ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೩

ಮಣ್ಣ ಮಡಿಲಲ್ಲಿ

ಆರೋಗ್ಯಕ್ಕೆ ಉತ್ತಮ ಈ ಮಡಿಕೆ ಬೆಲ್ಲ ( ಕಬ್ಬಿನ ಹಾಲಿನಿಂದ ನೇರ ಬೆಲ್ಲ; ಏನನ್ನೂ ಬೆರಸುವುದಿಲ್ಲ ಇಲ್ಲಿ)

image_
ಸಂಪಾದಕರು
1

ಆನಂದಪುರದಿಂದ ಮಾರುತಿ ಪುರ ಕಡೆ ಹೊರಟರೆ ರಸ್ತೆಯಲ್ಲಿ ಒಂದೆಡೆ ಅದ್ಭುತ ಬೆಲ್ಲದ ವಾಸನೆ ಮೂಗಿಗೆ ತಾಗದಿರದು. ಅಲ್ಲೆ ಬಲಕ್ಕೆ ತಿರುಗಿ ನೋಡಿದರೆ ಸಣ್ಣದೊಂದು ಶ್ರೀ ಮಾತಾ ಸಾವಯವ ಬೆಲ್ಲದ ತಯಾರಿಕಾ ಘಟಕ ಎಂಬ ಬೋರ್ಡ್ಪ ಕಾಣುತ್ತದೆ. ಕಣ್ಣು ಮುಂದಕ್ಕೆ ಹಾಯಿಸಿದರೆ ತಿಳಿ ಹಳದಿ ನೆಲವೇನೋ ಅನ್ನುವಂತೆ ಹಿಂಡಿದ ಕಬ್ಬಿನ ಸಿಪ್ಪೆ ನಾಲ್ಕಾರು ಜನ ಮೇರೆ ಕೋಲು ಹಿಡಿದು ಸಿಪ್ಪೆ ತಿರುಗಿಸುತ್ತಾ ಇರುತ್ತಾರೆ. ಅಲ್ಲೆ ಪುಟ್ಟ ತಗಡಿನ ಶೆಡ್ ಅದರ ಮೇಲೆ ಎಲ್ಲೆಡೆ ಆವಿ ಹೊಗೆಯ ದರ್ಶನ. ಶೆಡ್ ಒಳಗಿರುವ ಆಕೃತಿಗಳು ಆವಿಯಲ್ಲಿ ಮಂಜು ಮಂಜು. ಹಾಗೆ ಮುಂದೆ ಸಾಗಿ ಒಳ ಹೋಗುತ್ತಿದ್ದಂತೆ ಹಿರಿಯರೊಬ್ಬರು ಬನ್ನಿ ಮಾರಾಯರಾ ಅಂತ ಎದ್ದು ನಮ್ಮ ಸ್ವಾಗತಿಸಿದರು ಪಕ್ಕದಲ್ಲಿ ಇದ್ದ ಗೆಳೆಯ ಕಾರಂತರು ಇವರೆ ಮಂಜುನಾಥ ಹೆಗ್ಗಡೆ ಎಂದು ಪರಿಚಯಿಸಿದರು. ಅಲ್ಲೆ ಬೆಲ್ಲದ ಘಮದ ನಡುವೆ ಕುರ್ಚಿ ಹಾಕಿ ಮಂಜುನಾಥ ಹೆಗ್ಗಡೆಯವರ ಮಡಿಕೆ ಬೆಲ್ಲದ ಸಾಧನೆ ಪಥವನ್ನ ನೇಗಿಲ ಮಿಡಿತಕ್ಕೆ ದಾಖಲಿಸಲು ಸಿದ್ಧನಾದೆ.

