ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಸಂಪಾದಕೀಯ

ಜಲಮೂಲ ಅಂತರ್ಜಲವೆ?

image_
ಕೆ ಸಿ ಶಶಿಧರ

ನಮಗೆ ನೀರು ಎಲ್ಲಿಂದ ದೊರೆಯುತ್ತದೆ ಎಂಬ ಪ್ರಶ್ನೆ ಎತ್ತಿದರೆ, ಕೆರೆ-ಕಟ್ಟೆ, ಹಳ್ಳ-ಕೊಳ್ಳ, ನದಿ, ಡ್ಯಾಂಗಳು ಅಂತರ್ಜಲ ಎನ್ನುವುದು ವಾಡಿಕೆ. ಆದರೆ ಈ ಎಲ್ಲಾ ಮೂಲಗಳಿಗೆ ನೀರು ಒದಗಿಸುವ ಏಕೈಕ ಮೂಲ ಮಳೆ. ಮಳೆ ಈ ಎಲ್ಲಾ ಮೂಲಗಳು ಮೈದುಂಬಲು ಸಹಕರಿಸುತ್ತದೆ ಎಂದಾದ ಮೇಲೆ ಸತತವಾಗಿ ಮೂರು-ನಾಲ್ಕು ವರ್ಷ ಮಳೆ ಇಲ್ಲ ಎಂದಾಗ ಅಂತರ ಜಲವೂ ಕುಸಿದಿರುತ್ತದೆ. ಇಂತಹ ಸಾಮಾನ್ಯ ಅರಿವೂ ಆಸೆಯಿಂದ ಮರೆಯಾಗುತ್ತದೆ ಅಥವಾ ಎಲ್ಲಿಯೋ ಸಾಕಾರಗೊಂಡ ಬೋರ್ಗಳ ಆಶಾಕಿರಣ ಎಲ್ಲೆಲ್ಲಿಯೂ ಬೋರ್ ಕೊರೆಯಲು ಪ್ರೇರೇಪಿಸುತ್ತದೆ. ಬರಗಾಲದಲ್ಲಿ ಬೆಳೆ ಇಲ್ಲದೆ ಆರ್ಥಿಕ ಸಂಕಷ್ಟ ಎದುರಿಸುವ ರೈತ ಬೋರ್ ಕೊರೆದು ಇನ್ನು ಬಸವಳಿಯುತ್ತಾನೆ. ಈ ವರ್ಷ ಬರಗಾಲವಿರುವುದರಿಂದ ಯಾವುದೇ ವ್ಯವಹಾರವೂ ಇಲ್ಲ. ಆದರೆ ಬೋರ್ ತೆಗೆಯುವವರಿಗೆ ಭರ್ಜರಿ ವ್ಯಾಪಾರ. ಕೆಲ ರೈತರಂತೂ ಆಸೆಯ ಕನಸುಗಳ ಬೆನ್ನೇರಿ ೧೦ ರಿಂದ ೨೦ ಬೋರ್ ತೆಗೆಸಿರುವವರು ಇದ್ದಾರೆ. ಮುಂದಿನ ೧೦ ವರ್ಷಗಳಲ್ಲಿ ತೆಗೆಯಬಹುದಾದಷ್ಟು ಬೋರ್ ಗಳು ಈ ವರ್ಷವೊಂದರಲ್ಲೆ ಕೊರೆಯಲಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ಬೋರ್ ಫೇಲ್ ಆಗಲು ಕಾರಣವೇನು. ಮೊದಲ ಕಾರಣ ಇಂತಹ ಬರಗಾಲದಲ್ಲಿ ಅಂತರ್ಜಲವೂ ಸೊರಗಿರುತ್ತದೆ ಎನ್ನುವುದಾದರೆ, ಇನ್ನೊಂದು ಜಲ ಅನ್ವೇಷಣೆ ಯಲ್ಲಿ/ ಅನ್ವೇಷಕರಲ್ಲಿನ ನ್ಯೂನ್ಯತೆಗಳು. ಡಾ. ಎ.ಎಸ್.