ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಸಾವಯವ ಸರದಾರರು

ಅರುಣಕುಮಾರ್ ವಿ. ಕೆ
9449623275

ಪೇಟೆಯಲ್ಲಿ ಹಣ ಮಾಡಿ ವಿಶ್ರಾಂತ ಜೀವನಕ್ಕೆ ಆಗಮಿಸಿದವರಲ್ಲ. ಹಣ ಗಳಿಸಲು ಕೃಷಿಗೆ ಇಳಿದವರೂ ಅಲ್ಲ. ಇವರಲ್ಲಿ ಹೈನುಗಾರಿಕೆಯಿಲ್ಲ. ಆರ್ಥಿಕ ಬೆಳೆಗಳಿಲ್ಲ. ಹೈಟೆಕ್ ಕೃಷಿ ತಂತ್ರಗಳಿಲ್ಲ, ಯಂತ್ರಗಳಿಲ್ಲ. ರಾಸಾಯನಿಕ ಬಳಸುವುದೇ ಇಲ್ಲ. ಹುಟ್ಟಿದ್ದು ವಿದ್ಯಾಭ್ಯಾಸ ಮಾಡಿದ್ದು ನಗರದಲ್ಲಿಯೇ. ಧೀರೇಂದ್ರರವರು ಬಿ.ಇ., ಸ್ಮಿತಾರವರು ಎಂ.ಎಸ್ಸಿ. ಪದವೀಧರರು. ಇವರಿಬ್ಬರು ಉಪನ್ಯಾಸಕ ರಾಗಿದ್ದವರು. ಕೈತುಂಬಾ ಸಂಬಳ ಪಡೆದರೂ ಕೆಲಸಕ್ಕೆ ವಿದಾಯ ಹೇಳಿ ಸಾವಯವ ಕೃಷಿಗೆ ಸಂಪೂರ್ಣ ತೊಡಗಿಕೊಂಡು. ಅದರಲ್ಲಿ ಯಶಸ್ವಿಯಾಗಿದ್ದಾರೆ.

ಗುಜರಾತಿನ ನರ್ಮದಾ ಜಿಲ್ಲೆಯ ’ಸಾಕವ’ ಎಂಬ ಪುಟ್ಟ ಹಳ್ಳಿಯೇ ಈ ದಂಪತಿಯ ಸಾವಯವ ಕೃಷಿಯ ತಪೋ ಭೂಮಿಯಾಗಿದೆ. ಎರಡು ಎಕರೆ ಜಮೀನು ಖರೀದಿಸಿ ಹಳ್ಳಿಗೆ ಬಂದಾಗ ಕೃಷಿಯಲ್ಲಿ ಇವರಿಗೆ ಸೋಲು ನಿಶ್ಚಿತ, ಊರು ಬಿಡುವುದು ಖಚಿತ ಎಂದೇ ಹಳ್ಳಿಗರು ಭಾವಿಸಿದ್ದರು. ಸ್ಮಿತಾ ಧೀರೇಂದ್ರರವರು ನಿರೀಕ್ಷೆಯಂತೆ ಸೋತರು. ಆದರೆ ಅವರ ಅಚಲವಾದ ಶ್ರದ್ಧೆ ತುಡಿತ ಅವರನ್ನು ಗೆಲ್ಲಿಸಿತು. ಬಹು ಬೆಳೆ ಪ್ರಕೃತಿಯ ಪ್ರತಿಬಿಂಬ. ಎಲ್ಲವೂ ಬೇಕು. ಯಾವುದು ಹೆಚ್ಚಲ್ಲ. ಯಾವುದು ಕಡಿಮೆಯಲ್ಲ. ಬಹುಬೆಳೆಯ ವ್ಯವಸ್ಥೆ ಪ್ರಕೃತಿಯನ್ನರಿಯಲು ಸಹಕರಿಸಿತು. ಈ ಹಂತದಲ್ಲಿ ಸಣ್ಣದಾಗಿ, ಎಲ್ಲರೂ, ಎಲ್ಲವೂ ಬೆಳೆಯಬೇಕು ಎಂಬುದನ್ನು ಇವರು ಕೃಷಿಯಿಂದ ಕಂಡುಕೊಂಡ ಸತ್ಯ. ಇವರ ಎರಡು ಎಕರೆ ಜಮೀನಿನಲ್ಲಿ ಜೋಳ, ಸಜ್ಜೆ, ಮುಸುಕಿನ ಜೋಳ, ಭತ್ತ, ಗೋಧಿ, ಕೀರೇ ಸೊಪ್ಪು ೬ ಬಗೆಯ ಏಕದಳ ಧಾನ್ಯದ ಬೆಳೆಗಳು, ಹೆಸರು, ಉದ್ದು, ತೊಗರಿ, ಅಲಸಂದೆ, ಅವರೆ, ಹುರುಳಿ, ಕಡ್ಲೆಕಾಳು, ಸೋಯಾ ಹೀಗೆ ೧೦ ಬಗೆಯ ಧಾನ್ಯಗಳು. ಶೇಂಗಾ, ಎಳ್ಳು, ಸೂರ್ಯಕಾಂತಿ ೩ ಬಗೆಯ ಎಣ್ಣೆಕಾಳುಗಳು. ೬ ಬಗೆಯ ಸಂಬಾರ ವಸ್ತುಗಳಾದ ಕೊತ್ತಂಬರಿ, ಮೆಂತ್ಯ, ಓಮ, ಸಾಸಿವೆ, ಅರಿಶಿಣ, ಮೆಣಸಿನಕಾಯಿ, ೪೧ ಬಗೆಯ ತರಕಾರಿಗಳು, ೧೩ ಬಗೆಯ ಹಣ್ಣುಗಳು, ೫ ಬಗೆಯ ಔಷಧಿ ಸಸ್ಯಗಳನ್ನು ಎಲ್ಲರೂ ನಿಬ್ಬೆರಗಾಗಿ ನೋಡುವಂತೆ ಬೆಳೆದಿದ್ದಾರೆ. ಹೊಲದ ಸುತ್ತ ೫ ಅಡಿ ಅಗಲ ೨೦ ಅಡಿ ಉದ್ದ, ೧ ಅಡಿ ಆಳದ ಇಂಗು ಗುಂಡಿಗಳಿವೆ. ಮಳೆಗಾಲದಲ್ಲಿ ಇಲ್ಲಿ ನೀರು ನಿಂತು ನೆಲದೊಳಗೆ ಸೇರುತ್ತದೆ. ಹೊಲದಲ್ಲಿ ಹೆಚ್ಚಾದ ನೀರನ್ನು ಸಂಗ್ರಹಿಸಲು ಮೂಲೆಯೊಂದರಲ್ಲಿ ೩೦ ಅಡಿ ಅಗಲ, ೩೦ ಅಡಿ ಉದ್ದ, ೧೫ ಅಡಿ ಆಳದ ಹೊಂಡವಿದೆ. ಹೆಚ್ಚಾದ ಮಳೆ ನೀರಿನ ಮೇಲ್ಮೈ ಓಟವನ್ನು ಈ ಹೊಂಡ ತಡೆಯುತ್ತದೆ. ಇದರಿಂದ ಬಾವಿಯಲ್ಲಿ ನೀರಿನ ಒಳ ಹರಿವು ಕೂಡ ಚೆನ್ನಾಗಿದೆ.