34

ಕಳೆದ ೩೦ ವರ್ಷದಿಂದ ಆರೋಗ್ಯಪೂರ್ಣ ಬೆಲ್ಲ ಹಂಚುವ ಕಾರ್ಯ ಹೆಗ್ಗಡೆಯವರದ್ದು. ಇವರನ್ನ ಅವಲಂಬಿಸಿದ ಸಾವಿರಾರು ಬೆಳೆಗಾರರು ಹಾಗೂ ಬೆಲ್ಲ ಬಳಸುವವರ ಬಳಗವಿದೆ. ಇವರ ಬೆಲ್ಲ ತಯಾರಿಕೆ ಬಹಳ ವಿಶಿಷ್ಠ. ಯಾವುದೇ ರಾಸಾಯನಿಕ ಅಷ್ಟೇ ಏಕೆ ಸಾವಯವ ಸಹ ಬೆರಸದೆ ಶುದ್ಧ ಕಬ್ಬಿನ ರಸವೊಂದರಿಂದಲೇ ಬೆಲ್ಲ ತಯಾರಿಸುವ ಕಲೆ ಕರಗತ ಮಾಡಿಕೊಂಡಿರುವ ಹೆಗ್ಗಡೆಯವರ ಬೆಲ್ಲದ ರುಚಿ ಒಮ್ಮೆ ನೋಡಿದರೆ ಅದರ ದಾಸರಾಗಿ ಬಿಡುತ್ತೇವೆ. ಅಯ್ಯೋ ಬಹಳ ಮಂದಿ ಸಾವಯವ ಹೆಸರಲ್ಲಿ ಏನೆಲ್ಲಾ ಹಾಕಿಯೇ ಕೊಡುತ್ತಾರೆ ಅಂತಾರೆ. ಆದ್ರೆ ಕಬ್ಬು ಹಾಲುಗರೆದು ಕೊಪ್ಪರಿಗೆಗೆ ಹಾಕಿ ಬೆಲ್ಲ ಡಬ್ಬ ಸೇರುವವರೆಗೆ ನೋಡಿದೆ ಎಲ್ಲೂ ಏನನ್ನೂ ಬೆರಸದೆ ಹಾಲು ಬೆಲ್ಲವಾದಾಗ ಅಚ್ಚರಿಯಿಂದ ಹೆಗ್ಗಡೆಯವರಿಗೆ ಕೇಳಿದೆ.

ಏನು ನಿಮ್ಮ ಸಾಧನೆಯ ಗುಟ್ಟು?

