ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ದಾರಿದೀಪ

ಬರದಲ್ಲೂ ಹೆಸರಾಯಿತು ಹೆಸರು: ಕೆ.ಕೆ.ಎಂ.-೩ ತಳಿ

ಡಾ. ಎಂ.ಸುಧೀಂದ್ರ
1

ಸತತ ಎರಡು ವರ್ಷಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿ ಭೀಕರ ಬರಗಾಲವನ್ನು ಎದುರಿಸುವಂತಹ ಪರಿಸ್ಥಿತಿಯಲ್ಲಿ ಲಭ್ಯವಿದ್ದ ಕಡಿಮೆ ನೀರಿನಲ್ಲಿಯೇ ಎರಡು ಬೆಳೆಗಳನ್ನು ಬೆಳೆದು ಎಲ್ಲರ ಗಮನ ಸೆಳೆಯುವಂತೆ ಮಾಡಿರುವ ರೈತ ಟಿ.ದಾನೇಶ್ ಇತರ ರೈತರಿಗೆ ಮಾದರಿಯಾಗಿದ್ದಾರೆ. ಶಿಕಾರಿಪುರ ತಾಲ್ಲೂಕಿನ ಚನ್ನಳ್ಳಿ ಗ್ರಾಮದ ದಾನೇಶ್ ಅವರು ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಒಂದೇ ಬೆಳೆಯಾಗಿ ಬರೀ ಭತ್ತವನ್ನೇ ಬೆಳೆಯುತ್ತಿದ್ದರು. ಆದರೆ ಖಾಲಿ ಬಿಟ್ಟ ಜಮೀನಿಗೆ ಏನಾದರೂ ಮಾಡಬೇಕೆಂಬ ವಿಚಾರ ಮೊಳೆತು ಯಾವ ಬೆಳೆಯನ್ನು ಬೆಳೆಯಬೇಕೆಂದು ಯೋಚಿಸುತ್ತಾ ಇದ್ದಾಗ ಇವರ ಬಹುಕಾಲದ ಮಿತ್ರರಾದ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ. ಟಿ.ಎಚ್. ಗೌಡರನ್ನು ಭೇಟಿ ಮಾಡಿದರು. ಆಗ ಅಲ್ಪಾವಧಿ ತಳಿಯಾದ ಹೆಸರು ಬೆಳೆಯ ಕುರಿತಾಗಿ ಮಾಹಿತಿ ತಿಳಿದುಕೊಂಡು ವಿಶ್ವವಿದ್ಯಾಲಯದ ಕೆ.ಕೆ.ಎಂ-೩ ಹೆಸರು ತಳಿ ಬೀಜವನ್ನು ಪಡೆದುಕೊಂಡರು. ಬೀಜ ಪಡೆಯುವಾಗ ಕ್ರಮಬದ್ಧವಾಗಿ ಬೆಳೆಯಬೇಕೆಂದು ಷರತ್ತನ್ನು ವಿಧಿಸಿದ ವಿಜ್ಞಾನಿಗಳು ಸಾಲುಬಿತ್ತನೆ, ರಸಗೊಬ್ಬರದ ಬಳಕೆ, ಕಳೆನಿಯಂತ್ರಣ, ಔಷಧ ಸಿಂಪಡಣೆ ಇತ್ಯಾದಿ ವೈಜ್ಞಾನಿಕ ಮಾರ್ಗದರ್ಶನ ನೀಡಿ ಕಳುಹಿಸಿಕೊಟ್ಟರು

ಅದರಂತೆ ದಾನೇಶ್ ಅವರು ತಮ್ಮ ಭತ್ತದ ಕೊಯ್ಲಿನ ನಂತರ ಎರಡು ಬಾರಿ ಟ್ರಾಕ್ಟರ್ ಮೂಲಕ ಬೇಸಾಯ ಮಾಡಿಸಿ ಭೂಮಿಯನ್ನು ಹದಗೊಳಿಸಿ, ವಿಸ್ತರಣಾ ನಿರ್ದೇಶಕರ ಮಾರ್ಗದರ್ಶನದಂತೆ ಹದಗೊಂಡ ಜಮೀನಿನಲ್ಲಿ ಎರಚಿ ಬಿತ್ತನೆ ಮಾಡುವ ಬದಲು, ೩೦ ಸೆಂ.ಮೀ. ಅಂತರದ ಸಾಲಿನಲ್ಲಿ ಜೊತೆಗೆ ಪೊಟ್ಯಾಷ್, ಡಿಎಪಿ, ರಸಗೊಬ್ಬರಗಳನ್ನು ಸೇರಿಸಿ ಹೆಸರು ತಳಿ ಕೆಕೆಎಂ-೩ ಬೀಜವನ್ನು ಬಿತ್ತನೆ ಮಾಡಿದರು. ನಂತರದಲ್ಲಿ ಏಳೆಂಟು ದಿನಗಳಲ್ಲಿ ಒಂದೆಲೆ, ೧೦-೧೨ ದಿನಗಳಲ್ಲಿ ಎರಡೆಲೆ ೧೫-೨೦ ದಿನಗಳಲ್ಲಿ ಹೆಸರು ಅಚ್ಚ ಹಸುರಾಗಿ ಜಮೀನಿನಲ್ಲಿ ನಳನಳಿಸತೊಡಗಿದ್ದನ್ನು ಕಂಡು ಸಂತೋಷಪಟ್ಟರು.ಇದರ ಮಧ್ಯದಲ್ಲಿ ಕಳೆ ನಿರ್ವಹಣೆಗಾಗಿ ಬೇಸಾಯ ಮಾಡಿಸಿದರೆ ಸಸಿಗಳು ಕಡಿಮೆಯಾಗುವುದೆಂದು ಬೇಸಾಯ ಮಾಡಿಸದೇ ಹಾಗೆಯೇ ಬಿಟ್ಟರು. ನಂತರದಲ್ಲಿ ಅವರು ಫ್ರೋಪಿನೋ ಫಾಸ್ ಔಷಧವನ್ನು ಒಂದು ಲೀ. ನೀರಿಗೆ ೨ ಮಿ.ಲೀ.ನಂತೆ ಸಿಂಪಡಿಸಿದರು. ಅಲ್ಲದೆ ಇಮಿಡಾ ೦.೫ ಮಿ.ಲೀ. ಒಂದು ಲೀ. ನೀರಿಗೆ ಬೆರಸಿ ಸಿಂಪಡಿಸಿದರು. ಹೀಗೆ ನಿರ್ವಹಣೆ ಮಾಡಿದ ೩೫ರಿಂದ ೪೦ ದಿನಗಳ ಅಂತರದಲ್ಲಿ ಹೆಸರಿನ ಹೂವು ಮತ್ತು ಹೀಚುಗಳು ಕಾಣಿಸತೊಡಗಿದವು. ಈಗ ನೀರನ್ನು ಕೊಡುವುದು ಸಕಾಲ ಎಂದು ತಿಳಿದು ಇವರು ತಮ್ಮ ಕೊಳವೆ ಬಾವಿಯಿಂದ ನೀರನ್ನು ಪೂರೈಸಿದರು

4

ಕೆಕೆಎಂ-೩ ತಳಿಯ ವಿಶೇಷತೆಯೆಂದರೆ ಹಳದಿ ನಂಜುರೋಗ, ಬೂದಿ ರೋಗ ಮತ್ತು ಎಲೆಚುಕ್ಕೆ ರೋಗ ಹಾಗೂ ಹೇನು, ಎಲೆ ತಿನ್ನುವ ಹುಳ, ಕಾಯಿಕೊರಯುವ ಹುಳಗಳ ಬಾಧೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ಈ ತಳಿ ಹೊಂದಿದೆ. ಈ ತಳಿಯು ಕಡಿಮೆ ಅವಧಿಯದ್ದಾಗಿರುವುದರಿಂದ ಮುಂಗಾರು ಪೂರ್ವ ಮತ್ತು ತಡ ಮುಂಗಾರಿನಲ್ಲಿ ಬಿತ್ತಲೂ ಸೂಕ್ತ. ಅಲ್ಲದೇ ಮುಂಗಾರಿನಲ್ಲಿ ಅಂತರ ಬೆಳೆಯಾಗಿ ಬೆಳೆಯಲೂ ಸೂಕ್ತ. ನೋಡುನೋಡುತ್ತಲೇ ಈ ತಳಿಯು ೬೦ ರಿಂದ ೬೫ ದಿನಗಳ ಅಂತರದಲ್ಲಿ ಕಟಾವಿಗೆ ಬಂದಿದ್ದು, ಪುಟ್ಟ ಗಿಡಗಳಲ್ಲಿ ಅಧಿಕ ಕಾಯಿ ಗೊಂಚಲುಗಳಿದ್ದು, ವಿಶೇಷ. ಇಂತಹ ವಿಶಿಷ್ಟ ಗುಣವನ್ನುಳ್ಳ ತಳಿಯು ಪ್ರತಿ ಎಕರೆಗೆ ಸರಾಸರಿ ೩-೪ ಕ್ವಿಂಟಾಲ್ ಉತ್ಪನ್ನವನ್ನು ಪಡೆಯಬಹುದಾಗಿರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದರು. ಸದರಿ ರೈತ ದಾನೇಶ್ ಅವರು ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ೫ ಕ್ವಿಂಟಾಲ್ ಹೆಸರಿನ ಉತ್ಪಾದನೆಯನ್ನು ಪಡೆದಿರುತ್ತಾರೆ. ಇಂತಹ ಅಪರೂಪದ ಸಾಧನೆ ಮಾಡಿರುವ ದಾನೇಶ್ ಅವರು ಜಮೀನಿಗೆ ಸುತ್ತಮುತ್ತಲಿನ ರೈತರು ಭೇಟಿ ಕೊಟ್ಟು ಮಾಹಿತಿಯನ್ನು ಪಡೆಯುತ್ತಿದ್ದಾರೆ

6

ಉತ್ತಮ ಫಲಿತಾಂಶವನ್ನು ನಾಲ್ಕಾರು ಜನರಿಗೆ ತೋರಿಸಲು ವಿಶ್ವವಿದ್ಯಾಲಯದವತಿಯಿಂದ ಕ್ಷೇತ್ರೋತ್ಸವವನ್ನು ಆಚರಿಸಲಾಯಿತು. ನನಗೆ ಅರಿವಾದ ಅಂಶಗಳೆಂದರೆ ಬರದ ಅವಧಿಯಲ್ಲಿಯೂ ಅಲ್ಪಾವಧಿ ತಳಿಯಾಗಿ ಕೆಕೆಎಂ-೩ ಹೆಸರು ಉತ್ತಮ ಬೆಳೆ ರೈತನಿಗೆ ವರದಾನವಾಗಬಲ್ಲದು. ಬಿತ್ತನೆಗೆ ಮತ್ತು ಹೂ ಬಿಡುವ ಸಂದರ್ಭದಲ್ಲಿ ನೀರು ನೀಡಿದರೆ ಸಾಕು ಉತ್ತಮ ಫಸಲು ಪಡೆಯಬಹುದು. ಅಲ್ಲದೆ ನನಗೆ ಮಾರ್ಗದರ್ಶನ ಮಾಡಿದ ಎಲ್ಲಾ ಸಂಶೋಧಕರಿಗೆ ನನ್ನ ಅಭಿನಂದನೆಗಳು ಎಂದು ಹೇಳಲು ದಾನೇಶ್ ಅವರು ಮರೆಯಲಿಲ್ಲ. ಇಂತಹ ಬರಗಾಲದ ನಡುವೆಯೂ ಭತ್ತದ ನಂತರ ಉಳಿಕೆ ತೇವಾಂಶದಲ್ಲಿ ಹೆಸರಿನ ಬೆಳೆಯ ಉತ್ಪನ್ನವನ್ನು ಅಧಿಕವಾಗಿ ಪಡೆಯಲು ಕಾರಣವಾದ ತಳಿ ಕೆ.ಕೆ.ಎಂ.-೩ ತಳಿಯು ರೈತರ ಬಾಳಿನ ಆಶಾಕಿರಣವಾಗಿದೆ