ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೩

ಚಿಂತನೆ

ಗ್ರಾಮೀಣ ತಾಯಂದಿರಿಗೆ ನಿರಂತರ ಕಲಿಕೆಯ ಅವಕಾಶಗಳು

image_
ಡಾ.ಎ.ಎಸ್.ಕುಮಾರ ಸ್ವಾಮಿ
9448943990

ಗ್ರಾಮೀಣ ಬಾಲಕಿಯರ ಹದಿನಾಲ್ಕು ವರ್ಷದವರೆಗಿನ ಕನಿಷ್ಠ ವಿದ್ಯಾಭ್ಯಾಸದ ಸಾಧನೆಯು ಒಂದು ದೊಡ್ಡ ಸವಾಲಾಗಿದೆ. ಹೆಚ್ಚಿನ ಬಾಲಕಿಯರು ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸದ ನಂತರ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುತ್ತಾರೆ. ಗ್ರಾಮೀಣ ಕುಟುಂಬಗಳಲ್ಲಿ ಬಾಲಕಿಯರ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ನಿಲ್ಲಿಸಲು ಹಲವಾರು ಕಾರಣಗಳಿದ್ದರೂ ಸಹ ಯಾವುದೇ ಕಾರಣವೂ ಸಮರ್ಥಿಸಿಕೊಳ್ಳಲು ಸಮಂಜಸ ವೆನಿಸುವುದಿಲ್ಲ. ವಿದ್ಯಾಭ್ಯಾಸವನ್ನು ಕುಂಠಿತ ಗೊಳಿಸುವುದರಿಂದ ಬಾಲಕಿಯರ ಬಾಳಿನ ಬೆಳಕನ್ನು ಮಸುಕುಗೊಳಿಸುವುದಲ್ಲದೇ, ಅವರು ಮುಂದೆ ಗೃಹಿಣಿಯರಾದಾಗ ಕುಟುಂಬಕ್ಕೆ ಕಣ್ಣಾಗಿ ಮಕ್ಕಳಿಗೆ ಸೂಕ್ತ ಜೀವನ ನೀಡುವಲ್ಲಿಯೂ ವಿಫಲರಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಅಷ್ಟಿಲ್ಲದೇ ಹೇಳಿರುವರೇ, ’ಹೆಣ್ಣೊಂದು ಕಲಿತರೆ ಶಾಲೆಯೊಂದನ್ನು ತೆರೆದಂತೆ ಎಂದು

ಹಾಗೆಂದರೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾವಂತ ಬಾಲಕಿಯರು ಇಲ್ಲವೆಂದಲ್ಲ. ಆದರೆ, ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ವಿದ್ಯಾವಂತ ಯುವತಿಯರು ಹೆಚ್ಚಾಗಿ ಪಟ್ಟಣಗಳಲ್ಲಿ ದುಡಿಯುತ್ತಿರುವ ಯುವಕರನ್ನೇ ಮದುವೆಯಾಗಿ ಗ್ರಾಮೀಣ ಪರಿಸರದಿಂದ ಹೊರಬೀಳುತ್ತಾರೆ. ಅದೇ ರೀತಿಯಲ್ಲಿ ವಿದ್ಯಾವಂತ ಯುವಕರೂ ಸಹ ವಿವಿಧ ಉದ್ಯೋಗಗಳನ್ನು ಅರಸುತ್ತಾ ಪಟ್ಟಣಗಳಿಗೆ ವಲಸೆ ಹೋಗುತ್ತಿರುವುದು ಇಂದಿನ ಸಾಮಾನ್ಯ ಪರಿಸ್ಥಿತಿಯಾಗಿದೆ. ಈ ಕಾರಣಗಳಿಂದ ಈಗ ಗ್ರಾಮಗಳಲ್ಲಿ ಹೆಚ್ಚಾಗಿ ಅವಿದ್ಯಾವಂತ ಯುವಕರೇ ಉಳಿಯುತ್ತಾರೆ ಮತ್ತು ಅವರ ವಿವಾಹ ಸಂಬಂಧಗಳೂ ಸಹ ಅವಿದ್ಯಾವಂತ ಯುವತಿಯರ ಜೊತೆಯಲ್ಲಿಯೇ ನಡೆಯುತ್ತವೆ. ಉನ್ನತ ವಿದ್ಯಾಭ್ಯಾಸ ಮಾಡಿ ಗ್ರಾಮಗಳಲ್ಲಿ ನೆಲೆಸಿರುವವರು ಅತಿ ವಿರಳವಾಗಿ ಕಂಡುಬರುವರು

