ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೩

ಸಾವಯವ ಸರದಾರರು

ಅರುಣಕುಮಾರ್ ವಿ. ಕೆ.
9449623275
1

ಕೃಷಿಯಲ್ಲಿ ವೈವಿಧ್ಯತೆ, ಜೊತೆಗೆ ಶ್ರಮ ಉಳಿಸುವಂತಹ ಯಂತ್ರೋಪಕರಣ ಸಾಧನಗಳನ್ನು ಬಳಸಿಕೊಳ್ಳುವಿಕೆ, ನೂತನವಾಗಿ ಆವಿಷ್ಕಾರಗೊಂಡ ತಂತ್ರಜ್ಞಾನಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಚಾಕಚಕ್ಯತೆ, ಕೃಷಿಯಲ್ಲಿ ನಾಳೆ ಏನು ಬದಲಾವಣೆ ಬೇಕಾದೀತೆಂದು ಯೋಚಿಸಿ, ಅಂತಹ ಬದಲಾವಣೆಗೆ ಪೂರ್ವ ತಯಾರಿ ನಡೆಸುವ ಅಪರೂಪದ ವ್ಯಕ್ತಿ ಕೆ.ಆರ್. ಶಂಕರಮೂರ್ತಿ ಯವರು ತಮ್ಮ ಕೃಷಿ ಕ್ಷೇತ್ರದಲ್ಲಿ ಯಶಸ್ವಿಯಾಗಿರುವ ಓರ್ವ ಪ್ರಗತಿಪರ ರೈತ.

34

ಇವರು ಬಿ.ಕಾಂ. ಪದವಿಯವರಿಗೆ ಓದುತ್ತಲೇ ಕೃಷಿಕನಾಗಿಯೇ ಬದುಕನ್ನು ಕಟ್ಟಿಕೊಳ್ಳಬೇಕೆಂದು ತೀರ್ಮಾನಿಸಿದರು. ಕೃಷಿಯಲ್ಲಿನ ದೂರದೃಷ್ಟಿ, ಮುಂದಾಲೋಚನೆ, ಪ್ರಕೃತಿಯ ವೈಪರೀತ್ಯವನ್ನು ಅರಿತು ಬೆಳೆಗಳನ್ನು ಬೆಳೆಯ ತೊಡಗಿರುವ ವ್ಯಕ್ತಿಯಾಗಿದ್ದಾರೆ. ಇವರ ಜಮೀನಿನಲ್ಲಿ ಅಡಿಕೆ, ಭತ್ತ, ಕಾಳು ಮೆಣಸು, ಏಲಕ್ಕಿ, ಕಾಫಿ, ಸಾಂಬಾರ ಬೆಳೆಗಳಾದ ಜಾಯಿಕಾಯಿ, ಲವಂಗ, ಸರ್ವ ಸಾಂಬಾರ, ವೆನಿಲಾ ಹಾಗೂ ಹಣ್ಣು ಬೆಳೆಗಳಾದ ಸಪೋಟಾ, ಪಪ್ಪಾಯ, ಜಂಬೂ ನೇರಳೆ, ಔಷಧಿ ಸಸ್ಯಗಳು ಎಲ್ಲಾ ವಿಧವಾದ ತರಕಾರಿ ಬೆಳೆಗಳನ್ನು ಸಹ ಸಮೃದ್ಧವಾಗಿ ಬೆಳೆದಿದ್ದಾರೆ.

ಈ ಬೆಳೆಗಳಿಗೆ ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಿದ್ದು, ಬಾವಿ ನೀರನ್ನೂ ಬಳಸುತ್ತಿದ್ದು, ನೀರಿನ ಬಳಕೆಯನ್ನು ನೀರನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಎರೆಗೊಬ್ಬರ, ಕೊಟ್ಟಿಗೆ ಗೊಬ್ಬರ, ಬಯೋಡೈಜೆಸ್ಟರ್ ಹೀಗೆ ಹಲವು ವಿಧಾನದ ಮೂಲಕ ಸಂಪೂರ್ಣವಾಗಿ ಸಾವಯವ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ

ಇವು ವ್ಯವಸಾಯ ಕ್ಷೇತ್ರದಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರ ಜೊತೆಗೆ ತೋಟದ ಸುತ್ತ ಸಣ್ಣ ವಾಹನ ಚಲಿಸುವಂತೆ ದಾರಿಯನ್ನು ನಿರ್ಮಿಸಿದ್ದಾರೆ. ಇದರಿಂದಾಗಿ ಇಡೀ ಜಮೀನಿನ ವೀಕ್ಷಣೆ ಹಾಗೂ ಪರಿಶೀಲನೆ ಅನುಕೂಲಕರ ವಾಗುವಂತೆ ಮಾಡಿಕೊಂಡಿದ್ದಾರೆ. ಹೊಸ ಗಿಡವೊಂದು ಈ ವರ್ಷಕ್ಕಿಂತ ಮುಂದಿನ ಸಾರಿ ಕೊಂಡರೆ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಯೋಚಿಸದೇ ಈ ವರ್ಷವೇ ನೆಟ್ಟು ಒಂದು ವರ್ಷ ಮುಂಚೆ ಫಸಲು ಪಡೆಯುವುದೇ ಯುಕ್ತ ಎಂಬುದು ಇವರ ನಿಲುವಾಗಿದೆ. ಇವರ ಕ್ಷೇತ್ರದಲ್ಲಿ ಏನಿಲ್ಲ ಏನುಂಟು ಎಂಬ ಪ್ರಶ್ನೆಯನ್ನು ನಾವೇ ಹಾಕಿಕೊಳ್ಳಬೇಕಾದೀತು. ಅಷ್ಟರ ಮಟ್ಟಿಗೆ ಬೆಳೆಗಳ ವೈವಿಧ್ಯತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ.ಆಧುನಿಕ ಕೃಷಿ ಪದ್ಧತಿಯ ಜೊತೆಗೆ ನೂತನ ಆವಿಷ್ಕಾರಗಳನ್ನು ತಕ್ಷಣವೇ ತಮ್ಮ ಜಮೀನಿಗೆ ಅಳವಡಿಸಿಕೊಳ್ಳುವ ಜಾಣ್ಮೆ ಹಾಗೂ ಪ್ರಯೋಗಶೀಲತೆ ಇವರನ್ನು ಯಶಸ್ಸಿನ ದಾರಿಯತ್ತ ಕೊಂಡೊಯ್ದಿದೆ. ಇಂತಹ ಅಪರೂಪದ ಬೆಳೆಗಳನ್ನು ನೋಡಲು ಕೋಣಂದೂರು ಬಳಿಯ ಅಗ್ರಹಾರದಲ್ಲಿರುವ ಕೃಷಿ ಕ್ಷೇತ್ರಕ್ಕೆ ಒಮ್ಮೆ ಭೇಟಿ ಕೊಡಿ.