ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಔಷಧಿ ಸಸ್ಯಗಳು

ನೆಲನಲ್ಲಿ

ಡಾ. ಯಶಸ್ವಿನಿ ಶರ್ಮ
9535228694

ನೆಲನೆಲ್ಲಿ ಎಂಬ ಹೆಸರೇ ಸೂಚಿಸುವಂತೆ ಇದು ನೆಲ್ಲಿ ಗಿಡಕ್ಕೆ ಹೋಲುವಂತೆ ಬೆಳೆಯುವ ನೆಲ್ಲಿಯ ಕುಟುಂಬಕ್ಕೆ ಸೇರಿದ ಚಿಕ್ಕದಾಗಿ ಬೆಳೆಯುವ ಮೂಲಿಕೆಯಾಗಿದೆ. ಫಿಲ್ಲ್ಯಾಂಥಸ್ ಅಮಾರಸ್ ಎಂಬ ವೈಜ್ಞಾನಿಕ ಹೆಸರುಳ್ಳ ಇದು ’ಯುಫೋರ್ಬಿಯೇಸಿ’ ಕುಟುಂಬಕ್ಕೆ ಸೇರಿದೆ. ಸಂಸ್ಕೃತದಲ್ಲಿ ಇದನ್ನು ’ಭೂಮ್ಯಾಮಲಕಿ’ ಎಂದು ಕರೆಯುತ್ತಾರೆ. ತೋಟದಲ್ಲಿ, ಹೊಲ ಗದ್ದೆಗಳಲ್ಲಿ ಕಳೆಯಂತೆ ಬೆಳೆಯುವ ಈ ಸಸ್ಯ ಚಿಕ್ಕ ಸಾಸಿವೆ ಗಾತ್ರದ ಹಲವಾರು ಕಾಯಿಬಿಡುತ್ತದೆ. ಇಡೀ ಗಿಡವನ್ನು ಔಷಧಿಯಾಗಿ ಉಪಯೋಗಿಸುತ್ತಾರೆ. ಇದು ಶೇ. ೦.೫ ರಷ್ಟು ಫಿಲಾಂಧಿನ್’ ಎಂಬ ಕಹಿಯಾದ ಸಸ್ಯಕ್ಷಾರವನ್ನು ಹೊಂದಿದ್ದು, ಇದರ ಔಷಧೀಯ ಗುಣಗಳಿಗೆ ಕಾರಣವಾಗಿದೆ.

ನೆಲನೆಲ್ಲಿಯನ್ನು ಹೆಪಟೈಟಿಸ್ ಬಿ, ಅರಿಶಿನ ಕಾಮಾಲೆ ಅಥವಾ ಜಾಂಡಿಸ್ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಜಾಂಡಿಸ್ ಚಿಕಿತ್ಸೆಯಲ್ಲಿ ನೆಲನೆಲ್ಲಿ ಬಿಟ್ಟರೆ ಬೇರೆ ಔಷಧವಿಲ್ಲ.

ಜಾಂಡಿಸ್ನಿಂದ ಬಳಲುವವರು ನಿತ್ಯ ಪ್ರಾತಃ ಕಾಲದಲ್ಲಿ ೪ರಿಂದ ೫ ಚಮಚ ತಾಜಾ ನೆಲನೆಲ್ಲಿ ರಸ ಕುಡಿದರೆ ೧೫ ದಿನಗಳಲ್ಲಿ ಕಡಿಮೆಯಾಗುತ್ತದೆ. ಬೇರೆ ಯಾವುದೇ ಔಷಧಿ ಪದ್ಧತಿಯಲ್ಲಿ ಅರಿಶಿನ ಕಾಮಾಲೆಗೆ ನಿಖರವಾದ ಚಿಕಿತ್ಸೆ ಇಲ್ಲ. ಯಕೃತ್ತಿನ ಯಾವುದೇ ಸಮಸ್ಯೆಗೆ ನೆಲನೆಲ್ಲಿ ದಿವ್ಯೌಷಧಿ ಎಂದೇ ಹೇಳಬಹುದು. ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ, ಹಸಿವೆಯಾಗದಿದ್ದರೆ ನೆಲನೆಲ್ಲಿ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಯಕೃತ್ತಿನ ತೊಂದರೆ ಶಮನವಾಗುವುದಲ್ಲದೇ ಪಚನ ಶಕ್ತಿಯನ್ನು ವೃದ್ಧಿಸುತ್ತದೆ.

ಮಾರುಕಟ್ಟೆಯಲ್ಲಿ ಸಿಗುವ ’ಲಿವ್-೫೨’ ಮಾತ್ರೆ ಅಥವಾ ಸಿರಪ್ಗಳಲ್ಲಿ ಭೂನೆಲ್ಲಿ ಬಹುಮುಖ್ಯ ಅಂಶವಾಗಿದ್ದು, ಪಿತ್ತಕೋಶದ ಕಾರ್ಯಕ್ಷಮತೆ ಹೆಚ್ಚಿಸುತ್ತದೆ. ಚಿಕ್ಕ ಮಕ್ಕಳಲ್ಲಿ ಇದು ಹಸಿವನ್ನು ಹೆಚ್ಚಿಸಿ, ಆಹಾರ ಸೇವನೆಯನ್ನು ವೃದ್ಧಿಸುತ್ತದೆ.

