ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಬೇಸಿಗೆಯಲ್ಲಿ ನೀರು ಮತ್ತು ಬೆಳೆ ನಿರ್ವಹಲು

ರುದ್ರಗೌಡ ಫ. ಚನ್ನಗೌಡ
9449063274

ರಾಜ್ಯದ ೧೦ ಕೃಷಿ ವಲಯಗಳ ಪೈಕಿ ೬ ರಲ್ಲಿ ಬರಗಾಲವು ಸಾಮಾನ್ಯ ಸಂಗತಿ ಇದ್ದು. ಇದರಲ್ಲಿ ಈಶಾನ್ಯ ಒಣ ವಲಯ, ಉತ್ತರ ಒಣ ವಲಯ, ಮಧ್ಯ ಮತ್ತು ಪೂರ್ವ ಒಣ ವಲಯಗಳು ೪-೫ ವರ್ಷಗಳಿಗೊಮ್ಮೆ ಬರ ಪರಿಸ್ಥಿತಿಯನ್ನು ಎದುರಿಸುತ್ತವೆ. ಈ ಕೆಳಗಿನ ಸೂಕ್ತ ಕ್ರಮಗಳನ್ನು ಅನುಸರಿಸಿದರೆ ಅತೀ ಕಡಿಮೆ ಮಟ್ಟದಲ್ಲಿ ನೀರುಣಿಸಿ ಬೇಸಿಗೆಯಲ್ಲೂ ಬೆಳೆಗಳನ್ನು ಬೆಳೆಯಬಹುದು. ತೋಟಗಾರಿಕೆ ಬೆಳೆಗಳಲ್ಲಿ ಹನಿ ನೀರಾವರಿಯನ್ನು ಅಳವಡಿಸುವುದರಿಂದ ಗರಿಷ್ಠ ಮಟ್ಟದಲ್ಲಿ ನೀರು ಉಳಿತಾಯವಾಗುತ್ತದೆ.

ವಿವಿಧ ಬೆಳೆಗಳಲ್ಲಿ ಹೊದಿಕೆ/ಅಚ್ಛಾದನೆ ಮಾಡುವುದರಿಂದ ಬಹುಕಾಲ ತೇವಾಂಶ ಉಳಿತಾಯವಾಗುತ್ತದೆ. ಇದರ ಉಪಯೋಗಗಳು

ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ, ನೀರಿನ ಭಾಷ್ಪೀಭವನ ಕಡಿಮೆಯಾಗುತ್ತದೆ, ಕಳೆಗಳನ್ನು ನಿಯಂತ್ರಿಸುತ್ತದೆ,ಜೀವಾಣುಗಳು ವೃದ್ಧಿಯಾಗುತ್ತವೆ, ಅಂತರ ಬೇಸಾಯ ಮಾಡುವುದು ಕಡಿಮೆಯಾಗುತ್ತದೆ. ಹೊದಿಕೆ ಕ್ರಮೇಣ ಕಳಿತು ಸಾವಯವ ಗೊಬ್ಬರವಾಗುತ್ತದೆ, ಮಣ್ಣು ಮತ್ತು ನೀರು ಕೊಚ್ಚಣೆಯನ್ನು ನಿಯಂತ್ರಣ ಮಾಡುತ್ತದೆ, ನರ್ಸರಿ ಸಸಿಗಳಿಗೆ ನೆರಳನ್ನು ಒದಗಿಸುವುದರಿಂದ ನೀರಿನ ಭಾಷ್ಪೀಭವನ ಕಡಿಮೆಯಾಗುತ್ತದೆ, ಪಾಲಿಥೀನ್ ಹಾಳೆಯನ್ನು ಹೊದಿಕೆಯಾಗಿ ಬಳಸುವುದರಿಂದ ಹಾಯಿಸಿದ ನೀರು ಆವಿಯಾಗುವುದನ್ನು ತಡೆಗಟ್ಟಬಹುದು, ಒಂದು ಎಕರೆಗೆ ೪ ಕಿ.ಗ್ರಾಂ ಅಜೊಸ್ಪೈರಿಲಮ್ ಮತ್ತು ೧೦ ಕಿ.ಗ್ರಾಂ ನೀರಿನಲ್ಲಿ ಕರಗುವ ರಂಜಕವನ್ನು ಭೂಮಿಯಲ್ಲಿ ಸೇರಿಸುವುದರಿಂದ ನೀರು ಇಂಗುವ ಪ್ರಮಾಣ ಹೆಚ್ಚಾಗುತ್ತದೆ, ಹಣ್ಣಿನ ಬೆಳೆಗಳು ಮತ್ತು ತೋಟಗಾರಿಕಾ ಬೆಳೆಗಳಿಗೆ ಮಣ್ಣಿನ ಮಡಿಕೆಗಳಿಗೆ ಸಣ್ಣ ತೂತು ಮಾಡಿ ಅದಕ್ಕೆ ಬಟ್ಟೆ ಹಾಕಿ ಮಡಿಕೆಗಳಲ್ಲಿ ನೀರು ತುಂಬಿಸುವುದರಿಂದ ನೀರು ಹನಿ ಹನಿಯಾಗಿ ಬಿದ್ದು ಬೇರುಗಳಿಗೆ ಸರಿಯಾಗಿ ಸಿಗುತ್ತದೆ, ಪ್ರತಿ ಎಕರೆಗೆ ೨೦ ಕಿ.ಗ್ರಾಂ ಪೊಟ್ಯಾಷ್ ಗೊಬ್ಬರವನ್ನು ಭೂಮಿಯಲ್ಲಿ ಸೇರಿಸುವುದರಿಂದ ನೀರು ಇಂಗುವ ಪ್ರಮಾಣ ಹೆಚ್ಚಾಗುತ್ತದೆ

ಬೆಳೆ ನಿರ್ವಹಣೆ

ಎಡೆಕುಂಟೆ ಹೊಡೆದು ತೇವಾಂಶವನ್ನು ಕಾಪಾಡುವುದು, ಎರಡು ಸಾಲುಗಳ ಮಧ್ಯ ದೋಣಿ ಸಾಲುಗಳನ್ನು ತೆಗೆಯುವುದು, ಬೆಳೆ ಸಾಲುಗಳ ನಡುವೆ ಕಸ/ಕಳೆ, ತ್ಯಾಜ್ಯವನ್ನು ಇತ್ಯಾದಿಗಳನ್ನು ಹರಡುವುದು, ಕೆಲವು ಸಸಿಗಳನ್ನು ಕಿತ್ತು ತೇವಾಂಶ ಹಂಚಿಕೆಯಾಗುವಂತೆ ಮಾಡುವುದು, ಮಣ್ಣು ಏರು ಹಾಕುವುದು, ಬೆಳೆಗಳ ಮೇಲೆ ಶೇ. ೦.೫ ರ ನೀರಿನಲ್ಲಿ ಕರಗುವ ಎಮ್.ಒ.ಪಿ ಸಿಂಪರಣೆ ಮಾಡುವುದರಿಂದ ಬೆಳೆಗಳಲ್ಲಿ ಬರ ತಡೆದುಕೊಳ್ಳುವ ಶಕ್ತಿ ಬರುತ್ತದೆ, ಬರ ಸಮಯದಲ್ಲಿ ಶೇ. ೧ ರ ಯೂರಿಯಾ ಅಥವಾ ಡಿ.ಎ.ಪಿ ಯನ್ನು ಬೆಳೆಗಳ ಮೇಲೆ ಸಿಂಪರಣೆಮಾಡುವುದರಿಂದ ಹೆಚ್ಚಿನ ಇಳುವರಿ ಪಡೆದುಕೊಳ್ಳಬಹುದು,

