ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೩

ಮೂಲಂಗಿ ಬೆಳೆಯಲ್ಲಿ ಬರುವ ರೋಗಗಳು, ಪ್ರಮುಖ ಲಕ್ಷಣಗಳು ಮತ್ತು ಅವುಗಳ ನಿರ್ವಹಣೆ

ವಿನಯ್, ಜಿ.ಎಂ.,
9591195573
1

ಮೂಲಂಗಿ ಒಂದು ಪ್ರಮುಖ ತರಕಾರಿಯಾಗಿದ್ದು, ಇದರ ಬೇರು ಮತ್ತು ಎಲೆಗಳನ್ನು ಹಸಿಯಾಗಿ ಮತ್ತು ಬೇಯಿಸಿ ತಿನ್ನಲು ಉಪಯೋಗಿಸುತ್ತಾರೆ. ಮೂಲಂಗಿಯಿಂದ ತಯಾರಿಸಿದ ವಿಧವಿಧವಾದ ಉತ್ಪನ್ನಗಳನ್ನು, ಕರಳು ಮತ್ತು ಪಿತ್ತಕೋಶದ ರೋಗಗಳಿಂದ ಆಗಬಹುದಾದ ತೊಂದರೆಯನ್ನು ತಡೆಯಲು ಉಪಯೋಗಿಸುತ್ತಾರೆ, ಯುರೋಪ್ ಇದರ ಉಗಮಸ್ಥಾನವಾಗಿದ್ದು, ಮೊದಲು ರೆಫ಼ೆನಸ್ ರೆಫ಼ೆನಿಸಟ್ಯೆವಮ್ ಎಂಬ ವೈಜ್ಞಾನಿಕ ಹೆಸರುಳ್ಳ ಕಳೆಯಾಗಿ ಕಂಡುಬರುತ್ತಿತ್ತು, ಈಗ ಇದರ ವೈಜ್ಞಾನಿಕ ಹೆಸರನ್ನು ರೆಫ಼ೆನಸ್ ಸಟೈವಸ್ ಎಂದು ಬದಲಿಸಲಾಗಿದೆ, ಇದು ಬ್ರಾಸಿಕೇಸಿಯೆ ಎಂಬ ಕುಟುಂಬಕ್ಕೆ ಸೇರಿದ್ದಾಗಿದೆ. ಇದನ್ನು ಮುಖ್ಯವಾಗಿ ಮಹಾರಾಷ್ಟ್ರ, ಅಸ್ಸಾಂ, ಉತ್ತರಪ್ರದೇಶ, ಮಧ್ಯಪ್ರದೇಶ, ಹಿಮಾಚಲಪ್ರದೇಶ ಹಾಗೂ ಪಂಜಾಬ್ನಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ, ಇದನ್ನು ನಮ್ಮ ದೇಶದಲ್ಲಿ ೧೦,೬೨೫ ಹೆಕ್ಟೆರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಇಳುವರಿ ವರ್ಷದ ಸರಾಸರಿಯಲ್ಲಿ ಒಮ್ಮೊಮ್ಮೆ ಏರಿಕೆ ಹಾಗೂ ಇಳಿಕೆಯಾಗುತ್ತಿರುತ್ತದೆ, ಇಳುವರಿ ಇಳಿಕೆಗೆ ಮುಖ್ಯ ಕಾರಣವೆಂದರೆ ರೋಗಗಳು

ಮೂಲಂಗಿಯನ್ನು ಬಾಧಿಸುವ ಮುಖ್ಯ ರೋಗಗಳೆಂದರೆ ?

ಬಿಳಿತುಕ್ಕು ರೋಗ, ಅಂಗಮಾರಿ ರೋಗ, ದುಂಡಾಣು ಎಲೆಚುಕ್ಕೆ ರೋಗ, ಮೂಲಂಗಿ ಮೊಸಾಯಿಕ್ ವೈರಸ್

ಬಿಳಿತುಕ್ಕು ರೋಗ

ಈ ರೋಗವು ಅಲ್ಭುಗೋ ಕ್ಯಾನ್ಡೀಡ ಎಂಬ ಶೀಲಿಂಧ್ರದಿಂದ ಬರುವಂತಹ ಭಯಂಕರ ರೋಗವಾಗಿದೆ, ಈ ರೋಗವನ್ನು ನಿರ್ವಹಣೆ ಮಾಡದೆ ಇರುವುದರಿಂದ ಇಳುವರಿಯು ಕಡಿಮೆ ಯಾಗುವುದು

ರೋಗದ ಗುಣಗಳು

 • ಎಲೆಯ ಕೆಳಭಾಗದಲ್ಲಿ ಬಿಳಿಬಣ್ಣದ ಪುಡಿಯಂತಹ ಗುಳ್ಳೆಗಳು ಕಂಡುಬರುತ್ತವೆ, ಕ್ರಮೇಣವಾಗಿ ರೋಗ ಬೆಳೆದಂತೆ ಬಿಳಿಬಣ್ಣದ ಗುಳ್ಳೆಗಳ ವಿಸ್ತೀರ್ಣ ಹೆಚ್ಚಾಗಿ ಸುಮಾರು ೧ ರಿಂದ ೨ ಮಿ. ಮೀ.ವರೆಗೂ ವಿಸ್ತರಿಸುತ್ತದೆ, ಈ ಗುಣಗಳು ಎಲೆಯ ಮೇಲೆ ಅಲ್ಲದೆಯೇ ಗಿಡದ ಇತರ ಭಾಗಗಳಿಗೂ ಅಂದರೆ, ಹೂವಿನ ಮೇಲೆ, ಎಲೆಯ ತ್ತೊಟ್ಟಿನ ಮೇಲೆ ಹರಡುತ್ತದೆ, ಹೂವಿನ ಮೇಲೆ ರೋಗವು ಹೆಚ್ಚಾದಾಗ ರೋಗ ತಗುಲಿದ ಭಾಗವು ದಪ್ಪವಾಗಿ ಊದುವಿಕೆ ಕಂಡುಬರುತ್ತದೆ, ಈ ರೋಗದಿಂದ ಎಲೆಯ ಮೇಲೆ ಹಾನಿ ಉಂಟಾಗುವುದರಿಂದ ದ್ಯುತಿಸಂಶ್ಲೇಷಣೆ ಕ್ರಿಯೆಗೆ ತೊಂದರೆಯಾಗಿ ಇಳುವರಿಯು ಕಡಿಮೆ ಯಾಗುತ್ತದೆ
 • ರೋಗದ ನಿರ್ವಹಣೆ

  ತಾಕುಗಳ ಸುತ್ತಮುತ್ತ ರೋಗವನ್ನು ತರುವಂತಹ ಅಥವಾ ರೋಗವನ್ನು ಹೊತ್ತಿರುವ ಕಳೆಗಿಡಗಳನ್ನು ಕಿತ್ತು ಸುಡಬೇಕು, ಇದರಿಂದ ಪ್ರಾಥಮಿಕ ಸೋಂಕನ್ನು ತಡೆಯಬಹುದು, ಸರಿಯಾದ ಪೋಷಕಾಂಶಗಳ ನಿರ್ವಹಣೆ ಮಾಡುವುದರಿಂದ ಗಿಡದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು, ರೋಗ ನಿರೋಧಕ ತಳಿಗಳನ್ನು ಬಳಸಬೇಕು, ಬೆಳೆಯ ಅಂತರವನ್ನು ನಿರ್ವಹಣೆ ಮಾಡುವುದರಿಂದ ರೋಗಾಣುಗೆ ಅಗತ್ಯವಿರುವ ವಾತವರಣವನ್ನು ತಪ್ಪಿಸಿದಂತಾಗುತ್ತದೆ, ಜೈವಿಕ ಶೀಲಿಂಧ್ರಗಳಾದ ಟೈಕೋಡರ್ಮ ವಿರಿಡೇ ಹಾಗೂ ಟೈಕೋಡರ್ಮ ಹಾರ್ಜಿಯಾನಮ್ ಇವುಗಳಿಂದ ಬಿಜೋಪಚಾರ ಮಾಡುವುದರಿಂದ ರೋಗದ ನಿರ್ವಹಣೆ ಮಾಡಬಹುದು, ಮ್ಯಾಂಕೊಜೆಬ್ ೨ಗ್ರಾಂ/ಲೀ. ಸಿಂಪಡಿಸು ವುದರಿಂದ ಈ ರೋಗದ ನಿರ್ವಹಣೆ ಮಾಡಬಹುದು