78

೬೦ ಡಬ್ಬ ಹಾಲು ಕೊಪ್ಪರಿಗೆಗೆ ಹಾಕಿ ಎರಡರಿಂದ ಮೂರು ಗಂಟೆ ಕುದಿಸಿದರೆ ಬೆಲ್ಲ ಬರುತ್ತೆ. ಒಂದೇ ಹದದ ಉಷ್ಣತೆ ಕಾಪಾಡುವುದೇ ಗುಣಮಟ್ಟದ ಗುಟ್ಟು. ೬ ಡಬ್ಬ ಹಾಲು ತನ್ನೆಲ್ಲಾ ತೇವಾಂಶ ಕಳೆದು ಬೆಲ್ಲವಾದಾಗ ಒಂದು ಡಬ್ಬ ಬೆಲ್ಲ ಸಿದ್ಧವಾಗುತ್ತದೆ. ದಿನಕ್ಕೆ ೨೦ ಟನ್ ಕಬ್ಬು ಅರೆಯುತ್ತೇವೆ. ೮೦ ಡಬ್ಬ ಬೆಲ್ಲ ಸಿದ್ಧವಾಗುತ್ತೆ. ರೈತರಿಗೆ ಎಷ್ಟು ಬಾನಿ ಹಾಲಾಯಿತು ನೋಡಿ ಬೆಲೆ ನಿಗದಿಯಾಗುತ್ತೆ. (ಒಂದು ಬಾನಿ ಅಂದ್ರೆ ೩೦೦ ಲೀ.) ವರ್ಷದಲ್ಲಿ ಮೂರು ನಾಲ್ಕು ತಿಂಗಳು ನಮ್ಮ ಆಲೆಮನೆ ನಡೆಯುತ್ತೆ. ನಾನು ಕೃಷಿಕ ೬ ಎಕರೆ ಜಮೀನಲ್ಲಿ ಭತ್ತ, ಅಡಿಕೆ, ಕಬ್ಬು ಬೆಳೆಯುತ್ತೇನೆ. ಕೃಷಿ ಕೆಲಸ ಇಲ್ಲದಾಗ ಆಲೆಮನೆ ಕೆಲಸ ಬರುತ್ತೆ. ಇದರಿಂದ ನಾವು ಸೋಮಾರಿಗಳಾಗೋಲ್ಲ, ಕೃಷಿ ಜೊತೆ ಪೂರಕ ಆದಾಯ ಒದಗಿಸುತ್ತೆ. ಸಾವಿರಾರು ರೈತರಿಗೆ ನೆರವಾದನೆಂಬ ಖುಷಿ ನನ್ನದು. ಅವರ iತು ಕೇಳ್ತಾ ಇದ್ರೆ ಬೇರೆಯದೆ ಪ್ರಪಂಚ ತೇಲಿದಂತೆ, ಅಲ್ಲೆ ತಡೆದು ಹೆಗ್ಗಡೆಯವರೆ ೩೦ ವರ್ಷದಿಂದ ನಿಮ್ಮ ಆಲೆಮನೆ ಹೀಗೆ ಇದೆಯೆ? ಎಂದೆ. ಅಯ್ಯೋ ಮಾರಾಯ ಅದೇನ್ ಹೇಳ್ಲಿ ಪ್ರಾರಂಭದಲ್ಲಿ ಇಲ್ಲೇನು ಇರ್ಲಿರಲ್ಲ ನಮ್ಮದು ಅಲೆಮಾರಿ ಆಗಿತ್ತು. ಕೋಣದ ಗಾಣ ಕುಂಟೆಯಲ್ಲಿ ಬೇಯಿಸಿ ಮಡಕೆ ತುಂಬಾ ಇದ್ವಿ. ಎಲ್ಲಿ ಕಬ್ಬಿರುತ್ತೋ ಅಲ್ಲೇ ಹೋಗಿ ಕೋಣದ ಗಾಣ ಕಟ್ಟಿ ಬೆಲ್ಲ ಮಾಡಿಕೊಟ್ಟು ಬರ್ತಿದದ್ವಿ. ಅದಕ್ಕೆ ಒಣ ಸೌದೆ ಬೇಕಾಗ್ತಿತ್ತು. ಒಣ ಸೌದೆ ಸಿಗದಿದ್ದಾಗ ಹಸಿ ಸೌದೆ ಬಳಸ್ತಾ ಇದ್ವಿ. ಆಗ ಹಸಿ ಮರ ಈ ಪ್ರಮಾಣದಾಗೆ ಕಡಿದ್ರೆ ಪರಿಸರ ಹಾಳ ಮಾಡಿದ ಕಿರಿಕಿರಿ ಅನುಭವ ಮನಸ್ಸಿಗೆ ಬಹಳ ಕಾಡ್ತು ಅದರಿಂದಲೇ ಅಲೆಮಾರಿ ಆಲೆಮನೆ ನೆಲೆ ನಿಲ್ಲಲು ಕಾರಣ ಆಯ್ತು. ಈಗ ಸೌದೆ ಬಳಸಲ್ಲ ಕಬ್ಬಿನ ಸಿಪ್ಪೆನೆ ಉರುವಲು. ಕಬ್ಬಿಂದ ೯೦% ಹಾಲು ತೆಗಿತಿವಿ. ಉಳಿದ ತೇವಾಂಶ ಒಣಗೋಕೆ ೩ ದಿನ ಸಾಕು. ಸಿಪ್ಪೆ ಬಳಕೆಗೆ ರೆಡಿ ಆಗುತ್ತೆ. ಈ ವಿಧಾನ ಅಭಿವೃದ್ಧಿಗೆ ಬಹಳ ಕಷ್ಟ ಆಯ್ತು. ಹೆಗ್ಗಡೆಯವರು ಸಿಪ್ಪೆ ಬಳಸ್ತಾರೆ ಬೆಲ್ಲ ಬಾಳಿಕೆ ಬರಲ್ಲ ಅಂತಿದ್ರು ಆದ್ರೆ ಈ ಉತ್ತಮ ಗುಣಮಟ್ಟ ಕಂಡುಕೊಂಡಿದ್ದರಿಂದ ಸಾವಿರಾರು ರೈತರು ಬರ್ತಾ ರೆ. ಈ ವರ್ಷ ಕಬ್ಬು ಕಡಿಮೆ ಸೀಜನ್ ಸರಿ ಇದ್ರೆ ಈ ಸಮಯದಲ್ಲಿ ನಿಮ್ಮ ಹತ್ರ ಇಷ್ಟೊಂದು ಮಾತಾಡಕೆ ಟೈಂ ಸಿಗುತ್ತಿರಲಿಲ್ಲ

