ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ದೇಶಿಯ ಆಕಳು ಮತ್ತು ಎಮ್ಮೆಯ ಹಾಲೇ ಉತ್ತಮ ಯಾಕೆ?

ಡಾ. ಬಿ.ಎ. ದೇಸಾಯಿ
9448461446

ಪುರಾತನ ಕಾಲದಿಂದಲೂ ಯಾವುದೇ ಹಾಲಿರಲಿ ಆರೋಗ್ಯಕ್ಕೆ ಅತ್ಯುತ್ತಮವೆಂದು ತಿಳಿದಿದ್ದ ನಮಗೆ; ಹಾಲಿನಲ್ಲಿರುವ ಕೆಲವೊಂದು ಪ್ರೋಟೀನಾಂಶದಿಂದಲೂ ಆರೋಗ್ಯದ ಮೇಲೆ ದುಷ್ಟ ಪರಿಣಾಮವಿದೆಯೆಂದು ಕೆಲವೊಂದು ಹೊಸ ಸಂಶೋಧನೆಗಳಿಂದ ತಿಳಿದುಬಂದಿದೆ. ಆ ಪ್ರೋಟೀನ್ ಅಂಶಗಳೇ ಇಂದು ಜಗತ್ತಿನಾದ್ಯಂತ ಚರ್ಚಿತವಾಗುತ್ತಿರುವ A1 ಮತ್ತು A2 ಹಾಗಾದರೆ A1 ಮತ್ತು A2 ಹಾಲು ಎಂದರೇನು? ಹಾಲಿನಲ್ಲಿ ಶೇಕಡವಾರು ೮೫-೯೦ರಷ್ಟು ನೀರಿನಾಂಶವಿದ್ದರೆ, ಸುಮಾರು ೩-೬ ರವರೆಗೆ ಕೊಬ್ಬು, ೩-೪ ರವರೆಗೆ ಪ್ರೋಟೀನ್ (ಸಸಾರಜನಕ), ೪-೫ ರವರೆಗೆ ಸಕ್ಕರೆ (ಲ್ಯಾಕ್ಟೋಜ್), ಅನೇಕ ಖನಿಜಾಂಶಗಳು ಮತ್ತು ಜೀವಸತ್ವಗಳಿವೆ(ವಿಟಮಿನ್). ಅದರಲ್ಲಿರುವ ಪ್ರೋಟೀನ್ನಲ್ಲಿ ಅಲ್ಫಾ (α) ಬೀಟಾ (β) ಮತ್ತು ಗಾಮಾ (ɣ) ಯೆಂಬ ವಿವಿಧ ತರಹದ ಪ್ರೋಟೀನ್ಗಳಿರುತ್ತವೆ. ಅದರಲ್ಲಿರುವ ಬೀಟಾ (β) ಪ್ರೋಟೀನ ಅಂಶವು A1 ಮತ್ತು A2 ಎಂಬ ಅಂಶವನ್ನು ಹೊಂದಿದೆ ಎಂಬುದು ಇತ್ತೀಚಿನ ಸಂಶೋಧನೆ. ಜಗತ್ತಿನಲ್ಲಿ ಭಾರತವನ್ನು ಬಿಟ್ಟರೆ ಹೆಚ್ಚು ಹಾಲು ಉತ್ಪಾದನೆಯಾಗುತ್ತಿರುವುದೇ ಆಕಳಿನಿಂದ, ನಮ್ಮ ದೇಶದಲ್ಲಿ ಮಾತ್ರ ಎಮ್ಮೆಯ ಹಾಲಿನ ಕೊಡಿಗೆ ಹೆಚ್ಚು. ಸುಮಾರು ಹತ್ತುಸಾವಿರ ವರ್ಷಗಳಿಂದ ಆಕಳನ್ನು ಹಾಲಿಗಾಗಿ ಉಪಯೋಗಿಸುತ್ತಿದ್ದೇವೆ. ಮೊದಲು