ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೩

ಬೀಜ ಪ್ರಪಂಚ

ಹೆಸರು

image_
ಡಾ. ಕೆ. ಎಸ್. ಶೇಷಗಿರಿ
9741769213
1

ಹೆಸರು ಪ್ರಮುಖವಾಗಿ ಕೆಂಪು ಮಣ್ಣಿನ ಪ್ರದೇಶಗಳಲ್ಲಿ ಬೆಳೆಯುವ ಕಡಿಮೆ ಅವಧಿಯ ದ್ವಿದಳ ಧಾನ್ಯ ಬೆಳೆ. ಇದನ್ನು ಸಾಮಾನ್ಯವಾಗಿ ಮುಂಗಾರಿನಲ್ಲಿ ಭತ್ತದ ಕಟಾವಿನ ನಂತರ ಉಳಿಕೆ ತೇವಾಂಶ ಉಪಯೋಗಿಸಿಕೊಂಡು ಹಿಂಗಾರಿನಲ್ಲಿ, ನೀರಾವರಿ ಬೆಳೆಯಾಗಿ ಬೇಸಿಗೆಯಲ್ಲೂ ಬೆಳೆಯುತ್ತಾರೆ. ವೈಜ್ಞಾನಿಕವಾಗಿ ’ವಿಗ್ನ ರೇಡಿಯೇಟ’ ಎಂದು ಕರೆಯಲಾಗುವ ಈ ಬೆಳೆ ’ಲೆಗ್ಯುಮಿನೇಸಿಯೆ’ ಕುಟುಂಬಕ್ಕೆ ಸೇರಿದೆ. ಹಲವು ಪೋಷಕಾಂಶಗಳನ್ನು ಹೊಂದಿರುವ ಹೆಸರು ಕಾಳು ಉತ್ತಮ ಸಸಾರಜನಕದ ಮೂಲವೂ ಹೌದು. ಪ್ರತಿ ೧೦೦ ಗ್ರಾಂ ಹೆಸರು ಕಾಳಿನಿಂದ, ೩೪೭ ಕ್ಯಾಲೊರಿ ಶಕ್ತಿ, ೧.೨ ಗ್ರಾಂ ಕೊಬ್ಬು, ೨೪ಗ್ರಾಂ. ಪ್ರೋಟಿನ್, ೬೩ ಗ್ರಾಂ. ಶರ್ಕರಪಿಷ್ಟ, ೧೬ ಗ್ರಾಂ. ನಾರು, ೧೨೪೬ ಮಿ.ಗ್ರಾಂ ಪೊಟಾಷಿಯಮ್ ಹಾಗೂ ಶೇ.೧೩ರಷ್ಟು ಸುಣ್ಣದಂಶ ದೊರೆಯುತ್ತದೆ. ಭಾರತ/ ಮಧ್ಯ ಏಷ್ಯಾದಲ್ಲಿ ಉಗಮವಾದ ಹೆಸರು ಬೆಳೆಯನ್ನು ಪ್ರಪಂಚದ ೧೩ ದೇಶಗಳಲ್ಲಿ ಹಾಗೂ ಭಾರತದ ೧೦ ರಾಜ್ಯಗಳಲ್ಲಿ ಬೆಳೆಯಲಾಗುತ್ತಿದೆ. ನಮ್ಮ ದೇಶದಲ್ಲಿ ಒರಿಸ್ಸಾ ರಾಜ್ಯವು ಅತ್ಯಧಿಕ ಪ್ರದೇಶ, ಉತ್ಪಾದನೆ ಹಾಗೂ ಉತ್ಪಾದಕತೆ ಹೊಂದಿದೆ. ಸುಮಾರು ೩೦-೪೫ ಸೆಂ.ಮೀ. ಎತ್ತರಕ್ಕೆ ಬೆಳೆಯುವ ಹೆಸರು ನೇರವಾಗಿ ಬೆಳೆಯುವ ರೋಮದಿಂದ ಕೂಡಿದ ಕಾಂಡ, ಸ್ವಲ್ಪ ಬಾಗಿದ ರೆಂಬೆಗಳನ್ನು ಹೊಂದಿರುತ್ತವೆ. ಹೂವುಗಳು ೧೦-೨೦ರ ಗುಂಪುಗಳಲ್ಲಿ ರೆಂಬೆಗಳ ತುದಿಯಲ್ಲಿ ಅರಳಿ, ೬-೧೦ ಸೆಂ.ಮೀ. ಉದ್ದದ ರೋಮಸಹಿತ ಕಾಯಿಗಳನ್ನು ಬಿಡುತ್ತವೆ. ಮಾಗಿದಾಗ ಹಸಿರು ಕಾಯಿಗಳು ಕಂದು/ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಮಾಗಿದ ಕಾಳುಗಳು ತಳಿಗೆ ಅನುಗುಣವಾಗಿ ಹಸಿರು, ಕಂದು, ಕಪ್ಪು ಅಥವಾ ಹಳದಿ ಬಣ್ಣ ಹೊಂದಿರುತ್ತವೆ. ಹೆಸರು ಬಿತ್ತನೆಯಾದ ೬೦-೭೫ ದಿನಗಳ ಅವಧಿಯಲ್ಲಿ ಕೊಯ್ಲಿಗೆ ಬರುತ್ತದೆ