ಈ ಕೆಳಗೆ ಸೂಚಿಸಿದ ರಾಸಾಯನಿಕ ಉಪಚಾರದ ಪದ್ಧತಿಗಳನ್ನು ಬರ ನಿರೋಧಕತೆಗಾಗಿ ಅನುಸರಿಸಬಹುದು

 • ಸಜ್ಜೆ ಮತ್ತು ರಾಗಿ ಬೀಜಗಳನ್ನು ಪ್ರತಿಶತ ೨ ರ ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ ಒಂದು ರಾತ್ರಿ ನೆನೆಸಿ ನೆರಳಿನಲ್ಲಿ ಒಣಗಿಸುವುದು.
 • ಸಜ್ಜೆ ಬೀಜಗಳನ್ನು ಪ್ರತಿಶತ ೦.೫ ರ ಪೊಟ್ಯಾಸಿಯಂ ಡೈ ಹೈಡ್ರೋಜನ್ ಫಾಸ್ಫೇಟ್ ಅಥವಾ ೨ ಪ್ರತಿಶತ ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ ೧೦ ತಾಸು ನೆನೆಸಿ ನೆರಳಿನಲ್ಲಿ ಒಣಗಿಸುವುದು.
 • ಕಡಲೆ ಬೀಜಗಳನ್ನು ೨ ಪ್ರತಿಶತ ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ ಒಂದು ತಾಸು ನೆನೆಸಿ ನೆರಳಿನಲ್ಲಿ ಒಣಗಿಸುವುದು.
 • ಶೇಂಗಾ ಬೀಜಗಳನ್ನು ಪ್ರತಿಶತ ೧ರ ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ ೬ ತಾಸು ನೆನೆಸಿ ನೆರಳಿನಲ್ಲಿ ಒಣಗಿಸುವುದು.
 • ಆವಿ ತಡೆಗಟ್ಟುವ ರಾಸಾಯನಿಕಗಳು

 • ಈ ರಾಸಾಯನಿಕಗಳನ್ನು ಸಸ್ಯಗಳ ಮೇಲೆ ಸಿಂಪಡಿಸಿದಾಗ ಆವಿಯಾಗಿ ಹೋಗುವ ತೇವಾಂಶವನ್ನು ತಡೆಗಟ್ಟುತ್ತವೆ
 • ಸಸ್ಯಗಳು ಬೇರುಗಳ ಮುಖಾಂತರ ಹೀರಿಕೊಂಡ ತೇವಾಂಶದ ಶೇಕಡಾ ೯೯ ಭಾಗವು ಎಲೆಗಳ ರಂಧ್ರಗಳ ಮೂಲಕ ಆವಿಯಾಗಿ ವಾತಾವರಣವನ್ನು ಸೇರುತ್ತದೆ
 • ಇಂತಹ ಸ್ಥಿತಿಯಲ್ಲಿ ಆವಿ ತಡೆಗಟ್ಟುವ ರಾಸಾಯನಿಕಗಳು ಎಲೆಯ ಮೇಲೆ ಬೀಳುವ ಸೂರ್ಯ ಪ್ರಕಾಶವನ್ನು ತಡೆಯುವುದಲ್ಲದೇ, ಎಲೆಯ ರಂಧ್ರಗಳು ಮುಚ್ಚು ಸಹಾಯಕವಾಗಿ ಸಸ್ಯಗಳಿಗೆ ನಿರೋಧಕತೆಯನ್ನು ಉಂಟುಮಾಡುತ್ತವೆ
 • ವಿವಿಧ ಆವಿ ನಿರೋಧಕಗಳು

  ಎಲೆಯ ರಂಧ್ರಗಳನ್ನು ಮುಚ್ಚುವುದು: ಈ ತೆರನಾದ ಆವಿ ನಿರೋಧಕಗಳು ಎಲೆಯ ರಂಧ್ರಗಳನ್ನು ಮುಚ್ಚುವಲ್ಲಿ ಸಹಾಯಕವಾಗುತ್ತವೆ. ಇವುಗಳಲ್ಲಿ ಕಳೆನಾಶಕಗಳು, ಶಿಲೀಂಧ್ರ ನಾಶಕಗಳು ಹಾಗೂ ಸಸ್ಯವರ್ಧಕಗಳು ಮುಖ್ಯವಾದವುಗಳು. ಇವು ಇಂಗಾಲದ ಡೈ ಆಕ್ಸೈಡ್ ಸಾಂಧ್ರತೆಯನ್ನು ಹೆಚ್ಚಿಸಿ ದ್ಯುತಿಸಂಶ್ಲೇಷಣೆ ಕ್ರಿಯೆಯನ್ನು ಕಡಿಮೆಗೊಳಿಸುತ್ತವೆ. ಮುಖ್ಯ ರಾಸಾಯನಿಕಗಳೆಂದರೆ ಫಿನೈಲ್ ಮರ್ಕುರಿಕ್ ಅಸಿಟೇಟ್ (ಶಿಲೀಂಧ್ರನಾಶಕ), ಅಟ್ರಾಜಿನ್, ಅಲಕ್ಲೋರ್ (ಕಳೆನಾಶಕ) ಮತ್ತು ಎ.ಬಿ.ಎ, (ಸಸ್ಯವರ್ಧಕಗಳು) ಫಿನೈಲ್ ಮರ್ಕ್ಯುರಿಕ್ ಅಸಿಟೇಟ್ ಒಂದು ಶಕ್ತಿಯುತವಾದ ಆವಿ ನಿರೋಧಕವಾಗಿದ್ದು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಿದಾಗಲೂ ಕೂಡ ಎಲೆಯ ರಂಧ್ರಗಳನ್ನು ಮುಚ್ಚಿ ತೇವಾಂಶ ಸಂಗ್ರಹಣೆಯನ್ನು ಕಾಪಾಡಿಕೊಂಡು ಬರುತ್ತದೆ.

  ಮೀಸೋಫಿಲ್ ಕೋಶಗಳ ಕ್ರಿಯೆಗೆ ರಾಸಾಯನಿಕಗಳು: ಇವುಗಳನ್ನು ಸಸ್ಯಗಳ ಮೇಲೆ ಉಪಯೋಗಿಸಿದಾಗ ಭೌತಿಕವಾಗಿ ತೆಳು ಪದರವನ್ನುಂಟುಮಾಡಿ ಆವಿಯಾಗುವುದನ್ನು ತಡೆಗಟ್ಟುತ್ತದೆ. ಮೇಣ ಹಾಗೂ ಪ್ಲಾಸ್ಟಿಕ್ಯುಕ್ತ ರಾಸಾಯನಿಕಗಳು, ಅಸಿಟೈಟ್ ಆಲ್ಕೋಹಾಲ್, ಲೇಟೆಕ್ಸ್, ಪಿ.ವಿ.ಸಿ ಸೆಲ್ಲೋಫೆಸ್ ಮುಂತಾದವುಗಳು ಇವಕ್ಕೆ ಉದಾಹರಣೆಗಳಾಗಿವೆ. ಸಾಮಾನ್ಯವಾಗಿ ಇಂತಹ ರಾಸಾಯನಿಕಗಳು ಸಸ್ಯಗಳಿಗೆ ದುಷ್ಪರಿಣಾಮ ಉಂಟುಮಾಡಬಾರದು ಮತ್ತು ಹೆಚ್ಚು ಸಮಯ ಸಸ್ಯಗಳ ಮೇಲೆ ಉಳಿಯುವಂತಹವಾಗಿರಬೇಕು.

  ಪ್ರತಿಫಲನಾ ವಸ್ತುಗಳು: ಬಿಳಿ ಬಣ್ಣದ ವಸ್ತುಗಳು ಸೂರ್ಯನ ಕಿರಣವನ್ನು ಹೆಚ್ಚು ಪ್ರತಿಫಲಿಸಿ ಎಲೆಗಳ ಉಷ್ಣತಾಮಾನವನ್ನು ಕಡಿಮೆಗೊಳಿಸಿ ಆವಿಯಾಗುವ ಪ್ರಮಾಣವನ್ನು ಕಡಿಮೆಗೊಳಿಸುತ್ತವೆ. ಉದಾ :- ಕೆವೋಲಿನೈಟ್. ಆವಿ ನಿರೋಧಕಗಳನ್ನು ಉಪಯೋಗಿಸುವುದರಿಂದ ಜೋಳ, ಗೋಧಿ, ಹತ್ತಿ, ಬಾಳೆ ಮತ್ತು ಲಿಂಬೆ ಬೆಳೆಗಳಲ್ಲಿ ಲಾಭದಾಯಕ ಪರಿಣಾಮಗಳು ಕಂಡುಬಂದಿವೆ. ಶೇಂಗಾದಲ್ಲಿ ಪ್ರತಿಶತ ೫ ರ ಕೆಓಲಿನ್ ದ್ರಾವಣವನ್ನು ಬಿತ್ತಿದ ೪೫ ದಿವಸಗಳ ನಂತರ ೧೫ ದಿವಸಗಳ ಅಂತರದಲ್ಲಿ ಸಿಂಪಡಿಸಿದ ಕಾಯಿ ಹಾಗೂ ಎಣ್ಣೆ ಇಳುವರಿ ಪ್ರತಿಶತ ೧೨ರಷ್ಟು ಹೆಚ್ಚಾಗಿದೆ.