ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೧

ಮೆಕ್ಕೆಜೋಳದಲ್ಲಿ ಸುಳಿನೊಣದ ಸಮಗ್ರ ನಿರ್ವಹಣೆ

ಅನೀಲದೇವ ದಶವಂತ
೭೭೬೦೦೪೦೦೭೬
12

ಸುಳಿನೊಣವು (ಆಥೆರಿಗೋನಾ ಓರಿಯ್ಯಾಂಟಾಲಿಸ್) ನೊಣಗಳ ವರ್ಗಕ್ಕೆ ಸೇರಿದ ಕೀಟ. ಈ ಕೀಟವು ಬೆಳೆಯ ಪ್ರಾರಂಭಿಕ ಹಂತದಲ್ಲಿ ಅಂದರೆ ಬಿತ್ತಿದ ೩೦ ದಿವಸದ ಒಳಗೆ ಕಾಣಿಸಿಕೊಳ್ಳುತ್ತದೆ. ಮೊಟ್ಟೆ, ಮರಿಗಳು, ಕೋಶ ಮತ್ತು ಪ್ರೌಢನೊಣ ಎಂಬ ನಾಲ್ಕೂ ಹಂತದ ಜೀವನಚಕ್ರ ಹೊಂದಿದ್ದು ಇದರಲ್ಲಿ ಮರಿಹುಳುಗಳು ಬೆಳೆಗೆ ಹಾನಿಯುಂಟು ಮಾಡುತ್ತವೆ. ಜೀವನಚಕ್ರ : ಮೊಟ್ಟೆ: ಮೊಟ್ಟೆಯು ಬಿಳಿಬಣ್ಣದಾಗಿದ್ದು ಸ್ವಲ್ಪ ಉದ್ದವಾಗಿರುತ್ತದೆ. ಗಿಡದ ಮೊದಲ ಎಲೆಗಳಲ್ಲಿ ಒಂದೊಂದಾಗಿ ಮೊಟ್ಟೆಯನ್ನು ಕಾಣಬಹುದು. ಮರಿಹುಳು: ಒಂದರಿಂದ ಎರಡು ದಿನಗಳಲ್ಲಿ ಮೊಟ್ಟೆಯಿಂದ ಮರಿಹುಳವು ಹೊರಬಂದು ಸಸ್ಯದ ಸುಳಿಯನ್ನು ತಿನ್ನಲಾರಂಭಿಸುತ್ತದೆ. ಕೋಶ: ಎಂಟರಿಂದ ಹತ್ತು ದಿನಗಳ ನಂತರ ಮರಿ ಹುಳವು ಕೋಶಾವಸ್ಥೆಯನ್ನು ತಲುಪುತ್ತದೆ. ಕೋಶವು ಕಂದು ಬಣ್ಣದಾಗಿರುತ್ತದೆ. ಪ್ರೌಢನೊಣ : ೮-೧೦ ದಿನಗಳ ನಂತರ ಕೋಶಾವಸ್ಥೆಯಿಂದ ಹೊರಬರುವ ಪ್ರೌಢನೊಣವು, ನೊಣದಂತಿದ್ದು ಬೆನ್ನಿನ ಮೇಲೆ ಚುಕ್ಕೆ ಹೊಂದಿರುತ್ತದೆ