ಹೆಸರನ್ನು ಉತ್ತಮ ಗುಣಮಟ್ಟದ ಬೀಜ ಬಳಸಿ ಕೃಷಿ ಮಾಡುತ್ತಾರೆ. ಬಿತ್ತನೆಗಾಗಿ ಬೀಜ ಆರಿಸುವಾಗ ಒಡೆದ, ಆಕಾರವಿಲ್ಲದ, ಮುರುಟಿದ, ಸುಕ್ಕುಗಟ್ಟಿದ ಕಾಳುಗಳನ್ನು ತೆಗೆದು ಬಿತ್ತನೆಗೆ ಬಳಸಬೇಕು. ಆಯ್ದ ಬೀಜಗಳನ್ನು ೨.೦ ಗ್ರಾಂ(ಪ್ರತಿ ಕಿ.ಗ್ರಾಂ ಬೀಜಕ್ಕೆ) ಕಾರ್ಬನ್ ಡೈಜಿಮ್/ ತೈರಾಮ್ನಿಂದ ಬಿತ್ತನೆಗೆ ೨೪ ಗಂಟೆಗಳ ಮೊದಲು ಉಪಚರಿಸಬೇಕು. ನಂತರ ಬಿತ್ತನೆಗೆ ಮೊದಲು ಪ್ರತಿ ಎಕರೆಗೆ ಬೇಕಾಗುವ ಬೀಜವನ್ನು ೨೦೦ ಗ್ರಾಂ ರೈಜೋಬಿಯಮ್ ಜೀವಾಣು ಮತ್ತು ೨೦೦ ಗ್ರಾಂ ರಂಜಕ ಕರಗಿಸುವ ಜೀವಾಣುವಿನಿಂದ ಉಪಚರಿಸಿ ಒಂದು ಅಡಿ (೩೦ ಸೆಂ.ಮೀ.) ಅಂತರದ ಸಾಲಿನಲ್ಲಿ ಗಿಡದಿಂದ ಗಿಡಕ್ಕೆ ೧೦ ಸೆಂ.ಮೀ. ಅಂತರವಿರುವಂತೆ ಬಿತ್ತನೆ ಮಾಡಬೇಕು. ಒಂದು ಎಕರೆ ಪ್ರದೇಶಕ್ಕೆ ೬-೮ ಕಿ.ಗ್ರಾಂ ಬಿತ್ತನೆ ಬೀಜ ಬೇಕಾಗುತ್ತದೆ