ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೩

ಔಷಧಿ ಸಸ್ಯಗಳು

ಹಿಪ್ಪಲಿ

image_
ಡಾ. ಯಶಸ್ವಿನಿ ಶರ್ಮ
೯೫೩೫೨೨೮೬೯೪
1

ಹಿಪ್ಪಲಿ ತೆಳುವಾದ ಸುವಾಸನೆಯುಕ್ತ, ಬಹುವಾರ್ಷಿಕ, ಹಬ್ಬಿಕೊಂಡು ಬೆಳೆಯುವ ಸಸ್ಯವಾಗಿದ್ದು ’ಪೈಪರೇಸೀ’ ಕುಟುಂಬಕ್ಕೆ ಸೇರಿದೆ. ಇದು ಇಂಗ್ಲೀಷ್ನಲ್ಲಿ ’ಲಾಂಗ್ ಪೆಪ್ಪರ್’ ಎಂದೂ, ಸಂಸ್ಕೃತದಲ್ಲಿ ’ಹಿಪ್ಪಲಿ’ ಎಂದೂ, ವೈಜ್ಞಾನಿಕವಾಗಿ ’ಪೈಪರ್ ಲಾಂಗಮ್’ ಎಂದು ಕರೆಯಲ್ಪಡುತ್ತದೆ. ಕಾಯಿ ತೆಳುವಾಗಿ ೨.೩ ಸೆಂ.ಮೀ. ಉದ್ದವಾಗಿ ಕಟುವಾದ ರುಚಿ ಹೊಂದಿರುತ್ತದೆ. ಇದು ಶೇ. ೪.೫ ರಷ್ಟು ’ಪೈಪರಿನ್’ ಎಂಬ ಕ್ಷಾರವನ್ನು ಮತ್ತು ಪೈಪ್ಲೆಟಿನ್, ಪೈಪರೇಡಿಯೋನ ಇತ್ಯಾದಿ ಕ್ಷಾರವನ್ನು ಹೊಂದಿದೆ. ಹಿಪ್ಪಲಿಯಲ್ಲಿ ಶೇ. ೦.೭ರಷ್ಟು ಸುಗಂಧ ತೈಲವಿದ್ದು, ಇದನ್ನು ಭಟ್ಟಿ ಇಳಿಸಿ ಸಂಗ್ರಹಿಸಬಹುದು. ಹಿಪ್ಪಲಿ ಸುಗಂಧ ತೈಲವು ಮುಖ್ಯವಾಗಿ ಪೈಪರಿನ್, ರುಟಿನ್, ಬಿಟಾ-ಕ್ಯಾರಿಯೋಫಿಲ್ಲೀನ್, ಬಿಸಬೋಲಿನ್ ಕ್ಷಾರವನ್ನು ಹೊಂದಿದೆ.

