ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೧

ಸಂಪಾದಕೀಯ

ರೈತರಿಂದಾಗಬೇಕಿದೆ ಸಾಹಿತ್ಯ ಸೃಷ್ಠಿ

image_
ಕೆ.ಸಿ.ಶಶಿಧರ
1

ಮಲೆನಾಡ ಮಡಿಲಲ್ಲಿ ಕುವೆಂಪು ಅವರ ಊರ ದಾರಿಯಲ್ಲಿ ಪಯಣಿಸುತ್ತಿದ್ದಾಗ ನನ್ನ ಸ್ನೇಹಿತ ಸುಂದರ್ ಹೇಳಿದರು ನೋಡಿ ನಮ್ಮ ರಾಜ್ಯದ ಕಡಲು ಪ್ರದೇಶ ಎಷ್ಟು ವಿಸ್ತಾರವಾಗಿದೆ. ಆದರೆ ಒಬ್ಬ ಬೆಸ್ತನೂ ಸಾಹಿತ್ಯ ಸೃಷ್ಟಿಯಲ್ಲಿರುವುದು ಕಾಣ ಸಿಗದು. ಅದಕ್ಕೆ ನಾನಂದೆ ಬೆಸ್ತನೇಕೆ ಯಾವುದೇ ಕಾರ್ಮಿಕ ವರ್ಗದವರೂ ಸಾಹಿತ್ಯ ನಿರ್ಮಾಣದಲ್ಲಿ ಕಾಣಸಿಗುವುದು ಅಪರೂಪವೆ. ಈ ಸಮಸ್ಯೆ ನಿಜಕ್ಕೂ ಅಭಿವೃದ್ಧಿಯ ಪಥದ ದೊಡ್ಡ ಕೊರತೆ. ಸಾಹಿತ್ಯ ಸೃಷ್ಟಿಯ ಮೂಲವೇ ಕೃಷಿ. ಮೌಖಿಕ ಸಾಹಿತ್ಯದಲ್ಲಿ ಕಾರ್ಮಿಕ ವರ್ಗದವರಿಂದಲೇ ಸಾಹಿತ್ಯ ಕಟ್ಟುವ ಕೆಲಸವಾಗಿದೆ. ಸಾಹಿತ್ಯ ಮೌಖಿಕದಿಂದ ಅಕ್ಷರ ರೂಪ ಪಡೆಯುತ್ತಿದ್ದಂತೆ ಸಾಹಿತ್ಯ ಕಟ್ಟುವವರು ಬದಲಾಗಿದ್ದು ವಿಪರ್ಯಾಸ. ಇದರಿಂದಾದ ದೊಡ್ಡ ಸಮಸ್ಯೆಯೆಂದರೆ ಜ್ಞಾನ ಅಳವಡಿಕೆಯ ಅನುಭವಗಳ ವರ್ಗಾವಣೆ. ಇದು ಕೃಷಿಯಲ್ಲಿ ಗಂಭೀರ ಪರಿಣಾಮಗಳನ್ನು ಬೀರಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಇಂದೂ ಸಹ ನಮ್ಮ ವಿಸ್ತರಣಾ ವಿಜ್ಞಾನಿಗಳು ಹೇಳುವುದು ತಂತ್ರಜ್ಞಾನ ವರ್ಗಾವಣೆ ರೈತರಿಂದ ರೈತರಿಗಾಗುವುದೇ ಹೆಚ್ಚು. ಇದು ಬಹಳ ಪರಿಣಾಮಕಾರಿ. ಹೌದು, ನಿಜ ಆದರೆ ಈ ವರ್ಗಾವಣೆ ಮೌಖಿಕವೆ ಇದನ್ನು ದಾಖಲಿಸುವವರು ಬೇರೆಯೆ ಆಗಿರುತ್ತಾರೆ. ನನ್ನ ಅನುಭವ ನಾನು ಬರೆಯುವುದಕ್ಕೂ ಬೇರೊಬ್ಬರು ಕೇಳಿ ಬರೆಯುವುದಕ್ಕೂ ವ್ಯತ್ಯಾಸವಿದೆ. ಆದ್ದರಿಂದ ರೈತರು ತಮ್ಮ ಅನುಭವ ದಾಖಲಿಸಿದಲ್ಲಿ ಅದು ಹಿಂದಿನವರು ಕಟ್ಟಿಕೊಟ್ಟ ಅದ್ಭುತ ಜನಪದ ಸಾಹಿತ್ಯದಂತೆ ಪರಿಣಾಮಕಾರಿಯಾಗಬಲ್ಲದು. ಈ ನಿಟ್ಟಿನಲ್ಲಿ ಎಲ್ಲೊ ಅಲ್ಲೊಂದು ಇಲ್ಲೊಂದು ಪ್ರಯೋಗಗಳಾಗಿವೆ. ಆದರೆ ಇಂತಹ ಪ್ರಯತ್ನಗಳು ಕನ್ನಡ ಸಾಹಿತ್ಯ ಪರಂಪರೆಯ ದೊಡ್ಡ ಭಾಗವಾಗಬೇಕಿದೆ. ನೇಗಿಲ ಮಿಡಿತ ಇದಕ್ಕೆ ವೇದಿಕೆ ಕಲ್ಪಿಸಿದೆ. ಆದರೆ ಬರಹಗಾರರ ಕೊರತೆಯಿಂದ ಮುಂದೆ ಸಾಗುತ್ತಿಲ್ಲ. ಈ ವರ್ಷದ ರಾಜ್ಯೋತ್ಸವ ಈ ನಿಟ್ಟಿನಲ್ಲಿ ಹೊಸ ಬರಹಗಾರರನ್ನು ಹುಟ್ಟು ಹಾಕಲಿ ಎಂದು ಆಶಿಸುತ್ತೇನೆ. ಅವರೆಲ್ಲಾ ಲೇಖನಿಗೆ ನೇಗಿಲ ಮಿಡಿತ ವೇದಿಕೆಯಾಗಲಿದೆ