10

ಹೆಗ್ಗಡೆ ಅವರ ಮಾತು ಅನುಭವ ಬೆಲ್ಲದಷ್ಟೆ ಸಿಹಿ ಕೇಳುತ್ತಿರಬೇಕು ಅನಿಸುತ್ತದೆ. ಹೆಗ್ಗಡೆಯವರು ಎರಡು ಗುಜರಾತ್ ಗಾಣ ಇಟ್ಟುಕೊಂಡಿದ್ದಾರೆ. ಈ ವರ್ಷ ವಿದ್ಯುತ್ ಕೈಕೊಟ್ಟರೆ ಅಂತ ೪೦ ಕೆ.ವಿ ಜನರೇಟರ್ ಕೊಂಡಿದ್ದಾರೆ. ಮೂರು ಕೊಪ್ಪರಿಗೆಗಳಿವೆ. ನೋಡಿ ಬೆಲ್ಲ ತಯಾರಿಕೆ ಬಿಸಿಗೆ ಕೊಪ್ಪರಿಗೆ ತಳ ಪ್ರತಿ ವರ್ಷ ಹಾಳಾಗುತ್ತೆ. ೨೦ ಸಾವಿರ ಕೊಟ್ಟು ತಳ ಕಟ್ಟಿಸಬೇಕಂತೆ. ಸುತ್ತ ಹಲವು ಗಾಣಗಳಿದ್ದರೂ ಹೆಗ್ಗಡೆ ಆಲೆಮನೆಗೆ ಡಿಮ್ಯಾಂಡ್ ಜಾಸ್ತಿ. ಹಾಗಂತ ಇವರು ಕಬ್ಬು ಕೊಂಡು ಬೆಲ್ಲ ಮಾಡ್ತಾರೆ ಅನ್ಕೊಂಡ್ರೆ ತಪ್ಪು. ಶ್ರೀ ಮಾತಾ ಸಾವಯವ ಬೆಲ್ಲ ತಯಾರಿಕಾ ಘಟಕ ಒಂದು ಸೇವಾ ಕೇಂದ್ರ. ಇಲ್ಲಿಗೆ ರೈತರು ಕಬ್ಬು ತರ್ತಾಲರೆ. ಅವರೆ ಗಾಣಕ್ಕೆ ಕಬ್ಬು ಹಾಕಿ ಹಾಲು ಮಾಡಿದ್ರೆ ನಂತರ ಹಾಲು ಅಳತೆ ಮಾಡಿ ಬಾನಿ ಲೆಕ್ಕದಲ್ಲಿ ಬೆಲ್ಲ ಮಾಡಿ ಕೊಡುವುದು ಮಾತ್ರ ಹೆಗ್ಗಡೆಯವರ ಕಾಯಕ. ಬೆಲ್ಲ ಮಾಡಿಸಿಕೊಂಡವರು ಮನೆ ಬಳಕೆಗೆ ಇಟ್ಟುಕೊಂಡು ಉಳಿದದ್ದನ್ನು ಮಾರಾಟಕ್ಕೆ ಕೊಡ್ತಾರೆ. ಇದನ್ನು ಹೆಗ್ಗಡೆಯವರು ಮಾರ್ತಾಲರೆ. ಯಾವುದೇ ಪ್ರಚಾರ ಇಲ್ಲ. ಜನ ಇಲ್ಲೆ ಬಂದು ಕೊಂಡು ಹೋಗ್ತಾರೆ. ಇತ್ತೀಚೆಗೆ ಕೆಲವರು ಇಲ್ಲಿಂದ ಬೆಲ್ಲ ತೆಗೆದುಕೊಂಡು ರೀ ಪ್ಯಾಕ್ ಮಾಡಿ ಸಾವಯವ ಬೆಲ್ಲದ ಬ್ರ್ಯಾಂಡ್ ಮಾಡಿ ಮಾರ್ತಾಡ ಇದ್ದಾರೆ

