ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ದಾರಿದೀಪ

ಬರದ ನಾಡಿನಲ್ಲಿ ಗೋಡಂಬಿ ಬೆಳೆ ರೈತನ ಸಾಹಸ

ಎಸ್. ಹೆಚ್. ಅದಾಪುರ್,
೯೪೪೮೩೮೧೪೯೦

ಕಳೆದ ೧೩ ವರ್ಷಗಳಲ್ಲಿ ೮ ವರ್ಷ ಬರ ಕಂಡ ಗದಗ ಜಿಲ್ಲೆಯ ರೈತರಿಗೆ ಇಲ್ಲಿದೆ ಸಿಹಿ ಸುದ್ದಿ. ಈಗಾಗಲೇ ಕೆಂಪು ಮಣ್ಣಿನಲ್ಲಿ ಒಣ ಬೇಸಾಯದಲ್ಲಿ ಮಾವಿನ ಬೆಳೆಯನ್ನು ಯಶಸ್ವಿಯಾಗಿ ಬೆಳೆದು ತಮ್ಮ ಜೀವನೋಪಾಯವನ್ನು ಸದೃಢ ಮಾಡಿಕೊಂಡ ರೈತರು ಈಗ ಗೋಡಂಬಿ ಬೆಳೆಯನ್ನು ಯಶಸ್ವಿಯಾಗಿ ಬೆಳೆಯುತ್ತಿದ್ದಾರೆ. ಸಾಮಾನ್ಯವಾಗಿ ಗೋಡಂಬಿ ಬೆಳೆ ರಾಜ್ಯದ ಕರಾವಳಿ ಪ್ರದೇಶ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ಇದನ್ನು ಗದಗ ಜಿಲ್ಲೆಗೆ ವಾಣಿಜ್ಯ ಬೆಳೆಯಾಗಿ ಪರಿಚಯಿಸಿದವರು ಜಿಲ್ಲೆಯ ಹುಲಕೋಟಿ ಗ್ರಾಮದ ರೈತರಾದ ಶ್ರೀ ಸಿದ್ದಪ್ಪ ಬಸಪ್ಪ ಕರಿಕಟ್ಟಿಯವರು. ಇದಕ್ಕೆ ಸಂಪೂರ್ಣವಾದ ತಾಂತ್ರಿಕ ಬೆಂಬಲ ನೀಡಿದವರು. ಐ.ಸಿ.ಎ.ಆರ್-ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು. ಕೃಷಿ ವಿಜ್ಞಾನ ಕೇಂದ್ರದ ಬೋಧನಾ ಕ್ಷೇತ್ರದಲ್ಲಿ ಸಮೃದ್ಧವಾಗಿ ಬೆಳೆದ ಗೋಡಂಬಿ ಬೆಳೆಯನ್ನು ಕಂಡು ಉತ್ತೇಜಿತರಾಗಿ ಕರಿಕಟ್ಟಿಯವರು ಗೋಡಂಬಿ ಬೇಸಾಯವನ್ನು ಪ್ರಾರಂಭಿಸಿದರು. ಅವರು ೨೦೧೨-೧೩ ರಲ್ಲಿ ತಮ್ಮ ೬ ವರ್ಷದ ಮೂರುವರೆ ಎಕರೆ ಮಾವಿನ ಬೆಳೆಯ ಸಾಲಿನಲ್ಲಿ ಅಂತರ ಬೆಳೆಯನ್ನಾಗಿ ಗೋಡಂಬಿ ಬೆಳೆದಿದ್ದಾರೆ. ಕರಿಕಟ್ಟಿಯವರ ತೋಟದಲ್ಲಿ ಯಾವುದೇ ನೀರಿನ ಮೂಲ ಇಲ್ಲ. ಪ್ರಾರಂಭದ ದಿನಗಳಲ್ಲಿ ಸಸಿಗಳಿಗೆ ಪಕ್ಕದ ಚಿಕ್ಕಹಂದಿಗೋಳ ಗ್ರಾಮದ ಕೆರೆಯಿಂದ ಟ್ಯಾಂಕರ್ನಿಂದ ತಂದು ನಿರುಣಿಸಿ ಗಿಡಗಳನ್ನು ಪೋಷಿಸಿದ್ದಾರೆ. ಒಂದು ವರ್ಷದವರೆಗೆ ಐದರಿಂದ ಆರು ಸಲ ನೀರು ಹಾಕಿ ಸಸಿಯ ಬುಡದಲ್ಲಿ ಮಲ್ಚಿಂಗ್ ಮಾಡುವುದರಿಂದ ತೇವಾಂಶ ಹೆಚ್ಚಿನ ದಿನಗಳವರೆಗೆ ಇರುತ್ತದೆ ಎಂದು ಹೇಳುತ್ತಾರೆ ಕರಿಕಟ್ಟಿಯವರು. ಒಂದು ವರ್ಷದ ಮೇಲ್ಪಟ್ಟ ಗಿಡಗಳು ಮಳೆ ಆಶ್ರಯದಲ್ಲಿಯೇ ಹುಲುಸಾಗಿ ಬೆಳೆದಿವೆ. ಮಳೆಗಾಲದ ಅವಧಿಯಲ್ಲಿ ಮಳೆ ನೀರು ತೋಟದಲ್ಲಿ ಇಂಗುವಂತೆ ವ್ಯವಸ್ಥೆ ಮಾಡಿದ್ದಾರೆ. ಗೋಡಂಬಿ ಬೆಳೆ ಯಶಸ್ವಿಯಾಗಿ ಬೆಳೆದದ್ದನ್ನು ಖಾತರಿ ಮಾಡಿಕೊಂಡ ಮೇಲೆ ೨೦೧೪-೧೫ ನೇ ಸಾಲಿನಲ್ಲಿ ತಮ್ಮ ಪಕ್ಕದ ಮಾವಿನ ತೋಟದ ೨ ಎಕರೆ ಕ್ಷೇತ್ರದಲ್ಲಿ ವೆಂಗುರ್ಲಾ-೪ ತಳಿಯ ಗೋಡಂಬಿ ಬೆಳೆಯನ್ನು ವಿಸ್ತರಿಸಿದ್ದಾರೆ.

