ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೧

ದಾರಿದೀಪ

ಅಡಿಕೆ ಬೇರುಹುಳುವಿನ ಹೆಡೆಮುರಿ ಕಟ್ಟಿದ ಸಾಧಕ

ಕೆ.ವಿ. ಪ್ರಕಾಶ್
೯೪೪೮೯೯೭೦೬೧
1

ನಿರಪದ್ರವಿ ಗೊಬ್ಬರದ ಹುಳುವೆಂದು ಕಡೆಗಣಿಸಲ್ಪಟ್ಟಿದ್ದ ಬೇರುಹುಳು ಇಂದು ಅನೇಕ ಅಡಿಕೆ ಬೆಳೆಗಾರರ ನಿದ್ದೆಗೆಡಿಸಿರುವುದು ಸುಳ್ಳಲ್ಲ. ನಮ್ಮ ರಾಜ್ಯದ ಪಶ್ಚಿಮ ಘಟ್ಟದ ಮಡಿಲಿನಲ್ಲಿರುವ ಅಡಿಕೆ ತೋಟಗಳನ್ನು ಲ್ಯೂಕೋಫೋಲಿಸ್ ಲೆಪಿಡೋಫೋರ ಮತ್ತು ಲ್ಯೂಕೋಫೋಲಿಸ್ ಬರ್ಮಿಸ್ಟ್ರಿ ಬೇರುಹುಳುವಿನ ಪ್ರಭೇದಗಳು ಹಾಗೂ ಕರಾವಳಿಯ ತಡಿಯಲ್ಲಿರುವ ತೋಟಗಳನ್ನು ಲ್ಯೂಕೋಫೋಲಿಸ್ ಕೋನಿಯೋಫೋರ ಪ್ರಭೇದವು ಬಾಧಿsಸುತ್ತದೆ. ಲ್ಯೂಕೋಫೋಲಿಸ್ ಲೆಪಿಡೋಫೋರ ಪ್ರಭೇದವು ಮಲೆನಾಡಿನಲ್ಲಿ ಅತಿ ವಿಸ್ತಾರವಾಗಿ ಹರಡಿದ್ದು ಎರಡು ವರ್ಷಗಳ ಜೀವಿತಾವಧಿಯನ್ನು ಹೊಂದಿದೆ. ಮಲೆನಾಡಿನ ಕೆಲವು ತೋಟಗಳಲ್ಲಿ ಲ್ಯೂಕೋಫೋಲಿಸ್ ಬರ್ಮಿಸ್ಟ್ರಿ ಬೇರುಹುಳು ನೆಲೆಸಿದ್ದು ಇದು ಸಹ ಎರಡು ವರುಷಗಳಲ್ಲಿ ಜೀವನಚಕ್ರವನ್ನು ಮುಗಿಸುತ್ತದೆ. ಲ್ಯೂಕೋಫೋಲಿಸ್ ಕೋನಿಯೋಫೋರ ಪ್ರಭೇದವು ಒಂದು ವರುಷದಲ್ಲಿ ಜೀವನಚಕ್ರವನ್ನು ಮುಗಿಸುತ್ತದೆ. ಜೀವಿತಾವಧಿಯ ಬಹುತೇಕ ಸಮಯವನ್ನು ಭೂಮಿಯ ಒಳಗೆ ಕಳೆಯುವ ಬೇರುಹುಳುಗಳು ಸದ್ದಿಲ್ಲದೆ ಅಡಿಕೆ ತೋಟವನ್ನು ನಿರ್ನಾಮ ಮಾಡುತ್ತವೆ. ಸಮೃದ್ಧವಾಗಿರುವ ಅಡಿಕೆ ತೋಟ ಅನಿರೀಕ್ಷಿತವಾಗಿ ತಮ್ಮ ಕಣ್ಣೆದುರಿಗೆ ನಾಶವಾಗುವುದನ್ನು ಕಂಡು ರೈತರು ಗಾಬರಿಯಾಗುತ್ತಾರೆ ಜೊತೆಗೆ ತಮಗೆ ತಿಳಿದಂತಹ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಾರೆ. ಬೇರುಹುಳುವಿನಿಂದ ಬಾಧಿತರಾದ ಅನೇಕ ಅಡಿಕೆ ಬೆಳೆಗಾರರು ವಿವಿಧ ಬಗೆಯ ನಿಯಂತ್ರಣಾ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ. ಗಿಡಗಳ ಬುಡಕ್ಕೆ ಕೊಚ್ಚು ಮಣ್ಣು (ಜಂಬಿಟ್ಟಿಗೆ) ಹಾಕುವುದು, ಇಡೀ ತೋಟಕ್ಕೆ ಹೊಸ ಮಣ್ಣೇರಿಸುವುದು, ಸುಣ್ಣ ಹಾಕುವುದು, ಕಾಸರಕ/ಬೇವು ಇತ್ಯಾದಿ ಗಿಡಗಳ ಸೊಪ್ಪನ್ನು ಮರದ ಬುಡದಲ್ಲಿ ಗುಂಡಿ ತೋಡಿ ಹಾಕುವುದು, ಬೇವಿನ ಹಿಂಡಿಯನ್ನು ಬುಡಕ್ಕೆ ಹಾಕುವುದು, ಬೇಸಿಗೆಯಲ್ಲಿ ತೋಟಕ್ಕೆ ನೀರು ಕೊಡುವುದು, ಉಪ್ಪು ಮತ್ತು ಫೋರೆಟ್ ಹರಳನ್ನು ಮಿಶ್ರಣ ಮಾಡಿ ಬುಡಕ್ಕೆ ಹಾಕುವುದು, ಬಾಳೆಯನ್ನು ಅಡಿಕೆ ತೋಟದಲ್ಲಿ ಅಂತರ ಬೆಳೆಯಾಗಿ ಬೆಳೆಯುವುದು ಇತ್ಯಾದಿ. ಆದರೂ ಬೇರುಹುಳುವಿನ ಬಾಧೆಯ ಪ್ರಮಾಣ ಕಡಿಮೆಯಾಗಿರುವುದಿಲ್ಲ

3

ಬೇರುಹುಳುವಿನ ಮೊಟ್ಟೆ, ಮರಿ ಹಾಗು ಕೋಶಾವಸ್ಥೆಗಳು ಭೂಮಿಯ ಒಳಗೆ ಇದ್ದು ಕೇವಲ ದುಂಬಿಗಳು ಮಿಲನದ ಸಮಯದಲ್ಲಿ ಮಾತ್ರ ಹೊರಬರುತ್ತವೆ. ವರ್ಷಕ್ಕೊಮ್ಮೆ ಬೇಸಾಯ ಮಾಡುವಾಗ (ಬುಡ ಬಿಡಿಸಿ ಗೊಬ್ಬರ ಹಾಕುವ ಸಮಯ) ಅಡಿಕೆ ಬೆಳೆಗಾರರಿಗೆ ಮೂರನೆ ಹಂತದ ಮರಿಹುಳುಗಳ ಪರಿಚಯವಾಗುತ್ತದೆ. ಮರದ ಬುಡದಲ್ಲಿ ತೋರು ಬೆರಳು ಗಾತ್ರದ ಮೂರನೆ ಹಂತದ ಮರಿಹುಳುಗಳನ್ನು ಕಂಡು ರೈತರು ಇವು ತಮ್ಮ ತೋಟಕ್ಕೆ ಎಲ್ಲಿಂದ ಬಂದವು ಎಂದು ಆಶ್ಚರ್ಯಗೊಳ್ಳುತ್ತಾರೆ. ಆದರೆ, ಈ ಹಂತದಲ್ಲಿ ಕೀಟನಾಶಕ ಬಳಸಿ ಇವುಗಳ ಹತೋಟಿ ಕಷ್ಟಕರ. ಏಕೆಂದರೆ ಮೂರನೆ ಹಂತದ ಮರಿಹುಳುಗಳನ್ನು ಪರಿಣಾಮಕಾರಿಯಾಗಿ ಕೊಲ್ಲುವ ಯಾವುದೇ ಕೀಟನಾಶಕದ ಲಭ್ಯತೆ ಇಲ್ಲ. ಹಾಗೂ ಮೂರನೆ ಹಂತದ ಮರಿಹುಳುಗಳು ನೈಸರ್ಗಿಕವಾಗಿ ಕೀಟನಾಶಕ ನಿರೋಧಕ ಶಕ್ತಿಯನ್ನು ಹೊಂದಿರುತ್ತವೆ. ಆದುದರಿಂದ ಬೆಳೆದ ಮರಿಹುಳುಗಳನ್ನು ಕೀಟನಾಶಕ ಬಳಸಿ ಹತೋಟಿ ಮಾಡುವುದು ಕಷ್ಟ. ಬೇರುಹುಳುವಿನ ನಿರ್ವಹಣೆಗೆ ಬೇರುಹುಳುವಿನ ಜೀವನಚಕ್ರ ಆಧರಿಸಿ ಸಮಗ್ರ ನಿರ್ವಹಣಾ ಕ್ರಮಗಳನ್ನು ಕೈಗೊಂಡಾಗ ಮಾತ್ರ ಇದರ ಸಂಖ್ಯೆಯನ್ನು ಕನಿಷ್ಠ ಹಂತಕ್ಕೆ ತರಬಹುದು. ಸುಲಭವಾಗಿ ಇವುಗಳನ್ನು ಕೊಲ್ಲುವ ಮೂರು ಸಮಯಗಳೆಂದರೆ (೧) ದುಂಬಿಗಳು ಭೂಮಿಯಿಂದ ಹೊರಗೆ ಬರುವ ಕಾಲ (ದುಂಬಿಗಳನ್ನು ಹಿಡಿದು ನಾಶಪಡಿಸುವುದು) (೨) ಮೊದಲ ಹಾಗೂ ಎರಡನೆ ಹಂತದ ಮರಿಗಳು ಭೂಮಿಯಲ್ಲಿ ಜೀವಿಸುತ್ತಿರುವ ಕಾಲ (ಎಳೆಯ ಮರಿಗಳನ್ನು ಕೀಟನಾಶಕ ಬಳಸಿ ನಾಶಪಡಿಸುವುದು) ಮತ್ತು (೩) ಮೂರನೆ ಹಂತದ ಮರಿಹುಳುಗಳು ಭೂಮಿಯ ಮೇಲ್ಪದರದಲ್ಲಿ ಲಭ್ಯವಿರುವ ಸಮಯ (ಅಗತೆ ಮಾಡಿ ಮರಿಹುಳುಗಳನ್ನು ಹೆರಕಿ ತೆಗೆಯುವುದು)

5

ಅಡಿಕೆ ಬೇರುಹುಳುವಿನ ದುಂಬಿಗಳು ಮಳೆಗಾಲದ ಸಂಜೆ ವೇಳೆ ಭೂಮಿಯಿಂದ ಹೊರಬಂದ ಮೇಲೆ ಒಂದು ನಿರ್ದಿಷ್ಟ ಜಾಗದಲ್ಲಿ ಗುಂಪಾಗಿ ಕೂರುವುದಿಲ್ಲ. ತೋಟದಲ್ಲಿ ಗಂಡು-ಹೆಣ್ಣು ದುಂಬಿಗಳ ಮಿಲನ ಎಲ್ಲಿ ಬೇಕಾದರೂ ಆಗಬಹುದು. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ದುಂಬಿಗಳನ್ನು ಹಿಡಿದು ನಾಶಪಡಿಸಲು ಸಾಧ್ಯವಿಲ್ಲ. ಜೊತೆಗೆ ರಾತ್ರಿ ವೇಳೆಯ ಕಾರ್ಯಾಚರಣೆ ರೈತರಿಗೆ ಅಪಾಯಕಾರಿಯೂ ಆಗಬಹುದು. ಆದುದರಿಂದ ದುಂಬಿಗಳನ್ನು ಹಿಡಿಯುವ ವಿಧಾನ ಕಷ್ಟಕರವಾಗಿರುತ್ತದೆ. ಮಿಲನ ಹೊಂದಿದ ಹೆಣ್ಣುದುಂಬಿಯು ತೋಟದ ಯಾವ ಭಾಗದಲ್ಲಿ ಮೊಟ್ಟೆಯಿಡುತ್ತದೆ ಮತ್ತು ಮೊಟ್ಟೆಯೊಡೆದು ಹೊರಬಂದ ಮರಿಹುಳುಗಳು ತೋಟದ ಯಾವ ಸ್ಥಳದಲ್ಲಿರುತ್ತವೆಯೆಂದು ಕರಾರುವಾಕ್ಕಾಗಿ ಗುರುತಿಸಲು ಸಾಧ್ಯವಿಲ್ಲವಾದ್ದರಿಂದ ಸರಿಯಾದ ಸಮಯಕ್ಕೆ ಅಂದರೆ ಎಳೆಮರಿಹುಳುಗಳನ್ನು ಗುರಿಯಾಗಿಸಿಕೊಂಡು ಕೀಟನಾಶಕವನ್ನು ಇಡೀ ತೋಟಕ್ಕೆ ಹಾಕಬೇಕಾಗುತ್ತದೆ. ಇದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕ ಬೇಕಾಗುತ್ತದೆ. ಅಲ್ಲದೆ ವಿವೇಚನಾರಹಿತವಾಗಿ ಕೀಟನಾಶಕಗಳನ್ನು ಬಳಸುವುದರಿಂದ ಕೀಟಗಳಲ್ಲಿ ನಿರೋಧಕಶಕ್ತಿ ಬೆಳೆದು ಅಂತಹ ಕೀಟನಾಶಕಗಳು ಅನುಪಯುಕ್ತವಾಗುತ್ತವೆ. ಮುಖ್ಯವಾಗಿ ಮಲೆನಾಡು ಮತ್ತು ಕರಾವಳಿಯಂತಹ ಸೂಕ್ಷ್ಮ ಪರಿಸರಗಳಲ್ಲಿ ಕೀಟನಾಶಕಗಳನ್ನು ಜಾಗೂರಕತೆಯಿಂದ ಬಳಸಬೇಕಾಗುತ್ತದೆ. ಆದರೆ ಅಗತೆ ಮಾಡಿ ಮೂರನೆ ಹಂತದ ಮರಿಹುಳುಗಳನ್ನು ಹಾಗೂ ಹಾರಲು ಸಿದ್ಧವಾಗಿರುವ ದುಂಬಿಗಳನ್ನು (ಮಿಲನ ಹೊಂದುವ ಮುಂಚಿತವಾಗಿ) ಹೆರಕಿ ತೆಗೆಯುವುದರಿಂದ ಪರಿಣಾಮಕಾರಿಯಾಗಿ ಬೇರುಹುಳುಗಳನ್ನು ನಿಯಂತ್ರಿಸಬಹುದು. ಎರಡು ವರ್ಷ ಜೀವನಚಕ್ರ ಹೊಂದಿರುವ ಲೆಪಿಡೋಫೋರ ಮತ್ತು ಬರ್ಮಿಸ್ಟ್ರಿ ಪ್ರಭೇದಗಳಲ್ಲಿ ಜುಲೈ ಎರಡನೇ ವಾರದಿಂದ ಆಗಸ್ಟ್ ಕೊನೆಯ ವಾರದವರೆಗೆ ತೋಟದ ಎಲ್ಲಾ ಭಾಗಗಳಲ್ಲಿ ಅಗತೆ ಮಾಡಿ ಮೂರನೇ ಹಂತದ ಮರಿಗಳನ್ನು ಹಾಗೂ ಹಾರಲು ಸಿದ್ಧವಾಗಿರುವ ದುಂಬಿಗಳನ್ನು ತೆಗೆದು ಹಾಕಲು ಸಾಧ್ಯ. ಸೆಪ್ಟೆಂಬರ್ ನಂತರ ಬಸಿಗಾಲುವೆಗಳಲ್ಲಿ ೨-೩ ದಿನ ನೀರು ನಿಲ್ಲಿಸಿ ಅಗತೆ ಮಾಡಿ ಹುಳುಗಳನ್ನು ಆರಿಸಬಹುದು. ಕೋನಿಯೋಫೋರ ಪ್ರಭೇದದ ಮೂರನೆ ಹಂತದ ಮರಿಹುಳುಗಳನ್ನು ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಸುಲಭವಾಗಿ ಹೆರಕಬಹುದು. ಈ ಕ್ರಮದಿಂದ ಶೇ.೯೦ರಷ್ಟು ಪರಿಣಾಮಕಾರಿಯಾಗಿ ಹುಳುಗಳನ್ನು ನಿಯಂತ್ರಿಸಬಹುದು. ನಂತರದ ಸಮಯದಲ್ಲಿ ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗುವುದರಿಂದ ಹುಳುಗಳು ಭೂಮಿಯ ಕೆಳ ಪದರಗಳಿಗೆ ಹೋಗುತ್ತವೆ. ಇಂತಹ ಸಂದರ್ಭದಲ್ಲಿ ಅಗೆತ ಮಾಡಿ ಹುಳು ಆರಿಸಲು ಕಷ್ಟವಾಗುತ್ತದೆ. ಮೂರನೆ ಹಂತದ ಮರಿಹುಳುವಿಂದ ಮುಕ್ತವಾದ ಮರಗಳಲ್ಲಿ ಬೇರುಗಳು ಚೆನ್ನಾಗಿ ಬೆಳವಣಿಗೆಯಾಗಿ ಮರಗಳು ಸದೃಢವಾಗುತ್ತವೆ

7

ಗಮನಾರ್ಹ ಸಂಗತಿಯೆಂದರೆ ಕರಾವಳಿ ಹಾಗೂ ಮಲೆನಾಡಿನ ಅನೇಕ ರೈತರು ಯಾವುದೇ ಕೀಟನಾಶಕ ಉಪಯೋಗಿಸದೆ ಕೇವಲ ಕ್ರಮಬದ್ಧವಾಗಿ ಅಗತೆ ಮಾಡಿ ಮೂರನೆ ಹಂತದ ಮರಿಹುಳುಗಳನ್ನು ಹೆರಕುವುದರಿಂದ ಅಡಿಕೆ ಬೇರುಹುಳುವಿನ ಬಾಧೆಯಿಂದ ಮುಕ್ತರಾಗಿದ್ದಾರೆ. ಸಿರ್ಸಿ ತಾಲೂಕಿನ ಮುಂಡಗೆಸರ ಗ್ರಾಮದ ನಿವಾಸಿಯಾದ ಶ್ರೀ ಸುಬ್ರಹ್ಮಣ್ಯ ಮಂಜುನಾಥ ಹೆಗಡೆಯವರು ತಮ್ಮ ಮೂರು ಎಕರೆ ಅಡಿಕೆ ತೋಟದಲ್ಲಿ ಇಂತಹ ಸಾಧನೆ ಮಾಡಿದ್ದಾರೆ. ೧೯೯೮ರಲ್ಲಿ ಮೊದಲ ಬಾರಿಗೆ ತಮ್ಮ ತೋಟದಲ್ಲಿ ಬೇರುಹುಳುವಿನ ಸಮಸ್ಯೆಯನ್ನು ಪತ್ತೆ ಮಾಡಿದ ಹೆಗಡೆಯವರು ೧೯೯೯ರಲ್ಲಿ ಲ್ಯೂಕೋಫೋಲಿಸ್ ಲೆಪಿಡೋಫೋರ ಪ್ರಭೇದದ ಇರುವಿಕೆಯನ್ನು ಖಚಿತಪಡಿಸಿಕೊಂಡು ಹತೋಟಿ ಕ್ರಮಗಳನ್ನು ಆರಂಭಿಸಿದರು. ಎಲ್ಲರಂತೆ ಬೇಸಾಯದ ಸಮಯದಲ್ಲಿ ಅಡಿಕೆ ಮರದ ಬುಡದ ಸುತ್ತಾ ಹರಳು ರೂಪದ ಮತ್ತು ದ್ರವರೂಪದ ಕೀಟನಾಶಕಗಳನ್ನು ಬಳಸಿದರು. ನಂತರ ಸ್ವತಃ ಬೇರುಹುಳುಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ ಅಗತೆ ಮಾಡಿ ಮೂರನೆ ಹಂತದ ಮರಿಹುಳುಗಳನ್ನು ಹಾಗೂ ಹಾರಲು ಸಿದ್ಧವಾಗಿರುವ ದುಂಬಿಗಳನ್ನು ಹೆರಕಿ ತೆಗೆಯುವುದು ಬೇರುಹುಳುವಿನ ಹತೋಟಿಗೆ ರಾಮಬಾಣವೆಂದು ಪರಿಗಣಿಸಿ ಆಗಸ್ಟ್ ೨೦೦೦ರಲ್ಲಿ ಅಗತೆ ಕಾರ್ಯಕ್ಕೆ ನಾಂದಿ ಹಾಡಿ ದೇವರಿಗೆ ಹರಕೆ ಹೊತ್ತ ಭಕ್ತನಂತೆ ಚಾಚೂತಪ್ಪದೆ ಅಗತೆ ಕೆಲಸವನ್ನು ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ. ಅಡಿಕೆ ಮರದ ಬುಡ ಮತ್ತು ಬೇರುಗಳಿಗೆ ಹಾನಿಯಾಗದಂತೆ ಅಗತೆ ಮಾಡಲು ಅನುಕೂಲವಾಗುವಂತೆ ಹಲ್ಲುಗಳಿರುವ ಗುದ್ದಲಿಯನ್ನು ತಾವೇ ಸಿದ್ಧಪಡಿಸಿದ್ದಾರೆ. ಇಲ್ಲಿನ ವಿಶೇಷವೆಂದರೆ ಈ ಅಗತೆಕಾರ್ಯವನ್ನು ಕಳೆದ ೧೫ ವರ್ಷಗಳಿಂದಲೂ ನಿಯಮಿತವಾಗಿ ಮಾಡುತ್ತಿರುವವರೆಲ್ಲರೂ ಮಹಿಳಾ ಕಾರ್ಮಿಕರು. ನುರಿತ ಮಹಿಳಾ ಕಾರ್ಮಿಕರು ಬೇರುಹುಳುವಿನ ಜಾತಕವನ್ನು ಅರಿತವರಂತೆ ಪ್ರತಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಅಡಿಕೆ ತೋಟದಲ್ಲಿ ಅಗತೆ ಮಾಡಿ ಮೂರನೆ ಹಂತದ ಮರಿಹುಳುಗಳನ್ನು ಹಾಗೂ ಹಾರಲು ಸಿದ್ಧವಾಗಿರುವ ದುಂಬಿಗಳನ್ನು ಹೆರಕಿ ತೆಗೆಯುತ್ತಾರೆ.