ಹೆಚ್ಚಿನ ಪ್ರಮಾಣದ ಗ್ರಾಮೀಣ ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿಂದುಳಿಯುವುದು ಸರ್ವವೇದ್ಯ ಸಂಗತಿ. ಇದಕ್ಕೆ ಗ್ರಾಮೀಣ ಪ್ರದೇಶದ ವಿದ್ಯಾಭ್ಯಾಸದ ವ್ಯವಸ್ಥೆಯಲ್ಲಿನ ಲೋಪದೋಷಗಳ ಜೊತೆಯಲ್ಲಿ ಮಕ್ಕಳ ವಿದ್ಯಾಭ್ಯಾಸದಲ್ಲಿ ತಂದೆ ತಾಯಂದಿರ ಭಾಗವಹಿಸುವಿಕೆಯ ಕೊರತೆಯೂ ಸಹ ಒಂದು ಮುಖ್ಯ ಕಾರಣ. ಪಟ್ಟಣ/ನಗರಗಳಲ್ಲಿ ದೊರೆಯುತ್ತಿರುವ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ವಿದ್ಯಾಭ್ಯಾಸದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ಅಗಾಧ ವ್ಯತ್ಯಾಸವಿದೆ. ನಗರ ಪಟ್ಟಣಗಳಲ್ಲಿ ಶಾಲಾ ವಿದ್ಯಾಭ್ಯಾಸದ ಜೊತೆಯಲ್ಲಿ ಮನೆಯಲ್ಲಿ ತಂದೆ ತಾಯಂದಿರ ಪ್ರಯತ್ನಗಳೂ ಸಹ ಪ್ರಮುಖವಾಗಿರುತ್ತವೆ. ಮನೆಯಲ್ಲಿ ವಿಶೇಷವಾಗಿ ತಾಯಂದಿರು ಅವಿದ್ಯಾವಂತರಾಗಿದ್ದರೆ ಮಕ್ಕಳಿಗೆ ಸೂಕ್ತ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸಿ, ಪ್ರತಿ ದಿನವೂ ಅವಶ್ಯಕ ಮಾರ್ಗದರ್ಶನ ನೀಡಲು ಅಸಹಾಯಕ ರಾಗಿರುತ್ತಾರೆ. ಇದರಿಂದ ಗ್ರಾಮೀಣ ಪ್ರದೇಶದ ಮಕ್ಕಳು ಕಲಿಯುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದ್ದರೂ ಸಹ ಶಿಕ್ಷಣದ ತಳಹದಿಯೇ ದುರ್ಬಲವಾಗಿ ಮುಂದೆ ಉತ್ತಮ ಫಲಿತಾಂಶ ಪಡೆಯುವಲ್ಲಿ ವಿಫಲರಾಗುತ್ತಾರೆ. ಕೇವಲ ಕೆಲವೇ ಕೆಲವು ಶಿಕ್ಷಕರ ಮನೆಗಳಲ್ಲಿ ಮಾತ್ರ ಉತ್ತಮ ಶೈಕ್ಷಣಿಕ ವಾತಾವರಣ ದೊರೆಯುವುದರಿಂದ ಗ್ರಾಮೀಣ ಪ್ರದೇಶದ ಶಿಕ್ಷಕರ ಮಕ್ಕಳಿಗೆ ಸ್ವಲ್ಪಮಟ್ಟಿನ ಅನುಕೂಲವಾಗುತ್ತದೆ. ಗ್ರಾಮೀಣ ಪ್ರದೇಶದ ಅವಿದ್ಯಾವಂತ ತಾಯಂದಿರಿಗೆ ಈ ದಿಶೆಯಲ್ಲಿ ಸೂಕ್ತ ವಿದ್ಯಾಭ್ಯಾಸವನ್ನು ಕೊಡುವುದರ ಮೂಲಕ ಈ ಸಮಸ್ಯೆಗೆ ಸಂಪೂರ್ಣವಾಗಿ ಅಲ್ಲದಿದ್ದರೂ ತಕ್ಕಮಟ್ಟಿನ ಪರಿಹಾರವನ್ನು ಕಂಡು ಕೊಳ್ಳಬಹುದೇನೋ