ಈಗಾಗಲೇ ಮೂರುವರೆ ಎಕರೆ ತೋಟದಲ್ಲಿ ನೆಟ್ಟ ಗಿಡಗಳು ಫಲವನ್ನು ಕೊಡಲಾರಂಭಿಸಿದ್ದು, ೨೦೧೪-೧೫ ನೇ ಸಾಲಿನಲ್ಲಿ ೩.೩೦ ಕ್ವಿಂಟಲ್ ಗೋಡಂಬಿ ಬೀಜವನ್ನು ಪಡೆದಿದ್ದಾರೆ. ಕಳೆದ ಸಾಲಿನಲ್ಲಿ ಒಂದು ಗಿಡಕ್ಕೆ ೧ ಕೆ.ಜಿ ಯಂತೆ ಒಟ್ಟು ೩.೭ ಕ್ವಿಂಟಲ್ ಇಳುವರಿ ಬಂದಿದೆ. ಬೀಜವನ್ನು ಬೆಳಗಾವಿ ಮಾರುಕಟ್ಟೆಯಲ್ಲಿ ಕೆ.ಜಿ. ಗೆ ರೂ.೧೫೦ ರಂತೆ ಮಾರಾಟ ಮಾಡಿದ್ದಾರೆ. ಒಟ್ಟು ೫೯೦೦೦ ಆದಾಯವನ್ನು ಪಡೆದಿದ್ದಾರೆ. ಇದರ ಜೊತೆಗೆ ಮಾವಿನ ಬೆಳೆಯಿಂದ ರೂ.೬೪೦೦೦ ಆದಾಯವನ್ನು ಗಳಿಸಿದ್ದಾರೆ. ಇದರ ಜೊತೆಗೆ ಮುಂಗಾರು ಹಂಗಾಮಿನಲ್ಲಿ ಹೆಸರು ಹಾಗೂ ಶೇಂಗಾ ಬೆಳೆಯನ್ನು ಅಂತರ ಬೆಳೆಯನ್ನಾಗಿ ಅಳವಡಿಸಿಕೊಂಡು ಲಾಭ ಪಡೆದಿದ್ದಾರೆ.ಮಾವಿನ ಬೆಳೆಗೆ ಹೋಲಿಸಿದರೆ ಗೋಡಂಬಿ ಕೃಷಿಯಿಂದ ಹೆಚ್ಚಿನ ಲಾಭ ಪಡೆಯಬಹುದು ಎಂದು ಕರಿಕಟ್ಟಿಯವರು ಹೇಳುತ್ತಾರೆ. ಗೋಡಂಬಿ ಹವಾಮಾನ ವೈಪರೀತ್ಯವನ್ನು ಸಹಿಸಿಕೊಂಡು ಬೆಳೆಯುವ ಬೆಳೆಯಾಗಿದ್ದು, ಕೀಟದ ಹಾಗೂ ರೋಗದ ಬಾಧೆ ಕಡಿಮೆ ಹಾಗೂ ಬೆಳೆಯ ನಿರ್ವಹಣೆ ವೆಚ್ಚ ಕೂಡ ಕಡಿಮೆ ಇರುತ್ತದೆ. ಇದಲ್ಲದೇ ಗೋಡಂಬಿ ಬೆಳೆ ಪ್ರತಿ ವರ್ಷವೂ ಫಲ ಕೊಡುವ ಬೆಳೆಯಾಗಿದ್ದು, ಗೋಡಂಬಿ ಬೀಜಗಳನ್ನು ಕೆಡದೇ ಬಹಳ ವರ್ಷಗಳವರೆಗೆ ಶೇಖರಿಸಿ ಇಡಬಹುದು. ಕಚ್ಚಾ ಹಣ್ಣುಗಳನ್ನು ಸಂಸ್ಕರಣೆ ಮಾಡಿ ಮೌಲ್ಯವರ್ಧನೆ ಪದಾರ್ಥಗಳನ್ನು ತಯಾರಿಸಿ ಲಾಭಾಂಶವನ್ನು ಇನ್ನೂ ಹೆಚ್ಚಿಸಬಹುದು ಎಂಬ ಮಾತನ್ನು ಅವರು ಹೇಳುತ್ತಾರೆ.

ಕರಿಕಟ್ಟಿಯವರ ತೋಟಕ್ಕೆ ಈಗಾಗಲೇ ಹಲವಾರು ರೈತರು ಭೇಟಿ ನೀಡಿ ಗೋಡಂಬಿ ಬೇಸಾಯವನ್ನು ಪ್ರಾರಂಭಿಸಿದ್ದಾರೆ. ಹುಲಕೋಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುಮಾರು ೭೦ ಕ್ಕೂ ಹೆಚ್ಚು ಗೋಡಂಬಿ ತೋಟಗಳು ನಿರ್ಮಾಣವಾಗಿವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕ್ಷೇತ್ರದಲ್ಲಿ ಗೋಡಂಬಿ ಬೇಸಾಯ ಆಗುವ ನಿರೀಕ್ಷೆ ಇದ್ದು, ರೈತರಿಗೆ ಹೆಚ್ಚಿನ ಆದಾಯ ಭದ್ರತೆ ಕೊಡುವಲ್ಲಿ ಯಾವುದೇ ಸಂಶಯವಿಲ್ಲ.