ಕುಮಾರ ಸ್ವಾಮಿಯವರು ತಮ್ಮ ಅಂತರ್ಜಲ ಪುಸ್ತಕದಲ್ಲಿ ನಮ್ಮಲ್ಲಿ ಅಂತರಜಲ ಅನ್ವೇಷಣೆಯಲ್ಲಿ ಬಳಸುತ್ತಿರುವ ಭೌತ ಸಮೀಕ್ಷೆ, ಪ್ರತಿರೋಧ ಮಾಪನ, ಸೌಂಡಿಂಗ್ ವಿಧಾನ ಪ್ರೊಫೈಲಿಂಗ್ ವಿಧಾನಗಳ ಜೊತೆ ಎಲೆಕ್ಟ್ರೋ ಮ್ಯಾಗ್ನೆಟಿಕ್ ರೆಸೊನಾನ್ಸ್ ವಿಧಾನ, ಸೀಸ್ಮಿಕ್ ರಿಫ್ರಾಕ್ಷನ್ ವಿಧಾನ, ಸೀಸ್ಮಿಕ್ ಪ್ರತಿಫಲನ ವಿಧಾನ, ಗ್ರಾವಿಮೆಟ್ರಿಕ್ ವಿಧಾನ ಬಂಡೆಗಳ ಮೂಲಕ ಹಾಯುವ ರಾಡಾರ್, ಕೋರ್ ಡ್ರಿಲ್ಲಿಂಗ್ ಇತ್ಯಾದಿ ವಿಧಾನಗಳಿವೆ. ಅವುಗಳು ನಮ್ಮ ಪ್ರದೇಶಗಳಿಗೆ ಸೂಕ್ತವೆ? ಎಂದು ಪರೀಕ್ಷಿಸಿ ಅಳವಡಿಸಬೇಕಾಗಿದೆ. ಹೇಗೂ ಯಾವುದೇ ವಿಧಾನದಲ್ಲಿ ನೂರಕ್ಕೆ ನೂರು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎನ್ನುವ ಮಾತಿನಡಿಯಲ್ಲಿ ಸರಿಯಾದ ವೈಜ್ಞಾನಿಕ ವಿಧಾನಗಳ ಅನುಸರಣೆಯಿಂದ ತಪ್ಪಿಸಿಕೊಳ್ಳುವಂತೆ ಆಗಬಾರದು. ರೈತರಿಗೆ ಉತ್ತಮ ಸೇವೆ ಒದಗಿಸಬೇಕು. ಒಂದು ವೇಳೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರಿಗೆ ತಮ್ಮ ಗಣಿಗಾರಿಕೆ ಕ್ಷೇತ್ರದ ಒತ್ತಡದಿಂದ ಈ ಸೇವೆಗಳನ್ನು ರೈತರಿಗೆ ಕೊಡಲಾಗದಿದ್ದರೆ, ತರಬೇತಿ ಹೊಂದಿದ ತಜ್ಞರನ್ನು ನೇಮಕ ಮಾಡಿಕೊಂಡು ಈಗಾಗಲೇ ರೈತರಿಗೆ ಇತರೆ ವಿಷಯಗಳಲ್ಲಿ ಉತ್ತಮ ಸೇವೆ ಕೊಡುತ್ತಿರುವ ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ಈ ಸೇವೆ ನೀಡುವಂತಾಗಬೇಕೆಂಬ ಉತ್ತಮ ಸಲಹೆ ನೀಡಿದ್ದಾರೆ. ಇದನ್ನು ಸಂಬಂಧಪಟ್ಟ ಇಲಾಖೆಗಳು ಗಮನಿಸಬೇಕು. ಜೊತೆಗೆ ಸಾಂಪ್ರದಾಯಿಕ ಜ್ಞಾನ ಹಾಗೂ ಆಧುನಿಕ ತಂತ್ರಜ್ಞಾನಗಳ ಒರೆಗೆ ಹಚ್ಚಿ ಉತ್ತಮ ತಂತ್ರಜ್ಞಾನ ಕೊಡುವ ಸಂಶೋಧನೆಗಳು ಆಗಬೇಕಿದೆ. ಕಾರಣ ಅಂತರ್ಜಲ ಶೋಧನೆಗೆ ಹಲವು ಸಾಂಪ್ರದಾಯಿಕ ತಂತ್ರಜ್ಞಾನಗಳು ದಾಖಲಾಗಿವೆ. ನಾನು ಹೀಗೆ ಓದುತ್ತಿರುವಾಗ ಕೆಳದಿ ಬಸವರಾಜ ಸಂಕಲಿಸಿದ ಶಿವತತ್ವರತ್ನಾಕರರ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಸಂಪಾದಿಸಿದ ಪ್ರಸ್ತಕದಲ್ಲಿ ಹಲವು ಜಲೋತ್ಪತ್ತಿಯ ಚಿಹ್ನೆಗಳು ನನ್ನಲ್ಲಿ ಕುತೂಹಲ ಮೂಡಿಸಿದವು. ಅವುಗಳಲ್ಲಿನ ಕೆಲವು ಆಯ್ದು ವಿವರಣೆ ಇಲ್ಲಿ ಕೊಟ್ಟಿದ್ದೇನೆ.