ಎಲ್ಲಾ ಆಕಳುಗಳು A2 ಬೀಟಾ (β) ಕೇಸಿನ್ ಎಂಬ ಅಂಶದ ಹಾಲನ್ನೇ ಉತ್ಪತ್ತಿಮಾಡುತ್ತಿದ್ದವು, ಆದರೆ ಕಾಲಾನಂತರ ಬದಲಾದ ಜಾಗತಿಕ ಹವಾಗುಣದ ಪರಿಣಾಮವಾಗಿ ಅವುಗಳಲ್ಲಿನ ವಂಶವಾಹಿನಿಗಳಲ್ಲಿ ದಿಢೀರನೆ ಬದಲಾವಣೆಯಾಗಿ (ಮುಟೆಶನ್) ಕೆಲ ಸಾವಿರ ವರ್ಷಗಳಿಂದ ಕೆಲವೊಂದು ಆಕಳುಗಳಲ್ಲಿ ಕೇವಲ ಬೀಟಾ (β) A1 ಕೇಸಿನ್ ಅಂಶವುಳ್ಳ ಹಾಲು ಉತ್ಪತ್ತಿಯಾಗಲು ಪ್ರಾರಂಭವಾಗಿದೆ. ಕಾಲಾಂತರದಲ್ಲಿ ಕೆಲವೊಂದು ತಳಿಗಳಲ್ಲಿ A1 ಬೀಟಾ (β) ಕೇಸಿನ್ ಎಂಬ ವಂಶವಾಹಿನಿಯು ಹೆಚ್ಚು ಪ್ರಭಾವಶಾಲಿಯಾಗಿ ಕೇವಲ A1 ಹಾಲನ್ನೆ ಉತ್ಪತ್ತಿಮಾಡುತ್ತಿವೆ. ಈ ಹೊಸಬಗೆಯ A1 ಹಾಲು ಹೆಚ್ಚಾಗಿ ವಿದೇಶಿ ಮತ್ತು ಮಿಶ್ರತಳಿಗಳಾದ ಹೋಲ್ಸ್ಟೀನ್ ಮತ್ತು ಜೆರ್ಸಿಗಳಲ್ಲಿ ಕಂಡುಬಂದಿದೆ. ಈ A1/A2 ಎಂಬದು ಆರನೆಯ ವರ್ಣತಂತುಗಳಲ್ಲಿರುವ (ಕ್ರೋಮೊಜೋಮ್) ಒಂದು ಜೋಡಿಯ ಜೀನ್ಗಳಿಂದ ನಿರ್ಧಾರವಾಗುತ್ತದೆ. ಆ ಜೀನ್ಗಳಲ್ಲಿ ಮುಖ್ಯವಾಗಿ ಎರಡು ಒಡರೂಪಿ(ಅಲ್ಲೀಲ್)ಗಳಿವೆ ಅವು A1 ಮತ್ತು A2 ಬೀಟಾ (β) ಕೇಸಿನ್ ಒಡರೂಪಿ (ಅಲ್ಲೀಲ್)ಗಳು. ಆಕಳು A2A2 ಅಥವಾ A1A2 ಅಥವಾ A1A1 ಒಡರೂಪಿ(ಅಲ್ಲೀಲ್)ಗಳನ್ನು ಹೊಂದಿರಬಹುದು. ಹಾಗೇಯೇ A1A2 ವಂಶವಾಹಿನಿ ಹೊಂದಿರುವ ಆಕಳುಗಳು A1 ಅಥವಾ A2 ಹಾಲನ್ನು ಸಮವಾಗಿ ಉತ್ಪತ್ತಿ ಮಾಡಿದರೆ, A2A2 ವಂಶವಾಹಿನಿಯನ್ನು ಹೊಂದಿರುವ ಆಕಳುಗಳು A2 ಹಾಲನ್ನು ಮಾತ್ರ ಉತ್ಪತ್ತಿಮಾಡುತ್ತವೆ ಮತ್ತು ಕೇವಲ A1A1 ವಂಶವಾಹಿನಿಯನ್ನು ಹೊಂದಿರುವ ಆಕಳುಗಳು A1 ಹಾಲನ್ನು