ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಬಯಲು ಸೀಮೆಯಲ್ಲಿ ಅರಳಿದ ಜರ್ಬೆರಾ

ಜೀವನ್. ಯು,
೯೮೪೫೦೧೫೭೬೮,

ಜರ್ಬೆರ ಗಿಡದ ಬೇರು ೫೦-೭೦ ಸೆಂ.ಮಿ. ಆಳಕ್ಕೆ ಹೋಗುವುದರಿಂದ, ಚೆನ್ನಾಗಿ ನೀರು ಬಸಿದು ಹೋಗುವ ಮರಳು ಮಿಶ್ರಿತ ಗೋಡುಮಣ್ಣು ಸೂಕ್ತ. ರಸಸಾರ ೫.೫ ರಿಂದ ೬.೫ ಇರಬೇಕು. ಉತ್ತಮ ಗುಣಮಟ್ಟದ ಹೂವುಗಳನ್ನು ಹಾಗೂ ಹೆಚ್ಚು ಇಳುವರಿ ಪಡೆಯಲು ಹಸಿರು ಮನೆಯಲ್ಲಿ ದಿನದ ಉಷ್ಣಾಂಶ ೨೨-೨೫೦ ಸೆಂ, ರಾತ್ರಿಯ ಉಷ್ಣಾಂಶ ೧೨-೧೬೦ ಸೆಂ ಹಾಗೂ ಆರ್ದ್ರತೆ ಶೇಕಡ ೭೦-೭೫ ರಷ್ಟು ಇರುವಂತೆ ನಿರ್ವಹಿಸಬೇಕು. ಸಸಿಗಳ ಅಂಗಾಂಶ ಕೃಷಿಯಿಂದ ಅಭಿವೃದ್ಧಿಪಡಿಸಿದ ಸಸಿಗಳು ರೋಗರಹಿತವಾಗಿರುವುದರಿಂದ ಅವುಗಳನ್ನೇ ನಾಟಿ ಮಾಡಬೇಕು. ನಂತರ ತಳಿಗಳು ಸಾಮಾನ್ಯವಾಗಿ ಸೆಮಿ ಡಬಲ್ ಹಾಗೂ ತಿಳಿ ಬಣ್ಣದ ದಳಗಳಿಂದ ಕೂಡಿ ಮಧ್ಯದಲ್ಲಿ ಕಪ್ಪು ಬಣ್ಣ ಹೊಂದಿರುವ ತಳಿಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಅದರಲ್ಲಿ ನಾವು ಆಯ್ದುಕೊಂಡ ತಳಿಗಳು ಸಾಲ್ವೆಂಡರ್, ಬ್ಯಾಲೆನ್ಸ್, ಇಂಟೆನ್ಸ್, ಎಸ್ಪರಾ ಹಾಗೂ ಡ್ಯಾನಾ ಎಲನ್. ಜರ್ಬೆರಾ ಸಸಿಗಳನ್ನು ಏರು ಮಡಿಗಳಲ್ಲಿ ಬೆಳೆಸಬೇಕು. ಈ ಮಡಿಗಳಲ್ಲಿ ನೀರು ನಿಲ್ಲದಂತೆ ಹಾಗೂ ಸಾಕಷ್ಟು ಗಾಳಿಯಾಡಲು ಅವಕಾಶವಾಗುವಂತೆ ಮಣ್ಣು ಮಾಧ್ಯಮವನ್ನು ಸಿದ್ಧಪಡಿಸಬೇಕು. ಏರು ಮಡಿಗಳನ್ನು ೩೦ ಸೆಂ.ಮೀ. ಎತ್ತರ, ೭೦ ಸೆಂ.ಮೀ. ಅಗಲ ಹಾಗೂ ಅನುಕೂಲಕ್ಕೆ ತಕ್ಕಂತೆ ಉದ್ಧವಿದ್ದು ೩೦ ಸೆಂ.ಮೀ. ಅಂತರದಲ್ಲಿ ತಯಾರಿಸಬೇಕು. ಈ ಏರು ಮಡಿಗಳ ಮೇಲೆ ಶಿಫಾರಸ್ಸು ಮಾಡಿದ ಸಾವಯವ ಗೊಬ್ಬರ ಹಾಗೂ ಭತ್ತದ ಹೊಟ್ಟು ಅಥವಾ ಕೊಕೋಪೀಟ್ಅನ್ನು ಸಮನಾಗಿ ಹರಡಿ ಮಣ್ಣಿನಲ್ಲಿ ಸೇರಿಸಬೇಕು. ಮಡಿಗಳನ್ನು ಬೆಳ್ಳಿಯುಕ್ತ ಹೈಡ್ರೋಜನ್ ಪೆರಾಕ್ಸೈಡ್ ದ್ರಾವಣದಿಂದ (೨೫ ಮಿ.ಲೀ./ಲೀ.ನೀರಿಗೆ) ಉಪಚರಿಸಬೇಕು. ಉಪಚರಿಸಿದ ಒಂದು ದಿನದ ನಂತರ ಅಥವಾ ಅದೇ ದಿನ ಸಹ ನಾಟಿ ಮಾಡಬಹುದು. ಮಣ್ಣಿನ ರಚನೆಯನ್ನು ರಕ್ಷಿಸಲು ಏರುಮಡಿಗಳ ಮೇಲೆ ಯಾವುದೇ ಕಾರಣದಿಂದ ನಡೆದಾಡಬಾರದು. ತಯಾರಾದ ಮಡಿಗಳಿಗೆ ಹನಿ ನೀರಾವರಿಯನ್ನೊದಗಿಸಲು ೪೦ ಸೆಂ.ಮೀ. ಅಂತರದಲ್ಲಿ ಹನಿಕೆಗಳುಳ್ಳ (ಡ್ರಿಪರ್ಸ್) ೧೬ ಮಿ.ಮೀ. ಅಳತೆಯ ಪಾರ್ಶ್ವಕೊಳವೆಯನ್ನು ಮಡಿಯ ಮಧ್ಯೆ ಅಳವಡಿಸಬೇಕು. ಹನಿಕೆಗಳು ಗಂಟೆಗೆ ೪ ಲೀಟರ್ ನೀರು ಹೊರ ಚೆಲ್ಲುವಂತಿರಬೇಕು. ನಂತರ ಮಡಿಗಳಲ್ಲಿ ಸಸಿಗಳನ್ನು ನೆಡುವಾಗ ಸಸಿಯ ಮೇಲ್ಭಾಗವು ಆದಷ್ಟು ಮಟ್ಟಿಗೆ ಭೂಮಟ್ಟದಿಂದ ೧ ರಿಂದ ೨ ಸೆಂ.ಮೀ. ಎತ್ತರವಿರಬೇಕು. ಸಸಿ ನೆಡುವಾಗ ಬುಡಭಾಗ (ರೂಟ್ ಬಾಲ್) ಹಾನಿಯಾಗದಂತೆ ಎಚ್ಚರವಹಿಸಬೇಕು. ಸಸಿಯಿಂದ ಸಸಿಗೆ ೩೦ ಸೆಂ.ಮೀ. ಅಂತರದಲ್ಲಿ ಸಾಲಿನಿಂದ ಸಾಲಿಗೆ ೪೦ ಸೆಂ.