ಹಿಪ್ಪಲಿ ಉಷ್ಣಕಾರಕವಾಗಿದ್ದು ವಿರೇಚಕ ಮತ್ತು ಕಾಮೋತ್ತೇಜನ ಗುಣ ಹೊಂದಿದೆ. ಹಿಪ್ಪಲಿಯನ್ನು ಮುಖ್ಯವಾಗಿ ಕಫ, ಅಸ್ತಮಾ, ನೆಗಡಿ, ಕೆಮ್ಮಿನ ಶಮನದಲ್ಲಿ ಬಳಸುತ್ತಾರೆ.ಇದು ವಾತಹಾರಕವಾಗಿದ್ದು, ಪಚನ ಕ್ರಿಯೆಯನ್ನು ಹೆಚ್ಚಿಸುತ್ತದೆ. ಜೀರ್ಣಶಕ್ತಿಯನ್ನು ವೃದ್ಧಿಸಿ, ನಾಲಿಗೆಯ ರುಚಿಯನ್ನು ತೀಕ್ಷ್ಣಗೊಳಿಸುತ್ತದೆ. ಮಾರುಕಟ್ಟೆಯಲ್ಲಿ ಇದರ ’ಪಿಪ್ಪಲ್ಯಾಸವ’, ’ಪಿಪ್ಪಲಿ ಮೂಲ’ಉತ್ಪನ್ನಗಳು ದೊರೆಯುತ್ತವೆ. ಒಣಗಿದ ಹಿಪ್ಪಲಿ ಕೂಡ ಭಾರತದ ಸಾಂಬಾರು ಪದಾರ್ಥಗಳಲ್ಲಿ ಒಂದು. ಇದನ್ನು ಉಪ್ಪಿನಕಾಯಿಯಲ್ಲಿ, ಅಡುಗೆಯಲ್ಲಿ ಸುವಾಸನೆಗಾಗಿ, ರುಚಿ ಹೆಚ್ಚಿಸಲು ಬಳಸುತ್ತಾರೆ. ಇದರಿಂದ ಆಹಾರ ಸುಲಭವಾಗಿ ಪಚನವಾಗುವುದಲ್ಲದೇ ಅದು ಕೆಡದಂತೆ ಕೀಟಾಣುಗಳಿಂದ ರಕ್ಷಿಸುತ್ತದೆ. ಆಂಟಿಬಯೋಟಿಕ್ ಹಾಗೂ ನಂಜುನಿರೋಧಕ ಗುಣವನ್ನು ಹೊಂದಿದೆ.ಇದು ಹೇರಳವಾದ ಆಂಟಿ ಆಕ್ಸಿಡಂಟ್ಗಳನ್ನು ಹೊಂದಿದ್ದು, ರಕ್ತದೊತ್ತಡ ಕಡಿಮೆ ಮಾಡಲು, ದೇಹದ ಕೊಬ್ಬಿನಾಂಶ ಇಳಿಸಲು ಸಹಕಾರಿಯಾಗಿದೆ. ಚಿಕ್ಕ ಮಕ್ಕಳಿಗೆ ಕಫ ನಿವಾರಿಸಲು ಒಂದು ಚಿಟಿಕೆ ಹಿಪ್ಪಲಿ ಪುಡಿಯನ್ನು ಜೇನುತುಪ್ಪದಲ್ಲಿ ತಿನ್ನಿಸುತ್ತಾರೆ.

4

ಇದು ನೀರು ಹಿಡಿದಿಡುವ ಫಲವತ್ತಾದ ಗೋಡು ಮಣ್ಣಿನಲ್ಲಿ, ಜಂಬು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಉಷ್ಣವಲಯದ ಆರ್ದ್ರ ಹವೆಯಲ್ಲಿ ಹೆಚ್ಚು ಮಳೆ ಬೀಳುವ, ಭಾಗಶಃ ನೆರಳಿನ ಪ್ರದೇಶದಲ್ಲಿ ಹುಲುಸಾಗಿ ಬೆಳೆಯುತ್ತದೆ. ಕೇರಳ ಕೃಷಿ ವಿಶ್ವವಿದ್ಯಾಲಯ ’ವಿಶ್ವಮ್’ ಎಂಬ ಹೆಚ್ಚಿನ ಇಳುವರಿ ಕೊಡುವ ಹಿಪ್ಪಲಿ ತಳಿ ಬಿಡುಗಡೆ ಮಾಡಿದ್ದು, ಇದು ತೆಂಗು ಅಥವಾ ಅಡಿಕೆ ತೋಟದಲ್ಲಿ ಅಂತರ ಬೆಳೆಯಾಗಿ ಬೆಳೆಯಲು ಯೋಗ್ಯವಾಗಿದೆ. ಇದನ್ನು ಕಾಂಡದ ತುಂಡುಗಳಿಂದ ಸುಲಭವಾಗಿ ಸಸ್ಯಾಭಿವೃದ್ಧಿ ಮಾಡಬಹುದು. ೨ ಅಥವಾ ೩ ಗೆಣ್ಣುಗಳುಳ್ಳ ಬಳ್ಳಿಯ ತುಂಡನ್ನು ಮಾರ್ಚ್ ಇಲ್ಲವೇ ಏಪ್ರಿಲ್ ತಿಂಗಳಲ್ಲಿ ಪ್ಯಾಕೆಟ್ನಲ್ಲಿ ಹಾಕಿ, ಬೇರು ಬಿಟ್ಟನಂತರ ಮೇ ತಿಂಗಳ ಅಂತ್ಯದಲ್ಲಿ ೬೦ x ೬೦ ಸೆಂ.ಮೀ. ಅಂತರದಲ್ಲಿ ಸಸಿಗಳನ್ನು ನಾಟಿ ಮಾಡಿ ತೆಳುವಾಗಿ ನೀರುಣಿಸಬೇಕು. ೨೫ ಕೆ.ಜಿ. ಸಾರಜನಕ, ೨೦ ಕೆ.ಜಿ ರಂಜಕ ಮತ್ತು ೭೦ ಕೆ.ಜಿ. ಪೊಟ್ಯಾಷ್ ಗೊಬ್ಬರವನ್ನು ನಾಟಿ ಮಾಡುವಾಗ ಹಾಕಬೇಕು. ಪ್ರತಿ ಕೊಯ್ಲಿನ ನಂತರ ೨೫ ಕೆ.ಜಿ. ಸಾರಜನಕ ಗೊಬ್ಬರ ನೀಡಿ ನೀರು ಹಾಯಿಸಬೇಕು. ಇದು ನೀರಾವರಿ ಬೆಳೆಯಾಗಿದ್ದು, ಕರಾವಳಿ ಪ್ರದೇಶದಲ್ಲಿ ಕೇವಲ ಬೇಸಿಗೆಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ನೀರುಣಿಸಲಾಗುವುದು.