12

ಬೆಲ್ಲದ ರುಚಿ, ಸ್ವಚ್ಛತೆ, ಸಾವಯವ ತಯಾರಿಕೆ ವಿಧಾನ ನೋಡಿದ ಮೇಲೆ ವರ್ಷಕ್ಕೆ ಬೇಕಾಗೋ ಅಷ್ಟು ಬೆಲ್ಲ ಕೊಂಡೆ ಹೋಗಬೇಕು ಅಂತ ತೀರ್ಮಾನ ಮಾಡಿ ಹೆಗ್ಗಡೆಯವರೆ ನನಗೆ ೧೦ ಡಬ್ಬ ಬೆಲ್ಲ ಕೊಡಿ ಅಂದೆ. (ಒಂದು ಡಬ್ಬ ಅಂದ್ರೆ ೨೫ ಕೆ.ಜಿ. ಈ ವರ್ಷದ ಬೆಲೆ ೨,೦೦೦ ರೂ.). ಆದ್ರೆ ಅಲ್ಲೆ ಇದ್ದ ಮಗ ಪ್ರಶಾಂತ ಹೆಗ್ಗಡೆ ಸಾರಿ ಸಾರ್ ಈ ವರ್ಷ ಬೆಲ್ಲ ಕಡಿಮೆ. ರೆಗ್ಯುಲರ್ ಕಸ್ಟಮರ್ಗೆ ಕೊಡಾಕೆ ಸಾಕಾಗುತ್ತಿಲ್ಲ. ನೀವು ಕೇಳಿದ್ದೀರಿ ಇಲ್ಲ ಅನ್ನೋದು ಕಷ್ಟ ಅಂತ ೩ ಡಬ್ಬ ಕೊಡ್ತಿನಿ ಅಂದ್ರು. ಅಬ್ಬಾ ನೋಡಿದ್ರಾ ಈ ಬೆಲ್ಲದ ಡಿಮ್ಯಾಂಡು. ಈ ಲೇಖನ ಓದಿದ ಮೇಲೆ ನಿಮಗೂ ಬೆಲ್ಲ ಬೇಕಿದ್ದರೆ ಅಡ್ವಾನ್ಸ್ ಬುಕ್ ಮಾಡಿ. ಒಮ್ಮೆ ರುಚಿ ನೋಡಿದ್ರೆ ನೀವು ಪ್ರತಿ ವರ್ಷ ಅಡ್ವಾನ್ಸ್ ಬುಕ್ ಮಾಡ್ತೀರಾ ಅನ್ನೋ ಗ್ಯಾರಂಟಿ ನನಗಿದೆ. ಇನ್ನೊಂದು ವಿಚಾರ ಹೇಳಲೇಬೇಕು. ಬೆಲ್ಲ ಉತ್ಪಾದನೆ ಸುಧಾರಿಸಲು ಹೆಗ್ಗಡೆಯವರಿಗೆ ಏನಾದರೂ ಬಂಡವಾಳ ಬೇಕು. ಅಂದ್ರೆ ಅವರು ಬ್ಯಾಂಕಿಗೆ ಹೋಗೋ ಅಗತ್ಯವಿಲ್ಲ. ಅವರ ಬೆಲ್ಲದ ರುಚಿಗೆ ಗಂಟು ಬಿದ್ದಿರೋ ಗ್ರಾಹಕರೇ ಬಂಡವಾಳ ಕೊಡ್ತಾರೆ ಅಂತ ಹೆಗ್ಗಡೆಯವರು ತುಂಬಾ ಅಭಿಮಾನದಿಂದ ಹೇಳ್ತಾರೆ. ಈ ಬೆಂಬಲವೆ ಬೆಲ್ಲದ ರುಚಿ, ಸ್ವಚ್ಛತೆ, ಸಾವಯವಕ್ಕೆ ಸಾಕ್ಷಿ ಸರ್ಟಿಫಿಕೇಟ್