ಮೀ. ಅಂತರದಲ್ಲಿ ನೆಡಬೇಕು ಮತ್ತು ಸುಮಾರು ೬೭೦೦೦ ಸಸಿಗಳು/ಹೆಕ್ಟೇರಿಗೆ ಬೇಕಾಗುತ್ತದೆ. ಸಸಿಗಳು ಸಾಯುವುದು ಕಂಡುಬಂದಲ್ಲಿ ಒಂದು ಲೀಟರ್ಗೆ ೨ ಗ್ರಾಂ ಥಯೋಪೋನೆಟ್ ಮಿಥೈಲ್ ದ್ರಾವಣದಿಂದ ತೋಯಿಸಬೇಕು. ನಾಟಿ ಮಾಡಿದ ಒಂದು ವಾರದೊಳಗೆ ಖಾಲಿಯಾದ ಸ್ಥಳಗಳಲ್ಲಿ ಬೇರೆ ಸಸಿಗಳನ್ನು ನಾಟಿ ಮಾಡಬೇಕು. ಸಾಧಾರಣವಾಗಿ ನಾಟಿ ಮಾಡಿದ ಮೊದಲ ೩ ತಿಂಗಳು ೧ ಚ.ಮೀ.ಗೆ ೬-೮ ಲೀ. ಹಾಗೂ ನಂತರ ಪ್ರತಿ ಚ.ಮೀ.ಗೆ ೧೨ ಲೀ. ನೀರನ್ನು ಹನಿ ನೀರಾವರಿ ಮೂಲಕ ಬೆಳಿಗ್ಗೆ ೯-೧೧ ಗಂಟೆಯ ಸಮಯದಲ್ಲಿ ನೀಡಬೇಕು. ಮಣ್ಣಿನಲ್ಲಿ ಹೆಚ್ಚು ತೇವಾಂಶ ಇರದಂತೆ ನಿರ್ವಹಿಸಬೇಕು. ನಾವು ರಸಾವರಿಯನ್ನು ಸಹ ಅಳವಡಿಸಿಕೊಂಡಿದ್ದು ಇದರಲ್ಲಿಯೇ ಪೋಷಕಾಂಶಗಳು ನೀಡಲಾಗುತ್ತಿದೆ. ನಾಟಿ ಮಾಡಿದ ೩ ವಾರಗಳ ನಂತರ ೧೯:೧೯:೧೯ (ಸಾರಜನಕ :ರಂಜಕ : ಪೊಟ್ಯಾಷ್) ಮಿಶ್ರಣವನ್ನು, ಪ್ರತಿಗಿಡಕ್ಕೆ ೦.೪ ಗ್ರಾಂನಂತೆ ದಿನ ಬಿಟ್ಟು ದಿನ ೩ ತಿಂಗಳವರೆಗೆ ಕೊಡಬೇಕು. ಹೂ ಬಿಡಲು ಪ್ರಾರಂಭವಾದಾಗ ೧೩:೦:೪೫ (ಸಾರಜನಕ :ರಂಜಕ : ಪೊಟ್ಯಾಷ್) ಮಿಶ್ರಣವನ್ನು, ಪ್ರತಿಗಿಡಕ್ಕೆ ೪ ಗ್ರಾಂನಂತೆ ದಿನ ಬಿಟ್ಟು ದಿನ ಕೊಡಬೇಕು. ಲಘು ಪೋಷಕಾಂಶಗಳನ್ನು ಮಣ್ಣು ಪರೀಕ್ಷೆ ಆಧಾರದ ಮೇಲೆ ಅವಶ್ಯಕತೆಗೆ ಅನುಸಾರವಾಗಿ ವಾರಕ್ಕೊಮ್ಮೆ ಪ್ರತಿ ೧ ಲೀಟರಿಗೆ ೪೦ ಮಿ.ಲೀ ಗ್ರಾಂನಂತೆ ರಸಾವರಿಯ ಮೂಲಕ ಒದಗಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಮಣ್ಣು ಪರೀಕ್ಷೆ ಮಾಡಿ ಪೋಷಕಾಂಶಗಳ ಬೇಡಿಕೆಗೆ ಅನುಗುಣವಾಗಿ ರಸಾವರಿಯಲ್ಲಿ ಲವಣಗಳ ಪ್ರಮಾಣವನ್ನು ಮಾರ್ಪಡಿಸಬೇಕು. ಜರ್ಬೆರ ಬೆಳೆ ಅವಧಿ ೨೪ ರಿಂದ ೩೦ ತಿಂಗಳುಗಳಾಗಿರುತ್ತವೆ. ಮೊಗ್ಗುಗಳನ್ನು ಏಳು ವಾರಗಳವರೆಗೆ ಪ್ರಾರಂಭದಲ್ಲಿಯೇ ಚಿವುಟಿ, ಗಿಡದ ಬೆಳವಣಿಗೆಯನ್ನು ಪ್ರೋತ್ಸಾಹಿಸಿ, ಬೆಳವಣಿಗೆ ಚನ್ನಾಗಿದ್ದರೆ ೧೨ ವಾರಗಳ ನಂತರ ಕೊಯಿಲು ಮಾಡುವುದನ್ನು ಪ್ರಾರಂಭಿಸಬೇಕು. ಇಲ್ಲದಿದ್ದರೆ ೧೪ ವಾರಗಳ ನಂತರ ಕಟಾವು ಮಾಡಬೇಕು. ಒಂದು ಚದರ ಮೀಟರ್ನಲ್ಲಿ (೬-೭ ಗಿಡಗಳಿಂದ) ಸರಾಸರಿ ೨೦೦ ಹೂಗಳು ಉತ್ಪತ್ತಿಯಾಗುತ್ತದೆ. ೨ ಅಥವಾ ೩ ಸುತ್ತು ಪುಷ್ಪಕೇಸರ ಪೂರ್ಣವಾಗಿ ಬೆಳವಣಿಗೆಯಾದಾಗ ಹೂಗಳನ್ನು ಕಟಾವು ಮಾಡಬೇಕು. ಹೂಗಳನ್ನು ಬೆಳಿಗ್ಗೆ ಅಥವಾ ಸಂಜೆ ಅಂದರೆ ಉಷ್ಣಾಂಶ ಕಡಿಮೆಯಿದ್ದಾಗ ಗಿಡದಿಂದ ತೆಗೆಯಬೇಕು. ಕಟಾವು ಮಾಡಿದ ಹೂವಿನ ಕಾಂಡದ ತಳಭಾಗವನ್ನು ಒಂದು ಅಂಗುಲದಷ್ಟು ಕತ್ತರಿಸಿ ಕಡ್ಡಿಗಳನ್ನು ಆಮ್ಲೀಯ ನೀರಿನಲ್ಲಿ ಕನಿಷ್ಠ ೪ ಗಂಟೆಗಳ ಕಾಲ ಇಡಬೇಕಾಗುತ್ತದೆ. ಸಿಟ್ರಿಕ್ ಆಮ್ಲವನ್ನು ಉಪಯೋಗಿಸಿ ಈ ನೀರಿನ ರಸಸಾರ ೩-೩.೫ ಇರುವಂತೆ ಸರಿಪಡಿಸಬೇಕು. ಒಂದು ಗಂಟೆ ನೀರಿನಲ್ಲಿಟ್ಟು ನಂತರ ಮಾರಾಟಕ್ಕೆ ಸಿದ್ಧಗೊಳಿಸಬೇಕು. ನಮ್ಮಲ್ಲಿ ಮಾರುಕಟ್ಟೆ ಬೆಂಗಳೂರಿನಲ್ಲಿರುವುದರಿಂದ, ಈ ಬೆಳೆ ಸುತ್ತಮುತ್ತಲೂ ಎಲ್ಲೂ ಬೆಳೆದಿಲ್ಲದ ಕಾರಣ ಪ್ಲವರ್ಡೆಕೊರೇಟರ್ಸ್ (ವರ್ತಕರು) ನಮ್ಮಲ್ಲಿ ಬಂದು ಪ್ರತಿ ಹೂವಿಗೆ ೩/- ರಂತೆ ಕೊಟ್ಟು ತೆಗೆದುಕೊಂಡು ಹೋಗುತ್ತಿದ್ದಾರೆ.