  ಅಂಗಮಾರಿ ರೋಗ

  ಇದರ ಹೆಸರೇ ಸೂಚಿಸುವಂತೆ ಈ ರೋಗವು ಗಿಡದ ಅಂಗಾಗಗಳನ್ನು ಬಿಡದೆ ಬಾಧಿಸುತ್ತದೆ. ಈ ರೋಗವು ಆಲ್ಬರ್ನೇರಿಯಾ ರೆಫ಼ನಿ ಎಂಬ ಶಿಲೀಂಧ್ರದಿಂದ ಹರಡುತ್ತದೆ

  ರೋಗದ ಗುಣಗಳು

  ಈ ಶಿಲೀಂಧ್ರವು ಮೊದಮೊದಲು ಸಣ್ಣ ಚುಕ್ಕೆಗಳಂತೆ ಕಾಣಿಸಿಕೊಳ್ಳುತ್ತದೆ, ತದನಂತರದಲ್ಲಿ ಈ ಚುಕ್ಕೆಗಳು ಹಳದಿ ಬಣ್ಣಕ್ಕೆ ತಿರುಗುವುದರಿಂದ ತನ್ನ ತೀವ್ರತೆಯನ್ನು ತೋರಿಸುತ್ತದೆ, ಈ ರೋಗವು ಎಲೆಗಳ ಮೇಲೆ ಅಲ್ಲದೆಯೇ ಕಾಂಡ, ಹೂ, ಹಣ್ಣು ಹಾಗೂ ಬೀಜಗಳ ಮೇಲೂ ಬಾಧಿಸುತ್ತದೆ, ಈ ಮೋಡಕವಿದ ವಾತಾವರಣವಿದ್ದಾಗ ತೀರ್ವವಾಗಿ ರೋಗ ಹರಡುವ ಸಾದ್ಯತೆಗಳು ಹೆಚ್ಛಾಗಿರುತ್ತದೆ, ಕಾಯಿಗಳು ತೀವ್ರವಾಗಿ ಹಾನಿಗೊಳಗಾಗಿದ್ದು ಬಾಲದ ಭಾಗದಲ್ಲಿ ಕಪ್ಪುಬಣ್ಣದೊಂದಿಗೆ ಮುದುಡಿಕೊಂಡಿರುತ್ತದೆ, ಹಾಗೆಯೇ ಕಾಯಿಯೊಳಗಿನ ಬೀಜಗಳಿಗೂ ಸಹ ರೋಗ ತಗುಲಿ, ಬೀಜ ಮೊಳೆಯುವಲ್ಲಿ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ

  ರೋಗದ ನಿರ್ವಹಣೆ

  ಬಿತ್ತನೆಗೆ ಮುಂಚೆ, ಬೇಸಿಗೆಯಲ್ಲಿ ಆಳವಾದ ಉಳುಮೆ ಮಾಡುವುದರಿಂದ ಶೀಲಿಂಧ್ರ ರೋಗಾಣುಗಳು ಹಾಗೂ ರೋಗಗ್ರಸ್ಥ ಗಿಡಗಳ ಭಾಗಗಳು ಚ್ಚಿನ ಉಷ್ಣಾಂಶಕ್ಕೆ ನಾಶ ವಾಗುವುದರಿಂದ, ಪ್ರಾಥಮಿಕವಾಗಿ ರೋಗ ಹರಡುವುದನ್ನು ತಪ್ಪಿಸಬಹುದಾಗಿದೆ, ಬ್ಯಾವಿಸ್ಟಿನ್ನಿಂದ ಬಿಜೋಪಚಾರ ಮಾಡುವುದರಿಂದ ರೋಗದ ನಿರ್ವಹಣೆ ಮಾಡಬಹುದು, ಸರಿಯಾದ ರೀತಿಯಲ್ಲಿ ಸಮತೋಲನ ಪೋಷಕಾಂಶಗಳ ನಿರ್ವಹಣೆ ಮಾಡು ವುದರಿಂದ ಗಿಡದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು, ಗಿಡಗಳಿಗೆ ನೀರನ್ನು ಸರಿಯಾದ ಸಮಯದಲ್ಲಿ ಒದಗಿಸುವುದರಿಂದ ಹಾಗೂ ತಾಕುಗಳಲ್ಲಿ ಒಣಹವೆಯನ್ನು ನಿರ್ವಹಿಸುವುದರಿಂದಲೂ ರೋಗವನ್ನು ತಡೆಯಬಹುದು, ಮ್ಯಾಂಕೊಜೆಬ್ ೨ಗ್ರಾಂ/ಲೀ. ಸಿಂಪಡಿಸುವುದರಿಂದ ರೋಗವನ್ನು ನಿರ್ವಹಣೆ ಮಾಡಬಹುದು, ರೋಗವನ್ನು ತರುವಂತಹ ಅಥವಾ ರೋಗವನ್ನು ಹೊತ್ತಿರುವ ಕಳೆಗಿಡಗಳನ್ನು ತಾಕುಗಳ ಸುತ್ತಮುತ್ತ್ತ ಕಿತ್ತು ಸುಡಬೇಕು, ಜೈವಿಕ ಶೀಲಿಂಧ್ರಗಳಾದ ಟೈಕೋಡರ್ಮ ವಿರಿಡೇ ಹಾಗೊ ಟೈಕೋಡರ್ಮ ಹಾರ್ಜಿಯಾನಮ್ ಇವುಗಳಿಂದ ಬಿಜೋಪಚಾರ ಮಾಡುವುದರಿಂದ ರೋಗದ ನಿರ್ವಹಣೆ ಮಾಡಬಹುದು

  ದುಂಡಾಣು ಎಲೆಚುಕ್ಕೆ ರೋಗ

  ಈ ರೋಗವು ಕ್ಸಾಂತೋಮೊನಸ್ ಕಾಂಪೆಸ್ಟ್ರೀಸ್ ಎಂಬ ದುಂಡಾಣುವಿನಿಂದ ಕೀಟ ಮತ್ತು ಮಳೆಹನಿಗಳ ಮುಖೇನ ಹರಡುತ್ತದೆ

  ರೋಗದ ಗುಣಗಳು : ಈ ದುಂಡಾಣು ಎಲೆ ಹಾಗೂ ಎಲೆ ತೊಟ್ಟಿನ ಮೇಲೆ ಸಣ್ಣ ಕಂದು ಮತ್ತು ಬಿಳಿ ಬಣ್ಣದ ರೀತಿಯಲ್ಲಿ ಕಂಡುಬರುತ್ತದೆ, ಎಲೆ ತೊಟ್ಟಿನ ಮೇಲಿನ ಚುಕ್ಕೆಗಳು ಕಪ್ಪುಬಣ್ಣದಾಗಿರುತ್ತದೆ, ರೋಗವು ಹೆಚ್ಚಾದಾಗ ಎಲೆ ಉದುರುವುದು ಕಂಡುಬಂದು ಗಿಡ ಸಾಯುವ ಸಾಧ್ಯತೆಯೂ ಹೆಚ್ಚಿರುತ್ತದೆ, ಈ ದುಂಡಾಣುವು ಬೀಜಗಳನ್ನು ಸಹ ಬಾಧಿಸುತ್ತದೆ

