ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೩

ಬಾಲವನ

ಊದಲಿನ ಊಟ -ದೇಹಕ್ಕಿಲ್ಲ ರೋಗಗಳ ಕಾಟ

image_
ಶಶಿಕಲಾ ಎಸ್.ಜಿ.,
99458082141
1

ಮಕ್ಕಳೇ ಕಳೆದ ಆರು ಸಂಚಿಕೆಗಳಿಂದ ನವಣೆ, ಸಜ್ಜೆ, ಹಾರಕ, ಕೊರಲೆ, ಸಾಮೆ ಮತ್ತು ಬರಗು ಸಿರಿಧಾನ್ಯಗಳ ಬಗ್ಗೆ ತಿಳಿದುಕೊಂಡಿದ್ದೀವಿ, ಈ ಸಾಲಿನ ಅಂದರೆ ಸಿರಿಧಾನ್ಯದ ಕೊನೆಯ ಸದಸ್ಯನಾಗಿ ಊದಲು ಬಗ್ಗೆ ಈ ಬಾರಿ ತಿಳಿದುಕೊಳ್ಳೋಣ. ಊದಲು ಇದು ಮೂಲತಃ ನಮ್ಮ ದೇಶದ ಬೆಳೆ. ನಾಲ್ಕು ಸಾವಿರ ವರ್ಷಗಳ ಇತಿಹಾಸವಿರುವ ಬೆಳೆ ಇದು. ಈಜಿಪ್ಟ್ ದೇಶದ ಪಿರಮಿಡ್ಗಳಲ್ಲಿ ಸಹ ಈ ಧಾನ್ಯ ಕಂಡುಬಂದಿರುವುದರ ಬಗ್ಗೆ ಉಲ್ಲೇಖಗಳಿವೆ. ಇದನ್ನು ನಮ್ಮ ದೇಶದಲ್ಲಿ ಉತ್ತರಪ್ರದೇಶ, ಹಿಮಾಲಯದ ಬೆಟ್ಟಗಳಲ್ಲಿ, ಮದ್ಯಪ್ರದೇಶ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಬೆಳೆಯಲಾಗುತ್ತಿದೆ. ಕರ್ನಾಟಕದಲ್ಲಿ ಹಾವೇರಿ, ಕೊಪ್ಪಳ, ತುಮಕೂರು ಮುಂತಾದ ಜಿಲ್ಲೆಗಳಲ್ಲಿ ಅಲ್ಲಲ್ಲಿ ಬೆಳೆಯಲಾಗುತ್ತಿದೆ. ಬರಗಾಲದಲ್ಲೂ ಹುಲುಸಾಗಿ ಬೆಳೆದು ಒಳ್ಳೆಯ ಬೆಳೆ ಕೊಡುತ್ತದೆ. ದನಕರುಗಳಿಗೆ ಇದು ಒಳ್ಳೆಯ ಮೇವು. ಊದಲು ಧಾನ್ಯವನ್ನು ಆಂಗ್ಲ ಭಾಷೆಯಲ್ಲಿ ಬಾರ್ನ್ ಯಾರ್ಡ್ ಮಿಲ್ಲೆಟ್ ಅಂತ ಕರೆಯುತ್ತಾರೆ. ಇದರ ಸಸ್ಯಶಾಸ್ತ್ರೀಯ ಹೆಸರು Echinochola frumantacea. ಇತರೆ ಸಿರಿಧಾನ್ಯಗಳಂತೆ ಊದಲು ಸಹ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಕಡಿಮೆ ಬೇಸಾಯದ ವೆಚ್ಚದಲ್ಲಿ ಬೆಳೆಯಬಹುದಾದಂತಹ ಬೆಳೆ, ಹೊರ ಕವಚ ತೆಗೆದರೆ ಬಿಳುಪಾಗಿರುವ ಸಣ್ಣ ರವೆಯಂತಹ ಊದಲು ಉಪಯೋಗಕ್ಕೆ ಸಿದ್ದವಿರುತ್ತೆ, ಅಕ್ಕಿಯನ್ನು ಬಳಸುವಂತೆ ಇದನ್ನು ನಾನಾ ರೀತಿಯ ಅಡುಗೆಗಳಲ್ಲಿ ಬಳಸಬಹುದು