ಮಾತ್ರ ಉತ್ಪತ್ತಿ ಮಾಡುತ್ತವೆ. ಇತ್ತೀಚಿನ ಸಂಶೋಧನೆಗಳಲ್ಲಿ ಕಂಡುಬಂದಂತಹ ಸತ್ಯವೆಂದರೆ ಏಷಿಯಾ ಖಂಡದಲ್ಲಿರುವ ಆಕಳು ಮತ್ತು ಎಮ್ಮೆ ತಳಿಗಳು A2 ಹಾಲನ್ನು ಮಾತ್ರ ಕೊಡುತ್ತವೆ. ಆದ್ದರಿಂದ ದೇಶೀಯ ತಳಿಗಳಾದ ರೆಡ್ಸಿಂಧಿ, ಸಾಹಿವಾಲ್, ಥಾರ್ಪಾರ್ಕರ್ ಆಕಳಿನಲ್ಲಿ ಮತ್ತು ಎಮ್ಮೆಗಳಾದ ಮುರ್ರಾ, ನೀಲಿರವಿ ಮುಂತಾದವುಗಳಲ್ಲಿ ಶೇಕಡ ೧೦೦ರಷ್ಟು ಹಾಲು A2 ಆಗಿರುತ್ತದೆ, ಅದೇ ಮಿಶ್ರತಳಿಗಳಾದ ಎಚ್.ಎಫ್ ಮತ್ತು ಜರ್ಸಿಗಳಲ್ಲಿ ಶೇಕಡ ೬೦ ರಷ್ಟಿದೆ.

A1 ಮತ್ತು A2 ಹಾಲಿನಿಂದ ಮನುಷ್ಯನ ಆರೋಗ್ಯದ ಮೇಲಾಗುವ ಪರಿಣಾಮಗಳೆನು?

ಹಾಲು ನಮಗೆ ಉತ್ತಮ ಗುಣಮಟ್ಟದ ಪ್ರೋಟೀನ್, ಶಕ್ತಿ (ಕ್ಯಾಲೊರಿ), ಕೊಬ್ಬು, ಅವಶ್ಯವಿರುವ ಲಘುಪೋಷಕಾಂಶಗಳನ್ನು ಮತ್ತು ಕ್ಯಾಲ್ಸಿಯ್ಂ, ಮೆಗ್ನೆಸಿಯ್ಂ, ಮತ್ತು ಫಾಸ್ಪರಸ್ ಎಂಬ ಖನಿಜಗಳನ್ನು ಒದಗಿಸುತ್ತದೆ. ಆದರೆ ಹಾಲಿನಲ್ಲಿರುವ ಪ್ರೋಟೀನಂಶ ಮತ್ತು ಟೈಪ್ -೧ ಮಧುಮೇಹ ರೋಗ, ಹೃದಯ ರಕ್ತನಾಳ ಸಂಬಂಧಿತ ರೋಗಗಳಿಗೆ ಸಂಬಂಧವಿದೆಯೆಂದು ಇತ್ತೀಚಿನ ಸಂಶೋಧನೆಗಳಿಂದ ತಿಳಿದುಬಂದಿದೆ ಮತ್ತು ಅದರಂತೆಯೇ ಸೀಝೋಫ್ರೇನಿಯಾ (ನರ ಸಂಬಂದಿತ ಕಾಯಿಲೆ), ಸ್ವಲೀನತೆ (ಆಟಿಸ್ಂ), ಹಠಾತ್ ಶಿಶು ಮರಣ ಸಿಂಡ್ರೋಂಗಳಿಗೂ ಸಹ ಹಾಲಿನಲ್ಲಿರುವ ಕೆಲವೊಂದು ಅಂಶಗಳು ಕಾರಣವೆಂದು ಸಂಶೋಧಿಸಲಾಗಿದೆ. ಮುಂದುವರೆದು. ಇತ್ತೀಚಿಗೆ ಹಾಲಿನಲ್ಲಿರುವ A1 ಮತ್ತು A2 ಅಂಶಗಳಿಂದಾಗುವ ಪರಿಣಾದ ಮೇಲೆ ಸಂಶೋಧನೆಯಲ್ಲಿ ಬೆಳಕು ಚೆಲ್ಲಲಾಯಿತು. ಪೂರ್ವ ಆಫ್ರಿಕದ ದೇಶದಲ್ಲಿ ಮೆಸ್ಸಾಯಿ ಮತ್ತು ಸಾಂಬುರು (ಉತ್ತರ ಕೀನ್ಯಾ) ಎಂಬ ಜನಾಂಗಗಳ ಅಧ್ಯಯನದಿಂದ ತಿಳಿದುಬಂದ ಸತ್ಯವೆನೆಂದರೆ, ಅಲ್ಲಿನ ಜನ ಕೊಬ್ಬು ಹೊಂದಿದ ಹಾಲನ್ನು ಸೇವಿಸಿದರು. ಅವರಿಗೆ ಯಾವುದೆ ತರಹದ ಹೃದಯ ಸಂಬಂಧಿ ಕಾಯಿಲೆಗಳು ಬರದಿರುವುದು. ಇದಕ್ಕೆ ಮೂಲ ಕಾರಣ ಅಲ್ಲಿ ಹಾಲು ಕೊಡುತ್ತಿರುವ ಹಸುಗಳು ಝೇಬು ವರ್ಗದಿಂದ ಬಂದಂತಹ ತಳಿಗಳಾಗಿದ್ದು, ಇವುಗಳು ಉತ್ಪಾದಿಸುವ ಹಾಲಿನಲ್ಲಿ A2 ಅಂಶವಿರುವದನ್ನು ದೃಢಪಡಿಸಲಾಗಿದೆ. ಅದೇ ರೀತಿಯಾಗಿ ವಿದೇಶಿ ತಳಿಗಳಾದ ಹಾಲೆಸ್ಟೇನಿಯನ್ ಫ್ರೀಸಿಯನ್, ಜೆರ್ಸಿ ಮತ್ತು ಅನೇಕ ತಳಿಗಳಿಂದ ಬಂದ ಹಾಲನ್ನೇ ಸೇವಿಸಿದ ಜನಾಂಗದಲ್ಲಿ ಹೆಚ್ಚು ಹೃದಯ ಸಂಬಂಧಿ ಕಾಯಿಲೆಗಳು ಕಂಡುಬಂದಿವೆ. ಆಹಾರ ಮತ್ತು ಕೃಷಿ ಸಂಘಟನೆಯ (FAO) ವರದಿಯಲ್ಲಿಯೂ ಸಹ ಹಾಲು ಸೇವನೆ ಮತ್ತು ಅದರಿಂದಾಗುವ ಧೀರ್ಘ ಪರಿಣಾಮದ ರೋಗಗಳ ಬಗ್ಗೆ ವರದಿಯನ್ನು ಪ್ರಕಟಿಸಿದೆ. ಹಾಲಿನಲ್ಲಿರುವ ಬೀಟಾ (β) ಕೇಸಿನ್ ಪ್ರೋಟೀನ್ಗಳ ಮೇಲೆ ಹೆಚ್ಚು ಸಂಶೋಧನೆಗಳಾಗಿರವುದರಿಂದ ದೇಹದಲ್ಲಿ ಬೀಟಾ ಕೇಸಿನ ಪ್ರೋಟೀನ್ ಭಾಗವು ಹಾಲು ಜೀರ್ಣಾನಂತರ ಬೀಟಾ (β) ಕಾಸ್ಮೋಮಾರ್ಫಿನೆಂಬ (β -BCM7) ಅಂಶವನ್ನು ಉತ್ಪತ್ತಿಮಾಡುತ್ತದೆ. ಇದು ಮನುಷ್ಯನ ಹೃದಯ ಸಂಬಂಧಿ ಕಾಯಿಲೆಗಳು, ಟೈಪ್-೧ ಮಧುಮೇಹ ರೋಗ, ಸ್ವಲೀನತೆ(ಆಟಿಸ್ಂ), ಸೀಝೋಫ್ರೇನಿಯಾ(ನರಸಂಬಂದಿ ಕಾಯಿಲೆ) ಮುಂತಾದ ರೋಗಗಳಿಗೆ ಕಾರಣವಾಬಹುದೆಂದು ಮತ್ತು ಹಾಗೆಯೇ ಅನೇಕ ಖನಿಜಗಳಾದ ಕ್ಯಾಲ್ಸಿಯ್ಂ, ಮೆಗ್ನೇಸಿಯ್ಂ, ಜಿಂಕ್, ಜೀವಸತ್ವ-A ಮತ್ತು B1 ಮುಂತಾದವುಗಳು ಹಾಲಿನಿಂದ ಲಭಿಸುತ್ತವೆ. ಅದರಲ್ಲಿ ಕ್ಯಾಲ್ಸಿಯ್ಂ ಲವಣವು ಹಾಲು ಮತ್ತು ಹಾಲಿನ ಉತ್ಪನ್ನಗಳಿಂದಲೇ ಹೆಚ್ಚಾಗಿ ಲಭ್ಯವಾಗುತ್ತದೆ. ಅದರಲ್ಲಿ ದೇಹಕ್ಕೆ ಕ್ಯಾಲ್ಸಿಯ್ಂ ಮತ್ತು ಮೆಗ್ನೇಸಿಯ್ಂ ಲವಣಗಳ ಅನುಪಾತವು ೨:೧ ರಲ್ಲಿರಬೇಕು, ಆದರೆ ಆಕಳ A1 ಹಾಲಿನಲ್ಲಿ ಈ ಅನುಪಾತವು ೧೦:೧ ಇರುವುದರಿಂದ ಕ್ಯಾಲ್ಸಿಯ್ಂ ಸಿಕ್ಕರೆ ಮ್ಯಾಗ್ನೇಸಿಯ್ಂ ಲವಣದ ಕೊರತೆ ಮನುಷ್ಯನಲ್ಲಿ ಕಂಡುಬರುತ್ತದೆ. ಮ್ಯಾಗ್ನೇಸಿಯ್ಂ ಲವಣದ ಕೊರತೆಯಿಂದ ದೇಹದಲ್ಲಿನ ಅನೇಕ ಜೈವಿಕ ಕ್ರಿಯೆಗಳಿಗೆ ತೊಂದರೆ ಉಂಟಾಗುತ್ತದೆ ಮತ್ತು ಅದರಿಂದ ಅನೇಕ ಕಾಯಿಲೆಗಳು ಉತ್ಪತ್ತಿಯಾಗಬಹುದು. ಅದೇ ರೀತಿಯಾಗಿ A2 ಹಾಲಿನಿಂದ ಮನುಷ್ಯನ ಮೇಲೆ ಯಾವುದೇ ಅಡ್ಡ ಪರಿಣಾಮಗಳು ಇಲ್ಲಿಯವರೆಗೆ ಸಂಶೋಧನೆಯಾಗಿಲ್ಲ ಮತ್ತು A2 ಹಾಲಿನ ಸೇವನೆಯಿಂದ ನಮಗೆ ಯಾವ ಲಾಭವಾಗುತ್ತದೆಯೆಂದು ಸರಿಯಾದ ಸಂಶೋಧನೆಗಳು ಇಲ್ಲಿಯವರೆಗೆ ದೃಢಪಡಿಸಿಲ್ಲ, ಆದರೆ ಅದು A1ಹಾಲಿನಿಂದಾಗುವ ಅಡ್ಡಪರಿಣಾಮವನ್ನು ತಡೆಗಟ್ಟಬಲ್ಲದೆಂದು ಮಾತ್ರ ಹೇಳಬಹುದು. ಈ ಸಂಶೋಧನೆಗಳಿಂದ ನಮ್ಮ ದೇಶೀ ತಳಿಗಳಾದ ಆಕಳು ಮತ್ತು ಎಮ್ಮೆಗಳ ಹಾಲು ಸೇವನೆಗೆ ಅತ್ಯುತ್ತಮವೆಂದೇ ಹೇಳಬಹುದು. ಈಗಾಗಲೆ ಅನೇಕ ಕಂಪನಿಗಳು ಕೇವಲ ಂ೨ ಹಾಲನ್ನೆ ಮಾರಾಟ ಮಾಡಿ ಹೆಚ್ಚು ಹಣವನ್ನು ಸಂಪಾದಿಸುತ್ತಿದ್ದಾರೆ. ಇದು ನಮ್ಮ ರೈತರಿಗೆ ದೇಶೀ ಆಕಳು ಮತ್ತು ಎಮ್ಮೆಗಳನ್ನು ಸಾಕುವವರಿಗೆ ವರದಾನವಾಗಲೂಬಹುದು.