ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೩

ಒಣದ್ರಾಕ್ಷಿ ಉತ್ಪಾದನೆ

ಡಾ. ವಿಜಯಮಹಾಂತೇಶ
೭೪೧೧೬೨೮೪೭೦
1

ರೈತರು ಕೇವಲ ತಾಜಾ ಹಣ್ಣು ಮಾರುವುದರಿಂದ ಅಲ್ಲದೆ ಒಣದ್ರಾಕ್ಷಿ ಉತ್ಪಾದನೆ ಮಾಡಿ ಹೆಚ್ಚಿನ ಲಾಭ ಪಡೆಯಬಹುದು. ಹಲವು ಬಾರಿ ಏಕಕಾಲದಲ್ಲಿ ಹೆಚ್ಚು ಹಣ್ಣು ಮಾರುಕಟ್ಟೆಯಲ್ಲಿ ಬಂದಾಗ ಬೇಡಿಕೆ ಮತ್ತು ಬೆಲೆ ಕುಸಿದಾಗ ದ್ರಾಕ್ಷಿ ಬೆಳೆಗಾರರು ಹೆದರಬೇಕಾಗಿಲ್ಲ ಬದಲಾಗಿ ಒಣದ್ರಾಕ್ಷಿಯನ್ನು ತಯಾರಿಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಸದ್ಯಕ್ಕೆ ನಮ್ಮ ದೇಶ ಪ್ರತಿ ವರ್ಷ ಬೇರೆ ದೇಶದಿಂದ ಕೋಟಿ ಕೋಟಿ ಮೌಲ್ಯದ ಒಣದ್ರಾಕ್ಷಿಯನ್ನು ಆಮದು ಮಾಡಿಕೊಳ್ಳುತ್ತಿದೆ. ಆದ್ದರಿಂದ ನಮ್ಮಲ್ಲೆ ಒಣದ್ರಾಕ್ಷಿ ತಯಾರಿಕೆ ಮಾಡಿದರೆ ಆಮದು ಸುಂಕವನ್ನು ಉಳಿಸಬಹುದು. ಈ ಲೇಖನದಲ್ಲಿ ಒಣದ್ರಾಕ್ಷಿ ತಯಾರಿಕೆಯ ವೈಜ್ಞಾನಿಕ ವಿಧಾನವನ್ನು ವಿವರಿಸಲಾಗಿದೆ.

ಒಣದ್ರಾಕ್ಷಿ ತಯಾರಿಕೆಯಲ್ಲಿ ದ್ರಾಕ್ಷಿ ಹಣ್ಣಿನ ಗುಣಮಟ್ಟ

 • ಬೀಜ ರಹಿತ ತಿಳಿ ಹಳದಿ ಹಣ್ಣುಗಳ ತಳಿಗಳು ಹೆಚ್ಚು ಸೂಕ್ತ
 • ಒಣದ್ರಾಕ್ಷಿಯ ಇಳುವರಿ ಮತ್ತು ಗುಣಮಟ್ಟ, ದ್ರಾಕ್ಷಿ ಹಣ್ಣಿನ ಗುಣಮಟ್ಟದ ಮೇಲೆ ಅವಲಂಬಿಸಿದೆ
 • ಪೂರ್ತಿ ಹಣ್ಣಾದ ಮತ್ತು ಹೆಚ್ಚು ಸಕ್ಕರೆ ಅಂಶ (೨೨ - ೨೪೦ ಬ್ರಿಕ್ಸ್) ಹೊಂದಿದ ದ್ರಾಕ್ಷಿ ಹಣ್ಣುಗಳನ್ನು ಬಳಸಬೇಕು.
 • ಥಾಮ್ಸನ್ ಸೀಡ್ಲೆಸ್ ತಳಿ ಒಣದ್ರಾಕ್ಷಿ ತಯಾರಿಕೆಗೆ ಸೂಕ್ತ.
 • ಹೆಚ್ಚಾಗಿ ಬಿಬ್ಬರ್ಲಿಕ ಆಮ್ಲ ಉಪಚರಿಸಿದ ದ್ರಾಕ್ಷಿ ಗೊಂಚಲುಗಳು ಒಳ್ಳೆಯದಲ್ಲ
 • ದ್ರಾಕ್ಷಿ ಗೊಂಚಲುಗಳ ಸಿದ್ಧತೆ

