ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೩

ಸಂಪಾದಕೀಯ

ಹಳೆ ಬೇರು - ಹೊಸ ಚಿಗುರು ಕೂಡಿರಲು ಮರಸೊಬಗು

image_
ಕೆ.ಸಿ.ಶಶಿಧರ
9448103268
1

ವಿಶ್ವದಲ್ಲಿ ಭಾರತವನ್ನು ಕತ್ತೆತ್ತಿ ನೋಡುವಂತೆ ಬಾನೆತ್ತರದಲ್ಲಿ ತಂದು ನಿಲ್ಲಿಸಿದ ಇಸ್ರೊ ಸಾಧನೆಗೆ ನೇಗಿಲ ಮಿಡಿತ ಹಾಗೂ ಸಮಸ್ತ ಕೃಷಿಕರ ಅಭಿನಂದನೆಗಳು. ೧೦೪ ಉಪಗ್ರಹಗಳನ್ನು ಎತ್ತಿ ಹಾರಿ ನಭೋ ಮಂಡಲದಲ್ಲಿ ಸ್ಥಾಪಿಸಿದ ಇಸ್ರೊ ಸಾಧನೆ ನಿಜಕ್ಕೂ ಒಂದು ಅದ್ಭುತ ಸಾಧನೆ. ಕೃಷಿಗೂ ಈ ಸಾಧನೆ ನೇಗಿಲ ಮಿಡಿತದಲ್ಲಿ ಪ್ರಸ್ತಾಪಿಸುವುದಕ್ಕೂ ಎತ್ತಣಿನಿಂದ ಎತ್ತ ಸಂಬಂಧ ಅನ್ನುವವರಿಗಾಗಿ ಒಂದು ಅಂಶ ಗಮನಕ್ಕೆ ತರಲಿಚ್ಚಿಸುವೆ. ಈ ಯಶಸ್ವಿ ಉಡಾವಣೆಯಲ್ಲಿ ಕಾರ್ಟೋಸಸ್ಯಾಟ್ ಸಹ ಸೇರಿದೆ. ಕಾರ್ಟೋಧಸ್ಯಾಟ್ ಸರಣಿಯ ನಾಲ್ಕರ ಮುಂದಿನದ್ದು ಇದು. ನಮ್ಮ ಜಮೀನು ನಕ್ಷೆ ಸಿದ್ಧಪಡಿಸುವಷ್ಟು ಸಮರ್ಥ, ಭೂ ಬಳಕೆ ನಕ್ಷೆ, ಕೃಷಿ ಪರಿಸರದ ಬದಲಾವಣೆ ನಕ್ಷೆ, ಭೂ ಮಾಹಿತಿ, ಕೃಷಿ ಮಾಹಿತಿ ನಿರ್ವಹಣೆ ಮಾಡಬಲ್ಲದು. ಹೀಗೆ ಇಸ್ರೋ ಸಾಧನೆಗಳು ಕೃಷಿಗೆ, ಕೃಷಿ ಅಭಿವೃದ್ಧಿಗೆ ಬಹಳ ಸಹಕಾರಿ. ಅಷ್ಟೇ ಏಕೆ ಮಾಹಿತಿ ತಂತ್ರಜ್ಞಾನದ ಲಾಭ ಪಡೆಯುತ್ತಿರುವ ಕೃಷಿ ಕ್ಷೇತ್ರ ಇಂತಹ ವ್ಯವಸ್ಥೆಯನ್ನು ಕೃಷಿ ಕ್ಷೇತ್ರಕ್ಕೂ ಕಟ್ಟಿಕೊಟ್ಟಿರುವುದಕ್ಕಾಗಿ ಕೃಷಿ ವ್ಯವಸ್ಥೆಯಲ್ಲಿರುವ ನಾವೆಲ್ಲಾ ಇಸ್ರೊ ಸಾಧನೆಯನ್ನು ಗೌರವಿಸಿ, ಅಭಿನಂದಿಸಲೇಬೇಕು. ಹೀಗೆ ತಂತ್ರಜ್ಞಾನದಲ್ಲಿ ಕ್ಷಿಪ್ರ ಕ್ರಾಂತಿ ಮಾಡುತ್ತ ಸಾಗಿರುವ ನಾವು ಈ ತಂತ್ರಜ್ಞಾನ ಬೆಳೆದು ಬಂದ ಸಾಂಪ್ರದಾಯಿಕ ಹಾದಿಯನ್ನು ಮರೆಯಬಾರದು. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಯುಗಾದಿ ಹಬ್ಬ

