ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೧

ಮಣ್ಣ ಮಡಿಲಲ್ಲಿ

ತರಕಾರಿ ಹಳ್ಳಿಯ ತಲ್ಲಣಗಳು

image_
ಕೆ.ಸಿ.ಶಶಿಧರ
1

ನ್ಯಾಮತಿಯಿಂದ ಕೂಗಳತೆಯ ದೂರದ ಹಳ್ಳಿ ಕೋಡಿಕೊಪ್ಪ. ಇಲ್ಲಿನ ವಿಶೇಷವೆಂದರೆ ತರಕಾರಿ ಬೆಳೆಗಳು. ಈ ಹಳ್ಳಿಯ ಆರ್ಥಿಕ ಚಿತ್ರಣವನ್ನೇ ಬದಲಾಯಿಸಿವೆ. ಕಳೆದ ೫೦ ವರ್ಷಗಳಿಂದ ತರಕಾರಿಗಳ ಕೃಷಿಯಲ್ಲಿ ತೊಡಗಿಕೊಂಡಿರುವ ಕೋಡಿಕೊಪ್ಪದ ರೈತರು ಬೆಳೆಯದ ತರಕಾರಿಗಳೇ ಇಲ್ಲವೆನ್ನಬಹುದು. ತರಕಾರಿ ಬೆಳೆದು ಶಿವಮೊಗ್ಗ, ಮಂಗಳೂರು, ಬಾಂಬೆಗೆ ಒದಗಿಸುತ್ತಿದ್ದರು. ಹಾಗಲ, ಹೀರೆ, ಮೀಟರ್ ಹಲಸಂದೆ, ಹಾಲುಗುಂಬಳ, ಟೊಮಾಟೊ, ಎಲೆಕೋಸು, ನವಿಲುಕೋಸು, ಹೂಕೋಸು, ಸವತೆ, ಬೀಟ್ರೂಟ್, ಕ್ಯಾರೆಟ್, ಬದನೆ, ಮೆಣಸಿನಕಾಯಿ ವೈವಿಧ್ಯಮಯ ತರಕಾರಿ ಬೆಳೆಯಲ್ಲಿ ಪರಿಣಿತರು ಇಲ್ಲಿಯ ರೈತರು. ಎರಡು ದಶಕಗಳ ಹಿಂದೆ ತರಕಾರಿ ಬೆಳೆ ಪ್ರೋತ್ಸಾಹಿಸಲು ಅಂದಿನ ಹಾಪ್ಕಾಮ್ಸ್ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಕೆ.ಟಿ. ಗಂಗಾಧರ್ ಮತ್ತು ಹಳ್ಳಿಯವರೇ ಆದ ವಿ. ಪಾಲಾಕ್ಷಪ್ಪ ಅವರ ಪರಿಶ್ರಮವನ್ನು ಹಳ್ಳಿಗರು ಇಂದು ನೆನೆಯುತ್ತಾರೆ. ಎಲ್ಲರ ಪರಿಶ್ರಮದಿಂದ ಎಪಿಎಂಸಿ ಇಂದು ನ್ಯಾಮತಿಯಲ್ಲೆ ಕಾರ್ಯಾರಂಭ ಮಾಡಿರುವುದು ಅನುಕೂಲವಾಗಿದೆ. ಸ್ಥಳೀಯ ಎಪಿಎಂಸಿಯವರು ಬೆಲೆ ನಿಗದಿಯಲ್ಲಿ ಕಾಳಜಿವಹಿಸಿ ಸಮಸ್ಯೆ ಸರಿಪಡಿಸಿಕೊಂಡರೆ ರೈತರಿಗೆ ಇನ್ನೂ ಹೆಚ್ಚಿನ ಲಾಭವಾಗಲಿದೆ ಎನ್ನುತ್ತಾರೆ

3

ಇದೇ ಹಳ್ಳಿಯಿಂದ ಈ ಭಾಗ ಪ್ರತಿನಿಧಿಸುತ್ತಿರುವ ತಾಲ್ಲೂಕು ಪಂಚಾಯಿತಿ ಸದಸ್ಯರಾದ ರವಿಕುಮಾರ್ ಎಸ್.ಪಿ.,(೯೯೧೬೩೩೧೯೦೯) ಇವರು, ನಮ್ಮ ಹಳ್ಳಿಯಲ್ಲಿ ಎಲ್ಲರೂ ತರಕಾರಿ ಬೆಳೆದವರೆ. ಹಿಂದೆ ೪೦೦ ರಿಂದ ೫೦೦ ಎಕರೆವರೆಗೆ ಈ ಭಾಗದಲ್ಲಿ ತರಕಾರಿ ಬೆಳೆಯುತ್ತಿದ್ವಿ, ಈಗ ಸುಮಾರು ಒಂದು ನೂರು ಎಕರೆ ಬೆಳೆಯುತ್ತಿದ್ದೇವೆ. ಉದಾಹರಣೆಗೆ ನಾನೇ ತರಕಾರಿ ಬೆಳೆಯೋದು ಸಂಪೂರ್ಣ ಬಿಟ್ಟಿದ್ದೇನೆ. ನನ್ನೆಲ್ಲಾ ಜಮೀನಿಗೆ ಅಡಿಕೆ, ಬಾಳೆ ಹಾಕಿದ್ದೇನೆ. ಇದಕ್ಕೆ ಪ್ರಮುಖ ಕಾರಣ ಕೂಲಿ ಆಳಿನ ಸಮಸ್ಯೆ ಹಾಗೂ ರೋಗಗಳು. ನೋಡಿ ಸಾರ್ ಬೆಳೆ ಪರಿವರ್ತನೆ ಮಾಡಿ ೨ ವರ್ಷ ಎಲ್ಲಾ ತರಕಾರಿ ಗ್ಯಾಪ್ ಕೊಟ್ಟರೆ ರೋಗ ನಿಯಂತ್ರಣ ಮಾಡಬಹುದು. ಆದ್ರೆ ಕೂಲಿ ಸಮಸ್ಯೆ ಸರಿ ಮಾಡೋದು ಬಹಳ ಕಷ್ಟ. ಮೊದಲೆಲ್ಲಾ ನಿಗದಿತ ಆದಾಯ ತರಕಾರಿಯಿಂದ ಸಿಗುತ್ತಿತ್ತು. ಕಡಿಮೆ ಬೆಲೆ ಸಿಕ್ಕರೂ ಬೆಲೆ ಏರುಪೇರು ಕಡಿಮೆ ಇರುತ್ತಿತ್ತು. ಆದರೆ ಇಂದು ಬೆಲೆಗಳು ಲಾಟ್ರಿ ತರ ಅಲ್ಲಾ, ಓಸಿ ತರ ಆಗಿವೆ. ಹೀಗಾಗಿ ನಂಬುಗೆಯ ಬೆಲೆ ಸಿಗದೆ ಬಹಳಷ್ಟು ಜನ ತರಕಾರಿ ಬಿಟ್ಟಿದ್ದಿವಿ. ಕಳೆದ ಸಾರಿ ಮಳೆ ಕಡಿಮೆಯಾಗಿ ಬೋರ್ಗಳಲ್ಲಿ ನೀರಿನ ತೊಂದರೆ ಆಗಿ ಸಹ ತರಕಾರಿ ಬೆಳೆಯ ಪ್ರದೇಶ ಕಡಿಮೆ ಆಗಿದೆ. ಏನೇ ಆದ್ರೂ ನಮ್ಮೂರ ಆರ್ಥಿಕ ಅಭಿವೃದ್ಧಿಗೆ ತರಕಾರಿ ಬೆಳೆಗಳೇ ಕಾರಣ ಅಂದ್ರೆ ತಪ್ಪೇನಿಲ್ಲ ಅಂತ ವಿವರಣೆ ನೀಡಿದ್ರು. ಇಷ್ಟೆಲ್ಲಾ ತಲ್ಲಣಗಳ ಮಧ್ಯೆ ಸಹ ಇಲ್ಲಿನ ತರಕಾರಿ ಕೃಷಿ ಇನ್ನೂ ಉತ್ತಮವಾಗಿದೆ. ಊರ ಪ್ರಾರಂಭಕ್ಕೆ ಸಿಕ್ಕ ಜೋಗದ ಬಸವರಾಜಪ್ಪನವರ ಮನೆಯಲ್ಲಿ ವಿಚಾರಿಸಿದೆವು ಅವರ ಅವರು ಹೊಲಕ್ಕೆ ಹುಲ್ಲು ತರಲು ಹೋಗಿದ್ದಾರೆ. ಇಲ್ಲೇ ಸುಭಾಶ್ರಡ್ಡೇರ್ ಮನೆ ಇದೆ, ಅವರೂ ತರಕಾರಿ ಬೆಳಿತಾರೆ ಅವರನ್ನೇ ಮಾತಾಡಿಸಿ, ಅಷ್ಟರಲ್ಲಿ ಬಸವರಾಜಪ್ಪ ಬರುತ್ತಾರೆಂದರು. ಅರ್ಚಕ ಸುಭಾಶ್ರಡ್ಡೇರ್ (೯೪೮೧೨೧೦೭೦೭) ಅವರ ಮನೆಗೆ ಭೇಟಿ ನೀಡಿ ಕೇಳಿದೆವು ಅಣ್ಣ ಇಲ್ಲೆ ಹೋಗಿದ್ದಾರೆ ಬರುತ್ತಾರೆ ಅಂತ ಸಂಜೀವ ರಡ್ಡೇರ್ ತಿಳಿಸುತ್ತಿದ್ದಂತೆ ಒಳಗಡೆಯಿಂದ ಬಂದವರು ಶ್ರೀಮತಿ ದೇವಿಕಾ ಅವರು ಓ ನೇಗಿಲ ಮಿಡಿತಾ ಪತ್ರಿಕೆಯವರಾ ಬನ್ನಿ ನಮ್ಮ ಮನೆಗೂ ಪತ್ರಿಕೆ ತರಿಸುತ್ತಿದ್ದೇವೆ ಅಂದ್ರು. ಸುಭಾಶ್ ಬಂದ ನಂತರ ಅವರು ನಾನು ೨೦ ವರ್ಷಗಳಿಂದ ತರಕಾರಿ ಬೆಳೆಯಲ್ಲಿ ಸಂಪೂರ್ಣ ಕುಟುಂಬ ತೊಡಗಿಸಿಕೊಂಡು ಕೆಲಸ ಮಾಡುತ್ತಿದ್ದೇನೆ. ನಮ್ಮದು ಕೂಡು ಕುಟುಂಬ. ನಾವು ಈಗ ಎಲೆಕೋಸು, ಟೊಮಾಟೊ, ಮೆಣಸು, ಸವತೆ ಹಾಕಿದ್ದೇನೆ. ಆದ್ರೆ ಹೀರೆ, ಹಾಗಲ, ಅಲಸಂದೆ, ನವಿಲುಕೋಸು, ಹೂಕೋಸು, ಹಾಲುಕುಂಬಳ ಎಲ್ಲಾ ಬೆಳಿತೀವಿ. ಒಟ್ಟು ನಾಲ್ಕು ಎಕರೆ ಜಾಗದಲ್ಲಿ, ೨ ಎಕರೆಯಲ್ಲಿ ವಾರ್ಷಿಕ ಎರಡು ಬೆಳೆ ಮತ್ತು ಇನ್ನೆರಡು ಎಕರೆಯಲ್ಲಿ ವಾರ್ಷಿಕ ಮೂರು ಬೆಳೆ ಮಾಡ್ತಿವಿ. ಒಂದು ಬೆಳೆ ಬೆಳೆದ ಪ್ರದೇಶದಲ್ಲಿ ಮತ್ತೆ ಅದೇ ಬೆಳೆ ಬೆಳಿಯೋಲ್ಲ ಅಂತ ಪರಿಚಯ ಮಾಡಿಕೊಂಡ್ರು. ಕಳೆದ ೨೦ ವರ್ಷದಿಂದ ತರಕಾರಿ ಬೆಳೆತಿದ್ದೀರಿ ನಿಮಗೆ ತುಂಬಾ ಲಾಸ್ ಅನ್ನುವಂತಹ ವರ್ಷಗಳು ಎಷ್ಟು ಅಂತ ಕೇಳಿದ್ದಕ್ಕೆ; ಸಾರ್ ನಾವು ಕುಟುಂಬದವರೆಲ್ಲಾ ಸೇರಿ ಕೆಲಸ ಮಾಡ್ತಿವಿ. ಬರೀ ಕೂಲಿಯವರನ್ನು ಅವಲಂಭಿಸಿ ಒಂದು ಎಕರೆ ಕೋಸು ಬೆಳಿಯೋಕೆ ೫೦,೦೦೦ ಖರ್ಚು ಬರುತ್ತೆ. ಆದ್ರೆ ನಾವು ಮನೆಯವರೆಲ್ಲಾ ದುಡಿಯೋದ್ರಿಂದ ೧೫-೨೦ ಸಾವಿರ ಖರ್ಚು ಕಡಿಮೆಯಾಗುತ್ತೆ. ವರ್ಷದಲ್ಲಿ ಒಂದು ಬೆಳೆ ಚೆನ್ನಾಗಿ ಲಾಭ ತಂದುಕೊಟ್ರೆ ಉಳಿದ ಒಂದು ಬೆಳೆ ಖರ್ಚಿಗೆ ನ್ಯಾರ ಆದ್ರೂ ಒಟ್ಟಾರೆ ಲಾಭ ಬಂದಿರುತ್ತೆ. ಜೀವನ ಮಾಡೋದೆ ಕಷ್ಟ ಅನ್ನೋ ತರ ತೊಂದ್ರೆ ಯಾವಾಗ್ಲೂ ಆಗಿಲ್ಲ. ನಮ್ಮ ಪರಿಶ್ರಮದ ದುಡ್ಡಿಂದಲೇ ಮನೆ ಕಟ್ಟಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ ಅಂದ್ರು. ಸರ್ ಈ ವರ್ಷ ಕೋಸು ಅಷ್ಟು ಚೆನ್ನಾಗಿಲ್ಲ. ೩೦೦ ಚೀಲ(೭೫ ಕೆ.ಜಿ ಚೀಲ)ಎಕರೆಗೆ ಬಂದಿದೆ. ಕಳೆದ ವರ್ಷ ೪೦೦ ಚೀಲ ಬೆಳೆದಿದ್ದೆ. ಈ ವರ್ಷ ೧೭೦ ಚೀಲಕ್ಕೆ ೨೦ ರಿಂದ ೨೭ ರೂ. ಕೆಜಿಯಂತೆ ಕೊಟ್ಟೆ. ಈಗ ೧೦೦ ಚೀಲಕ್ಕೆ ೨೭ ರೂ. ಕೆಜಿಯಾಗಿದೆ. ಇನ್ನೊಂದು ೧೦೦ ಚೀಲ ಬರುತ್ತೆ, ಬೆಲೆ ಚೆನ್ನಾಗಿದೆ. ಸ್ವಲ್ಪ ಮಳೆಯಿಂದಾಗಿ ಬೆಳೆ ಕಡಿಮೆ ಆಯ್ತು ಆದ್ರೆ ಬೆಲೆಯಿಂದಾಗಿ ನಮ್ಮ ಕೈಹಿಡಿತು. ಕೋಸು ಒಳ್ಳೆ ಬೆಳೆ ಸಾರ್ ಯಾವತ್ತೂ ಕನಿಷ್ಠ ೩ ರೂಪಾಯಿಗೆ ಕೆ.