ತಾಯಂದಿರು ಕೇವಲ ಮಕ್ಕಳ ವಿದ್ಯಾಭ್ಯಾಸ ಸುಧಾರಣೆಯತ್ತ ಮಾತ್ರವಲ್ಲದೇ ಅವರನ್ನು ಆರೋಗ್ಯವಂತರಾಗಿ, ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡ ಸತ್ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿಯನ್ನೂ ಸಹ ಹೊತ್ತಿರುತ್ತಾರೆ. ಇದಲ್ಲದೇ ಕೃಷಿ ಕಾರ್ಯಗಳಿಗೆ ಸಹಕಾರಿಯಾಗುವಲ್ಲಿ, ಉಪಕಸುಬುಗಳನ್ನು ಕೈಗೊಳ್ಳುವಲ್ಲಿ, ಕೃಷಿ ಉತ್ಪನ್ನಗಳ ಸಂಸ್ಕರಣೆಯಲ್ಲಿ, ಆಹಾರ ಧಾನ್ಯಗಳ ಸಂರಕ್ಷಣೆ, ಮುಂತಾದ ಕೆಲಸಗಳಲ್ಲಿ ತೊಡಗಿಕೊಳ್ಳಲು ಬೇಕಾದ ತಿಳುವಳಿಕೆಯ ಅಗತ್ಯತೆ ಇದೆ. ಗ್ರಾಮೀಣ ತಾಯಂದಿರಿಂದ ಅನೇಕ ನಿರೀಕ್ಷೆಗಳಿರುವುದರಿಂದ ಅವರಿಗೆ ನಿರಂತರ ಕಲಿಕೆಯ ಅವಕಾಶಗಳನ್ನು ನೀಡುವಾಗ ಇಲ್ಲಿ ಹೇಳಿರುವ ಉದ್ದೇಶಗಳನ್ನಿರಿಸಿಕೊಳ್ಳಬೇಕು

೧. ಮಕ್ಕಳ ಶಾಲಾ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಮನೆಯಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವನ್ನು ರೂಪಿಸುವುದು.

೨. ಮಕ್ಕಳು ಶಾಲಾ ಪಠ್ಯಕ್ಕೆ ಸಂಬಂಧಪಟ್ಟ ಮನೆ ಕೆಲಸವನ್ನು ಮಾಡಿಕೊಳ್ಳಲು ಮಾರ್ಗದರ್ಶನ ಮಾಡುವುದು

೩. ಮಕ್ಕಳು ಪರೀಕ್ಷೆಗಳನ್ನು ಎದುರಿಸುವ ಸಿದ್ಧತೆಗಳನ್ನು ಮಾಡಿಕೊಳ್ಳುವ ಬಗ್ಗೆ ಸೂಕ್ತ ತಿಳುವಳಿಕೆ ನೀಡುವುದು

೪. ಮಕ್ಕಳಿಗೆ ಆರೋಗ್ಯ, ಸ್ವಚ್ಛತೆ, ಶೌಚಾಲಯಗಳ ಬಳಕೆ, ನೈರ್ಮಲ್ಯಗಳನ್ನು ರೂಢಿ ಮಾಡಿಸುವ ತಿಳುವಳಿಕೆ

೫. ಬಾಲಕಿಯರಿಗೆ, ವಿಶೇಷವಾಗಿ ಹದಿ ಹರೆಯದವರಿಗೆ ಅಮ್ಮಂದಿರೇ ನೀಡಬಹುದಾದ ದೇಹದ ಬೆಳವಣಿಗೆ, ಆರೋಗ್ಯ, ನೈರ್ಮಲ್ಯ, ಲೈಂಗಿಕ ಜ್ಞಾನ ಮುಂತಾದವುಗಳ ತಿಳುವಳಿಕೆ ನೀಡುವುದು

