ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಮಣ್ಣ ಮಡಿಲಲ್ಲಿ

ಈರುಳ್ಳಿ ಬೀಜ ಬೇಕೆ ? ಹೊಸಕುಂದೂರಿಗೆ ಬನ್ನಿ

ಕೆ ಸಿ ಶಶಿಧರ್
9448103268

ಹೊಸಕುಂದೂರು, ಹೊಸದುರ್ಗ ತಾಲ್ಲೂಕಿನ ಸುಮಾರು ೨೫೦ ಮನೆಗಳಿರುವ ಪುಟ್ಟ ಗ್ರಾಮ. ಕಳೆದೆರಡು ದಶಕಕ್ಕಿಂತ ಹೆಚ್ಚು ಕಾಲದಿಂದ ಈ ಗ್ರಾಮಕ್ಕೆ ಈರುಳ್ಳಿ ಬೀಜ ಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ರೈತರು ಬರುತ್ತಾರೆ. ಇಲ್ಲಿನ ಬಹುಪಾಲು ರೈತರು ಈರುಳ್ಳಿ ಬೀಜ ಉತ್ಪಾದನೆ ಮಾಡುತ್ತಾರೆ. ಬೀಜಗಳನ್ನು ನೇರ ರೈತರಿಂದಲೇ ಕೊಳ್ಳಲು ರೈತರು ಬರುತ್ತಾರೆ. ನಾವಿಂದು ಬೀಜ ಗ್ರಾಮ ಯೋಜನೆ ಅಂತ ಮಾತಾಡುತ್ತೇವೆ. ಆದರೆ ಹೊಸಕುಂದೂರು ದಶಕಗಳಿಂದಲೂ ಬೀಜ ಗ್ರಾಮದ ಪರಿಕಲ್ಪನೆ ಅರಳಿ ಬೆಳೆದಿರುವುದು ಅತಿ ವಿಶಿಷ್ಠ.

ಓ!! ನಾನೇಕೆ ಮಣ್ಣ ಮಡಿಲಲ್ಲಿ ಬರೆಯಲು ಈ ಗ್ರಾಮ ಹುಡುಕಿ ಹೋದೆ? ಹೇಳಲೇಬೇಕು. ಬಬ್ಬೂರಿನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಸರ್ವಜ್ಞ ಸಾಲಿಮಠ ಅವರು ನಾವೊಂದು ಹಳ್ಳೀಲಿ ಅಗತ್ಯ ಅನುಸಾರ ಕಾರ್ಯಕ್ರಮ ಮಾಡಿದ್ದೇವೆ. ಆ ಹಳ್ಳಿಯ ರೈತರ ಸ್ಪಂದನೆ ನೀವು ನೋಡಲೇ ಬೇಕಾದಂತದ್ದು. ಬನ್ನಿ ನಮ್ಮೊಡನೆ ಹಳ್ಳಿಗೆ ಕರೆದೊಯ್ಯುತ್ತೇನೆ ಎಂದರು. ಗೆಳೆಯ ಸರ್ವಜ್ಞ ಹಾಗೂ ಅವನ ಕೃಷಿ ವಿಜ್ಞಾನ ಕೇಂದ್ರದ ಮಿತ್ರರ ಸಾಧನೆ ನೋಡಲೆಂದು ಜೊತೆ ಹೊರಟೆ. ಹೊಸದುರ್ಗದಿಂದ ಭಾಗೂರ ಕಡೆ ಹೊಸದುರ್ಗ ರೈಲ್ವೇ ಸ್ಟೇಶನ್ ರೋಡ್ನಲ್ಲಿ ಎಡಗಡೆ ಸಾಗಿದರೆ ಹೊಸಕುಂದೂರು. ನಮ್ಮ ವಾಹನ ನಿಲ್ಲುತ್ತಿದ್ದಂತೆ ಊರಿನ ಎಲ್ಲಾ ರೈತರು ಗುಂಪಾಗಿ ನಮ್ಮನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು. ಅಲ್ಲಿಂದ ನೇರ ಅವರ ಹೊಲಗಳಿಗೆ ಕರೆದೊಯ್ದರು. ಅಬ್ಬಾ! ಅದ್ಭುತ ಈರುಳ್ಳಿ ಬೆಳೆ. ಈರುಳ್ಳಿ ಹೂಗಳು ಪುಟ್ಟ ಚೆಂಡಿನಿಂದ ಹಿಡಿದು ಕ್ರಿಕೆಟ್ ಬಾಲ್ನಷ್ಟು ದಪ್ಪ ಅರಳಿ ನಿಂತಿವೆ. ನನ್ನ ಜೊತೆ ಬಂದ ರಘು ಆ ಹೊಲ ನೋಡಿದ್ದೇ ತಡ ಕ್ಯಾಮೆರಾ ಕೈಗೆ ತೆಗೆದುಕೊಂಡು ಕ್ಲಿಕ್ಕಿಸಿ ಎಷ್ಟು ಚೆನ್ನಾಗಿದೆ ಸಾರ್ ಎಂದ. ರೈತ ರವೀಂದ್ರನಾಥ್ ಅವರಿಗೆ ಏನ್ ಸಾರ್ ಎಷ್ಟು ವರ್ಷದ ಅನುಭವ ನಿಮ್ಮದು ಎಂದೆ. ಸಾರ್ ೨೦ ವರ್ಷಕ್ಕೂ ಹೆಚ್ಚು. ಸತತವಾಗಿ ಈರುಳ್ಳಿ ಬೀಜೋತ್ಪಾದನೆ ಮಾಡುತ್ತಿದ್ದೇವೆ ಎಂದರು. ಅರೆ ಸರ್ವಜ್ಞರು ನಮ್ಮ ಕೃಷಿ ವಿಜ್ಞಾನ ಕೇಂದ್ರದ ಸಾಧನೆ ನೋಡಿ ಅಂತ ಕರೆತಂದರು. ಇವರಾಗಲೆ ಸಾಧಕರಾಗಿ ೨೦ ವರ್ಷ ತುಂಬಿದೆಯಲ್ಲಾ ಎಂದು ಯೋಚಿಸಿ ಈ ವರ್ಷ ಮಾತ್ರ ಚೆನ್ನಾಗಿದೆಯಾ ವರ್ಷ ವರ್ಷವೂ ಹೀಗೆನಾ ಅಂದೆ. ಸುತ್ತಲಿದ್ದ ರೈತರಲ್ಲಿ ಒಂದೇ ಬಾರಿ ಉದ್ಗಾರ ಸಾರ್ ಈ ವರ್ಷ ಬಬ್ಬೂರು ವಿಜ್ಞಾನಿಗಳು ಬಂದಿದ್ರಿಂದ ಮೊದಲು ಬೆಳಿತಿದ್ದದಕ್ಕಿಂತ ಈ ಬಾರಿ ಕನಿಷ್ಠ ಶೇ. ೩೦ ರಿಂದ ೪೦ರಷ್ಟು ಹೆಚ್ಚಿನ ಬೆಳೆ ಐತಿ ಸಾರ್ ಅಂದ್ರು.. ಆಗ ಸರ್ವಜ್ಞರು ಸಾರ್ ಕೃಷಿ ವಿಜ್ಞಾನ ಕೇಂದ್ರ, ಭಾರತೀಯ ತೋಟಗಾರಿಕೆ ಸಂಸ್ಥೆ, ತೋಟಗಾರಿಕೆ ಇಲಾಖೆ ಎಲ್ಲಾ ಸೇರಿ ಯೋಜನೆ ರೂಪಿಸಿದೆವು. ಹಳ್ಳಿಯಲ್ಲಿ ಮುಂದೆ ಬಂದ ೩೦ ಜನಕ್ಕೆ ಆರ್ಕಾ ಕಲ್ಯಾಣ್ ಬೀಜ ಕೊಟ್ಟು ಇದರ ಬೀಜೋತ್ಪಾದನೆ ಮಾಡಲು ತಿಳಿಸಿದೆವು. ತರಬೇತಿ, ಬಯೋ ಪರಿಕರ, ಬೀಜೋತ್ಪಾದನೆ ಕೌಶಲ್ಯ, ರಸ ಹೀರುವ ಕೀಟ ನಿರ್ವಹಣೆ ಹಾಗೂ ಪ್ರಮುಖವಾಗಿ ತೋಟಗಾರಿಕೆ ಇಲಾಖೆ ಪ್ರಸನ್ನ ಕುಮಾರ್ ಅವರು ಅಳವಡಿಸಲು ನೆರವಾದ ಇನ್ಲೈನ್ ಡ್ರಿಪ್ ಎಲ್ಲಾ ಸೇರಿ ಈ ಚಮತ್ಕಾರ ಮಾಡಿವೆ ಎಂದರು. ವಿಜ್ಞಾನಿಗಳಾದ ರುದ್ರೇಗೌಡರು, ಪ್ರಕಾಶ್ ಕೆರೂರೆ, ಓಂಕಾರಪ್ಪ ನಾನೂ ನನ್ನೆಲ್ಲಾ ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ ಈ ಚಮತ್ಕಾರದ ಭಾಗಿಗಳು ಎಂದರು.

