ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಚಿತ್ರ ಲೇಖನ:

ಪೇರಲದ ಸುರುಳಿ ಬಿಳಿನೊಣ (Guava Spiraling Whitefly)

image_
ಡಾ.ಎಸ್.ಟಿ. ಪ್ರಭು
೯೪೪೮೧೮೨೨೨೫,
1

ಅಲೆರೋಢಿಕಸ್ ಡಿಸ್ಪರ್ಸುಸ್ (Aleurodicus disperses Russell) ಎಂಬ ವೈಜ್ಞಾನಿಕ ನಾಮಧೇಯವಿರುವ ಈ ಕೀಟವು ರಸಹೀರುವ ತಿಗಣೆಗಳ ಜಾತಿಯದಾಗಿದ್ದು ಹೆಮಿಪ್ಟೆರಾ ಎಂಬ ಗಣಕ್ಕೆ ಸೇರಿದೆ. ಬಾಧೆಯ ಲಕ್ಷಣ: ಪೇರಲದ ಸುರುಳಿ ಬಿಳಿನೊಣ ತಾನು ಆಕ್ರಮಣ ಮಾಡುವ ಬೆಳೆಗಳ ಎಲೆಗಳಿಂದ ಸತತವಾಗಿ ರಸಹೀರುವುದರಿಂದ ಬೆಳೆಯ ಸತ್ವ ಕಡಿಮೆಯಾಗಿ ಎಲೆಗಳು ಮುಟುರಿಕೊಳ್ಳುತ್ತವೆ. ನಂತರ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಉದುರುತ್ತವೆ. ಇದರ ಜೊತೆಗೆ ತಮ್ಮ ದೇಹದಿಂದ ಸ್ರವಿಸಲ್ಪಡುವ ಸಿಹಿಯಾದ ಅಂಟುದ್ರವ ಎಲೆಗಳ ಮೇಲೆ ಚೆಲ್ಲುವುದರಿಂದ ಎಲೆಗಳು ಅಂಟು ಅಂಟಾಗಿರುತ್ತವೆ. ಈ ಸಿಹಿ ಅಂಟುದ್ರವದ ಮೇಲೆ ಕಪ್ಪು ಕಾಡಿಗೆಯಂತಹ ಬೂಸ್ಟು ಬೆಳೆಯುತ್ತದೆ. ಚಿತ್ರದಲ್ಲಿ ಕಾಣುವಂತೆ, ಈ ಕೀಟಗಳು ಎಲೆಗಳನ್ನು ಸಂಪೂರ್ಣವಾಗಿ ಆವರಿಸುವುದರಿಂದ ಮತ್ತು ಮೇಣದಂತಹ ಬಿಳಿ ಪುಡಿಯನ್ನು ಸ್ರವಿಸುವುದರಿಂದ ಎಲೆಗಳ ದ್ಯುತಿಸಂಶ್ಲೇಷಣೆ ಕ್ರಿಯೆಗೆ ಅಡ್ಡಿಯಾಗುತ್ತದೆ ಮತ್ತು ಇದರಿಂದ ಗಿಡಗಳ ಬೆಳವಣಿಗೆ ತೀವ್ರವಾಗಿ ಕುಂಠಿತವಾಗುತ್ತದೆ. ಹಾನಿಗೊಳಗಾದ ಗಿಡಗಳು ನೋಡಲಿಕ್ಕೂ ಸಹ ಕುರೂಪಿಯಾಗಿ ಕಾಣುತ್ತವೆ. ಈ ಕೀಟಗಳ ಹಾವಳಿಯಿಂದ ಗಮನಾರ್ಹವಾಗಿ ಸರಿ ಸುಮಾರು ೮೦ ಪ್ರತಿ ಶತ ಪೇರಲ ಹಣ್ಣಿನ ಇಳುವರಿಯಲ್ಲಿ ಕಡಿಮೆಯಾಗುವ ಸಂಭವವಿರುತ್ತದೆ. ಸುರುಳಿ ಬಿಳಿನೊಣಗಳು ಬೆಳೆಗಳಿಗೆ ತಗುಲುವ ನಂಜು ರೋಗದ ರೋಗಾಣುಗಳನ್ನು ಹರಡಲು ಸಹ ಮದ್ಯವರ್ತಿಯಾಗಿ ಸಹಾಯ ಮಾಡುವುದರಿಂದ ಬೆಳೆಗಳಲ್ಲಿ ತೀವ್ರತರವಾದ ಇಳುವರಿ ನಷ್ಟವಾಗುತ್ತದೆ. ಚಳಿಗಾಲಕ್ಕಿಂತ ಬೇಸಿಗೆಯಲ್ಲಿ ಇವುಗಳ ಹಾವಳಿ ವಿಪರೀತವಾಗಿರುತ್ತದೆ.