೬. ಮಕ್ಕಳನ್ನು ದುಶ್ಚಟಗಳಿಂದ, ದುಷ್ಟ ಸಹವಾಸಗಳಿಂದ ದೂರವಿರಿಸುವ ಬಗ್ಗೆ

೭. ಮನೆಗಳಲ್ಲಿ ನೀರಿನ ಮಿತ ಬಳಕೆ, ಶುದ್ಧ ಕುಡಿಯುವ ನೀರಿನ ಮಹತ್ವ, ಮಳೆ ನೀರು ಕೊಯ್ಲು ಹಾಗೂ ಗೃಹ ಬಳಕೆ ನೀರನ್ನು ಕೈತೋಟಗಳಲ್ಲಿ ಮರುಬಳಕೆ ಮಾಡುವುದು, ಪರಿಸರ ಸಂರಕ್ಷಣೆ ಮುಂತಾದವುಗಳ ಬಗ್ಗೆ ತಿಳಿಸುವುದು

೮. ಆಹಾರ ಧಾನ್ಯಗಳ ಸುರಕ್ಷಿತ ಸಂಗ್ರಹಣೆ ಮತ್ತು ಬೀಜಗಳ ಸಂರಕ್ಷಣೆಯ ಬಗ್ಗೆ

೯. ಪೌಷ್ಟಿಕ ಆಹಾರ, ಸಮತೋಲನ ಆಹಾರದ ಬಗ್ಗೆ, ಆಹಾರದಲ್ಲಿನ ಪೌಷ್ಟಿಕಾಂಶಗಳ ನಷ್ಟವಿಲ್ಲದಂತೆ ಅಡುಗೆ ಮಾಡುವ ವಿಧಾನಗಳ ಬಗ್ಗೆ; ಉಳಿದ ಅಡುಗೆ ಪದಾರ್ಥಗಳನ್ನು ಕೆಡದಂತೆ ಸಂಗ್ರಹಿಸಿ ಮರುಬಳಕೆ ಮಾಡುವ ಬಗ್ಗೆ

೧೦. ಮೃದು ಗೃಹ ತ್ಯಾಜ್ಯ ವಸ್ತುಗಳಿಂದ ಎರೆಗೊಬ್ಬರ ತಯಾರಿಕೆ, ಗಟ್ಟಿ ತ್ಯಾಜ್ಯ ವಸ್ತುಗಳ ಸೂಕ್ತ ವಿಲೇವಾರಿ ಮುಂತಾದವುಗಳ ಬಗ್ಗೆ

೧೧. ಕೈತೋಟ ಬೆಳೆಸುವುದು, ಎರೆಗೊಬ್ಬರ ತಯಾರಿಕೆ, ಕಾಂಪೋಸ್ಟ್ ತಯಾರಿಕೆ ಮುಂತಾದವುಗಳ ಬಗ್ಗೆ

೧೨. ಮನೆಯ ಕೃಷಿ ಕಸುಬುಗಳಲ್ಲಿ ನೆರವಾಗಲು ಅಥವಾ ಸಮಯ ಬಂದರೆ, ಸ್ವತಂತ್ರವಾಗಿ ನಿರ್ವಹಿಸಲು ಬೇಕಾದ ಹೈನುಗಾರಿಕೆ, ಕುರಿಸಾಕಣೆ, ಕೋಳಿ ಸಾಕಣೆ, ಮೇಕೆ ಸಾಕಣೆ, ಮುಂತಾದ ಪಶು ಸಂಗೋಪನಾ ಕಸುಬುಗಳು, ಅಣಬೆ ಬೇಸಾಯ, ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಮುಂತಾದವುಗಳ ತಿಳುವಳಿಕೆ ಪಡೆಯುವುದು

೧೩. ಹೆಚ್ಚುವರಿ ಆದಾಯ ಪಡೆಯಲು ಅನುಕೂಲವಾಗುವಂತೆ ಕರಕುಶಲ ಕೆಲಸಗಳು, ಕುಸುರಿ ಕೆಲಸಗಳು, ಹೊಲಿಗೆ ಮುಂತಾದ ವುಗಳಲ್ಲಿ ಪರಿಣಿತಿ ಪಡೆಯುವುದು

೧೪. ಮೊಬೈಲ್ ವ್ಯವಹಾರ, ಇ-ವ್ಯವಹಾರಗಳ ಕನಿಷ್ಠ ತಿಳುವಳಿಕೆ ಪಡೆಯುವುದು

೧೫. ಜಮೀನು, ಮನೆಗೆ ಸಂಬಂಧಪಟ್ಟ ದಾಖಲಾತಿಗಳ ನಿರ್ವಹಣೆಯ ಕನಿಷ್ಠ ಜ್ಞಾನ ಹೊಂದುವುದು

೧೬. ಬ್ಯಾಂಕ್, ಪೋಸ್ಟ್ ಆಫೀಸ್ ಮತ್ತು ಸರ್ಕಾರಿ ಕಛೇರಿಗಳ ಜೊತೆಯಲ್ಲಿ ವ್ಯವಹಾರ ಮಾಡುವ ಕನಿಷ್ಠ ಜ್ಞಾನ ಪಡೆಯುವುದು

ಈ ವಿಷಯಗಳನ್ನು ಗ್ರಾಮೀಣ ತಾಯಂದರಿಗೆ ತಿಳಿಹೇಳಲು ಯಾವುದೇ ಶಾಲೆಯನ್ನು ತೆರೆಯಬೇಕೆಂದಿಲ್ಲ. ಈ ವಿಷಯಗಳ ಬಗ್ಗೆ ಕೆಲವು ಉಪಯುಕ್ತ ಮಾಹಿತಿಗಳನ್ನೊಳಗೊಂಡ, ಸರಳವಾಗಿ ಬರೆದ ಪುಸ್ತಕಗಳ ಸಹಾಯದಿಂದ ಗ್ರಾಮಗಳಲ್ಲಿ ವಾಸವಿರುವ ಕೆಲವು ವಿದ್ಯಾವಂತ ಮಹಿಳೆಯರನ್ನು ತೊಡಗಿಸಿಕೊಂಡು ಅವರಿಗೆ ಸೂಕ್ತ ಸಂಭಾವನೆಯನ್ನು ನೀಡಿ ಕಲಿಸಬಹುದು. ಶೈಕ್ಷಣಿಕ ವಿಷಯಗಳ ಬಗ್ಗೆ ಆಗಿಂದಾಗ್ಗೆ ಶಾಲೆಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಮಾಡಿ ಆ ಮೂಲಕವೂ ತಾಯಂದಿರಿಗೆ ಈ ಮಾಹಿತಿ ಕೊಡಬಹುದು. ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆಗೆ ಸಂಬಂಧಪಟ್ಟಂತೆ ಆಯಾ ಇಲಾಖೆಗಳ ಸಹಯೋಗದಲ್ಲಿ ಆಗಾಗ್ಗೆ ಗ್ರಾಮಮಟ್ಟದಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಕೈಗೊಳ್ಳಬಹುದು

ಅಚಿತೂ ಅವಿದ್ಯಾವಂತ ತಾಯಂದಿರು ಈ ವಿಷಯಗಳಲ್ಲಿ ಕೊನೆಯತನಕ ಅವಿದ್ಯಾವಂತರಾಗಿ ಉಳಿಯುವಂತಾಗಬಾರದು. ಯಾವುದೋ ಕಾರಣಕ್ಕೆ ವಿದ್ಯೆಯಿಂದ ವಂಚಿತರಾದ ಅವರ ದುರಾದೃಷ್ಟವು ಕೊನೆಯ ತನಕವೂ ಅವರನ್ನು ಕಾಡಬಾರದು. ಆಕಸ್ಮಿಕವಾಗಿ ಕುಟುಂಬದ ಸಂಪೂರ್ಣ ಜವಾಬ್ದಾರಿ ಹೊರುವ ಸನ್ನಿವೇಶ ಬಂದರೆ ತಾಯಂದಿರು ಇತರರ ಮೇಲೆ ಅವಲಂಬಿಸದೇ, ಸ್ವತಂತ್ರವಾಗಿ ನಿರ್ವಹಿಸುವ ಸಾಮರ್ಥ್ಯವುಳ್ಳವರಾಗಿರಬೇಕು. ಈ ತಿಳುವಳಿಕೆಗಳನ್ನು ನೀಡುವ ಮೂಲಕ ತಾಯಂದಿರು ಕುಟುಂಬವನ್ನು ಬೆಳಗುವಂತೆ ಮಾಡುವ ಯೋಜನೆಗಳನ್ನು ಜಾರಿಗೊಳಿಸುವ ಧೃಡ ಸಂಕಲ್ಪವನ್ನು ಸರ್ಕಾರ, ಸಮಾಜ ಈ ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಕೈಗೊಳ್ಳಲಿ ಎಂದು ಆಶಿಸುತ್ತೇನೆ