  ಹಣ್ಣನ್ನು ಕೊಯ್ಲು ಮಾಡಿದ ನಂತರ ರೋಗಬಾಧೆಗೊಳಗಾದ ಹಣ್ಣು ಮತ್ತು ಕಾಯಿಗಳನ್ನು ಗೊಂಚಲಿನಿಂದ ಇನ್ನುಳಿದ ಹಣ್ಣುಗಳಿಗೆ ಧಕ್ಕೆಯಾಗದ ರೀತಿಯಲ್ಲಿ ತೆಗೆಯಬೇಕು.

  11

  ದ್ರಾಕ್ಷಿ ಗೊಂಚಲುಗಳ ಉಪಚಾರ

 • ದ್ರಾಕ್ಷಿ ಗೊಂಚಲುಗಳನ್ನು ಸ್ವಚ್ಛ ನೀರಿನಲ್ಲಿ ಅದ್ದಿ ತೊಳೆಯಬೇಕು. ನಂತರ ಗೊಂಚಲುಗಳನ್ನು ಶೇ. ೦೩ ಕುದಿಯುವ ಕಾಸ್ಟಿಕ್ ಸೋಡಾ (ಸೋಡಿಯಂ ಹೈಡ್ರಾಕ್ಸೈಡ್) ದ್ರಾವಣದಲ್ಲಿ ಬೇಗನೆ (೩-೪ ಸೆಕೆಂಡು) ಅದ್ದಿ ತೆಗೆಯಬೇಕು.
 • ನಂತರ ಕೂಡಲೇ ಗೊಂಚಲುಗಳನ್ನು ತಣ್ಣನೆಯ ನೀರಿನಲ್ಲಿ ಅದ್ದಿ ತೆಗೆಯಬೇಕು.
 • ಹೀಗೆ ಉಪಚರಿಸಿದ ಗೊಂಚಲುಗಳನ್ನು ಒಂದೇ ಪದರಿನಲ್ಲಿ ಮರದ ಅಥವಾ ಸ್ಟೇನ್ಲೆಸ್ ಸ್ಟೀಲ್ ಜಾಳಿಗೆಯಿಂದ ಮಾಡಿದ ತಟ್ಟೆಯಲ್ಲಿ ಸರಿಯಾಗಿ ಹರಡಿ, ನಂತರ ಅವುಗಳನ್ನು ಗಾಳಿ ಯಾಡದ ಗಂಧಕದ ಪೆಟ್ಟಿಗೆ ಅಥವಾ ಕೋಣೆಯಲ್ಲಿಡಬೇಕು.
 • ಗಂಧಕದ ಪ್ರಮಾಣ ಒಂದು ಕಿಲೋ ದ್ರಾಕ್ಷಿಗೆ ೨ -೩ ಮಿ.ಗ್ರಾಂ ನಷ್ಟಿರಬೇಕು. ಹೀಗೆ ಉತ್ಪಾದಿಸಲಾದ ಗಂಧಕದ ಹೊಗೆಯಲ್ಲಿ ಗೊಂಚಲುಗಳನ್ನು ೨ ರಿಂದ ೩ ಗಂಟೆಗಳವರೆಗೆ ಇಟ್ಟು ನಂತರ ಹೊರತೆಗೆಯಬೇಕು.
 • ಈ ಉಪಚಾರದ ಮುಖ್ಯ ಉದ್ದೇಶ ಒಣದ್ರಾಕ್ಷಿಯ ಬಣ್ಣ ಕಾಪಾಡಲು ಹಾಗೂ ಶೇಖರಣೆ ಅವಧಿಯನ್ನು ಹೆಚ್ಚಿಸಲು. ಇದರ ಉಪಚಾರ ಮಾಡುವಾಗ ಗಮನಿಸಬೇಕಾದ ವಿಚಾರ.