ಈ ಬೆಲ್ಲಕ್ಕೆ ತಲೆಮಾರುಗಳ ಸಂಬಂಧ

ನಾವು ಶ್ರೀ ಮಾತಾಗೆ ಭೇಟಿ ನೀಡಿದಾಗ ಮೈಸೂರಿನ ಬಾಬಾ ಅಟಾಮಿಕ್ ರೀಸರ್ಚ್ ಸೆಂಟರ್ನ ಗಣಪತಿ ಹೆಗ್ಗಡೆಯವರು ಬೆಲ್ಲ ಕೊಳ್ಳಲು ಪತ್ನಿ ಸುಧಾ ಹೆಗ್ಗಡೆಯವರ ಜೊತೆ ಬಂದಿದ್ದರು. ಪ್ರತಿ ವರ್ಷ ಇಲ್ಲೆ ಬಂದು ಬೆಲ್ಲ ಕೊಂಡು ಜೊತೆಗೆ ನಾಲ್ಕಾರು ಸ್ನೇಹಿತರಿಗೂ ಕೊಂಡೊಯ್ಯುತ್ತಾರೆ. ಸುಧಾ ಅವರ ತಾಯಿ ಸಾಗರದ ಹತ್ತಿರದ ಅಡ್ಡೇರಿಯವರು ಅವರು ನಮ್ಮಮ್ಮನ ಕಾಲದಿಂದ ಇದೇ ಬೆಲ್ಲ ಬಳಸ್ತಿದ್ದೇನೆ ಅಂದ್ರು. ಅಂದ್ರೆ ಈ ಮಡಿಕೆ ಬೆಲ್ಲಕ್ಕೆ ತಲೆಮಾರುಗಳೇ ಮಾರುಹೋಗಿವೆ. ನಂಜವಳ್ಳಿ ಗುರುರಾಜ ಸಹ ಇಲ್ಲೆ ಬೆಲ್ಲ ಮಾಡಿಸುವ ರೈತ ೯ ವರ್ಷದಿಂದ ಒಂದೇ ಕೂಳೆಯಲ್ಲಿ ಕಬ್ಬು ಬೆಳೆಯುತ್ತಿದ್ದಾರೆ. ಮಂಗನ ಕಾಟದಿಂದ ೧೪ರಿಂದ ೧೫ ಕ್ಯಾನ್ ಬೆಲ್ಲ ಆಗೋದು ೪-೫ ಕ್ಯಾನಷ್ಟು ಆಗಿದೆ. ಇವರು ಕಬ್ಬಿನ ಬೀಜ ಗಂಗಾವತಿಯಿಂದ ತಂದಿದ್ದಂತೆ. ಸಕ್ಕರೆಗಾಗಿ ಬೆಳೆಯೋ ಕಬ್ಬು ಸಣ್ಣ ಕಣ ಬರುತ್ತೆ. ಬೆಲ್ಲದ ಕಬ್ಬು ತುಂಬಾ ಚೆನ್ನಾಗಿ ಬರುತ್ತೆ ಅನ್ನೊ ಅನುಭವ ಸಹ ಇವರಲ್ಲಿದೆ. ಮಡಿಕೆ ಬೆಲ್ಲ ಜೋನಿ ಬೆಲ್ಲಕ್ಕಿಂತ ಹೆಚ್ಚು ಬಾಳಿಕೆ. ನಾವು ಮನೆಲಿ ನಾವು ಮಾಡಿಸಿದ ಬೆಲ್ಲ ಬಿಟ್ಟು ಬೇರೆ ಬಳಸೊಲ್ಲ. ಮಲೆನಾಡಿನಲ್ಲಿ ಕಬ್ಬು ಮತ್ತು ಬೆಲ್ಲ ಮಾಡಿಸುವುದು ಒಂದು ಸಂಸ್ಕೃತಿ ತರ ಬೆಳೆದು ಬಂದಿದೆ. ಈ ಆಲೆಮನೆ ಸಂಬಂಧಗಳು ಬೆಳೆಯುವ ಕೇಂದ್ರಗಳಾಗಿವೆ. ನೂರಾರು ಕಾರ್ಮಿಕರಿಗೆ ಕೂಲಿ ಸಿಗದೆ ಇರುವ ಬೇಸಿಗೆಯಲ್ಲಿ ಬದುಕು ಕಟ್ಟಿಕೊಡುತ್ತವೆ. ಇವು ನೆಟ್ವರ್ಕ್ ಮಾರ್ಕೆಟ್ ಕೇಂದ್ರಗಳಿದ್ದಂತೆ. ಒಬ್ಬರಿಂದ ಒಬ್ಬರಿಗೆ ಸುದ್ದಿ ಹರಡಿ ಇಲ್ಲೆ ಬಂದು ಕೊಳ್ಳುತ್ತಾರೆ. ಕೆಲವರು ಕೊಂಡು ಬೇರೆಯವರಿಗೆ ಕೊಂಡೊಯ್ಯುತ್ತಾರೆ.