  ರೋಗದ ನಿರ್ವಹಣೆ:ರೋಗಗ್ರಸ್ಥ ಗಿಡಗಳ ಭಾಗಗಳು ಹೆಚ್ಚಿನ ಉಷ್ಣಾಂಶಕ್ಕೆ ನಾಶವಾಗುವುದರಿಂದ, ಪ್ರಾಥಮಿಕವಾಗಿ ರೋಗ ಹರಡುವುದನ್ನು ತಪ್ಪಿಸಬಹುದಾಗಿದೆ, ಬೆಳೆಗಳನ್ನು ಬದಲಿ ಮಾಡುತ್ತಿರಬೇಕು, ರೋಗ ನಿರೋಧಕ ತಳಿಗಳನ್ನು ಬಳಸುವುದರಿಂದ, ಉದಾರಣೆಗೆ- ಆರ್ಕಾ ನಿಶಾಂತ್,ಸಮತೋಲನ ಪೋಷಕಾಂಶಗಳ ನಿರ್ವಹಣೆ ಮಾಡುವುದರಿಂದ ಗಿಡದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು, ನೀರನ್ನು ಸರಿಯಾದ ಸಮಯದಲ್ಲಿ ಒದಗಿಸುವುದರಿಂದ ರೋಗದ ನಿರ್ವಹಣೆ ಮಾಡಬಹುದು, ಗಿಡಗಳ ಅಂತರ ಹೆಚ್ಚಿಸಿ ಸಾಂಧ್ರತೆಯನ್ನು ಕಡಿಮೆಮಾಡುವುದರಿಂದ, ಸ್ಟ್ರೆಪ್ಟೋಸೈಕ್ಲಿನ್ ೦.೫ ಗ್ರಾಂ ಅಥವಾ ತಾಮ್ರದ ಆಕ್ಸಿಕ್ಲೋರೆಡ್ ೩ ಗ್ರಾಂ/೧ ಲೀ. ನೀರಿನೊಂದಿಗೆ ಬೆರೆಸಿ ಸಿಂಪಡಿಸುವುದರಿಂದ ಈ ರೋಗವನ್ನು ಸಂಪೂರ್ಣವಾಗಿ ಹೋಗಲಾಡಿಸಬಹುದು

  ಮೂಲಂಗಿ ಮೊಸಾಯಿಕ್ ವೈರಸ್:ಈ ರೋಗವು ಎಫಿಡ್ ಎಂಬ ಕೀಟಗಳಿಂದ ಹರಡಿ ಗಿಡಗಳಿಗೆ ಹಾನಿಯುಂಟು ಮಾಡುತ್ತದೆ

  ರೋಗದ ಗುಣಗಳು:-ಎಲೆಯ ಮಧ್ಯಭಾಗದಲ್ಲಿ ಸಣ್ಣ ದುಂಡಾಕಾರದ ಅಥವಾ ನಿರಾಕಾರ ರೂಪದಲ್ಲಿ ಕಂಡುಬರುತ್ತದೆ. ರೋಗವು ಹೆಚ್ಚಾಗಿ ಗಿಡ ಕುಬ್ಜವಾಗುತ್ತದೆ

  ರೋಗದ ನಿರ್ವಹಣೆ:ರೋಗವನ್ನು ತರುವಂತಹ ಅಥವಾ ರೋಗವನ್ನು ಹೊತ್ತಿರುವ ಕಳೆಗಿಡಗಳನ್ನು ತಾಕುಗಳ ಸುತ್ತಮುತ್ತ್ತ ಕಿತ್ತು ಸುಡಬೇಕು, ಬೆಳೆಗಳನ್ನು ಬದಲಿ ಮಾಡುತ್ತಿರಬೇಕು, ಕೀಟಗಳ ಸಂಖ್ಯೆಯನ್ನು ತಪ್ಪಿಸಲು ಚಳಿಗಾಲದಲ್ಲಿ ಬೆಳೆಯನ್ನು ಬೆಳೆಯಬೇಕು, ಕಾನ್ಫಿಡಾರ್ ೧.೫ ಗ್ರಾಂ/ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು