ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಆರಿವೆ ಗುರು

ವಿದ್ಯುತ್ ಶಾಕ್ ತಪ್ಪಿಸಿ - ಇಎಲ್ಸಿಬಿ ಬಳಸಿ

image_
ಅನಿಲ್ಕುಮಾರ್,
9449837309

ನೋಡಿ ಸ್ವಾಮಿ, ಮೊನ್ನೆ ಗಣಪತಿ ಹಬ್ಬದ ಟೈಮಲ್ಲಿ ಮನೆಯಲ್ಲಿ ಮಂಟಪಕ್ಕೆ ಸೀರಿಯಲ್ ಸೆಟ್ ಹಾಕ್ಲಿಕ್ಕೆ ಹೋಗಿ ನಮ್ಮ ಹುಡುಗ ಕರೆಂಟ್ ಹೊಡಿಸ್ಕೊಂಡ. ದೇವರ ದಯೆ ಏನೂ ಆಗ್ಲಿಲ್ಲ. ಆದ್ರೂ ಅಷ್ಟು ಸಣ್ಣ ಸೀರಿಯಲ್ ಸೆಟ್ ಲೈಟ್, ಅಷ್ಟು ಕರೆಂಟ್ ಹೊಡೆಯುತ್ತಾ? ಅದೇನು ಪವರ್? ಇದು ರಾಮೇಗೌಡರ ಪ್ರಶ್ನೆ. ಮನೆಗೆ ಸರಿಯಾಗಿ ಗ್ರೌಂಡಿಂಗ್ ಮಾಡಿಸಿದ್ದೀರೇನ್ರೀ? ಕೃಷ್ಣಪ್ಪನ ಮರುಪ್ರಶ್ನೆ. ಇಲ್ಲಾಂದ್ರೆ ಮಾಡಿಸಿ, ನೋಡಿ ಹಬ್ಬದ ದಿನ ಎಂಥಾ ಅನಾಹುತ ಆಗ್ತಿತ್ತು. ವಾಸ್ತವವೆಂದರೆ, ಗ್ರೌಂಡಿಂಗ್ ಇದ್ದಾಗ ಮೇಲಿನ ಅಪಾಯ ತಪ್ಪಿಸಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೇ ಸೀರಿಯಲ್ ಸೆಟ್ಗೆ ಗ್ರೌಂಡಿಂಗ್ ಪಾಯಿಂಟ್ ಇರುವುದಿಲ್ಲ. ಗ್ರೌಂಡಿಂಗ್ ಉಪಯೋಗವೇ ಬೇರೆ. (ಇದನ್ನು ಸಂಪುಟ-೩, ಸಂಚಿಕೆ-೧, ಜನವರಿ ೨೦೧೭ ರ ನೇಗಿಲ ಮಿಡಿತದಲ್ಲಿ ತಿಳಿಸಲಾಗಿದೆ.)

ವಿದ್ಯುತ್ ಸುರಕ್ಷೆ ವಿಚಾರ ಬಂದಾಗ, ಹಲವಾರು ವಿಚಾರಗಳನ್ನು ಗಮನಿಸಬೇಕಿದೆ. ಲಭ್ಯವಿರುವ ಉಪಕರಣ ಹಾಗೂ ವೈರಿಂಗ್ ವ್ಯವಸ್ಥೆಗಳನ್ನು ತಿಳಿಯಬೇಕಿದೆ. ಮನೆಯ ವಿದ್ಯುತ್ ವ್ಯವಸ್ಥೆಯಲ್ಲಿ ಸುರಕ್ಷೆಗೆ ಎಂಸಿಬಿ ಹಾಗೂ ಇಎಲ್ಸಿಬಿ ಗಳು ಪ್ರಮುಖ ಪಾತ್ರ ವಹಿಸುತ್ತವೆ. ಇವೆರಡೂ ತಮ್ಮದೇ ಪ್ರತ್ಯೇಕ ಉಪಯುಕ್ತತೆ ಹೊಂದಿದೆ. ಎಂಸಿಬಿ (ಮಿನಿಯೇಚರ್ ಸರ್ಕ್ಯೂಟ್ ಬ್ರೇಕರ್) ಅಥವಾ ಮಿತಕ, ಇದರ ಬೆಲೆ ೧೦೦ ರೂ. ಇಂದ ೨೫೦ ರೂ.ಗಳಾದರೆ ಇಎಲ್ಸಿಬಿ (ಅರ್ಥ್ ಲೀಕೇಜ್ ಸರ್ಕ್ಯೂಟ್ ಬ್ರೇಕರ್) ಭೂ ಸೋರಿಕೆ ಪತ್ತೆ ಉಪಕರಣ ಇದರ ಬೆಲೆ ೩,೦೦೦ ರೂ.ನಿಂದ ೫,೦೦೦ ರೂ.ಗಳು ಹೀಗಾಗಿ ಎಲೆಕ್ಟ್ರಿಷಿಯನ್ಗಳು ಇದರ ಬಗ್ಗೆ ತಿಳಿಸುವುದೇ ಕಡಿಮೆ. ಆದರೆ ಮೇಲಿನ ರೀತಿಯ ಅನೇಕ ವಿದ್ಯುತ್ ಆಘಾತಗಳಿಂದ ರಕ್ಷಿಸುವ ಗುಣ ಇಎಲ್ಸಿಬಿ ಯಲ್ಲಿದೆ. ಗ್ರೌಂಡಿಂಗ್ ಪಾಯಿಂಟ್ ಇಲ್ಲದ ವಿದ್ಯುತ್ ಉಪಕರಣಗಳಿಂದಾಗುವ ಆಘಾತ ತಪ್ಪಿಸುವಲ್ಲಿ ಇದು ವರದಾನವೇ. ಇನ್ನು ಇಡೀ ಮನೆಗೆ ಅಳವಡಿಸುವುದರಿಂದ ಎಲ್ಲಾ ರೀತಿಯ ಉಪಕರಣಗಳ(ಐರನ್ ಬಾಕ್ಸ್, ಪಂಪ್, ಮಿಕ್ಸರ್, ಟಿ.ವಿ) ಆಘಾತದಿಂದ ರಕ್ಷಿಸುವುದಲ್ಲದೇ, ವರ್ಷಾನುಗಟ್ಟಲೆ ಬಾಳಿಕೆ ದೀರ್ಘಕಾಲ ಸುರಕ್ಷೆ.

ಇನ್ನು ಇದರ ಕಾರ್ಯ ವಿಧಾನದ ಬಗ್ಗೆ ತಿಳಿಯೋಣವೇ? ಕೆಳಗಿನ ಚಿತ್ರ ಗಮನಿಸಿ

ಮನೆಗಳಲ್ಲಿ ಸಾಮಾನ್ಯವಾಗಿ ೩ರಿಂದ ೫ ಪ್ರತ್ಯೇಕ ವಿದ್ಯುತ್ ಮಂಡಲ (ಸರ್ಕ್ಯೂಟ್)ಗಳಿರುತ್ತವೆ. ಉದಾಹರಣೆಗೆ ೨-೩ ರೂಂಗಳ ಲೈಟಿಂಗ್ಗಾಗಿ ಒಂದು, ಹಾಲ್ ಇತ್ಯಾದಿಗಳಿಗೆ ಹಾಗೂ ಎಇಎಚ್, ಪಂಪ್ ಇತ್ಯಾದಿಗಳಿಗಾಗಿ ಹೀಗೆ ಪ್ರತ್ಯೇಕ ಮಂಡಲಗಳಿರುತ್ತವೆ. ಈ ಪ್ರತ್ಯೇಕ ಮಂಡಲಗಳಿಗೆ, ಅವುಗಳಲ್ಲಿ ಶಾರ್ಟ್ ಸರ್ಕ್ಯೂಟ್ ಅಥವಾ ಹೆಚ್ಚಿನ ಹೊರೆ ಬೀಳದಂತೆ ವಿವಿಧ ಸಾಮರ್ಥ್ಯದ ಎಂಸಿಬಿ ಮಿತಕ ಅಳವಡಿಸಲಾಗುತ್ತದೆ. ಆದರೆ ಈ ಮಿತಕಗಳು ಎಂಸಿಬಿ ಯಾವುದೇ ’ಶಾಕ್’ನಿಂದ ನಮ್ಮನ್ನು ರಕ್ಷಿಸಲಾರದು. ಹೀಗಾಗಿ ಎಂಸಿಬಿ (ಮಿತಕ) ಇದ್ದ ಮಾತ್ರಕ್ಕೆ ಪ್ರಾಣಾಪಾಯ ತಪ್ಪಿಸಲು ಸಾಧ್ಯವಿಲ್ಲ. ಆದರೆ ಇಎಲ್ಸಿಬಿ ಈ ಕಾರ್ಯ ನಿರ್ವಹಿಸಬಲ್ಲದು. ಇತ್ತೀಚಿನ ೮-೧೦ ವರ್ಷಗಳಿಂದಷ್ಟೇ ಹೆಚ್ಚು ಮನೆಗಳಿಗೆ ಪ್ರಚಲಿತಕ್ಕೆ ಬಂದ ಈ ತಂತ್ರಜ್ಞಾನ ಹಲವಾರು ಪ್ರಾಣ ಹಾನಿ ಹಾಗೂ ನಷ್ಟಗಳನ್ನು ತಪ್ಪಿಸಿದೆ.ಇರಿಲ್ಸಿಬಿ ಯನ್ನು ಮೀಟರ್ನಿಂದ ಬಂದ ಲೈನ್ನಲ್ಲಿ ಫ್ಯೂಸ್(ಜಿuse) ನಂತರ ಹಾಗೂ ಇತರ ಎಂಸಿಬಿ ಗಳ ಮೊದಲು ಅಳವಡಿಸಲಾಗುತ್ತದೆ ಹಾಗೂ ಮಧ್ಯದಲ್ಲಿ ಒಂದು ಮೈನ್ ಸ್ವಿಚ್ ಅಳವಡಿಸಬೇಕು. ಇದನ್ನು ಯಾವುದೇ ಎಲೆಕ್ಟ್ರಿಷಿಯನ್ ಅಳವಡಿಸಬಲ್ಲ.

ಇರಿಲ್ಸಿಬಿ ಯ ಒಳಬರುವ ಹಾಗೂ ಹೊರಹೋಗುವ ಕರೆಂಟನ್ನು ಗಮನಿಸುತ್ತಿರುತ್ತದೆ. ಎಲ್ಲಾ ಸೂಕ್ತವಾಗಿದ್ದಾಗ ಒಳಬರುವ ಹಾಗೂ ಹೊರಹೋಗುವ ವಿದ್ಯುತ್ ಸಮನಾಗಿರುತ್ತದೆ. ಯಾವುದೇ ವಿದ್ಯುತ್ ಆಘಾತವಾದಲ್ಲಿ ಅಥವಾ ಗ್ರೌಂಡ್ ಆದಲ್ಲಿ ಒಂದಿಷ್ಟು ಕರೆಂಟ್ ವಾಪಸ್ ಹೋಗದೇ ನಮ್ಮ ಮೂಲಕ ನೆಲ ಸೇರುತ್ತದೆ. (ಇದೇ ಎಲೆಕ್ಟ್ರಿಕ್ ಶಾಕ್) ಹೀಗೆ ಯಾವಾಗ ಒಳಹರಿವು ಹಾಗೂ ಹೊರ ಹರಿವಿಗೆ ವಿದ್ಯುತ್ ’ಅಸಮ’ ವಾಗುತ್ತದೋ ಆಗ ಇಡೀ ಮನೆಯ ಸಂಪರ್ಕ ತಪ್ಪಿಸಿ, ಆಘಾತ ತಡೆಯುತ್ತದೆ. ಇದನ್ನು ಟ್ರಿಪ್ ಎಂದು ಕರೆಯುತ್ತಾರೆ. ಇದಲ್ಲದೇ ಇಎಲ್ಸಿಬಿ ಶಾರ್ಟ್ ಸರ್ಕ್ಯೂಟ್ ತಡೆಯುವ ಹಾಗೂ ಹೊರೆ ಹೆಚ್ಚಾದಲ್ಲಿ ರಕ್ಷಿಸುವ ಕೆಲಸವನ್ನು ಮಾಡುತ್ತದೆ. ಇದನ್ನು ಅಳವಡಿಸುವಲ್ಲಿ ನಿಮಗೆ ಅವಶ್ಯವಾದ ಸೂಕ್ತ ಸಾಮರ್ಥ್ಯದ ಇಎಲ್ಸಿಬಿ ಆಯ್ಕೆ ಮಾಡಬೇಕು. ಇಲ್ಲವಾದಲ್ಲಿ ಪದೇ ಪದೇ ಟ್ರಿಪ್ ಆಗುವ ಸಂಭವವಿದೆ. ಟ್ರಿಪ್ ಆದ ಇಎಲ್ಸಿಬಿ, ಆನ್ ಮಾಡುವ ಮೊದಲು, ಮೇನ್ ಸ್ವಿಚ್ ಆಫ್ ಮಾಡಿ ನಂತರ ಇಎಲ್ಸಿಬಿ ಆನ್ ಮಾಡಿ, ಕೊನೆಯಲ್ಲಿ ಮತ್ತೆ ಮೇನ್ ಸ್ವಿಚ್ ಆನ್ ಮಾಡಿ. ಆಗಲೂ ಇಎಲ್ಸಿಬಿ ಮತ್ತೆ ಟ್ರಿಪ್ ಆದಲ್ಲಿ ಒಳಗಿನ ಸಮಸ್ಯೆ ಇನ್ನೂ ಇದೆ ಎಂದರ್ಥ. ಇಂಥಹ ಸಂದರ್ಭದಲ್ಲಿ ಎಲೆಕ್ಟ್ರಿಷಿಯನ್ ಸಹಾಯದ ಅವಶ್ಯಕತೆ ಇದೆ. ಕೇವಲ ಅಲ್ಪದರದಲ್ಲಿ ವರ್ಷಗಟ್ಟಲೇ ಅಪಾಯದಿಂದ ರಕ್ಷಿಸುವ ಇಎಲ್ಸಿಬಿ ಇಂದೇ ಅಳವಡಿಸುವಿರಲ್ಲವೇ?