ಹೊಸ ಚೇತನ ತುಂಬುವ ಯುಗಾದಿ, ಕೃಷಿ ಹಬ್ಬ. ಮೊದಲ ಬೇಸಾಯ, ಹೊನ್ನಾರು ಇತ್ಯಾದಿ ಹೆಸರಲ್ಲಿ ಕರೆಯುವ ಕೃಷಿ ಪ್ರಾರಂಭಿಕ ಚಟುವಟಿಕೆಯ ಸಂಕೇತ ಯುಗಾದಿ. ಆದರೆ ಹಬ್ಬ, ಸಂಪ್ರದಾಯಗಳ ಬರದಲ್ಲಿ ಯುಗಾದಿಯ ಮೂಲ ಆಶಯ ಮೊದಲ ಬೇಸಾಯ ಸಾಂಕೇತಿಕವಾಗಿದೆ. ಆದರೆ ಯುಗಾದಿಯ ಸಂದರ್ಭದಲ್ಲಿ ಮೊದಲ ಬೇಸಾಯ ಮಾಡುವುದು ಮಣ್ಣು ಮತ್ತು ನೀರು ಸಂರಕ್ಷಣೆಯಂಥ ಅತಿ ಶ್ರೇಷ್ಠವಾದ ಕೆಲಸ ಮಾಡುವುದನ್ನ ಹಬ್ಬದ ಜೊತೆ ಅಳವಡಿಸಲಾಗಿದೆ. ಪ್ರಪಂಚಕ್ಕೆ ಮಾದರಿಯಾದ ವೈಜ್ಞಾನಿಕವಾಗಿ ಇಂದೂ ಸಹ ಬೆಂಬಲಿಸುವ ತಂತ್ರಜ್ಞಾನ ಬೇಸಿಗೆ ಉಳುಮೆ. ಇದನ್ನ ಯುಗಾದಿಯೊಂದಿಗೆ ಮೇಳೈಸಿದ ನಮ್ಮ ಪೂರ್ವಿಕರ ಚಿಂತನೆಗೆ ನಾವು ಬೇಷ್ ಎನ್ನುವುದಷ್ಟೇ ಮಾಡದೆ ಅದನ್ನು ಆಚರಣೆಯಲ್ಲಿ ತಂದರೆ ನಮ್ಮ ಉತ್ತಮ ತಂತ್ರಜ್ಞಾನ ಉಳಿಸಿ ಬೆಳಸಿದಂತೆ. ಈ ಬಾರಿಯ ಯುಗಾದಿ ಬಹಳ ವಿಶಿಷ್ಠವಾದುದು. ಕಾರಣ ಬರದ ಬೇಗೆಯಲಿ ಬೆಂದ ಭೂಮಿ ನೀರಿಗಾಗಿ ಹಾತೊರೆಯುತ್ತಿದೆ. ಮುಂಗಾರಿನ ರಭಸದ ಮಳೆ ಭೂಮಿಯಲ್ಲಿ ಇಂಗಿ ದಾಹ ತಣಿಸುವುದಕ್ಕಿಂತ ಭೂಮಿ ಮೇಲೆ ಓಡಿ ನಾಲಿಗೆ ತಣಿಸಿದಂತಾಗುತ್ತದೆ. ಆದ್ದರಿಂದ ನಾವು ಈ ಬೇಸಿಗೆಯಲಿ ಉಳುಮೆ ಮಾಡಿಟ್ಟರೆ ಮುಂಗಾರಿನ ನೀರನ್ನು ಭೂಮಿಯಲ್ಲಿ ಇಳಿಸಬಹುದು. ಹೌದು ಬೇಸಿಗೆ ಉಳುಮೆ ಕಷ್ಟ ಆದರೂ ಮಾಡಿದರೆ ಫಲಿತಾಂಶ ಅದ್ಭುತ. ಉಳುಮೆ ಮಾಡಿದಾಗ ಹೆಂಟೆ ಮೇಲೇಳುತ್ತವೆ ಪುಡಿಯಾಗದು ಅನ್ನುವಿರೊ? ಖಂಡಿತ ಹಾಗೆ ಆಗಬೇಕು. ಮೊದಲ ಉಳುಮೆಯಲ್ಲಿ ದಪ್ಪ ದಪ್ಪ ಹೆಂಟೆಗಳಿರುವಂತೆ ಉಳುಮೆ ಮಾಡಬೇಕು. ಇದರಿಂದ ನೀರಿನ ಹರಿವಿಗೆ ತಡೆಯಾಗಿ ನೀರು ಭೂ ಒಡಲಲ್ಲಿ ಇಳಿಯಲು ಸಹಕಾರಿಯಾಗುತ್ತದೆ.

ಬನ್ನಿ ಎಲ್ಲರೂ ಈ ಬಾರಿ ಯುಗಾದಿ ಮೊದಲ ಬೇಸಾಯವನ್ನು ಶಾಸ್ತ್ರಕ್ಕಾಗಿ ಆಚರಿಸದೆ ಶಾಸ್ತ್ರೀಯವಾಗಿ ಮಾಡೋಣ. ಕಷ್ಟಪಟ್ಟು ಉತ್ತು ಬಂದವರಿಗೆ ಎಣ್ಣೆ ಸ್ನಾನ ಮಾಡಿಸಿ ಹೋಳಿಗೆ ಊಟದಿಂದ ಮತ್ತೆ ಉತ್ಸಾಹ ತುಂಬೋಣ. ಮತ್ತೊಂದು ಯುಗಾದಿಗಾಗಿ ಕಾಯುವಂತೆ ಮಾಡೋಣ. ಮಣ್ಣು ಮತ್ತು ನೀರ ಸಂರಕ್ಷಣೆಯ ಧ್ಯೇಯವಾಗಿರುವ ಯುಗಾದಿಯನ್ನ ಅರ್ಥಪೂರ್ಣವಾಗಿಸಿ.