 • ಗಂಧಕದ ಹೊಗೆ ಯನ್ನು ಸೇವಿಸ ಬಾರದು, ಕಬ್ಬಿಣದ ತಂತಿಯಿಂದ ಮಾಡಿದ ಜಾಳಿಗೆ ಹಣ್ಣು ಇಡಲು ಉಪ ಯೋಗಿಸಬಾರದು, ಪ್ರತಿ ಸಲ ಹೊಗೆ ಹಾಕುವುದಕ್ಕಿಂದ ಮುಂಚೆ ಮತ್ತು ನಂತರ ಪೆಟ್ಟಿಗೆಯಲ್ಲಿ ಗಾಳಿಯಾಡುವಂತೆ ಬಾಗಿಲನ್ನು ತೆರೆದಿಡಬೇಕು.
 • ಈ ರೀತಿ ಉಪಚರಿಸಿದ ದ್ರಾಕ್ಷಿ ಹಣ್ಣಿನಿಂದ ಬಂಗಾರ ಹಳದಿ ಬಣ್ಣದ ದ್ರಾಕ್ಷಿಯನ್ನು ಪಡೆಯಬಹುದು

  ದ್ರಾಕ್ಷಿ ಗೊಂಚಲುಗಳನ್ನು ಇಥೈಲ್ ಓಲಿಯೇಟ್ (ಶೇ. ೧.೫ ರಿಂದ ೨.೦) ಮತ್ತು ೨೫ ಗ್ರಾಂ ಪೋಟ್ಯಾಸಿಯಂ ಕಾರ್ಬೋನೇಟ್ ದ್ರಾವಣದಲ್ಲಿ ೪-೫ ನಿಮಿಷ ಅದ್ದಿ ತೆಗೆಯಬೇಕು. ಈ ಉಪಚಾರದಿಂದ ಹಣ್ಣುಗಳ ಮೇಲ್ಮೈಯಲ್ಲಿ ಸೂಕ್ಷ್ಮವಾದ ಬಿರುಕುಗಳು ಉಂಟಾಗಿ ಹಣ್ಣುಗಳು ಬೇಗನೆ ಒಣಗಲು ಸಹಕಾರಿಯಾಗುವುದಲ್ಲದೇ, ಒಣಗಿದ ದ್ರಾಕ್ಷಿಯು ಹಸಿರು ಮಿಶ್ರಿತ ಕಂದು ಬಣ್ಣವನ್ನು ಹೊಂದಿರುವುದು.

  ಒಣ ದ್ರಾಕ್ಷಿಯ ಬಣ್ಣ ಅವುಗಳನ್ನು ಒಣಗಿಸುವ ವಿಧಾನದ ಮೇಲೆಯೆ ಅವಲಂಬಿಸಿರುವುದು. ಇದರಲ್ಲಿ ಎರಡು ವಿಧ

  (ಅ) ನೆರಳಿನಲ್ಲಿ ಒಣಗಿಸುವುದು: ಉಪಚಾರ ಮಾಡಿದ ಗೊಂಚಲುಗಳನ್ನು ಮರದ ಅಥವಾ ಪ್ಲಾಸ್ಟಿಕ್ ತಟ್ಟೆಯಲ್ಲಿ ಹರಡಿ ಚನ್ನಾಗಿ ಗಾಳಿಯಾಡುವ ಸ್ಥಳದಲ್ಲಿ ಮತ್ತು ನೆರಳಿನಲ್ಲಿಡಬೇಕು. ಹೀಗೆ ಒಣಗಿಸಲು ಸುಮಾರು ೧೦-೨೦ ದಿನ ಬೇಕು. ಈ ರೀತಿ ಒಣಗಿಸಿದ ದ್ರಾಕ್ಷಿ ಸುಂದರ ಹೊಂಬಣ್ಣ ಬರುವುದು.