ಕ್ರಮವಾಗಿ ಕಂದು, ಬಿಳಿ, ಮಣ್ಣು, ಮರಳು, ಬೆಣಚುಕಲ್ಲು ಇದ್ದರೆ ನಂತರ ನೀರಿರುತ್ತದೆ. ಎಲಚಿಮರದ ಪೂರ್ವಕ್ಕೆ ಹುತ್ತವಿದ್ದರೆ ಅದರ ಪಶ್ಚಿಮಕ್ಕೆ ಅರ್ಧ ಆಳಿಗೆ ಬಿಳಿಗೋಧಿಯಂತಹ ಮಣ್ಣು ಮೂರಾಳೊಳಗೆ ನೀರು ಕಾಣುವುದು. ಮುತ್ತುಗದ ಜತೆಗೆ ಎಲಚಿಮರವಿದ್ದರೆ ಅದರ ಪಶ್ಚಿಮಕ್ಕೆ ಮೂರು ಆಳು ಒಳಗೆ ನೀರಿರುತ್ತದೆ. ಅದಕ್ಕೆ ಚಿಹ್ನೆ ಕಾಲು ಆಳು ಒಳಗೆ ಬಸವನಹುಳ. ಎಲಚಿಮರದ ಕೆಳಗೆ ಹುತ್ತವಿದ್ದರೆ ಪಶ್ಚಿಮದ ಕಡೆಗೆ ಹರಿಯುವ ಜಲನಾಡಿ ಮೂರು ಕಾಲು ಆಳಿಗೆ ಸಿಗುತ್ತದೆ. ಬಿಳಿಯಿಂದ ಹಳದಿಗೆ ತಿರುಗುವ ಮಣ್ಣಿನ ಜತೆ ಗೋಮೇಧಿಕ ಬಣ್ಣದ ಕಲ್ಲಿದ್ದರೆ ಅರ್ಧ ಆಳಿಗೆ ಕನ್ನೈದಿಲೆ ಹೊಳಪಿನ ಇಲಿ ಕಾಣುತ್ತದೆ. ಹತ್ತಿರದಲ್ಲಿ ಹುತ್ತ, ದಕ್ಷಿಣಕ್ಕೆ ವಿಭೀತದ (ತಾರೆಗಿಡ) ಇದ್ದರೆ ಅರ್ಧ ಆಳಿಗೆ ಪೂರ್ವದಿಕ್ಕಿನ ನೀರಿನ ನಾಡಿ ಇದೆ ಎಂದು ತಿಳಿಯಬೇಕು.

ಅದಕ್ಕೆ ಪಶ್ಚಿಮಕ್ಕೆ ಮೊಳದೂರದಲ್ಲಿ ಹುತ್ತವಿದ್ದರೆ ನಾಲ್ಕುವರೆ ಆಳು ಒಳಗೆ ಜಲನಾಡಿ ಎದ್ದು ತೋರುತ್ತದೆ. ಮೊದಲ ಆಳಿನಲ್ಲಿ ಬಿಳಿ, ಕುಂಕುಮ ಬಣ್ಣದ ಕಲ್ಲುಗಳಿದ್ದರೆ ಅದರ ಪಶ್ಚಿಮಕ್ಕೆ ಮೂರು ವರ್ಷದಲ್ಲಿ ಬತ್ತಿಹೋಗುವ ಜಲನಾಡಿ ಇರುತ್ತವೆ. ಕೋವಿದಾರದ ಈಶಾನ್ಯಕ್ಕೆ ಹುಲ್ಲಿನ ಜತೆ ಹುತ್ತವಿದ್ದರೆ ಅವುಗಳ ಮಧ್ಯೆ ಐದೂವರೆ ಆಳಿಗೆ ಬತ್ತದೆ ಇರುವ ನೀರು ಸಿಗುತ್ತದೆ. ಮೊದಲ ಆಳಿನ ಅಳತೆಯಲ್ಲಿ ತಾವರೆ ಗರ್ಭದಂತಹ ಹಾವು ಕೆಂಪುಭೂಮಿ, ಕುರುವಿಂದ ಬಣ್ಣದ ಕಲ್ಲು ಇವು ಅದಕ್ಕೆ ಚಿಹ್ನೆಗಳು. ಎಲ್ಲ ಮರಗಳಡಿಯಲ್ಲೂ, ಕಪ್ಪೆ ಕಂಡರೆ ಅದರ ಒಂದು ಮೊಳದ ದೂರಕ್ಕೆ ನಾಲ್ಕುವರೆ ಆಳು ಒಳಗೆ ನೀರಿರುತ್ತದೆ. ಅತಿಮಧುರ ಗಿಡದ ಉತ್ತರಕ್ಕೆ, ಹುತ್ತವಿದ್ದು ಪಶ್ಚಿಮಕ್ಕೆ ಕಪ್ಪೆ ಇದ್ದರೆ ಇದರ ಐದು ಮೊಳ ದೂರಕ್ಕೆ ಎಂಟೂವರೆ ಆಳು ಒಳಗೆ ನೀರಿದೆ ಎನ್ನಬಹುದು. ಇದರಲ್ಲಿ ಆಳುದ್ದದಲ್ಲಿ ನಾಗ, ಬೂದುಬಣ್ಣದ ಭೂಮಿ, ಬೇಲದ ಹಣ್ಣಿನಂತಹ ಕಲ್ಲು ಇದ್ದಾಗ ಅದು ಮಾಹೇಂದ್ರೀ ನಾಡಿ. ಇದು ಸದಾ ನೊರೆ ತುಂಬಿದ ನೀರನ್ನು ಹೊಂದಿರುತ್ತದೆ. ತಾಳೆಮರದ ಪಶ್ಚಿಮಕ್ಕೆ ಹುತ್ತವಿದ್ದರೆ ಅದರ ಮೂರು ಮೊಳ ದಕ್ಷಿಣಕ್ಕೆ ಆರು ಮುಕ್ಕಾಲು ಆಳು ಒಳಗೆ ನೀರಿರುತ್ತದೆ. ತಾಳೆ ಅಥವಾ ತೆಂಗಿನ ಮರದ ಸುತ್ತ ಹುತ್ತವಿದ್ದರೆ ಅದರ ಆರು ಮೊಳ ಪಶ್ಚಿಮಕ್ಕೆ ನಾಲ್ಕು ಆಳು ಒಳಗೆ ಒಳಗೆ ದಕ್ಷಿಣ ನಾಡಿ ಇದೆ. ಆಶಾತ್ಮಕ(ಇದರ ನಾರಿನಿಂದ ಮೌಂಜಿಯನ್ನು ಮಾಡುತ್ತಾರೆ) ಎಡಕ್ಕೆ ಎಲಚಿ ಮರ ಅಥವಾ ಹುತ್ತ ಕಂಡರೆ ಅದರ ಉತ್ತರಕ್ಕೆ ಆರುಮೊಳದ ದೂರದಲ್ಲಿ ಮೂರುವರೆ ಆಳು ಒಳಗೆ ನೀರಿರುತ್ತದೆ. ಮೊದಲ ಆಳಿನಲ್ಲಿ ಆಮೆ, ಧೂಳುಕಲ್ಲು, ಮರಳುಮಣ್ಣು ಇದ್ದಲ್ಲಿ ದಕ್ಷಿಣಕ್ಕೆ ಎರಡನೆಯ ಹಂತದಲ್ಲಿ ಈಶಾನ್ಯಕ್ಕೆ ಸಿರಾ(ನಾಡಿ) ಇರುತ್ತದೆ.

ನೀರಿಲ್ಲದ ದೇಶದಲ್ಲಿ ಈ ಚಿಹ್ನೆಗಳು ಕಂಡರೆ ಹುಲ್ಲುಗರಿಕೆ ಇಲ್ಲದ ಕಡೆ ಒಂದಾಳಿಗೆ ನೀರಿರುತ್ತದೆ. Wಲಕ, ಅಮಟಿಮರ, ವಲಸೆಗಿಡ, ಗೇರುಮರ, ಬಿಲ್ವ, ತುಂಬೆ, ಅಂಕೋಲೆ, ದಾಳಿಂಬೆ, ಬಾಗೆಮರ, ವಂಜುಲ(ನೆಮ್ಮಿ/ಬೆತ್ತ) ನೀಪ (ಈಚಲು/ಕೆಂಪು ದಾಸಿವಾಳ) ಈ ಮರಗಳ ಸುತ್ತ ಹತ್ತಿರದಲ್ಲಿ ಒತ್ತಾಗಿ ಹುತ್ತಗಳಿದ್ದರೆ ಆಗ ಅದರಿಂದ ಮೂರು ಮೊಳ ಉತ್ತರಕ್ಕೆ ನಾಲ್ಕುವರೆ ಆಳು ಒಳಗೆ ನೀರು. ಹುಲ್ಲಿಲ್ಲದ ಭೂಮಿಯ ಮಧ್ಯೆ ಹುಲ್ಲಿದ್ದರೆ ಅಥವಾ ಹುಲ್ಲು ಭೂಮಿಮಧ್ಯೆ ಹುಲ್ಲಿಲ್ಲದೆ ಹೋದರೆ, ಆ ನೆಲದಲ್ಲಿ ಜಲನಾಡಿ ಇದೆ ಅಥವಾ (ನಿಧಿ) ಇದೆ ಎಂದೆನ್ನಬೇಕು. ಮುಳ್ಳಿರದ ಕಡೆ ಮುಳ್ಳು ಅಥವಾ ಅದಕ್ಕೆ ವ್ಯತಿರಿಕ್ತವಾಗಿದ್ದರೆ ಅದರ ಮೂರು ಮೊಳ ಪಶ್ಚಿಮಕ್ಕೆ ಮೂರು ಆಳು ಅಗೆದರೆ ಮೂರುಪಾಲು ನೀರು ಅಥವಾ ನಿಧಿ ಇರುತ್ತದೆ. ಮರದ ಒಂದು ಕೊಂಬೆ ತುಂಬಾ ಬಾಗಿದ್ದರೆ ಅಥವಾ ಬೆಳ್ಳಗಾಗಿದ್ದರೆ ಆ ಕೊಂಬೆಯ ತುದಿಯ ನೆಲದಲ್ಲಿ ಮೂರೇ ಆಳಿಗೆ ನೀರಿದೆ ಎಂದರಿಯಬೇಕು. ಹೂವು ಹಣ್ಣು ವಿಕಾರವಾದ ಮರದ ಮೂರು ಮೊಳ ಪೂರ್ವಕ್ಕೆ ಸಿರಾ ಇರುತ್ತದೆ. ನಾಲ್ಕು ಆಳಿಗೆ ಕಲ್ಲು ಕೆಳಗೆ ಹಳದಿಮಣ್ಣು ಇರುತ್ತದೆ. ದಿಬ್ಬವು ಮುಳ್ಳಿಲ್ಲದೆ ಶುಭ್ರ ಹೂಗಳಿಂದ ಕೂಡಿದ್ದರೆ ಆ ನೆಲದಲ್ಲಿ ಮೂರುವರೆ ಆಳಿನ ಒಳಗೆ ನೀರಿದೆ ಎನ್ನಬೇಕು. ನೀರಿಲ್ಲದ ಪ್ರದೇಶದಲ್ಲಿ ಖರ್ಜೂರ ಮರ ಮೇಲೆ ಎರಡಾಗಿ ಸೀಳಿದ್ದರೆ ಅದರ ಪಶ್ಚಿಮಕ್ಕೆ ಮೂರಾಳು ಒಳಗೆ ನೀರು ಇದೆ ಎಂದು ಸೂಚನೆ. ಬಿಳಿ ಹೂ ಬಿಟ್ಟು ಕರ್ಣಿಕಾರ ಅಥವಾ ಮುತ್ತುಗದ ಗಿಡವಿದ್ದರೆ ಅದರ ಎರಡು ಮೊಳ ಎಡಕ್ಕೆ ಮೂರಾಳೊಳಗೆ ನೀರಿರುತ್ತದೆ.

