ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೩

ನಾಟಿಪಶುವೈದ್ಯ

ರಾಸುಗಳನ್ನು ಹಿಂಡಿ ಹಿಪ್ಪೆ ಮಾಡುವ ಚಪ್ಪೆರೋಗ

image_
ಡಾ. ರವಿಕುಮಾರ್, ಪಿ
9008598832
1

ದಷ್ಠ ಪುಷ್ಟವಾಗಿ ಬೆಳೆದು ನಿಂತ ನಿಮ್ಮ ಹೋರಿ ಅಥವಾ ಹಸುವಿನ ತೊಡೆ, ಪೃಷ್ಠ ಹಾಗೂ ಕಾಲಿನ ಇತರೇ ಮಾಂಸಖಂಡಗಳು ಒಮ್ಮಿಂದೊಮ್ಮೆಲೇ ಊದತೊಡಗಿ ರಾಸುಗಳು ತೀವ್ರ ಜ್ವರದಿಂದ ಬಳಲಿದರೆ ಇವು ಚಪ್ಪೆರೋಗದ ಲಕ್ಷಣಗಳೆಂದು ಅರ್ಥೈಸಬಹುದು. ಕ್ಲಾಸ್ಟ್ರಿಡಿಯಂ ಗುಂಪಿನ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಈ ರೋಗ ತಗುಲಿದ ರಾಸುಗಳು ಸರಿಯಾದ ಹಾಗೂ ತುರ್ತು ನಿರ್ವಹಣೆ ಇಲ್ಲದೇ ಹೋದಲ್ಲಿ ಸಾವನ್ನಪ್ಪುವ ಸಂಭವಗಳು ವಿರಳವೇನಲ್ಲ. ಇತ್ತೀಚೆಗೆ ಹಾಸನ ಜಿಲ್ಲೆಯ ಅರಕಲಗೂಡು, ಹೊಳೆನರಸೀಪುರ ಮತ್ತು ಚನ್ನರಾಯಪಟ್ಟಣ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಈ ರೋಗ ಕಾಣಿಸಿಕೊಂಡು ಹಲವಾರು ಜಾನುವಾರುಗಳು ಬಲಿಯಾದುದನ್ನು ನಾವಿಲ್ಲಿ ಸ್ಮರಿಸಬಹುದು. ಚಪ್ಪೆರೋಗಪೀಡಿತ ರಾಸುಗಳಿಗೆ ಆರಂಭದಲ್ಲಿ ತೀವ್ರ ಜ್ವರ ಕಾಣಿಸುವುದರ ಜೊತೆಗೆ ಹಿಂಗಾಲು ಮತ್ತು ಮುಂಗಾಲುಗಳ ಸುಪುಷ್ಟ ಮಾಂಸಖಂಡಗಳು ಒಳಗೊಳಗೇ ಕೊಳೆಯ ತೊಡಗಿ ಊದಿಕೊಳ್ಳುತ್ತವೆ. ತೊಡೆಗಳ ಭಾಗ ಇದ್ದಕ್ಕಿದ್ದಂತೆ ಊದಿಕೊಂಡು ನೋವಿನಿಂದ ರಾಸುಗಳು ಕಾಲು ಎತ್ತಿ ಹಿಡಿಯುತ್ತವೆ ಹಾಗೂ ಕ್ಷಿಪ್ರವಾಗಿ ಮಾಂಸಖಂಡಗಳು ಬಲೂನಿನಂತೆ ಊದ ತೊಡಗುತ್ತವೆ. ಸ್ನಾಯುಗಳಲ್ಲಿ ಗಾಳಿ ತುಂಬಿದಂತಾಗಿ ಒತ್ತಿದರೆ ಚರಚರ ಶಬ್ದ ಹೊರಡಿಸುವುದು ಈ ರೋಗದ ಪ್ರಮುಖ ಲಕ್ಷಣಗಳಲ್ಲೊಂದು. ಈ ತೆರನಾದ ಗುಣಲಕ್ಷಣಗಳು ರಾಸುಗಳಲ್ಲಿ ಕಾಣಿಸಿದ ಕೂಡಲೇ ನುರಿತ ಪಶುವೈದ್ಯರಿಂದ ರಾಸುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸದಿದ್ದಲ್ಲಿ ಒಂದೆರಡು ದಿನಗಳಲ್ಲಿಯೇ ರಾಸುಗಳು ಮರಣ ಹೊಂದುವ ಸಂಭವವಿರುತ್ತದೆ. ಚಪ್ಪೆರೋಗಕ್ಕೆ ವೈಜ್ಞಾನಿಕವಾದ ಹಾಗೂ ಪರಿಣಾಮಕಾರೀ ಲಸಿಕೆ ಲಭ್ಯವಿದ್ದು. ಸಾಮಾನ್ಯವಾಗಿ ಈ ರೋಗ ಕಂಡುಬರುವ ಜಿಲ್ಲೆಗಳಲ್ಲಿ ವರ್ಷಕ್ಕೊಮ್ಮೆ ತಪ್ಪದೇ ಲಸಿಕೆ ಹಾಕಿಸುವ ಮೂಲಕ ಈ ರೋಗದ ಹಾವಳಿಯನ್ನು ತಡೆಗಟ್ಟಬಹುದು. ಆರು ತಿಂಗಳ ಮೇಲ್ಪಟ್ಟ ಎಲ್ಲಾ ರಾಸುಗಳಿಗೆ ಲಸಿಕೆ ಹಾಕಿಸಬಹುದು. ಇದು ಒಂದು ಮಾರಣಾಂತಿಕ ರೋಗವಾದ್ದರಿಂದ ಮೇಲೆ ತಿಳಿಸಿದ ಯಾವುದೇ ರೋಗಲಕ್ಷಣಗಳು ಕಾಣಿಸಿದಲ್ಲಿ ತಡಮಾಡದೇ ಪಶುವೈದ್ಯರ ಮೊರೆ ಹೋಗುವುದು ಸೂಕ್ತ. ಜೊತೆಯಲ್ಲಿ ಕೆಳಸೂಚಿಸಿದ ಮನೆಮದ್ದುಗಳನ್ನು ಪ್ರಯೋಗಿಸಬಹುದು