  (ಆ) ವಿದ್ಯುತ್ ಚಾಲಿತ ಒಣಗಿಸುವ ಯಂತ್ರ ಉಪಯೋಗಿಸುವುದು: ಗಂಧಕದ ಹೊಗೆಯಿಂದ ಉಪಚರಿಸಿದ ಗೊಂಚಲುಗಳನ್ನು ತಟ್ಟೆಯಲ್ಲಿ ಹರಡಿ ಅವುಗಳನ್ನು ಓವನ್ನಲ್ಲಿ ಇಡಬೇಕು. ಮೊದಲು ೭೦೦ ಸೆಲ್ಸಿಯಸ್ ಉಷ್ಣತಾಮಾನದಲ್ಲಿ ಸುಮಾರು ೩ ತಾಸು ಒಣಗಿಸಬೇಕು. ನಂತರ ೫೦೦ ಸೆಲ್ಸಿಯಸ್ ಉಷ್ಣತಾಮಾನದಲ್ಲಿ ಪೂರ್ತಿಯಾಗಿ ಒಣಗುವವರೆಗೆ ಇಡಬೇಕು. ಹೀಗೆ ಒಣಗಿಸಲು ಸುಮಾರು ೧೬-೨೦ ಗಂಟೆ ಬೇಕಾಗುವುದು. ಈ ರೀತಿಯಲ್ಲಿ ಒಣಗಿಸಿದ ದ್ರಾಕ್ಷಿಯು ತಿಳಿ ಹಸಿರು ಬಣ್ಣದಾಗಿದೆ.

  ಒಣದ್ರಾಕ್ಷಿ ಸಂಸ್ಕರಣೆ

  ದ್ರಾಕ್ಷಿ ಒಣಗಿದ ನಂತರ ಅವುಗಳನ್ನು ಗೊಂಚಲಿನಿಂದ ಬೇರ್ಪಡಿಸಿ ಉಗುರು ಬೆಚ್ಚಗಿನ ನೀರಿನಲ್ಲಿ ಶೀಘ್ರವಾಗಿ (೧-೨ ನಿಮಿಷ) ಉಪಚರಿಸಬೇಕು. ಇದರಿಂದ ಒಣ ದ್ರಾಕ್ಷಿಯ ಮೇಲಿನ ಧೂಳು ಮತ್ತು ಜಿಡ್ಡನ್ನು ತೆಗೆಯಲು ಸಹಕಾರಿ. ನಂತರ ಪೊಟ್ಯಾಸಿಯಂ ಮೆಟಾ ಬೈ ಸಲ್ಪೇಟ್ ದ್ರಾವಣದಲ್ಲಿ (೨ಗ್ರಾಂ/ ಲೀಟರ್ ನೀರು) ೧೫ ರಿಂದ ೩೦ ಸೆಕೆಂಡುಗಳ ಕಾಲ ಅದ್ದಿ ತೆಗೆಯಬೇಕು. ಇದರಿಂದ ದ್ರಾಕ್ಷಿಯು ಒಂದಕ್ಕೊಂದು ಅಂಟಿಕೊಳ್ಳುವುದನ್ನು ತಡೆಯಬಹುದು. ಹೀಗೆ ಉಪಚರಿಸಿದ ದ್ರಾಕ್ಷಿಯನ್ನು ಸುಮಾರು ೧ ಘಂಟೆ ಕಾಲ ತೆಳ್ಳಗೆ ಹರಡಿ ಗಾಳಿಯಿಂದ ಒಣಗಿಸಬೇಕು. ನಂತರ ಒಣಗಿದ ದ್ರಾಕ್ಷಿಯನ್ನು ಪೆಟ್ಟಿಗೆಗಳಲ್ಲಿ ತುಂಬಿ ಒಂದು ತಿಂಗಳ ಕಾಲ ಇಡಬೇಕು. ಇದರಿಂದ ದ್ರಾಕ್ಷಿಯಲ್ಲಿಯ ತೇವಾಂಶ ಸಮತೋಲನವನ್ನು ಕಾಯ್ದುಕೊಳ್ಳಲು ಸಹಕಾರಿ. ಹೀಗೆ ದ್ರಾಕ್ಷಿಯಲ್ಲಿ ತೇವಾಂಶ ಶೇ. ೧೫-೧೬ ರಷ್ಟಿರಬೇಕು.