ನಾಟಿ ಮಾಡಿದ ೬ ತಿಂಗಳಿಗೆ ಕಾಯಿ ಕೊಯ್ಲಿಗೆ ಬರುತ್ತದೆ. ಹಸಿರು ಬಣ್ಣದಿಂದ ಕಪ್ಪು ಬಣ್ಣಕ್ಕೆ ತಿರುಗಿದ ಕಾಯಿಯನ್ನು ಬಿಡಿಸಿ ಚೆನ್ನಾಗಿ ಗರಿ ಗರಿಯಾಗುವಂತೆ ಒಣಗಿಸಬೇಕು. ವರ್ಷದಲ್ಲಿ ೩-೪ ಸಲ ಕಾಯಿ ಕೊಯ್ಲಿಗೆ ಬರುತ್ತದೆ. ಪ್ರತಿ ಹೆಕ್ಟೇರಿಗೆ ಸುಮಾರು ೧೦ ಕ್ವಿಂಟಲ್ ಒಣಗಿದ ಹಿಪ್ಪಲಿ ಇಳುವರಿ ಬರುತ್ತದೆ. ೩ ವರ್ಷದ ನಂತರ ಇಳುವರಿ ಕಡಿಮೆಯಾದಾಗ ಹೊಸದಾಗಿ ನಾಟಿ ಮಾಡಬೇಕು. ೨ ವರ್ಷದ ನಂತರ ಬೇರು ಮತ್ತು ಕಾಂಡವು ಸಹ ಪೈಪರಿನ್ ಅಂಶವನ್ನು ಹೊಂದಿದ್ದು, ಗಿಡವನ್ನು ಬೇರುಸಮೇತ ಕಿತ್ತು ೫ ಸೆಂ.ಮೀ. ಉದ್ದ ತುಂಡುಗಳಾಗಿ ಮಾಡಿ ಒಣಗಿಸಿ ಶೇಖರಿಸಬೇಕು. ಇದನ್ನು ’ಹಿಪ್ಪಲಿಮೂಲ’ ಎನ್ನುತ್ತಾರೆ. ಪ್ರತಿ ಹೆಕ್ಟೇರಿಗೆ ೫ ಕ್ವಿಂಟಲ್ ಒಣಹಿಪ್ಪಲಿಮೂಲದ ಇಳುವರಿ ತೆಗೆಯಬಹುದು.