ಇದು ಎಲ್ಲ ಮಣ್ಣಿನಲ್ಲಿಯೂ ಬೆಳೆಯಬಲ್ಲದು, ನೀರು ಬಸಿದು ಹೋಗುವ ೫.೫ ರಿಂದ ೮ ರ ವರೆಗೆ ರಸಸಾರವಿರುವ ಮಣ್ಣು ಈ ಬೆಳೆಗೆ ಅತೀ ಸೂಕ್ತ. ಎಲ್ಲ ವಿಧದ ಹವಾಮಾನದಲ್ಲಿಯೂ ನೀರಾವರಿಯೊಂದಿಗೆ ಇದನ್ನು ಬೆಳೆಯಬಹುದು. ಮಳೆಗಾಲದಲ್ಲಿ ಇದು ನೈಸರ್ಗಿಕವಾಗಿ ಎಲ್ಲ ಕಡೆ ಕಂಡುಬರುತ್ತದೆ. ’ನವ್ಯ ಕೃತಿ’ ಮತ್ತು ’ಸಿಮ್ ಜೀವನ್’ ಎಂಬ ಹೊಸ ತಳಿಗಳು ಅಧಿಕ ಇಳುವರಿ ಮತ್ತು ಸಸ್ಯಕ್ಷಾರವನ್ನು ಹೊಂದಿದೆ. ಆದಾಗ್ಯೂ ಕೇರಳದಲ್ಲಿ ಇದನ್ನು ಸ್ಥಳೀಯ ಮಾರುಕಟ್ಟೆಗಾಗಿ, ಆಯುರ್ವೇದಿಕ್ ಔಷಧಿ ತಯಾರಿಕೆಗಾಗಿ ಚಿಕ್ಕ ಪ್ಲಾಟ್ಗಳಲ್ಲಿ ಬೆಳೆಯುತ್ತಾರೆ.

ಬೀಜದಿಂದ ಇದರ ವಂಶಾಭಿವೃದ್ಧಿ. ಸುಮಾರು ೧ ಕೆ.ಜಿ. ಬೀಜ ಪ್ರತಿ ಹೆಕ್ಟೇರಿಗೆ ಬೇಕಾಗುತ್ತದೆ. ಗಿಡ ಒಣಗಿದ ಮೇಲೆ ಬೀಜವನ್ನು ಹಿಡಿದಿಟ್ಟುಕೊಂಡು ಶೇಖರಿಸಬೇಕು. ಏರುಮಡಿಯಲ್ಲಿ ಚೆನ್ನಾಗಿ ಕಳಿತ ಕೊಟ್ಟಿಗೆ ಗೊಬ್ಬರ ಮಿಶ್ರಮಾಡಿ ಬೀಜವನ್ನು ಮರಳಿನೊಂದಿಗೆ ಬೆರೆಸಿ ಏಕರೂಪವಾಗಿ ಬಿತ್ತನೆ ಮಾಡಬೇಕು. ೪-೫ ದಿನಗಳಲ್ಲಿ ಬೀಜ ಮೊಳಕೆಯೊಡೆಯಲು ಪ್ರಾರಂಭವಾಗುತ್ತದೆ. ೩೦ರಿಂದ ೪೦ ದಿನದ, ೧೦-೧೫ ಸೆಂ.ಮೀ. ಉದ್ದದ ಸಸಿಗಳನ್ನು ೧೫ x ೧೦ ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು. ನಾಟಿ ಮಾಡಿದ ೬೦ ರಿಂದ ೭೦ ದಿನಗಳಲ್ಲಿ ಕಟಾವು ಮಾಡಬಹುದು. ಹೆಚ್ಚು ದಿನ ಬಿಟ್ಟರೆ ಕೆಳಗಿನ ಎಲೆ ಉದುರಲು ಪ್ರಾರಂಭವಾಗುತ್ತದೆ. ಭೂಮಿಯ ಮೇಲ್ಭಾಗದಲ್ಲಿ ಬೆಳೆಯುವ ಕಾಂಡವನ್ನು ಕಟಾವು ಮಾಡಿ ಒಣಗಿಸಿ ಶೇಖರಿಸಿಡಬೇಕು. ಪ್ರತಿ ಹೆಕ್ಟೇರಿಗೆ ಸುಮಾರು ೨೦ ಕ್ವಿಂಟಾಲ್ ಒಣಗಿದ ಸಸ್ಯದ ಇಳುವರಿ ತೆಗೆಯಬಹುದು.