ರೈತ ರೇವಣ್ಣ ಮಧ್ಯ ಪ್ರವೇಶಿಸಿ ಸಾರ್ ನಾವೂ ಹಲವಾರು ವರ್ಷದಿಂದ ಈರುಳ್ಳಿ ಬೀಜ ಮಾಡ್ತಿವಿ. ರೈತರು ಇಲ್ಲೆ ಬಂದು ಕೊಂಡುಕೊಳ್ಳುತ್ತಾರೆ. ಆದ್ರೆ ಈ ಬಾರಿ ನಾವು ಬಹಳ ವರ್ಷದಿಂದ ಬಳಸುತ್ತಿದ್ದ ಬೀಜ ಬಿಟ್ಟು ಬಬ್ಬೂರನವರು ಕೊಟ್ಟ ಬೀಜ ಬಳಸಿದ್ವಿ. ಜೊತೆಗೆ ಅವರು ಜೇನು ಪೆಟ್ಟಿಗೆ ಕೊಟ್ಟಿದ್ದಾರೆ. ಬೀಜ ಕಟ್ಟಲು ಇದು ಬಹಳ ಸಹಕಾರಿ. ಜೊತೆಗೆ ಹಳದಿ ಎಣ್ಣೆ ಪೇಪರ್ ಕೊಟ್ಟಿದ್ದಾರೆ. ಇದರಿಂದ ಕೀಟ ನಿಯಂತ್ರಣ ಆಗಿದೆ. ಇಂತಹ ಬರಗಾಲದಲ್ಲೂ ಬೆಳೆ ಹೀಗೈತಿ ಅಂದ್ರೆ ಇನ್ಲೈನ್ ಡ್ರಿಪ್ ಕಾರಣ ಸಾರ್ ಅಂದ್ರು.ಈ ಊರಲ್ಲಿ ಬಹಳ ಜನ ಬೀಜ ಮಾಡ್ತಾರೆ ಅಂತಿರಾ, ಮೂವತ್ತು ಜನಕ್ಕೆ ಇವರು ಬೀಜ ಕೊಟ್ಟಿದ್ದಾರೆ ಉಳಿದವರು ಯಾವ ತಳಿ ಹಾಕಿದ್ದಾರೆ ಅಂದೆ. ಸಾರ್ ಉಳಿದವರಿಗೂ ಬೇರೆ ಬೀಜ ಹಾಕಾಕೆ ಬಿಟ್ಟಿಲ್ಲ ಸಾರ್ ನಮ್ಮ ಹತ್ರ ಇದ್ದ ಗೆಡ್ಡೇನೆ ಕೊಟ್ಟು ಅದನ್ನೇ ಬೆಳಿಯೋ ಹಾಗೆ ಮಾಡಿದ್ದೀವಿ ಕಾರಣ ಊರಲ್ಲಿ ಬೇರೆ ತಳಿ ಹಾಕಿದ್ರೆ ಇದರ ಜೊತೆ ಕ್ರಾಸ್ ಆಗಿ ಉತ್ತಮ ಬೀಜ ಬರಲ್ಲಾ ಅಂತ ನಾವೇ ಲೀಡ್ ತಗೊಂಡು ಈ ತರ ಮಾಡಿವಿ ಎಂದ್ರು.

