ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಟೊಮಾಟೊ ಕೊನೆಯ ಅಂಗಮಾರಿ ರೋಗ

ಪ್ರವೀಣ ಯಡಹಳ್ಳಿ
08272225539

ರೋಗ ಲಕ್ಷಣಗಳು

ಕೊನೆಯ ಅಂಗಮಾರಿ ರೋಗ ಫೈಟಾಪ್ತರಾ ಇನ್ಫೆಸ್ಟೆನ್ಸ್ ಎಮ್. ಎಂಬ ಶಿಲೀಂಧ್ರದಿಂದ ಬರುತ್ತದೆ. ಟೊಮಾಟೊ ಎಲೆ ಮತ್ತು ಕಾಂಡದಲ್ಲಿ ಕಂಡುಬರುವ ರೋಗದ ಲಕ್ಷಣಗಳು ಆಲೂಗೆಡ್ಡೆಯಲ್ಲಿ ಕಂಡುಬರುವ ಕೊನೆಯ ಅಂಗಮಾರಿ ರೋಗ ಲಕ್ಷಣಗಳನ್ನು ಹೋಲುತ್ತವೆ. ವಕ್ರಾಕಾರದ ಸಣ್ಣ ಸಣ್ಣ ಚುಕ್ಕೆಗಳು ಎಲೆಯ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ಹೆಚ್ಚಿನ ತೇವಾಂಶವಿದ್ದಾಗ ಈ ಚುಕ್ಕೆಗಳು ಕಪ್ಪು ಕಂದುಮಿಶ್ರಿತ ಬಣ್ಣಕ್ಕೆ ತಿರುಗುತ್ತದೆ ಹಾಗೂ ಬಿಳಿಯ ಶಿಲೀಂಧ್ರದ ಬೆಳವಣಿಗೆಯನ್ನು ಕಾಣಬಹುದು ಅಂತಿಮವಾಗಿ ಚುಕ್ಕೆಗಳು ದೊಡ್ಡದಾಗಿ ಎಲೆಗಳು ಸುರುಳಿಕೊಂಡು, ಒಂದಕೊಂದು ಸೇರಿಕೊಂಡು ಒಣಗುತ್ತವೆ. ಗಾಡ ಕಂದು ಬಣ್ಣದ ಮಚ್ಚೆಗಳು ಕಾಂಡ ಹಾಗೂ ಎಲೆಯ ತೊಟ್ಟುಗಳ ಮೇಲೆ ಕಾಣಿಸಿಕೊಳ್ಳುತ್ತವೆ. ಅನಂತರ ರೋಗದ ಲಕ್ಷಣಗಳು ಹೂ ಮತ್ತು ಹಣ್ಣಿನ ಮೇಲೂ ಕಾಣಿಸಿಕೊಳ್ಳುತ್ತವೆ. ರೋಗಗ್ರಸ್ತ ಹಣ್ಣುಗಳು ಕಂದು ಬಣ್ಣಕ್ಕೆ ತಿರುಗಿ ಕೊಳೆತ ಹಾಗೆ ಕಾಣುತ್ತವೆ.

ಈ ಶಿಲೀಂಧ್ರವು ಆರೋಗ್ಯಕರ ಸಸ್ಯದ ಭಾಗಗಳಿಗೆ ಗಾಳಿಯಿಂದ ವೇಗವಾಗಿ ಹರಡುತ್ತವೆ. ಕೆಲವೇ ದಿನಗಳಲ್ಲಿ ಎಲ್ಲಾ ಗಿಡಗಳು ಸುಟ್ಟ ಹಾಗೆ ಕಾಣಿಸಿ ಸಾಯುತ್ತವೆ. ತೇವಾಂಶ ಶೇ.೯೦ ಅದರ ಜೊತೆಗೆ ೧೨೦ಛಿ ರಿಂದ ೨೪೦ಛಿ ಉಷ್ಣಾಂಶವು ರೋಗದ ಬೆಳವಣಿಗೆಗೆ ಸಹಾಯಕಾರಿಯಾಗಿರುತ್ತದೆ.

ತಡೆಗಟ್ಟುವ ಕ್ರಮಗಳು:

೧.ಮುಂಜಾಗ್ರತಾ ಕ್ರಮವಾಗಿ ಟ್ರೈಕೊಡರ್ಮ ಶಿಲೀಂಧ್ರ ನಾಶಕವನ್ನು ಸಸಿ ನಾಟಿ ಮಾಡುವಾಗ ಮಣ್ಣಿಗೆ ಬೆರೆಸಬೇಕು.

೨. ರೋಗಗ್ರಸ್ತ ಎಲೆಗಳನ್ನು ಕಂಡ ತಕ್ಷಣ ಕಿತ್ತೆಸೆಯಬೇಕು.

೩. ಒಂದು ಗಿಡದ ಎಲೆಗಳು ಇನ್ನೊಂದು ಗಿಡಕ್ಕೆ ತಾಗದಂತೆ ಗಿಡಗಳ ನಡುವೆ ಸರಿಯಾದ ಅಂತರವನ್ನು ಅನುಸರಿಸಬೇಕು.

೪. ರೋಗ ಲಕ್ಷಣ ಕಂಡ ಗಿಡದ ಅಂಗಾಂಶಗಳನ್ನು ಕಿತ್ತ ನಂತರ ಕ್ಲೋರೊಥಲೊನಿಲ್ ಅಥವಾ ಪ್ರೋಪಿನೆಬ್ (೦.೨%) ಸಿಂಪಡಿಸಬೇಕು.

೫. ರೋಗದ ತೀವ್ರತೆ ಹೆಚ್ಚಾದಲ್ಲಿ ರಿಡೋಮಿಲ್ [ಮೆಟಲಾಗ್ಜಿಲ್ + ಮ್ಯಾಂಕೊಜೆಬ್] (೦.೨%) ಔಷಧಿಯನ್ನು ಸಿಂಪಡಿಸಬೇಕು.