ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೩

ದಾರಿದೀಪ

ವರ್ಷವೆಲ್ಲಾ ಆದಾಯ ಗಳಿಸುವಂತಹ ಬೆಳೆ ಸೀಬೆ

ಡಾ.ಎಂ.ಸಿ.ಮಲ್ಲಿಕಾರ್ಜುನ
9740369327
1

ಶೇಂಗಾ, ಗೋವಿನ ಜೋಳ, ಹತ್ತಿ ಹೀಗೆ ಹಲವು ಬೆಳೆಗಳನ್ನು ಬೆಳೆದರೂ ಯಾವ ಬೆಳೆಯೂ, ಕೈಹತ್ತದೆ, ಹಣಕಾಸಿನ ತೊಂದರೆಯಿಂದಾಗಿ ಕೈ ಚೆಲ್ಲಿ ಕೂತ ಸಂದರ್ಭದಲ್ಲಿ ನೆರವಿಗೆ ಬಂದವರು ಗೆಳೆಯ ಅಬ್ದುಲ್ ರಜಾಕ್ ಸೌದಾಗರ್. ಗೆಳೆಯನ ಮಾರ್ಗದರ್ಶನದಿಂದ ಮಣ್ಣಿನ ಪರೀಕ್ಷೆ, ನೀರಿನ ಪರೀಕ್ಷೆ ಮಾಡಿಸಿದ ನಂತರ ಆ ನೆಲದಲ್ಲಿ ಸೀಬೆ ಬೆಳೆ ಸೂಕ್ತವೆಂದು ವೈಜ್ಞಾನಿಕ ಮಾರ್ಗದರ್ಶನ ಪಡೆದ ರೈತ ಕೊಪ್ಪದ ಅವರ ಜಮೀನಿನಲ್ಲಿ ಸೀಬೆ ಬೆಳೆ ಬೆಳೆದು ಇಂದು ಗೆಲುವಿನ ನಗೆ ಬೀರುತ್ತಿದ್ದಾರೆ ಬಾಗಲಕೋಟೆಯ ಕಲಾದಗಿ ಗ್ರಾಮದ ರೈತರಾದ ಕೊಪ್ಪದ. ಜೌಗು ಬಿದ್ದ ಭೂಮಿಗೆ ಸೀಬೆ/ಪೇರಲ ಬೆಳೆ ಸೂಕ್ತ ಎಂದು ಅರಿತ ಇವರುಗಳು ಕೋಲ್ಕತ್ತಾ, ಥೈಲ್ಯಾಂಡ್, ಅಲಹಾಬಾದ್ ಭಾಗಗಳಿಂದ ನಾಲ್ಕು ತಳಿಗಳ ಸಸಿಗಳನ್ನು ತರಿಸಿಕೊಂಡು ತಮ್ಮ ೨ ಎಕರೆ ಒಂದು ಗುಂಟೆ ಜಮೀನಿನಲ್ಲಿ ಒಂದು ಅಡಿ ಆಳ ಒಂದು ಅಡಿ ಅಗಲದ ಪಾತಿಮಾಡಿ ನಾಟಿ ಮಾಡಿದ್ದಾರೆ. ನಾಟಿ ಮಾಡಿದ ಕೇವಲ ಎಂಟು ತಿಂಗಳಲ್ಲಿ ಮೊದಲ ಕೊಯ್ಲು ಕೊಯ್ದು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಈಗಾಗಲೇ ೬೦ ಸಾವಿರ ರೂಪಾಯಿಗಳ ಆದಾಯ ಗಳಿಸಿದ್ದಾರೆ. ನಾಲ್ಕು ಅಡಿ ಎತ್ತರ ಬೆಳೆದಿರುವ ಸೀಬೆ ಗಿಡದಲ್ಲಿ ಒಂದೊಂದು ಕಾಯಿ ಅರ್ಧ ಕಿ.ಲೋದಿಂದ ಮುಕ್ಕಾಲು ಕಿ.ಲೋವರೆಗೂ ತೂಗುತ್ತವೆ ಎಂದರೆ ನೀವು ಅಚ್ಚರಿಪಡುತ್ತೀರಿ!