ಜಿಗಿಂತ ಕೆಳಗೆ ಹೋಗಿಲ್ಲ. ಖರ್ಚು ನಿಭಾಯಿಸುವಂತೆ ಇರುತ್ತೆ. ಆದ್ರೆ ಟೊಮಾಟೊ ಬೆಳೆ ಮಾಡೋ ಖರ್ಚು ಹೆಚ್ಚು. ಒಂದರಿಂದ ಒಂದುವರೆ ಲಕ್ಷ ಖರ್ಚು ಬರುತ್ತೆ. ಬೆಲೆ ಹೇಳೋಕೆ ಆಗೋಲ್ಲ. ಬಹಳ ಜನ ಹಾಕಿದ ದುಡ್ಡು ಬರದಂತೆ ಕಳ್ಕೊತ್ತಾರೆ ಇದರಲ್ಲಿ. ನಾವು ಮೊದ್ಲೆ ನ್ಯಾಮತಿ ಮೆಣಸಿನಕಾಯಿ ಮಾಡ್ತಿದ್ವಿ ಒಳ್ಳೆ ಬೆಳೆ. ಇದರ ಗುಣ ಬಹಳ ಚೆನ್ನಾಗಿತ್ತು. ದಿನ ಕಳೆದ್ರೆ ಬಾಡ್ತಿತ್ತೆ ವಿನಃ ಕೊಳಿತಾ ಇರಲಿಲ್ಲ. ಈ ಸ್ಥಳೀಯ ತಳಿ ಈಗ ಸಿಗ್ತಾನೇ ಇಲ್ಲ. ಈಗೆಲ್ಲಾ ಕಂಪೆನಿ ಬೀಜ ತರ್ತಿವಿ ನಾವೇ ಸಸಿ ಮಾಡ್ತಿವಿ. ಬೇರೆಯವರೆಲ್ಲಾ ಟ್ರೇನರ್ಸರಿ ತರ್ತಾರೆ. ಈಗ ಕೂಲಿ ವೆಚ್ಚ, ಔಷಧಿ ವೆಚ್ಚ ಜಾಸ್ತಿ ಆಗಿದೆ. ಆದ್ರೂ ವಾರ್ಷಿಕ ಹಲವು ಬೆಳೆ ಮಾಡೋದ್ರಿಂದ ನಾವು ಚೆನ್ನಾಗಿದ್ದೇವೆ ಅನ್ನುವ ಸುಭಾಶ್ ಅವರ ಆತ್ಮಸ್ಥೈರ್ಯ ಕೃಷಿಯಲ್ಲಿನ ಅವರ ನಂಬಿಕೆಗಳು ನಿಜಕ್ಕೂ ಅಭಿಮಾನ ಪಡುವ ಸಂಗತಿ. ಇಂತಹ ಚಿಂತನೆಗಳ ಕ್ರಿಯಾಶೀಲ ಕೈಗಳೇ ನಮ್ಮ ಕೃಷಿಯ ಆಶಾಕಿರಣಗಳು

5

ಹಾಗೆ ಮುಂದೆ ಬರುತ್ತಿದ್ದಂತೆ ಹಿರಿಯರಾದ ಶಿವಪ್ಪನವರ ಭೇಟಿಯಾಯಿತು. ಹಲಸಂದೆ ಹೊಲಕ್ಕೆ ನೀರು ಹಾಯಿಸುತ್ತಿದ್ದರು. ಅವರ ಭೇಟಿ ಸಹ ಬಹಳ ವಿಶೇಷ ಅನುಭವಗಳನ್ನು ಕಟ್ಟಿಕೊಟ್ಟಿತು. ಸರ್ ನಾವು ಮೂರು ಜನ ಅಣ್ಣತಮ್ಮ ಎಲ್ಲಾ ಒಟ್ಟಿಗೆ ಇದ್ದೇವೆ. ಒಟ್ಟಿನ ಮೇಲೆ ೪೦ ಎಕರೆ ಜಮೀನು ಇದೆ. ಅದರಲ್ಲಿ ೬ ಎಕರೆ ತರಕಾರಿ ಮಾಡ್ತಿವಿ. ೧೫ ಎಕರೆ ಮೆಕ್ಕೆಜೋಳ, ೧೫ ಎಕರೆ ಅಡಿಕೆ ಉಳಿದದ್ದರಲ್ಲಿ ತೆಂಗು ಮಧ್ಯ ಹತ್ತಿ ಹಾಕಿದ್ದೇನೆ. ಮೊದಲು ೨೫ರಿಂದ ೩೦ ಎಕರೆ ತರಕಾರಿ ಮಾಡ್ತಿದ್ವಿ. ಈಗ ಕೂಲಿ ಆಳಿನ ಸಮಸ್ಯೆಯಿಂದಾಗಿ ತರಕಾರಿ ಬೆಳೆಯ ಪ್ರದೇಶ ಕಡಿಮೆಯಾಗಿದೆ. ಸರ್ ಈಗ ಹಲಸಂದೆ ಮಾಡಿದ್ದೀರಲ್ಲಾ ಎಷ್ಟು ಖರ್ಚು ಮತ್ತು ಆದಾಯ ಅಂತ ಕೇಳಿದ್ದಕ್ಕೆ, ನೋಡಿ ಸಾರ್ ಈಗ ಉಸ್ತುವಾರಿ ತಮ್ಮ ನೋಡ್ತಾನೆ, ಮೊದಲು ನಾನು ಮಾಡ್ತಿದ್ದೆ, ಯಾರೆ ಮಾಡಿದರೂ ಎಲ್ಲಾ ಖರ್ಚು ಆದಾಯ ಪ್ರತಿ ಬೆಳೆಗೂ ಬರೆದು ಇಡ್ತೀವಿ. ಮನೆಗೆ ಬನ್ನಿ ಎಲ್ಲಾ ಲೆಕ್ಕ ಕೊಡ್ತಿನಿ ಅಂದ್ರು. ಹಾಗೆ ಮನೆ ಕಡೆ ಹೊರಟಾಗ ನೋಡಿ ಇವರು ಕೆ.ಯೋಗೀಶ್(೭೩೫೩೦೨೧೦೦೧) ಟೊಮಾಟೊ ಬೆಳೆದಿದ್ದಾರೆ ಅಂತ ಪರಿಚಯ ಮಾಡಿದ್ರು. ಯೋಗೀಶ್ ಹೇಳಿದ್ರು ಸಾರ್ ಈಗ ಎಕರೆಗೆ ೩೦-೩೫ ಟನ್ ಇಳುವರಿ ತೆಗಿತೀವಿ. ಮೊದಲು ೬೦ ಟನ್ವರೆಗೆ ಬೆಳೆದಿದ್ದೆವು. ಈಗ ಬೆಳೆ ಮಾಡಲು ಖರ್ಚು ಜಾಸ್ತಿ. ರ್ಯಾಪರ್ ಹಾಕಬೇಕು, ಕೋಲು ನೆಡಬೇಕು, ತಂತಿ ಕಟ್ಟಬೇಕು, ಡ್ರಿಪ್ ಮಾಡಬೇಕು. ೧೨೦೦ ರಿಂದ ೧೫೦೦ ರೂ. ಚೀಲಕ್ಕಂತೆ ಗೊಬ್ಬರ, ಒಂದು ೧೦ ಸಾರಿ ಔಷಧಿ, ಕೂಲಿಗೆ ೪೦-೫೦ ಸಾವಿರ ಬೇಕು. ಎಲ್ಲಾ ಸೇರಿ ಎಕರೆಗೆ ೧.