  26

  ಒಣದ್ರಾಕ್ಷಿ ಪ್ಯಾಕಿಂಗ್ ಮತ್ತು ಶೇಖರಣೆ

  ಸಂಸ್ಕರಿಸಿದ ಒಣ ದ್ರಾಕ್ಷಿಯನ್ನು ೪೦೦ ಗೇಜ್ ದಪ್ಪ ಇರುವ ಪಾಲಿಥೀನ್ ಚೀಲಗಳಲ್ಲಿ ಹಾಕಿ ಸೀಲ್ ಮಾಡಿ ರಟ್ಟಿನ ಪೆಟ್ಟಿಗೆಗಳಲ್ಲಿ ಶೇಖರಿಸಿಡಬಹುದು. ಒಣದ್ರಾಕ್ಷಿಯ ಚೀಲಗಳನ್ನು ತಂಪು ಹವೆಯಲ್ಲಿ ಅಂದರೆ ೫೦ ಸೆಲ್ಸಿಯಸ್ ಉಷ್ಣತಾಮಾನದಲ್ಲಿ ಶೇಖರಿಸಿ ಇಟ್ಟಲ್ಲಿ ದ್ರಾಕ್ಷಿಯ ಬಣ್ಣ ಮತ್ತು ಸ್ವಾದ ಬಹಳ ದಿನ ಇರುವುದು.

  ಒಣದ್ರಾಕ್ಷಿ ಇಳುವರಿ

  ಒಣದ್ರಾಕ್ಷಿಯ ಇಳುವರಿಯು ತಾಜಾಹಣ್ಣಿನ ಟಿ.ಎಸ್.ಎಸ್ ಮತ್ತು ಒಣದ್ರಾಕ್ಷಿಯ ತೇವಾಂಶಗಳ ಪ್ರಮಾಣವನ್ನು ಅವಲಂಬಿಸಿದೆ. ಒಣದ್ರಾಕ್ಷಿಯ ತೇವಾಂಶ ಶೇ.೧೫-೧೬ ಇದ್ದು ಟಿ.ಎಸ್.ಎಸ್ ೨೦೦ ರಿಂದ ೨೪೦ ಬ್ರಿಕ್ಸ್ ಇದ್ದರೆ ಪ್ರತಿ ೧೦೦ ಕಿ.ಗ್ರಾಂ ತಾಜಾ ದ್ರಾಕ್ಷಿ ಹಣ್ಣಿನಿಂದ ಸುಮಾರು ೨೫ ಕಿ.ಗ್ರಾಂ ಒಣದ್ರಾಕ್ಷಿಯನ್ನು ಪಡೆಯಬಹುದು.ಈ ರೀತಿಯಾಗಿ ರೈತರು ಒಣದ್ರಾಕ್ಷಿಯನ್ನು ತಯಾರಿಸಿ ರಫ್ತು ಮಾಡುವುದರ ಮೂಲಕ ಅಥವಾ ದೇಶಿಯ ಮಾರುಕಟ್ಟೆಗೆ ಮಾರುವುದರ ಮೂಲಕ ಹೆಚ್ಚಿನ ಬೆಲೆ ಪಡೆದು ಅಧಿಕ ಲಾಭ ಪಡೆಯಬಹುದು.