3

ಇವರ ಜಮೀನಿನಲ್ಲಿ ಅಲಹಾಬಾದ್ ಸಫೇದ್, ಬರೇಕ್ಪುರ್ ಖಾಜ, ಲಲಿತ್, ಜಿಎನ್ಆರ್ ಬಿಬಿ, ಸೇರಿದಂತೆ ಒಟ್ಟು ೧,೧೮೦ ಗಿಡಗಳನ್ನು ನಾಟಿ ಮಾಡಲಾಗಿದೆ. ಈ ತಳಿಗಳಲ್ಲಿ ದೊಡ್ಡ ಗಾತ್ರ, ಕಡಿಮೆ ಬೀಜ, ಸ್ವಾದಿಷ್ಟ ರುಚಿ, ಕಟಾವು ನಂತರದಲ್ಲೂ ೧೫ ದಿನಗಳವರೆಗೂ ತಾಜಾತನ ಉಳಿದಿರುವಂಥದ್ದು ವಿಶೇಷತೆ. ಫಸಲನ್ನು ಎಲ್ಲಾ ಸೀಸನ್ಗಳಲ್ಲೂ ಪಡೆಯಬಹುದಾಗಿದೆ. ನಾಟಿ ಮಾಡಿದ ಒಂದು ತಿಂಗಳಲ್ಲಿ ನೆಲದಲ್ಲಿ ಹರಡದಂತೆ ಪ್ರ್ರೂನಿಂಗ್ ಮಾಡಲಾಗುತ್ತದೆ. ಒಂದು ಅಡಿ ಎತ್ತರ ಬೆಳೆದ ನಂತರ ಮೇಲ್ಭಾಗವನ್ನು ಕಟಾವು ಮಾಡಲಾಗುತ್ತದೆ. ಗಿಡಕ್ಕೆ ನಾಲ್ಕೈದು ಕೊಂಬೆಗಳನ್ನು ಬಿಟ್ಟು ಬೆಳೆಸುತ್ತಿದ್ದಾರೆ. ಸೀಬೆ ಸಸಿಗಳನ್ನು ೧೦ ಅಡಿ ಉದ್ದ ೬ ಅಡಿ ಅಗಲದ ಅಂತರದಲ್ಲಿ ಬೆಳೆದಿದ್ದಾರೆ. ಇದರಲ್ಲಿ ಅಂತರ ಬೆಳೆಯಾಗಿ ತೊಗರಿ ಮತ್ತು ಮೆಣಸಿನಕಾಯಿಯನ್ನೂ ಬೆಳೆಯುತ್ತಿದ್ದಾರೆ. ಇದರಿಂದ ಸೀಬೆ ಬೆಳೆಯ ನಾಟಿ ಹಾಗೂ ಪೋಷಕಾಂಶಗಳಿಗೆ ಹಾಕಿದ್ದ ವೆಚ್ಚವನ್ನು ಪಡೆದುಕೊಂಡಿದ್ದಾರೆ. ಸೀಬೆ ಗಿಡದ ಈ ಅಂತರದ ವಿಧಾನದಿಂದ ೨ ರಿಂದ ೩ ವರ್ಷದವರೆಗೂ ಸೀಬೆ ಬೆಳೆ ತೆಗೆಯಲು ಯಾವುದೇ ತೊಂದರೆ ಆಗುವುದಿಲ್ಲ. ಅನಂತರ ಮಧ್ಯದ ಒಂದು ಗಿಡವನ್ನು ತೆಗೆದರೆ ೧೨ ರಿಂದ ೧೦ ಅಡಿ ಅಂತರವಾಗುತ್ತದೆ. ಹತ್ತು ಹದಿನೈದು ವರ್ಷದ ನಂತರದಲ್ಲಿ ಒಂದು ಗಿಡವನ್ನು ತೆಗೆದರೆ ೨೦ ರಿಂದ ೧೨ ಅಡಿ ಅಂತರವಾಗುತ್ತದೆ. ಈ ಅಂತರವು ಮುಂದಿನ ಪೀಳಿಗೆಗೂ ಬೆಳೆಗಳನ್ನು ಬೆಳೆಯಲು ಅವಕಾಶವಾಗುತ್ತದೆ ಎಂಬ ಬೆಳೆಯ ಯೋಜನೆ ಯನ್ನು ಹಾಕಿಕೊಂಡಿದ್ದಾರೆ. ಸೀಬೆ ಬೆಳೆಯು ವರ್ಷವೆಲ್ಲಾ ಬರುತ್ತಿದ್ದು, ವರ್ಷದಲ್ಲಿ ೪ ತಿಂಗಳಿಗೊಮ್ಮೆ ಕೊಯ್ಲು ಮಾಡಲಾಗುತ್ತಿದೆ.

5

ಸೀಬೆ ಬೆಳೆಗೆ ಕೊಟ್ಟಿಗೆ ಗೊಬ್ಬರದ ಜೊತೆಗೆ ರಾಸಾಯನಿಕ ಗೊಬ್ಬರಗಳನ್ನೂ ನೀಡಲಾಗುತ್ತಿದೆ. ಬೆಳೆಯು ಹೂ ಬಿಡುವ ಮತ್ತು ಕಾಯಿ ಕಟ್ಟುವ ಸಂದರ್ಭದಲ್ಲಿ ಲಘು ಪೋಷಕಾಂಶಗಳನ್ನು ಕೊಡುತ್ತಿದ್ದಾರೆ. ಟ್ರೈಕೋಡರ್ಮಾ, ಅಜಟೋಬ್ಯಾಕ್ಟರ್, ಸೂಡೂಮೊನಾಸ್, ಪಿಎಸ್ಪಿ ಕೊಡುವುದರೊಂದಿಗೆ ಪ್ರತಿ ತಿಂಗಳು ಹ್ಯೂಮಸ್ನ್ನು ಭೂಮಿಗೆ ಸೇರಿಸುತ್ತಿದ್ದಾರೆ. ಅಲ್ಲದೆ ಡಿಎಪಿ, ಪೊಟ್ಯಾಷ್, ಕಬ್ಬಿಣ, ಸತುಗಳನ್ನು ಅಗತ್ಯಕ್ಕೆ ತಕ್ಕಂತೆ ಕೊಡುತ್ತಿದ್ದಾರೆ. ಈ ಎಲ್ಲಾ ವಿಧಾನಗಳಿಂದಾಗಿ ಜಮೀನಿನಲ್ಲಿ ಸೀಬೆ ಬೆಳೆಯನ್ನು ಬಂಪರ್ ಬೆಳೆಯಾಗಿಸಲು ಸಾಧ್ಯವಾಗಿದೆ. ಇವರು ವೈಜ್ಞಾನಿಕ ವಿಧಾನ ಅನುಸರಿಸಿ ಬೆಳೆಯನ್ನು ತೆಗೆಯುತ್ತಿರುವುದು ಒಂದು ವಿಶೇಷ. ಜೊತೆಗೆ ನೀರನ್ನು ಹೆಚ್ಚು ಕೊಡುವುದರಿಂದ ಬ್ಲಾಕ್ ಮೀಲಿಬಗ್, ವೈಟ್ ಮೀಲಿ ಬಗ್ ತುಂಬಾ ಬರುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ. ಆದ್ದರಿಂದ ನೀರನ್ನು ಅವಶ್ಯಕತೆಗನುಗುಣವಾಗಿ ಕೊಡು ವುದರಿಂದ ಇವುಗಳನ್ನು ನಿರ್ವಹಿಸಬಹುದೆಂದು ತಿಳಿದುಕೊಂಡಿದ್ದಾರೆ. ಇದಲ್ಲದೆ ಆಂತ್ರಾಕ್ನೋಸ್, ಬೋರಿ ಮುಂತಾದ ರೋಗಗಳು ಕೂಡಾ ಸೀಬೆ ಬೆಳೆಗೆ ಬರುವುದು ಸಾಮಾನ್ಯ. ಇದನ್ನು ಮನಗಂಡು ವಾತಾವರಣದ ಮುನ್ನೆಚ್ಚರಿಕೆ ಅರಿತು ಸೂಕ್ತ ಔಷಧೋಪಚಾರಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಈ ಎಲ್ಲಾ ವಿಧಾನಗಳಿಂದ ರಫ್ತು ಮಾಡುವ ಉತ್ಕೃಷ್ಟಮಟ್ಟದ ಸೀಬೆ ಬೆಳೆಯ ಫಲವನ್ನು ಪಡೆದು ಇಂದು ಯುಎಇ, ಥೈಲ್ಯಾಂಡ್ನಂತಹ ರಾಷ್ಟ್ರಗಳಿಗೆ ರಫ್ತು ಮಾಡಲು ಕಲ್ಕತ್ತಾದ ಮೂಲಕ ಕಳಿಸುತ್ತಿದ್ದಾರೆ. ಅಲ್ಲದೆ ಸ್ಥಳೀಯ ಮಾರುಕಟ್ಟೆಯನ್ನೂ ಕಂಡುಕೊಂಡಿದ್ದಾರೆ. ಒಬ್ಬ ರೈತ ಮನಸ್ಸು ಮಾಡಿದರೆ ಏನೆಲ್ಲಾ ಸಾಧನೆ ಮಾಡಬಹುದೆಂಬುದಕ್ಕೆ ಬಾಗಲಕೋಟೆ ಜಿಲ್ಲೆ, ಬಾಗಲಕೋಟೆ ತಾಲ್ಲೂಕಿನ ಕಲಾದಗಿ ಗ್ರಾಮದ ಹೆಚ್.ಪಿ. ಪೆಟ್ರೋಲ್ ಬಂಕ್ ಹತ್ತಿರದ ಸೀಬೆ ತೋಟಕ್ಕೆ ಒಮ್ಮೆ ಭೇಟಿ ಕೊಟ್ಟರೆ ತಿಳಿದೀತು.