16

ಯೋಗೇಂದ್ರ ಕಾರಕ್ಕಿ

ನಾನು ೨೦ ವರ್ಷದಿಂದ ಇಲ್ಲಿ ಬರ್ತೀನಿ. ಅರ್ಧ ಎಕರೆ ಕಬ್ಬು ಬೆಳೆದು ೨೫ ಕ್ಯಾನ್ ಬೆಲ್ಲ ಮಾಡಿಸ್ತೀನಿ. ವರ್ಷ ೧೦ ಕ್ಯಾನ್ ಮನೆ ಬಳಕೆಗೆ ಉಳಿದ ೧೫ ಕ್ಯಾನ್ ಮಾರಾಟ ಮಾಡ್ತೀನಿ. ಅಪ್ಪ ಮಾಡ್ತಿದ್ರು ಅಂಥ ನಾನು ಮಾಡ್ತೀನಿ. ಕಬ್ಬು ಲಾಭದ ಕೃಷಿಗೆ ಅಂತಲ್ಲ ಮನೆಗೆ ಬೇಕಾಗುವ ಬೆಲ್ಲಕ್ಕಾಗಿ, ಕಬ್ಬು ಬೆಳೆಯಲು ಖರ್ಚು ಹೆಚ್ಚು ಮಾಡೋಲ್ಲ. ಬೀಜ, ಕೊಟ್ಟಿಗೆ ಗೊಬ್ಬರ ಎಲ್ಲಾ ಸ್ವಂತದೆ ಗೊಬ್ಬರ ಸ್ವಲ್ಪ ತಂದು ಹಾಕ್ತಿವಿ. ಕಬ್ಬು ಕಡಿಯಾಕೆ ಹತ್ತು ಆಳು, ೫ ಆಳು ಹಾಲು ತೆಗೆಯಾಕೆ, ಇದೂ ಸಹ ಮೈ ಆಳು ವಿಧಾನದಲ್ಲಿ ಮೂರು ರೈತರು ಸೇರಿ ಮಾಡ್ತಿವಿ. ಒಂದೊ ಎರಡೋ ಕೂಲಿ ತಗೊತಿವಿ. ಈ ಬೆಲ್ಲ ಬಿಟ್ಟು ಇದುವರೆಗೆ ಬೇರೆ ಬೆಲ್ಲ ಬಳಸಿಲ್ಲ