3

೧.ಒಂದು ಸೇರಿನಷ್ಟು ಬಾಳೆ ಹೂವು, ಒಂದು ಕೆ.ಜಿ ಈರುಳ್ಳಿ, ಒಂದು ಕೆ.ಜಿ ಕೇತಕಿಗಡ್ಡೆ ಹಾಗೂ ನಾಲ್ಕು ಚಮಚ ಜೀರಿಗೆಯನ್ನು ಅರ್ಧ ಲೀಟರ್ ಮಜ್ಜಿಗೆಯಲ್ಲಿ ನುಣ್ಣಗೆ ಅರೆದು ದಿನಕ್ಕೊಮ್ಮೆಯಂತೆ ಮೂರು ದಿನಗಳ ಕಾಲ ಕುಡಿಸಬೇಕು

೨.ಒಂದು ಪಾತ್ರೆಯಲ್ಲಿ ತಲಾ ಹತ್ತು ಚಮಚ ಮುಂಗರಬಳ್ಳಿ ರಸ ಹಾಗೂ ಕತ್ತಾಳೆ ರಸಗಳನ್ನು ಬೆರೆಸಿ ಅದಕ್ಕೆ ಎಂಟು ಚಮಚ ಸಾಸಿವೆ ಕುಟ್ಟಿ ಹಾಕಿರಿ. ಜೊತೆಗೆ ಒಂದಿಷ್ಟು ರಾಗಿಹಿಟ್ಟು ಬೆರೆಸಿರಿ. ಇದರಲ್ಲಿ ಅರ್ಧ ಭಾಗವನ್ನು ರೋಗಪೀಡಿತ ರಾಸಿಗೆ ಕುಡಿಸಿ ಮತ್ತು ಉಳಿದರ್ಧವನ್ನು ಬಾವಿರುವ ಜಾಗಗಳಿಗೆ ಹಚ್ಚಿರಿ

6

೩.ಒಂದು ಗೆಡ್ಡೆ ಬೆಳ್ಳುಳ್ಳಿ, ಎರಡು ಚಮಚ ಕಾಳುಮೆಣಸು, ಒಂದು ರಕ್ಕಸಬಾಳೆ ಪಟ್ಟೆಯರಸ ಹಾಗೂ ಅರ್ಧ ಚಮಚ ಸುಣ್ಣ ಇವಿಷ್ಟನ್ನೂ ಅರೆದು ತಯಾರಿಸಿದ ಔಷಧಿಯನ್ನು ದಿನಕ್ಕೆ ನಾಲ್ಕು ಸಲದಂತೆ ೩ ದಿನಗಳ ಕಾಲ ನೀಡಬೇಕು

ಹೆಚ್ಚಿನ ಓದು: ಒಗ್ಗರಣೆ ಡಬ್ಬಿಯಲ್ಲಿ ಪಶು ಆರೋಗ್ಯ: ಡಾ. ಗಣೇಶ ಹೆಗಡೆ ನೀಲೇಸರ. ನದಿ ಪ್ರಕಾಶನ