ಅಬ್ಬಾ! ನಾನೂ ಊರೆಲ್ಲಾ ಅಡ್ಡಾಡಿದೆ ಎಲ್ಲಿ ನೋಡಿದರೂ ಒಂದೇ ತರ ಉತ್ತಮವಾಗಿ ಬೆಳೆದು ನಿಂತ ಈರುಳ್ಳಿ. ರೇವಣ್ಣರೆ ನೀವು ಎಷ್ಟು ಪ್ರದೇಶದಲ್ಲಿ ಬೀಜ ಮಾಡಿದ್ದೀರಿ, ಖರ್ಚು ಕೂಲಿ ಎಷ್ಟಾಗುತ್ತೆ ಅಂದೆ. ರೇವಣ್ಣ ಪಟ ಪಟ ಲೆಕ್ಕ ಕೊಟ್ರು. ಸಾರ್ ಳಿ ಎಕರೆ ಬೆಳೆದಿದ್ದೇನೆ. ೬ಳಿ ಕ್ವಿಂಟಾಲ್ ಗೆಡ್ಡೆ ಮಾಡಿ ಹಾಕಿದ್ದೇನೆ. ೧೦,೦೦೦ ರೂಪಾಯಿ ಕೊಟ್ಟಿಗೆ ಗೊಬ್ಬರ ೧೦,೦೦೦ ರಾಸಾಯನಿಕ ಗೊಬ್ಬರ, ೧೦,೦೦೦ ಕೂಲಿ, ೧೦,೦೦೦ ಮೆಡಿಸಿನ್ ಸ್ಪ್ರೇ ಎಲ್ಲಾ ಸೇರಿ ಒಂದು ೫೦,೦೦೦ ರೂಪಾಯಿ ಖರ್ಚಿಗೆ ಬೇಕಾಗುತ್ತೆ. ಅರ್ಧ ಎಕರೆಗೆ ಒಂದೂವರೆಯಿಂದ ೨ ಕ್ವಿಂಟಾಲ್ ಬೀಜ ಬೆಳಿತಿವಿ. ಕೆಜಿಗೆ ೮೦೦ ರಿಂದ ೧೦೦೦ ರೂಪಾಯಿಯಂಗೆ ಮಾರಾಟ ಮಾಡ್ತಿವಿ. ಬೀಜೋತ್ಪಾದನೆ ಮಾಡಿದಾಗ ಬೀಜ ಕಂಪನಿಗಳು ಬೀಜ ನಮಗೆ ಮಾರಬೇಕು ಅಂತಾರೆ. ನೀವು ಬೀಜ ಈ ವರ್ಷ ಬಬ್ಬೂರಿಗೆ ಕೊಡ್ತಿರಾ? ಇಲ್ಲಾ ಸಾರ್ ನಮಗೆ ರೆಗ್ಯೂಲರ್ ಕಸ್ಟಮರ್ಸ್ ಇದ್ದಾರೆ. ಅವರಿಗೆಲ್ಲಾ ಕೊಟ್ಟು ಉಳಿದ್ರೆ, ಮಾತ್ರ ಅವರಿಗೆ ಕೊಡಬಹುದು ಅಂತಾರೆ ರವೀಂದ್ರನಾಥ್. ಬೀಜ ತೆಗೆದುಕೊಂಡ ಮೇಲೆ ಗೆಡ್ಡೆ ಬಳಸ್ತಿರಾ? ಇಲ್ಲ ಸಾರ್ ನಾವು ಹಾಕಿದ ಗೆಡ್ಡೆಯ ೧೦ ಪರ್ಸೆಂಟ್ ಮಾತ್ರ ಗೆಡ್ಡೆ ಸಿಗುತ್ತೆ. ಮಾರಾಟ ಮಾಡೋವಷ್ಟು ಗುಣಮಟ್ಟ ಇರೋಲ್ಲ. ಮನೆ ಬಳಕೆಗೆ ಉಪಯೋಗಿಸ್ತೀವಿ.