ಬಿಸಿ ಹಬೆ ಅಥವಾ ಹೊಗೆ ಕಾಣುವ ನೆಲದಲ್ಲಿ ಎರಡು ಆಳೊಳಗೆ ’ಸಿರಾ’ ದೊಡ್ಡ ನೀರಿನ ಪ್ರವಾಹದೊಂದಿಗೆ ತೋರಿಬರುತ್ತದೆ. ಹೊಲದ ಯಾವ ಮೂಲೆಯಲ್ಲಿ ಹುಟ್ಟಿದ ಸಸ್ಯ ಬೇಗ ಹಾಳಾಗುತ್ತದೊ ಅಥವಾ ತುಂಬಾ ಒತ್ತಾಗಿ ಬೆಳೆದು ಬಿಳಿಚಿಕೊಳ್ಳುವುದೊ ಅಲ್ಲಿ ಎರಡಾಳೊಳಗೆ ’ಮಹಾಸಿರಾ’ ಇರುತ್ತದೆ. ಕುರಟಗೆ ಗಿಡದ ಈಶಾನ್ಯಕ್ಕೆ ಹುತ್ತವಿದ್ದರೆ ಪಶ್ಚಿಮಕ್ಕೆ ನೀರಿರುತ್ತದೆ. ಅಲ್ಲಿ ಉತ್ತರಕ್ಕೆ ಹರಿಯುವ ಸಿರಾ ಐದು ಆಳು ಒಳಗೆ ಇರುತ್ತದೆ. ಮಂಡರಗಪ್ಪೆಯ ಗುರುತಿದ್ದು ಕಂದುಬಣ್ಣದ ಮಣ್ಣು, ಆಮೇಲೆ ಹಸಿರು ಇದ್ದರೆ ಒಂದಾಳು ತಳಗೆ ಕಲ್ಲು ಅದರೆ ತಳಗೆ ನೀರು ಇರುತ್ತದೆ ಎಂದು ತಿಳಿಯಬೇಕು. ಎಲಚಿ ಸಸಿನೆಟ್ಟು ಅದು ಸೊಂಪಾಗಿ ಬೆಳೆದರೆ ಹುತ್ತ ಇಲ್ಲದಿದ್ದರೂ ಮೂರು ಮೊಳ ಪಶ್ಚಿಮಕ್ಕೆ ಹದಿನಾರು ಆಳು ಒಳಗೆ ನೀರು ಸಿಗುತ್ತದೆ. ಮೊದಲಲ್ಲಿ ಒಳ್ಳೆ ಸಿಹಿನೀರು. ಒಂದು ಸಿರಾ ದಕ್ಷಿಣದ್ದು ಇನ್ನೊಂದು ಉತ್ತರದಿಂದ ಹೊರಡುತ್ತದೆ. ಹಿಟ್ಟಿನಂಥ ಕಲ್ಲು ಬಿಳಿಮಣ್ಣು ಅರ್ಧ ಆಳಿಗೆ ಚೇಳು ಇದು ಇದರ ಗುರುತು. ಎಲಚಿ ಮರ ಬಿದಿರಿನ ಮೊಳಕೆ ಜತೆಗೆ ಇದ್ದರೆ ಅದರ ಮೂರು ಮೊಳ ಪಶ್ಚಿಮಕ್ಕೆ ಹದಿನೆಂಟು ಆಳು ಒಳಗೆ ತುಂಬು ನೀರಿನ ಐಶಾನೀ (ಈಶಾನ್ಯದಿಂದ ಬರುವ) ಜಲನಾಡಿ ಅಲ್ಲಿರುತ್ತದೆ. ಕೆಂಪು ಪುತ್ತು ಮತ್ತು ಬಿದಿರು ಅಥವಾ ಕೆಂಪು ಮತ್ತು ಬಿಲ್ವ ಒಟ್ಟಿಗೆ ಇದ್ದರೆ(ಎರಡು ಅಥವಾ) ಮೂರು ಮೊಳ ಪಶ್ಚಿಮಕ್ಕೆ ಇಪ್ಪತ್ತೊಂದು ಆಳಿಗೆ ನೀರು ಇರುತ್ತದೆ. ಗಂಟು ಹೆಚ್ಚಾದ ಬನ್ನಿಮರ, ಅದರ ಉತ್ತರಕ್ಕೆ ಹುತ್ತವಿದ್ದರೆ ಅಲ್ಲಿಂದ ಐದುಮೊಳ ಪಶ್ಚಿಮಕ್ಕೆ ನೂರುವರೆ ಆಳು ಒಳಗೆ ನೀರು ಉಂಟು. ಒತ್ತಾಗಿ ಎತ್ತರವಾದ ಮರಗಿಡ ಬಳ್ಳಿಗಳಿದ್ದು ಎಲೆಗಳು ಒಡೆದು ಹೋಗಿದ್ದರೆ ಅಲ್ಲಿ ಸಿರಾ ಇದೆ. ಅದರ ಪೂರ್ವಕ್ಕೆ ಪದ್ಮ, ಮಂಗಾರೆ, ಲಾಮಂಚ, ಹೆಗ್ಗುಳ್ಳದ ಗಿಡ, ಜೊಂಡು, ಕುಶ ಅಥವಾ ನಲಿನೀಸಖ(ಒಂದು ಜಾತಿ ತಾವರೆ) ಗುರುತಾಗಿರುತ್ತದೆ. ಖರ್ಜೂರ, ನೇರಳೆ, ಅರ್ಜುನ, ಕೇದಿಗೆ ಅಥವಾ ಹಾಲುಮರ, ಗಿಡ, ಬಳ್ಳಿಗಳಿದ್ದರೆ, ನಾಯಿಕೊಡೆ, ಆನೆ, ಹಾವು, ಕನ್ನೈದಿಲೆ, ರಾತ್ರಿರಾಣಿ, ಇಂದುವಾರ ಗಳಿದ್ದರೆ, ತಾರೆಗಿಡ ಕಾಡುಮಲ್ಲಿಗೆ ಗಿಡಗಳಿದ್ದರೆ, ಬೆಟ್ಟದ ಮೇಲೊಂದು ಬೆಟ್ಟವಿದ್ದರೆ, ಅಲ್ಲಿ ಮತ್ತು ಜೊಂಡು ಬೆಳೆದ ನೆಲ, ಹುಲ್ಲು ತುಂಬಿದ ಕಪ್ಪುಮಣ್ಣು ಮತ್ತು ಬೆಣಚುಕಲ್ಲು ಇರುವ ಕಡೆ ಮೂರಾಳಿಗೆ ನೀರು ಸಿಗುತ್ತದೆ. ಕಪ್ಪು ಅಥವಾ ಕೆಂಪುಮಣ್ಣು ಇರುವಲ್ಲಿ ನೀರು ಸಿಹಿ ಇರುತ್ತದೆ. ಬೆಣಚುಕಲ್ಲು ತಾಮ್ರ ಭೂಮಿ ನೀರನ್ನು ಒಗರುಗೊಳಿಸುತ್ತವೆ. ಕಂದುನೆಲ ಕ್ಷಾರಗೊಳಿಸುತ್ತದೆ. ಬಿಳಿ ಮಣ್ಣಿನಲ್ಲಿ ಉಪ್ಪು ತೋರುತ್ತದೆ. ಮತ್ತಿ, ಕೆಂಪುಮತ್ತಿ, ಬಿಲ್ವ, ಸರ್ಜ, ಶ್ರೀಪರ್ಣ, ಅರಿಷ್ಟಾದವ ಮತ್ತು ಶಿಂಶುಪಾ (ಅನಿರುಗಿಡ) ಮರಗಿಡ ಬಳ್ಳಿಗಳ ಎಲೆಗಳು ಛಿದ್ರವಾಗಿರುವುದು ನೀರು ರೂಕ್ಷ (ಊಚಿಡಿಜ) ಆಗಿರುವುದನ್ನೂ ದೂರವಿರುವುದನ್ನೂ ತಿಳಿಸುತ್ತವೆ. ಸೂರ್ಯ, ಅಗ್ನಿ, ಬೂದಿ, ಒಂಟೆ, ಹೇಸರ್ಗತ್ತೆ ಈ ಬಣ್ಣಗಳು ನೆಲ ನೀರಿಲ್ಲದ್ದೆಂದು ತೋರಿಸುತ್ತವೆ. ಕೆಂಪು ಚಿಗುರು, ಹಾಲು ತುಂಬಿದ ಬಿದಿರು, ಕೆಂಪು ನೆಲ ಇದ್ದರೆ ಕಲ್ಲಿನ ತಳಗೆ ನೀರು ಉಂಟು. ವೈಢೂರ್ಯ, ಮುತ್ತು, ಮೋಡ, ನೀಲದ ಹೊಳಪಿನ ಅಥವಾ ಕಳಿತವಾಗುತ್ತಿರುವ ಅತ್ತಿಯ ಹತ್ತಿರ ದಲ್ಲಿರುವ ನೆಲ ಅದರ ತಳಗೆ ಕಾಡಿಗೆ ಅಥವಾ ಕಂದು ಬಣ್ಣದ ಕಲ್ಲಿದ್ದರೆ ಹತ್ತಿರದಲ್ಲಿ ತುಂಬಾ ನೀರಿದೆ ಎಂದು ತಿಳಿಯಬೇಕು. ಪಾರಿವಾಳದ ರೆಕ್ಕೆಯಂತಹ ಅಥವಾ ರೇಷ್ಮೆ ಬಟ್ಟೆ ಬಣ್ಣದ ಭೂಮಿ ಸೋಮನ ಬಳ್ಳಿಯಂತಹ ಭೂಮಿ ಬತ್ತದೆ ಇರುವ ನೀರನ್ನು ಉಂಟುಮಾಡುತ್ತವೆ. ತಾಮ್ರದ ಜತೆಗಿದ್ದು ಬಣ್ಣದ ಚುಕ್ಕೆಗಳಿರುವ ಕಲ್ಲು, ಬಿಳಿ, ಬೂದು ಬಣ್ಣದವು, ಒಂಟೆ ಅಥವಾ ಕತ್ತೆ ಬಣ್ಣದವು, ಭಂಗಿ, ಅಂಬಷ್ಟಕಾ (ಜುಗ್ಗಿ/ಅಂಬಾಡಿ) ಹೂವಿನ ಬಣ್ಣದ ಕಲ್ಲು ಅಥವಾ ಸೂರ್ಯ, ಬೆಂಕಿ ಬಣ್ಣದ ಕಲ್ಲುಗಳಿದ್ದರೆ ಅಲ್ಲಿ ನೀರಿರುವುದಿಲ್ಲ. (ಕೆಳಗೆ ಇರುವ ನೀರನ್ನು ಹೀಗೆ ತಿಳಿದು ನಾಡಿ ಇರುವ ಕಡೆ ಲಗ್ನಶುದ್ಧಿ ಇರುವಾಗ ಬಾವಿ ಅಗೆಯಬೇಕು.) ಇಂದ್ರನೀಲ ಮಣಿ, ಹಿಂಗು, ಕಾಡಿಗೆ, ಉದಯಸೂರ್ಯ ಅಥವಾ ಅರಿಶಿನ ಬಣ್ಣದ ಕಲ್ಲುಗಳು ಒಳ್ಳೆಯವು ಎನ್ನುವುದಕ್ಕೆ ಮುನಿವಚನವೇ ಪ್ರಮಾಣ.

ಅಬ್ಬಾ! ೧೬ನೇ ಶತಮಾನದ ಒಂದು ಪುಸ್ತಕದಲ್ಲಿ ಇಷ್ಟು ಮಾಹಿತಿ ಇದ್ದರೆ ನಮ್ಮೆಲ್ಲಾ ಸಾಹಿತ್ಯದಲ್ಲಿ ಇನ್ನೆಷ್ಟು ಇರಬೇಕು. ನಮ್ಮ ಸಾಂಪ್ರದಾಯಿಕ ಜಲಶೋಧಕರಲ್ಲಿ ಇನ್ನೆಷ್ಟು ಜ್ಞಾನ ಭಂಡಾರ ವಿರಬೇಕು. ಎಲ್ಲವನ್ನು ಶೋಧಿಸಿ ಸಂಶೋಧಿಸಿ ರೈತರಿಗೆ ಒದಗಿಸುವ ವ್ಯವಸ್ಥೆಯಾಗಬೇಕಿದೆ. ಜೊತೆ ಜೊತೆಗೆ ನಾವು ಸಹ ಮಳೆ ನಮ್ಮ ಜಲಮೂಲ ಅದನ್ನು ಹೊರತುಪಡಿಸಿ ಇನ್ನಾವುದೇ ಮೂಲ ಗಳಲ್ಲೂ ಶಾಶ್ವತವಲ್ಲ ಎಂಬುದನ್ನು ಅರಿತು ಬರಗಾಲಗಳಲ್ಲಿ ಸಂಯಮದಿಂದ ಜಲ ಅರಸಬೇಕು. ಜೊತೆಗೆ ಬರ ಬಂದಾಗ ಬೋರ್ ತೆಗೆಯುವ ಬದಲು ಬರ ಬರುವುದು ಗ್ಯಾರಂಟಿ ಗೊತ್ತು ಆದರೆ ಯಾವಾಗ ಬರುತ್ತದೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಯಾವಾಗಲಾದರೂ ಬರ ಬರಲಿ ಅದನ್ನು ಎದುರಿಸಲು ಬೇಕಾದ ಸನ್ನದ್ಧತೆಯಲ್ಲಿ ನಾವಿರಬೇಕಾಗುತ್ತದೆ. ಬನ್ನಿ ನಾವೆಲ್ಲಾ ಸೇರಿ ಈಗಿನಿಂದಲೇ ಮುಂದಿನ ಬರಗಾಲಗಳನ್ನು ಎದುರಿಸಲು ಸನ್ನದ್ಧರಾಗೋಣ. ಹನಿ ನೀರನ್ನೂ ಉಳಿಸಿ, ಬಳಸುವ, ಬೆಳೆಸುವ ಜಲಸಾಕ್ಷರ ಸಮಾಜ ನಿರ್ಮಿಸೋಣ.