3

ಊದಲು ನಮ್ಮ ದೇಹದ ಲಿವರ್ ಅನ್ನು ಶುದ್ದಿ ಮಾಡುವ ಅತ್ಯಮೂಲ್ಯ ಗುಣ ಹೊಂದಿದೆ. ಸಕ್ಕರೆ ಖಾಯಿಲೆಗೆ ಇದು ರಾಮಬಾಣ ಎನ್ನುವ ಮಾತಿದೆ. ಹೃದಯ ಕಾರ್ಯಕ್ಷಮತೆ ಹೆಚ್ಚಿಸುತ್ತದೆ, ಕಬ್ಬಿಣ, ಕ್ಯಾಲ್ಸಿಯಂ, ಪಾಸ್ಪರಸ್ಸ್, ವಿಟಮಿನ್ ಬಿ ೬ ಹೆಚ್ಚಾಗಿ ಹೊಂದಿರುವ ಧಾನ್ಯವಿದು. ಪ್ರಸ್ತುತ ಪರಿಸ್ಥಿತಿಯಲ್ಲಿ ಆರೋಗ್ಯವಾಗಿರುವವರೆ ಅತಿ ಹೆಚ್ಚು ಸಿರಿವಂತರು ಎನ್ನುವಂತಾಗಿದೆ. ಏಕೆಂದರೆ ಸಣ್ಣ ವಯಸ್ಸಿನಲ್ಲೇ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಮುಖ್ಯ ಕಾರಣ ನಮ್ಮ ಆಹಾರ ಪದ್ದತಿ. ನಾವು ತಿನ್ನುವ ಆಹಾರವೇ ಔಷಧಿಯಾಗಬೇಕೆ ಹೊರತು, ಔಷಧಿಯೇ ಆಹಾರವಾಗಬಾರದು. ನಮ್ಮ ದಿನ ನಿತ್ಯದ ಆಹಾರದಲ್ಲಿ ಸಿರಿಧಾನ್ಯಗಳನ್ನು ಅಳವಡಿಸಿಕೊಂಡರೆ ಖಂಡಿತ ರೋಗಗಳಿಂದ ದೂರವಿರಬಹುದು, ನಮ್ಮ ಪೂರ್ವಜರ ಆರೋಗ್ಯದ ಗುಟ್ಟು ಇದು

ನಾವು ದಿನನಿತ್ಯ ಬಳಸುವ ಅಕ್ಕಿ, ಗೋಧಿಗೆ ಹೋಲಿಸಿದರೆ, ಸಿರಿಧಾನ್ಯಗಳಲ್ಲಿ ಸಸಾರಜನಕ, ಕೊಬ್ಬು, ಕಬ್ಬಿಣದ ಅಂಶ, ಕ್ಯಾಲ್ಸಿಯಂ ಮತ್ತು ನಾರಿನ ಅಂಶ ಶೇಕಡ ೨ರಿಂದ ಶೇಕಡ ೧೫ರವರೆಗೆ ಇದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಈ ಸಿರಿಧಾನ್ಯಗಳಲ್ಲಿ ವೈದ್ಯರನ್ನು ನಿಬ್ಬೆರಗಾಗಿಸುವಂತಹ ಅನೇಕ ಔಷಧೀಯ ಗುಣಗಳಿವೆ. ಅಂಗೈಯಲ್ಲಿ ಔಷಧಿ ಇಟ್ಟುಕೊಂಡು ಊರೆಲ್ಲಾ ಸುತ್ತಿದರು ಎಂಬಂತೆ ನಮ್ಮದೇ ಆದ ಸಿರಿಧಾನ್ಯಗಳ ಬಳಕೆ ಮರೆತು ಬೇರೆ ದೇಶದ ಆಹಾರ ಪದ್ಧತಿಗೆ ನಾವು ಶರಣಾಗುತ್ತಿರುವುದು ವಿಷಾದವೇ ಸರಿ. ಬನ್ನಿ ಇನ್ನಾದರೂ ನಾವೆಲ್ಲಾ ನಮ್ಮ ಆಹಾರದಲ್ಲಿ ಸಿರಿಧಾನ್ಯಗಳಿಗೆ ಅಗ್ರಸ್ಥಾನ ನೀಡಿ, ಸದೃಢ ಆರೋಗ್ಯ ಪಡೆಯೋಣ