3

ನಿರ್ವಹಣೆ: ಈ ಕೀಟಗಳ ನಿರ್ವಹಣೆಯಲ್ಲಿ ಸಮಗ್ರ ಪೀಡೆ ನಿರ್ವಹಣೆ ಅತ್ಯವಶ್ಯವಾಗಿರುತ್ತದೆ. ಇವುಗಳ ನಿರ್ವಹಣೆಯಲ್ಲಿ ಕೆಲವು ಬೇಸಾಯ ಕ್ರಮಗಳನ್ನು ಅನುಸರಿಸುವುದು, ಜೈವಿಕ ಪದ್ದತಿಯ ಉಪಯೋಗ ಮತ್ತು ಅಂತಿಮವಾಗಿ ರಾಸಾಯನಿಕ ಕೀಟನಾಶಕಗಳ ಬಳಕೆ ಪ್ರಮುಖವಾಗಿರುತ್ತವೆ. ರಾಸಾಯನಿಕ ಕೀಟನಾಶಕಗಳಲ್ಲಿ ಶೇ. ೨ರ ಬೇವಿನ ಎಣ್ಣೆ, ಶೇ. ೪ ರ ಮೀನೆಣ್ಣೆಯ ಸಾಬೂನಿನ ಕಷಾಯ, ಶೇ. ೫ ರ ಡಿಟರ್ಜೆಂಟ್ ಸಾಬೂನಿನ ದ್ರಾವಣ, ೨ ಮಿ.ಲೀ. ಮೆಲಾಥಿಯಾನ್, ೨ ಮಿ. ಲೀ. ಡೈಕ್ಲೋರೋವಾಸ್ ಮತ್ತು ೨ ಮಿ. ಲೀ. ಟ್ರೈಅಜೋಫಾಸ್ ಇವುಗಳಲ್ಲಿ ಯಾವುದಾದರೂ ಒಂದನ್ನು ನೀರಿನಲ್ಲಿ ಬೆರೆಸಿ ಬೆಳೆಗೆ ಸಿಂಪಡಿಸಬೇಕು.ಜೈವಿಕ ಹತೋಟಿ ಕ್ರಮದಲ್ಲಿ, ಕೆಲವು ಗುಲಗಂಜಿ ದುಂಬಿಗಳು (Cryptolaemus montrouzieri), ಪರತಂತ್ರ ಜೀವಿಗಳಾದ ಎನ್ಕಾರ್ಸಿಕಯಾ ಪ್ರಭೇದಗಳು (Encarsia haitierrsis and E.guadeloupae) ನೈಸರ್ಗಿಕವಾಗಿ ಕಾರ್ಯೋನ್ಮುಖವಾಗಿ ಬಿಳಿನೊಣಗಳನ್ನು ನಿಯಂತ್ರಣ ದಲ್ಲಿಡುತ್ತವೆ, ರಾಸಾಯನಿಕ ಕೀಟನಾಶಕಗಳನ್ನು ಬಳಸುವಾಗ ಸರಿಯಾದ ಸಮಯದಲ್ಲಿ ಮತ್ತು ಅವಶ್ಯಕತೆಗನುಸಾರವಾಗಿ ಬಳಸಬೇಕು.

5

ಬೇಸಾಯ ಕ್ರಮಗಳನ್ನು ಅನುಸರಿಸಿ ಮಾಡಬಹುದಾದ ನಿರ್ವಹಣೆಯಲ್ಲಿ ಮುಖ್ಯವಾಗಿ ಹೊಲದ ಸ್ವಚ್ಚತೆ ಮತ್ತು ಬಿಳಿನೊಣಗಳನ್ನು ಆಶ್ರಯಿಸುವ ಕಳೆಗಳ ನಾಶಮಾಡುವುದು ಸೇರಿವೆ. ಹಳದಿ ಬಣ್ಣದ ಕೃತಕ ಅಂಟುಬಲೆಗಳನ್ನು ಹೊಲದಲ್ಲಿ ಎಕರೆಗೆ ೧೨ ರಿಂದ ೧೫ ರಂತೆ ಬಳಸಿ ಬಿಳಿನೊಣಗಳ ಚಟುವಟಿಕೆಯನ್ನು ತಿಳಿಯುವುದರ ಜೊತೆಗೆ ಅವುಗಳನ್ನು ಬಲೆಗೆ ಬೀಳಿಸಿ ಬಿಳಿನೊಣದ ಸಂಖ್ಯೆಯನ್ನು ಕಡಿಮೆಗೊಳಿಸಬಹುದು.

7