4

ಕೀಟ ಬಾಧೆಯ ಲಕ್ಷಣಗಳು: ಮೊಟ್ಟೆಯಿಂದ ಹೊರಬಂದ ಮರಿಹುಳವು ಸಸ್ಯದ ಎಲೆಯಂಚಿನಿಂದ ಸಾಗಿ, ಸುಳಿಯನ್ನು ತಲುಪುತ್ತದೆ. ಮುಖ್ಯಕಾಂಡದ ಸುಳಿಯನ್ನು ಅಡ್ಡಲಾಗಿ ಕತ್ತರಿಸಿ ತಿನ್ನುವುದರಿಂದ ಸುಳಿಯು ಒಣಗಲಾರಂಭಿಸುತ್ತದೆ. ಇದನ್ನು ವೈಜ್ಞಾನಿಕವಾಗಿ ಸುಳಿ ಒಣಗುವುದು (ಡೆಡ್ಹಾರ್ಟ್) ಅನ್ನುತ್ತಾರೆ. ಸುಳಿಯನ್ನು ತಿನ್ನುವುದರಿಂದ ಸುಳಿಯಲ್ಲಿರುವ ಎಲೆಗಳ ಮೇಲೆ ಸಣ್ಣ ರಂಧ್ರಗಳನ್ನು ಕಾಣಬಹುದಾಗಿದೆ. ಮುಖ್ಯ ಸುಳಿಯು ಒಣಗುವುದರಿಂದ ಸಸ್ಯದ ಬೆಳವಣಿಗೆ ಕುಂಠಿತವಾಗಿ ಇಳುವರಿ ಕಡಿಮೆಯಾಗುತ್ತದೆ. ಜೋಳದಲ್ಲಿ ಈ ಕೀಟ ಬಾಧೆಯಿಂದ ಮರಿಗಳು (ಟಿಲ್ಲರ್) ಕಾಣಬಹುದು. ಆದರೆ ಮೆಕ್ಕೆಜೋಳದಲ್ಲಿ ಮರಿಗಳು ಬರುವುದಿಲ್ಲ.ಸಮಗ್ರ ಹತೋಟಿ ಕ್ರಮಗಳು: ಬಿತ್ತನೆ ಸಮಯದಲ್ಲಿ ಪ್ರತಿಎಕರೆಗೆ ೧೬ ಕಿ.ಗ್ರಾಂ. ಫೋರೆಟ್ (ಥಿಮೇಟ್) ೧೦ಜಿ. ಅಥವಾ ೧೨ ಕಿ. ಗ್ರಾಂ. ಶೇ ೩ರ ಕಾರ್ಬೋಫ್ಯುರಾನ್ಅನ್ನು (ಹರಳು ರೂಪದ ಕೀಟನಾಶಕ) ಮಣ್ಣಿಗೆ ಹಾಕಬೇಕು. ಪ್ರತಿ ಕಿ.ಗ್ರಾಂ ಬೀಜಕ್ಕೆ ೫ ಮಿ.ಲೀ. ಕ್ಲೋರ್ಪೈರಿಫಾಸ್ ೨೦ ಇ.ಸಿ. ಯನ್ನು ೨೦ ಮಿ.ಲೀ. ನೀರಿನೊಂದಿಗೆ ಮಿಶ್ರಣ ಮಾಡಿ ಬೀಜೋಪಚಾರ ಮಾಡಿ ನೆರಳಿನಲ್ಲಿ ಒಣಗಿಸಿ ಬಿತ್ತಬೇಕು. ಬೆಳೆಯಲ್ಲಿ ಅಲ್ಲಲ್ಲಿ ಸುಳಿ ಒಣಗುವ ಲಕ್ಷಣಗಳು ಕಂಡು ಬಂದರೆ ಪ್ರತಿ ಎಕರೆಗೆ ೧೦ ಕೊಳೆತ ಮೀನಿನ ಬಲೆಗಳನ್ನು (ಫಿಶ್ಮೀಲ್ಟ್ರ್ಯಾಪ್) ಬಳಸಬೇಕು ಇದರಿಂದ ಪ್ರೌಢನೊಣವು ಕೊಳೆತ ಮೀನಿನ ವಾಸನೆಗೆ ಆಕರ್ಷಣೆಗೊಳಗಾಗಿ ಬಲೆಯಲ್ಲಿ ಬಿದ್ದು ಸಾಯುತ್ತವೆ. ಇದರಿಂದ ಸಂತಾನೋತ್ಪತಿಯನ್ನು ತಡೆಯಬಹುದು. ಬಲೆಯಲ್ಲಿ ಡಿ.ಡಿ.ವಿ.ಪಿ. ಎಂಬ ಕೀಟನಾಶಕವನ್ನು ಹತ್ತಿಯಲ್ಲಿ ಅದ್ದಿ ಇಡುವುದರಿಂದ ಆಕರ್ಷಣೆಗೊಳಗಾದ ನೊಣ ಸಾಯುವುದು. ತಡವಾಗಿ ಬಿತ್ತನೆ ಮಾಡಿದ ಬೆಳೆಯಲ್ಲಿ ಸುಳಿ ನೊಣದ ಬಾಧೆಯ ಹತೋಟಿಗೆ ಲೀಟರ್ ನೀರಿನಲ್ಲಿ ೦.೩ ಮಿ.ಲೀ. ಇಮಿಡಾಕ್ಲೋಪ್ರಿಡ್ ೨೦ ಎಸ್. ಎಲ್. ಅಥವಾ ೦.೫ ಮಿ.ಲೀ. ಸೈಪರ್ಮೆಥ್ರಿನ್ ೧೦ ಇ.ಸಿ.ಯನ್ನು ಬಿತ್ತಿದ ೧೨ ರಿಂದ ೧೪ ದಿವಸದ ನಂತರ ಸಿಂಪರಣೆ ಮಾಡಬೇಕು