  ದ್ರಾಕ್ಷಿಯ ಪ್ರಮುಖ ಔಷಧಿ ಉಪಯೋಗಗಳು

 • ೧) ದ್ರಾಕ್ಷಿ & ನೆಲ್ಲಿಕಾಯಿಗಳನ್ನು ಸಮಭಾಗದಲ್ಲಿ ತೆಗೆದುಕೊಂಡು ಕುದಿಸಿ ರುಬ್ಬಿ ಸ್ವಲ್ಪ ಶುಂಠಿ ಸೇರಿಸಿ ಜೇನುತುಪ್ಪ ದೊಂದಿದೆ ನೆಕ್ಕುವುದರಿಂದ ಮೂರ್ಛೆದೂರವಾಗುವುದು.
 • ೨) ೧೦೦ ರಿಂದ ೨೦೦ ಗ್ರಾಂ ಒಣದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದು ಸ್ವಲ್ಪ ಜೇನುತುಪ್ಪ ಸೇರಿಸಿ ನಿತ್ಯ ೫-೧೦ ಗ್ರಾಂ ತಿಂದರೆ ತಲೆಸುತ್ತು ಕಡಿಮೆಯಾಗುವುದು

  ೩) ಒಣದ್ರಾಕ್ಷಿ ೧೦, ನೇರಳೆ ಎಲೆ ೨-೩ ಸೇರಿಸಿ ಕುದಿಸಿ ಕಷಾಯ ಮಾಡಿ ಮುಕ್ಕಳಿಸುವುದರಿಂದ ಬಾಯಿರೋಗ ನಿವಾರಣೆಯಾಗುವುದು.

  ೪) ದ್ರಾಕ್ಷಿಯ ೨ ತೊಟ್ಟು ರಸ ಮೂಗಿನಿಂದ ವಾಸನೆ ತೆಗೆದುಕೊಳ್ಳುವುದರಿಂದ ಮೂಗು ಒಡೆಯುವುದು ನಿವಾರಣೆಯಾಗುವುದು.

  ೫) ದ್ರಾಕ್ಷಿ, ನೆಲ್ಲಿಕಾಯಿ, ಖರ್ಜೂರ, ಹಿಪ್ಪಳಿ & ಮೆಣಸು ಸಮಬಾಗದಲ್ಲಿ ತೆಗೆದುಕೊಂಡು ಚಟ್ನಿ ಮಾಡಿ ಸೇವಿಸಿದರೆ ಒಣಕೆಮ್ಮು ನಾಯಿಕೆಮ್ಮು ವಾಸಿಯಾಗುವುದು.

  ೬) ಹೃದಯದ ನೋವಿದ್ದರೆ ಒಣದ್ರಾಕ್ಷಿ ೩ ಭಾಗ, ಜೇನುತುಪ್ಪ ೧ ಭಾಗ & ಲವಂಗ ೧/೨ ಭಾಗ ಸೇರಿಸಿ ಸೇವಿಸಬೇಕು.

  ೭) ಮೆಣಸಿನ ಜೊತೆ ೫-೧೦ ಒಣದ್ರಾಕ್ಷಿಯನ್ನು ಅರೆದು ಕುಡಿದರೆ ಮೂತ್ರಾಶಯದ ಕಲ್ಲು ನಿವಾರಣೆಯಾಗುತ್ತದೆ.

  ೮) ಒಣದ್ರಾಕ್ಷಿ ೧೨, ಉತ್ತತ್ತಿ ೫, ಹಾಲಿನಲ್ಲಿ ಹಾಕಿ ಪಾಯಸ ಮಾಡಿ ಸೇವಿಸಿದರೆ ರಕ್ತ ವೃದ್ಧಿಯಾಗುವುದು.

  ೯) ೧೦-೨೦ ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನಸಿ ೧೦ ಗಂಟೆ ನಂತರ ಅರೆದು ಸೋಸಿ ಅದಕ್ಕೆ ಸ್ವಲ್ಪ ಬಿಳಿ ಜೀರಿಗೆ ಪುಡಿ & ಕಲ್ಲು ಸಕ್ಕರೆ ಸೇರಿಸಿ ಕುಡಿದರೆ ಪಿತ್ತದಾಹ ಕಡಿಮೆಯಾಗುವುದು.

