ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೩

ಆಪ್ ಲೋಕ

ಬೆಳೆ ಇಳುವರಿ ಅಂದಾಜು ಸಮೀಕ್ಷೆಗೆ ಮೊಬೈಲ್ ಆಪ್ಲಿಕೇಶನ್

ಪೃಥ್ವಿ ಟಿ. ಪಿ. ಎಂ
8277932654

ಕಳೆದ ೬ ದಶಕಗಳಿಂದ ಕರ್ನಾಟಕ ರಾಜ್ಯದಲ್ಲಿ ಬೆಳೆ ಕಟಾವು ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಬೆಳೆ ಕಟಾವು ಪ್ರಯೋಗಗಳ ಮೂಲ ಉದ್ದೇಶ ನಿಗದಿತ ಪ್ರದೇಶದಲ್ಲಿ ಸರಾಸರಿ ಬೆಳೆ ಇಳುವರಿಯನ್ನು ಅಂದಾಜು ಮಾಡುವುದಾಗಿದೆ. ಈ ಅಂದಾಜು ಇಳುವರಿಯು ಬೆಳೆ ವಿಮೆ ಪರಿಹಾರವನ್ನು ನಿಗದಿ ಪಡಿಸಲು ಒಂದು ಪ್ರಮುಖ ಮಾನದಂಡವಾಗಿರುತ್ತದೆ. ಬೆಳೆ ಕಟಾವು ಪ್ರಯೋಗಗಳನ್ನು ಅನಿಯತವಾಗಿ (ರ್ಯಾಂಡಮ್) ಆಯ್ಕೆ ಮಾಡಲಾದ ತಾಕುಗಳಲ್ಲಿ ಬೆಳೆಗೆ ಅನುಸಾರವಾಗಿ ೫ ಘಿ ೫ ಮೀ. ಅಥವಾ ೧೦ ಘಿ ೫ ಮೀ. ಪ್ರದೇಶದಲ್ಲಿ ಕೈಗೊಳ್ಳಲಾಗುತ್ತದೆ

ಈಗಾಗಲೇ ದೇಶದಲ್ಲೇ ಪ್ರಥಮ ಬಾರಿಗೆ ಬೆಳೆ ವಿಮೆ ನೊಂದಣಿಗೆ ವೆಬ್ಸೈಟ್ (http://samrakshane.karnataka.gov.in) ಒಂದನ್ನು ಅಭಿವೃದ್ಧಿಪಡಿಸಿ ಅಳವಡಿಸಿಕೊಂಡಿರುವ ರಾಜ್ಯವೆಂಬ ಖ್ಯಾತಿಗೆ ಪಾತ್ರವಾಗಿರುವ ಕರ್ನಾಟಕವು ಈಗ ದೇಶದಲ್ಲೇ ಪ್ರಥಮ ಬಾರಿಗೆ ಬೆಳೆ ಕಟಾವು ಪ್ರಯೋಗಕ್ಕಾಗಿ ಎನ್.ಐ.ಸಿ. ಮುಖಾಂತರ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿ ಮತ್ತೊಂದು ಖ್ಯಾತಿಗೆ ನಾಂದಿಯಾಡಿದೆ.

ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿದ್ದ ಸಾಂಪ್ರದಾಯಿಕ ಬೆಳೆ ಕಟಾವು ಪ್ರಯೋಗಗಳ ಮಾಹಿತಿ ಸಂಗ್ರಹಣೆ, ಕ್ರೋಢೀಕರಣ ಮತ್ತು ವರದಿ ತಯಾರಿಕೆ ಪ್ರಕ್ರಿಯೆ ಸಾಕಷ್ಟು ವಿಳಂಬವಾಗುತ್ತಿತ್ತು. ಕೆಲವೊಮ್ಮೆ ಈ ಪ್ರಕ್ರಿಯೆ ಸುಮಾರು ೬ ರಿಂದ ೮ ತಿಂಗಳೇ ಆಗುತ್ತಿತ್ತು ಮತ್ತು ಬೆಳೆ ವಿಮೆ ಪರಿಹಾರ ಮೊತ್ತ ನಿಗದಿಯಾಗುವಲ್ಲಿ ಇನ್ನೂ ವಿಳಂಬವಾಗುತ್ತಿತ್ತು. ಆದರೆ, ಈ ಅಪ್ಲಿಕೇಶನ್ ಅಳವಡಿಕೆಯಿಂದ ಈ ಎಲ್ಲಾ ಪ್ರಕ್ರಿಯೆಗಳು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿವೆ. ಮೇಲಾಗಿ, ಸಾಂಪ್ರದಾಯಿಕ ಬೆಳೆ ಕಟಾವು ಪದ್ಧತಿಯಲ್ಲಿ ಹಲವಾರು ಕಾರಣಗಳಿಂದ ಲೋಪಗಳಾಗುವ ಮತ್ತು ಅಂಕಿ ಅಂಶಗಳನ್ನು ತಿದ್ದುವ ಸಾಧ್ಯತೆಗಳು ಇದ್ದವು ಹಾಗೂ ಮೂಲ ಕಾರ್ಯಕರ್ತರನ್ನು ಮೇಲುಸ್ತುವಾರಿ ಮಾಡುವುದೂ ಸಹ ಕಷ್ಟಕರವಾಗಿತ್ತು. ಈ ಅಪ್ಲಿಕೇಷನ್ ಜಿ.ಪಿ.ಎಸ್. ಆಧಾರಿತವಾಗಿದ್ದು, ಇಂಟರ್ನೆಟ್ ಮುಖಾಂತರ ಬೆಳೆ ಕಟಾವು ಪ್ರಯೋಗದ ಮಾಹಿತಿಯನ್ನು ಕ್ಷಣಮಾತ್ರದಲ್ಲೇ ಸರ್ವರ್ಗೆ ಅಪ್ಲೋಡ್ ಮಾಡುವುದರಿಂದ ೬ ರಿಂದ ೮ ತಿಂಗಳು ತೆಗೆದುಕೊಳ್ಳುತ್ತಿದ್ದ ಪ್ರಕ್ರಿಯೆ ಕ್ಷಣಮಾತ್ರದಲ್ಲಿ ಪೂರ್ಣಗೊಳ್ಳುತ್ತಿದೆ ಮತ್ತು ಮೂಲಕಾರ್ಯಕರ್ತರು ಯಾವ ಜಾಗದಲ್ಲಿ ಪ್ರಯೋಗ ಕೈಗೊಂಡಿದ್ದಾರೆ ಮತ್ತು ಸರಿಯಾಗಿ ಪ್ರಯೋಗವನ್ನು ಕೈಗೊಂಡಿದ್ದಾರೆಯೆ ಎಂಬುದನ್ನು ವೆಬ್ಸೈಟ್ ಮುಖಾಂತರ ತಿಳಿಯಬಹುದಾಗಿದೆ.

ರಾಜ್ಯದಲ್ಲಿ ಭೂಮಿ (Bhoomi) ತಂತ್ರಾಂಶದ ಅಭಿವೃದ್ಧಿಯ ರುವಾರಿಗಳೂ ಹಾಗೂ ಪ್ರಸ್ತುತ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ರಾಜೀವ್ ಚಾವ್ಲರವರ ನೇತೃತ್ವದಲ್ಲಿ ಎನ್.ಐ.ಸಿ. ಮುಖಾಂತರ ಅಭಿವೃದ್ಧಿಯಾಗಿರುವ ಈ ತಂತ್ರಜ್ಞಾನಕ್ಕೆ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆ ಇಳುವರಿ ಅಂದಾಜು ಸಮೀಕ್ಷೆಗೆ ರಾಜ್ಯಾದ್ಯಂತ ನಿಗದಿಯಾಗಿರುವ ೮೪೭೫೨ ಬೆಳೆ ಕಟಾವು ಪ್ರಯೋಗಗಳ ಪೈಕಿ ೩೩೫೭೪ ಪ್ರಯೋಗಗಳಿಗೆ ಈ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು ೨೫೫೪ ಪ್ರಯೋಗಗಳ ಪೈಕಿ ೧೬೦೦ ಪ್ರಯೋಗಗಳಿಗೆ ಈ ಅಪ್ಲಿಕೇಶನ್ ಅನ್ನು ಬಳಸಲಾಗುತ್ತಿದೆ. ಜಿಲ್ಲೆಯಾದ್ಯಂತ ಈಗಾಗಲೇ ೧೩೬೫ ಬೆಳೆ ಕಟಾವು ಪ್ರಯೋಗಗಳ ಮಾಹಿತಿ ಸರ್ವರ್ಗೆ ಅಪ್ಲೋಡ್ ಆಗಿದೆ.ಈ ನಿಟ್ಟಿನಲ್ಲಿ ಈಗಾಗಲೆ ಪ್ರತಿ ತಾಲ್ಲೂಕಿಗೆ ೪ ರಿಂದ ೫ ಜನ ಮಾಸ್ಟರ್ ಟ್ರೈನರ್ಗಳನ್ನು ನೇಮಿಸಲಾಗಿದ್ದು ಕೃಷಿ, ತೋಟಗಾರಿಕೆ, ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಮೂಲ ಕಾರ್ಯಕರ್ತರಿಗೆ ಈ ಅಪ್ಲಿಕೇಶನ್ ಬಳಕೆ ಬಗ್ಗೆ ತರಬೇತಿ ನೀಡಲಾಗಿದೆ.