃದಯ ಕಾಯಿಲೆಗಳನ್ನು ಕಡಿಮೆ ಮಾಡುತ್ತವೆ. ದೇಹದ ತೂಕ ಕಡಿಮೆ ಮಾಡಿ ಆರೋಗ್ಯಪೂರಕ ತೂಕವನ್ನು ಹೊಂದಲು ಸಹಕರಿಸುತ್ತದೆ. ಕಣ್ಣಿನ ರೆಟಿನಾವನ್ನು ರಕ್ಷಿಸಿ ಕಣ್ಣಿನ ಆರೋಗ್ಯ ಕಾಪಾಡುತ್ತದೆ. ರಕ್ತದಲ್ಲಿ ಸೋಡಿಯಮ್ ಅಂಶ ಕಡಿಮೆ ಮಾಡಿ ಅಧಿಕ ರಕ್ತದೊತ್ತಡ ಕಡಿಮೆ ಮಾಡುತ್ತದೆ. ಇದರ ಸೇವನೆ ರಕ್ತದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸುವುದಿಲ್ಲ, ಆದ್ದರಿಂದ ಮಧುಮೇಹದಿಂದ ಬಳಲುವವರು ಸಹ ಬಳಸಬಹುದು

ದ್ರಾಕ್ಷಿ ಚಳಿಗಾಲದಲ್ಲಿ ಎಲೆ ಉದುರಿಸುವ ಹಬ್ಬುವ ಗುಣದ ಗಟ್ಟಿಜಾತಿಯ ಬಳ್ಳಿ. ಕಾಂಡ ಗಿಡ್ಡ ಹಾಗೂ ದಪ್ಪವಾಗಿದ್ದು ಉದ್ದವಾದ ರೆಂಬೆಗಳನ್ನು ಹೊಂದಿರುತ್ತದೆ. ಅಗಲವಾದ ತೆಳುವಾದ ಎಲೆಗಳು ೫-೭ ಹಾಲೆಗಳನ್ನು ಹೊಂದಿರುತ್ತವೆ. ಹೂವುಗಳು ಗೊಂಚಲುಗಳಲ್ಲಿ ಮೂಡಿ ಪ್ರತಿ ಗೊಂಚಲಿನಲ್ಲಿ ೧೫ ರಿಂದ ೩೦೦ ಹಣ್ಣುಗಳಿರುತ್ತವೆ. ದ್ರಾಕ್ಷಿಯನ್ನು ಬೀಜದಿಂದ ಅಭಿವೃದ್ಧಿ ಮಾಡಿದರೆ ನಾವು ಇಚ್ಛಿಸುವ ತಳಿ ದೊರೆಯುವುದಿಲ್ಲ, ಆದ್ದರಿಂದ ಸುಪ್ತಾವಸ್ಥೆಯಲ್ಲಿರುವ ಕಾಂಡದ ತುಂಡಿನಿಂದ ಅಭಿವೃದ್ದಿ ಮಾಡುತ್ತಾರೆ. ಈ ಉದ್ದೇಶಕ್ಕಾಗಿ ಒಂದು ವರ್ಷದ ಬೆಳವಣಿಗೆಯ ಆರು ಅಡಿ ಉದ್ದದ, ಪೆನ್ಸಿಲ್ಗಿಂತ ಹೆಚ್ಚಿನ ಗಾತ್ರ ಹೊಂದಿರುವ, ಗೆಣ್ಣುಗಳ ನಡುವೆ ಕಡಿಮೆ ಅಂತರ ಹೊಂದಿರುವ ಕಾಂಡಗಳನ್ನು ಆರಿಸಿಕೊಳ್ಳಲಾಗುತ್ತದೆ. ಸುಮಾರು ೧೨-೧೫ಸೆಂ.ಮೀ. ಉದ್ದ ಕನಿಷ್ಟ ೪-೬ ಕಣ್ಣುಗಳಿರುವಂತೆ ಕಾಂಡವನ್ನು ಕತ್ತರಿಸಿ ತುಂಡುಗಳನ್ನಾಗಿ ಮಾಡಬೇಕು. ಕತ್ತರಿಸುವಾಗ ಬುಡಭಾಗದಲ್ಲಿ ನೇರವಾಗಿ ಹಾಗೂ ತುದಿಯಲ್ಲಿ ಓರೆಯಾಗಿರುವಂತೆ ಕತ್ತರಿಸಿದರೆ ನಾಟಿಮಾಡಲು ಅನುಕೂಲ. ಉತ್ತಮವಾದ ಬೇರು ಬಿಡುವಿಕೆಗೆ ಕಾಂಡದ ತುಂಡುಗಳನ್ನು ೧೨ ತಾಸುಗಳ ಕಾಲ ೨೫೦ ಪಿ.ಪಿ.ಎಮ್ ಇಂಡೊಲ್ ಬ್ಯುಟರಿಕ್ ಆಮ್ಲದ ದ್ರಾವಣದಲ್ಲಿ (೨೫೦ ಮಿ.ಗ್ರಾಂ. ೧ ಲೀ. ನೀರಿನಲ್ಲಿ ಬೆರಸಿ) ಅದ್ದಿ ಸಸಿಮಡಿಯಲ್ಲಿ ನಾಟಿಗೆ ಬಳಸಬೇಕು. ಕಾಂಡದ ತುಂಡುಗಳನ್ನು ಉತ್ತಮವಾಗಿ ಸಿದ್ಧಪಡಿಸಿದ ಸಸಿಮಡಿಯಲ್ಲಿ ೧೦೦ಸೆಂ. ಮೀ. ಸಾಲುಗಳಲ್ಲಿ ೩೦ ಸೆಂ.ಮೀ. ಅಂತರದಲ್ಲಿ ೩ ಗೆಣ್ಣುಗಳು ಮಣ್ಣಿನ ಒಳಗೆ ಹಾಗೂ ಒಂದು ಗೆಣ್ಣು ಮೇಲೆ ಇರುವಂತೆ ನಾಟಿ ಮಾಡಬೇಕು. ಸುಮಾರು ೯೦ ದಿನಗಳಲ್ಲಿ ಸಸಿಗಳು ನಾಟಿ ಮಾಡಲು ಸಿದ್ಧವಾಗುತ್ತವೆ. ಒಂದು ಎಕರೆ ಪ್ರದೇಶಕ್ಕೆ ಅಂತರವನ್ನು ಅವಲಂಭಿಸಿ ೯೦೦ರಿಂದ ೧೮೦೦ ಬೇರುಬಿಟ್ಟ ಸಸಿಗಳು ಬೇಕಾಗುತ್ತವೆ