ನಮಗೆ ನಾವೇ ಡಾಕ್ಟರ್ಸ್ !: ದಾಳಿಂಬೆ ವಿಶೇಷ ಸಂಚಿಕೆ ಸಿದ್ದಪಡಿಸುವಾಗ ಈ ಜಿಲ್ಲೆಯ ರೈತರು ಡಾಕ್ಟರ್ ಹೇಳಿದಂತೆ ನಿರ್ವಹಣೆ ಮಾಡ್ತಿವಿ ಅಂದ್ರು. ಹಾಗೆ ನೀವು ಯಾರಾದ್ರೂ ಡಾಕ್ಟರ್ ಸಂಪರ್ಕ ಮಾಡ್ತಿರೋ? ಅಂತ ಕೇಳಿದ್ದಕ್ಕೆ ಸಾರ್ ನಮಗೆ ನಾವೇ ಡಾಕ್ಟರ್ಸ್. ಬಬ್ಬೂರ್ನವರು ನಮ್ಮನ್ನೆಲ್ಲಾ ಡಾಕ್ಟರ್ ಮಾಡಿದ್ದಾರೆ. ದಾಳಿಂಬೆ ಡಾಕ್ಟರ್ ಅಂತ ಏನೂ ತಿಳಿದವರೆಲ್ಲ ಔಷಧಿ ಮಾರಾಟ ಮಾಡಿ ರೈತರ ಸುಲಿಗೆ ಮಾಡ್ತಾರೆ. ಆದ್ರೆ ನಮ್ಮೂರಲ್ಲಿ ಅಂತವರಿಗೆ ಅವಕಾಶ ಇಲ್ಲ. ನಮಗೆ ನಾವೇ ಡಾಕ್ಟರ್ಸ್ ಅಂತಂದ್ರು ಹೊಸಕುಂದೂರಿನ ಯುವ ರೈತರು. ಇದು ಅವರ ಕೌಶಲ್ಯ ಅಭಿವೃದ್ಧಿಯ ಕುರುಹು.

ನೋಡಿ ಒಂದು ಹಳ್ಳಿಯ ಯುವಕರು ಮನಸ್ಸು ಮಾಡಿದರೆ ಹಳ್ಳಿಯನ್ನೇ ಪರಿವರ್ತನೆ ಮಾಡಬಹುದು ಅನ್ನುವುದಕ್ಕೆ ಹೊಸಕುಂದೂರು ಮಾದರಿ ಅನ್ನಬಹುದು. ಕೃಷಿ ವಿಜ್ಞಾನ ಕೇಂದ್ರದ ನೇತೃತ್ವದಲ್ಲಿ ಹಲವು ಸಂಸ್ಥೆಯ ಯುವ ವಿಜ್ಞಾನಿಗಳ ಪಡೆ ನೀಡಿದ ಕೌಶಲ್ಯ ತರಬೇತಿಯಿಂದ ಇಡೀ ಹಳ್ಳಿಯ ಬೀಜೋತ್ಪಾದನೆ ಮಾಡುವವರ ಆದಾಯ ಹಾಗೂ ಕಲಿತ ಕೌಶಲ್ಯಗಳ ಮೌಲ್ಯ ಮಾಪನ ಮಾಡಿದರೆ ಆದಾಯ ದುಪ್ಪಟ್ಟು ಆಗಿರುವುದರಲ್ಲಿ ಅನುಮಾನವೇ ಇಲ್ಲ. ಅಬ್ಬಾ ! ಲೇಖನ ಓದಿ ನೀವು ಈರುಳ್ಳಿ ಬೀಜ ಕೊಳ್ಳಬೇಕು ಎನಿಸಿದರೆ ಎಲ್ಲಾ ೩೦ ಬೆಳೆಗಾರರ ದೂರವಾಣಿ ಸಂಖ್ಯೆ ನೀಡಲಾಗಿದೆ ಸಂಪರ್ಕಿಸಿ. ಈ ಗ್ರಾಮವೊಂದರಲ್ಲೆ ವಾರ್ಷಿಕ ೪೦ ರಿಂದ ೫೦ ಕ್ವಿಂಟಾಲ್ ಬೀಜ ಉತ್ಪಾದನೆಯಾಗುತ್ತದೆ. ನೀವು ಇವರ ಯಶೋಗಾಥೆ ಅರಿಯಬೇಕಾದರೆ ಹೊಸಕುಂದೂರಿನ ದಾರಿ ತುಳಿಯಿರಿ.