ಇವರು ಹಳ್ಳಿಗರಿಗೆ ಬೇಕಾದ ಕಬ್ಬಿಣದ ಸಲಕರಣೆಗಳನ್ನು ಮಾಡಿಕೊಡುತ್ತಾರೆ. ಜೊತೆಗೆ ಹಿಟ್ಟಿನ ಗಿರಣಿಯು ಇರುವುದರಿಂದ ಇದರಿಂದಲೂ ಆದಾಯವಿದೆ. ವಸ್ತುಗಳನ್ನು ಸಾಗಿಸಲು ಗಾಡಿಯಿದ್ದು ಜನ ಇದನ್ನು ಬಾಡಿಗೆಗೆ ಪಡೆಯುತ್ತಾರೆ. ಹಾಗೆಯೇ ಕೃಷಿಯ ಕೆಲ ವಸ್ತುಗಳನ್ನು ಮೌಲ್ಯವರ್ಧನೆ ಮಾಡಿ(ಪಾನಕ ದ್ರವ್ಯ, ನೆಲ್ಲಿಕಾಯಿ, ಹಲ್ಲುಪುಡಿ ಇತ್ಯಾದಿ) ಆದಾಯ ಪಡೆಯುತ್ತಿದ್ದಾರೆ. ನೀರೆತ್ತಲು ವಿಂಡ್ಮಿಲ್, ಅನ್ನ ಮಾಡಲು ಸೋಲಾರ್ ಕುಕ್ಕರ್, ಒಣಗಿಸಲು ಡ್ರೈಯರ್, ಮನೆಗೆ ಸೋಲಾರ್ ದೀಪಗಳು ಬಳಸುತ್ತಾ ಇದನ್ನು ಪ್ರಚಾರ ಮಾಡಲು ’ಉರ್ಜಾ ನಿದರ್ಶನ ಕೇಂದ್ರ’ವನ್ನು ಸ್ಥಾಪಿಸಿದ್ದಾರೆ. ಇವರ ವಿಶೇಷತೆಯೆಂದರೆ ತಮ್ಮ ಪ್ರಯತ್ನ ಅನುಭವಗಳನ್ನು ಹಂಚಿಕೊಳ್ಳಲು ಸಮಾನಾಸಕ್ತರ ಬಳಗವನ್ನು ಕಟ್ಟಿದ್ದಾರೆ. ಜೊತೆಗೆ ’ಮಾನವೀಯ ಕೃಷಿ ಸಂಸ್ಕೃತಿ’ ಎಂಬ ನಿಯತಕಾಲಿಕೆಯನ್ನೂ ಸಹ ಹೊರತರುತ್ತಿದ್ದಾರೆ. ನಿಮ್ಮ ಹೊಲದ ಗೊಬ್ಬರದ ಅಗತ್ಯವನ್ನು ನೀವೇ ಪೂರೈಸಿಕೊಳ್ಳಿ. ಏಕದಳ ಮತ್ತು ದ್ವಿದಳ ಬೆಳೆಗಳನ್ನು ಒಟ್ಟಾಗಿ ನೆಡಿ, ಸ್ಥಳೀಯ ಬೀಜ, ಕೃಷಿ ಆಚರಣೆಗಳನ್ನು ಮರೆಯದಿರಿ, ಗೌರವಿಸಿ ಎಂದು ರೈತರಿಗೆ ಕಿವಿ ಮಾತನ್ನು ಹೇಳುತ್ತಾರೆ. ಇಂತಹ ವಿಶಿಷ್ಟ ದಂಪತಿಗಳ ಸಾವಯವ ತಪೋಭೂಮಿಯನ್ನು ನೋಡಲು ಒಮ್ಮೆ ಭೇಟಿ ಕೊಟ್ಟರೆ ತಿಳಿದೀತು. ರೈತರ ಸಂಪರ್ಕ ವಿಳಾಸ: ಶ್ರೀ ಧೀರೇಂದ್ರ ಅನೊಪಚಂದ ಸೋನೇಜಿ, ಮತ್ತು ಶ್ರೀಮತಿ ಸ್ಮಿತಾ ಧೀರೇಂದ್ರ ಸೋನೇಜಿ, ಸಾಕವಗ್ರಾಮ, ನರ್ಮದಾ ಜಿಲ್ಲೆ, ಗುಜರಾತ್ (ರಾಜ್ಯ)