  ೧೦)ದ್ರಾಕ್ಷಿ ಎಲೆಗಳಿಂದ ಪಡೆದ ಕಹಿರಸವನ್ನು ಗಂಟಲು ಕೆರೆತ ನಿವಾರಣೆಗಾಗಿ ಉಪಯೋಗಿಸುವರು.

  ೧೧) ದ್ರಾಕ್ಷಿಯ ಎಳೆಕಾಂಡದಿಂದ ಬಂದ ರಸವನ್ನು ಅತಿಸಾರ ಬೇಧಿ, ಚರ್ಮರೋಗ & ಕಣ್ಣು ಬೇನೆಗಳ ನಿವಾರಣೆಗೆ ಉಪಯೋಗಿಸುವರು.

  ೧೨) ದ್ರಾಕ್ಷಿ ಹಣ್ಣಿನಿಂದ ತಯಾರಿಸಿದ ದ್ರಾಕ್ಷಾರಸ ಚೇತೋಹಾರಿ, ಮೂತ್ರ ಉತ್ತೇಜನಕಾರಿ ಮತ್ತು ನುಣುಪುಕಾರಿ ಎನ್ನಿಸಿದೆ.

  ೧೩) ಒಣದ್ರಾಕ್ಷಿ, ತುಪ್ಪ, ಖುರ್ಜೂರ, ಕಲ್ಲು ಸಕ್ಕರೆ, ಜೇನುತುಪ್ಪ, ಹಿಪ್ಪಳಿ ಇವುಗಳ ಚಟ್ನಿ ಮಾಡಿ ಸೇವಿಸಿದರೆ ಕೆಮ್ಮು, ಶ್ವಾಸ, ಜೀರ್ಣ ಜ್ವರ & ಕ್ಷಯರೋಗ ನಿವಾರಣೆಯಾಗುತ್ತದೆ

  ೧೪)ಒಣದ್ರಾಕ್ಷಿ ೯, ಬೀಜವಿಲ್ಲದ ಒಣದ್ಾಕ್ಷಿ ೫, ಬ್ರಾಹ್ಮಿ ೩ ಗ್ರಾಂ, ಸಣ್ಣ ಯಾಲಕ್ಕಿ ೮, ಕರಬೂಜದ ತಿರುಳು ೪ ಗ್ರಾಂ. ಬಾದಾಮಿ ೧೦ & ಕರಿಜಾಲಿಮರದ ಎಲೆ ೩ ಗ್ರಾಂ, ಅರೆದು ಕುಡಿದರೆ ತಾಪ ಕಡಿಮೆಯಾಗುವುದು & ಶಕ್ತಿವರ್ಧಿಸುವುದು.

  ಇವು ಕೆಲವೇ ಕೆಲವು ಔಷಧೀಯ ಗುಣಗಳು ಇವುಗಳಲ್ಲ್ಲದೆ ಹಲವಾರು ಉಪಯೋಗಗಳಿವೆ. ಒಟ್ಟಿನಲ್ಲಿ ದ್ರಾಕ್ಷಿ ಒಂದು ಅತ್ಯುತ್ತಮ ಹಣ್ಣಾಗಿದ್ದು ದ್ರಾಕ್ಷಿ ದೊರೆಯುವ ಕಾಲದಲ್ಲಿ ದರದ ಬಗ್ಗೆ ಯೋಚಿಸದೆ ಹೇರಳವಾಗಿ ದ್ರಾಕ್ಷಿ ಹಣ್ಣುಗಳನ್ನು ಎಲ್ಲಾ ವಯಸ್ಸಿನವರು ಯಥೇಚ್ಚವಾಗಿ ಸೇವಿಸಿ ಉತ್ತಮ ಆರೋಗ್ಯವನ್ನು ಹೊಂದಬೇಕು.