೫ ಲಕ್ಷ ಖರ್ಚು ಬರುತ್ತೆ. ಮಾರುಕಟ್ಟೆ ಇಲ್ಲೆ ಇದೆ, ಆದ್ರೆ ಬೆಲೆ ಏರು ಪೇರೇ ನಮಗೆ ಸಮಸ್ಯೆ. ನಮ್ಮದು ೧೩ ಎಕರೆ ಅದರಲ್ಲಿ ೩ ಎಕರೆ ಮಾತ್ರ ತರಕಾರಿ ಮಾಡ್ತಿವಿ ಅಂದ್ರು. ಅಲ್ಲಿಂದ ಮುಂದೆ ಶಿವಪ್ಪನವರ ಮನೆಗೆ ಹೋಗಿ ಅವರು ಬರೆದಿಟ್ಟ ಲೆಕ್ಕಗಳನ್ನೆಲ್ಲಾ ತೋರಿಸಿದರು. ನಾಲ್ಕೈದು ವರ್ಷಗಳ ವ್ಯವಸ್ಥಿತ ಕೃಷಿ ಲೆಕ್ಕ ಇಟ್ಟಿದ್ದಾರೆ. ಹಿಂದಿನದ್ದು ಇದೆ, ಹುಡುಕಬೇಕು ಅಂತ ಹೇಳಿದ್ರು. ರೈತರು ಈ ರೀತಿ ಎಲ್ಲಾ ಲೆಕ್ಕ ಇಟ್ಟಿರುವುದೇ ವಿಶೇಷ. ಇವರ ಜಮೀನು ಒಟ್ಟು ೨೫ ಎಕರೆ ಇತ್ತು. ತರಕಾರಿಯಿಂದ ಬಂದ ಲಾಭದಿಂದ ಮನೆ, ಕಾರ್ಯಗಳ ಖರ್ಚು ತೆಗೆದು ಉಳಿದ ಹಣದಿಂದ ಜಮೀನು ಕೊಳ್ಳುತ್ತಿದ್ದು, ಈಗ ೪೦ ಎಕರೆ ಜಮೀನಿದೆ ಎನ್ನುತ್ತಾರೆ. ಇದು ಇವರ ತರಕಾರಿ ಕೃಷಿ ಸಾಧನೆ

7

ಅಲ್ಲಿಂದ ಪುನಃ ಜೋಗದ ಬಸವರಾಜಪ್ಪನವರ ಮನೆಗೆ ತಲುಪಿದಾಗ ಅವರು ಜೋಳದ ದಂಟು ಕತ್ತರಿಸಿ ದನಗಳ ಮೇವಿಗೆ ಸಿದ್ಧಪಡಿಸುತ್ತಿದ್ದರು. ಇವರೊಡನೆ ಮಾತಿಗೆ ಕುಳಿತಾಗ ಇವರು ಸಹ ತಮ್ಮ ೬ ಎಕರೆಯಲ್ಲಿ ೩.೫ ಎಕರೆ ತರಕಾರಿ ಮಾಡುತ್ತಾರೆ. ಕಳೆದ ೫೦ ವರ್ಷಗಳಿಂದಲೂ ಈ ಕುಟುಂಬ ಒಳ್ಳೆಯ ತರಕಾರಿ ಕೃಷಿ ಮಾಡಿಕೊಂಡು ಬಂದಿದೆ. ಉತ್ತಮ ಸ್ಥಿತಿಯಲ್ಲಿದ್ದಾರೆ. ಆದರೆ ಕಳೆದ ವರ್ಷದ ಕಡಿಮೆ ಮಳೆಯಿಂದಾಗಿ ತರಕಾರಿ ಬೆಳೆ ಕ್ಷೇತ್ರ ಕಡಿಮೆಯಾಗಿದೆ ಎನ್ನುತ್ತಾರೆ. ಒಂದು ಹಳ್ಳಿಗೆ ಜೀವನ ಕಟ್ಟಿಕೊಟ್ಟಿರುವ ತರಕಾರಿ ಬೆಳೆಗಳ ಬಗ್ಗೆ ಹಳ್ಳಿಗರಿಗೆ ಹೆಮ್ಮೆ ಇದೆ. ಆದರೆ ಇಂದಿನ ಬೆಲೆಗಳ ಏರುಪೇರು, ಕೂಲಿ ಆಳಿನ ಸಮಸ್ಯೆಗೆ ತರಕಾರಿಯಿಂದ ಅಡಿಕೆಯಂತ ತೋಟದ ಬೆಳೆಗೆ ಹೋಗುತ್ತಿದ್ದಾರೆ. ಆದರೆ ನೀರಿನ ಕೊರತೆಯಾದಲ್ಲಿ ಅಡಿಕೆಯೂ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂಬುದಾಗಿ ಕೆಲ ಹಳ್ಳಿಗರು ಗೊಂದಲದಲ್ಲಿದ್ದಾರೆ. ಅವರೇ ಹೇಳುವ ಪ್ರಕಾರ ತರಕಾರಿಯಾದರೆ ಒಮ್ಮೆ ತೊಂದರೆ ಕೊಟ್ಟರೂ, ೬-೭ ತಿಂಗಳಲ್ಲಿ ಮತ್ತೆ ಚೇತರಿಸಿಕೊಳ್ಳಬಹುದು. ಈಗ ಬದಲಾಗುತ್ತಿರುವ ಅಡಿಕೆ ನೀರಿನಿಂದ ಕೈಕೊಟ್ಟರೆ ಹಲವು ವರ್ಷಗಳು ಸುಧಾರಿಸಿಕೊಳ್ಳಲಾಗದು. ಇಂತಹ ಪರಿಸ್ಥಿತಿಗಳ ಮಧ್ಯೆ ತರಕಾರಿಯ ಬೆಳೆಗಳೊಡನೆ ಬಹುಬೆಳೆ ಹೊಂದಿಕೊಂಡಿರುವುದರಿಂದ ಇದು ಸುಸ್ಥಿರತೆ ತರಬಲ್ಲದು? ಎಂದು ನಂಬುವ ರೈತರಿದ್ದಾರೆ. ಆದರೆ ಇಲ್ಲಿರುವ ರೋಗಗಳ ನಿರ್ವಹಣೆ ವೈಜ್ಞಾನಿಕ ಬೆಳೆ ಪದ್ಧತಿಗಳ ಮಾಹಿತಿ ಅಗತ್ಯವಿದೆ ಎಂದು ಅನಿಸುತ್ತದೆ. ಕಾರಣ ಇಲ್ಲಿರುವ ಎಲ್ಲಾ ನಿರ್ವಹಣಾ ಕ್ರಮಗಳನ್ನು ವಾಣಿಜ್ಯ ಸಂಸ್ಥೆಗಳೇ ನಿರ್ದೇಶಿಸಿ ನೀಡಿದ ತರಬೇತಿಯಾಗಿದೆ. ಉತ್ಪಾದನಾ ವೆಚ್ಚ ತಗ್ಗಿಸಿ ಉತ್ತಮ ಇಳುವರಿ ಪಡೆಯುವತ್ತ ಇಡುವ ಹೆಜ್ಜೆಗಳು ಈ ಹಳ್ಳಿಯ ತಲ್ಲಣಗಳನ್ನು ಸ್ವಲ್ಪಮಟ್ಟಿಗೆ ಪರಿಹರಿಸಬಹುದು. ತರಕಾರಿ ಕೃಷಿ-ಕುಟುಂಬ ಕೃಷಿಯಾದಾಗ ಹೆಚ್ಚು ಲಾಭದಾಯಕ ಎನ್ನುವ ಸುಭಾಶ್ರಡ್ಡೇರ್ ಅವರ ಸಂದೇಶ ಸಹ ಈ ಸಂದರ್ಭದಲ್ಲಿ ಅರ್ಥಪೂರ್ಣ ಎನ್ನಿಸುತ್ತದೆ

9