9

ಆರಂಭದಲ್ಲಿ ಇಡೀ ತೋಟವನ್ನು ಅಗತೆ ಮಾಡುತ್ತಿದ್ದವರು ಕ್ರಮೇಣ ಬೇರುಹುಳುಗಳು ಇರಬಹುದಾದ ಜಾಗವನ್ನು ಪತ್ತೆಮಾಡಿ ಅಂತಹ ಸ್ಥಳಗಳಲ್ಲಿ ಮಾತ್ರ ಅಗತೆ ಮಾಡಿ ಹುಳುಗಳನ್ನು ಹೆರಕುತ್ತಾರೆ. ತಮ್ಮ ೩ ಎಕರೆ ತೋಟದಲ್ಲಿ ಇದುವರೆಗೂ ಆಯ್ದು ನಾಶಪಡಿಸಿರುವ ದುಂಬಿ ಮತ್ತು ಮರಿಹುಳುಗಳ ಸಂಖ್ಯೆ ಹಾಗೂ ಅಗತೆ ಕಾರ್ಯಕ್ಕೆ ತಗುಲಿದ ವೆಚ್ಚದ ದಾಖಲೆಯನ್ನು ಇಟ್ಟಿದ್ದಾರೆ (ಕೋಷ್ಟಕ ೧). ಆರಂಭದಲ್ಲಿ ಬೇರುಹುಳುವಿಂದ ತುಂಬಿ ತುಳುಕುತ್ತಿದ್ದ ತೋಟದಲ್ಲಿ ಇಂದು ಹುಳುಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ತೋಟದಲ್ಲಿ ಎಲ್ಲಾ ಗಿಡಗಳು ಉತ್ತಮ ಇಳುವರಿ ನೀಡುತ್ತಿವೆ. ಬೇರುಹುಳುವಿನ ಕಾಟಕ್ಕೆ ಪರಿಹಾರವಿಲ್ಲವೆಂದು ಹತಾಶರಾಗಿರುವ ರೈತರಿಗೆ ಹೆಗಡೆಯವರ ಸಾಧನೆ ಮೇಲ್ಪಂಕ್ತಿಯಾಗಿದೆ. ಇವರು ಅಡಿಕೆ ಜೊತೆ ಕಾಳುಮೆಣಸನ್ನು ಮಿಶ್ರಬೆಳೆಯಾಗಿ ಉತ್ತಮವಾಗಿ ಬೆಳೆಯುತ್ತಿದ್ದಾರೆ. ಸದಾ ಪ್ರಯೋಗಶೀಲರಾದ ಇವರು ೮೦ ಅಡಿ ಎತ್ತರದ ಅಡಿಕೆ ಕೊನೆಗಳಿಗೆ ಔಷಧಿ ಸಿಂಪಡಿಸುವ ’ಅರೆಕಾ ಪುಲ್ಲೀ ಕ್ಲೈಂಬರ್’ ಎಂಬ ಸರಳವಾದ ಸಾಧನವನ್ನು ಸ್ವತಃ ರೂಪಿಸಿದ್ದಾರೆ. ಬಹುಮುಖ ಪ್ರತಿಭೆಯಾಗಿರುವ ಹೆಗಡೆಯವರು ತಮ್ಮ ಯಶಸ್ವಿ ಕಥೆಯನ್ನು ಲೇಖನಗಳ ರೂಪದಲ್ಲಿ ಪ್ರಕಟಿಸಿರುತ್ತಾರೆ. ಶ್ರೀ ಹೆಗಡೆಯವರು ಕಳೆದ ೧೫ ವರ್ಷಗಳಿಂದ ಅಡಿಕೆ ಬೇರುಹುಳುವಿನ ನಿಯಂತ್ರಣಕ್ಕಾಗಿ ತಮ್ಮ ತೋಟದಲ್ಲಿ ಒಂದು ಹನಿ ಕೀಟನಾಶಕವನ್ನು ಬಳಸಿಲ್ಲ ಎಂದು ಹೆಮ್ಮೆ ಪಡುತ್ತಾರೆ. ಆದರೆ ಬೇರುಹುಳುವಿನ ಬಾಧೆಗೊಳಗಾಗಿರುವ ಯಾವೊಬ್ಬ ರೈತರು ಇಲ್ಲಿಯವರೆಗೆ ನನ್ನ ತೋಟಕ್ಕೆ ಭೇಟಿ ನೀಡಿಲ್ಲ ಎಂದು ಬೇಸರಿಸುತ್ತಾರೆ