ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೧

ಚಿಂತನೆ

ನವ ಕೃಷಿ ಸಾಹಿತ್ಯ ಬರಹಗಾರರಿಗೆ ಸಲಹೆಗಳು

image_
ಡಾ.ಎ.ಎಸ್.ಕುಮಾರ ಸ್ವಾಮಿ
9448943990

ಕೃಷಿ ವಿಜ್ಞಾನ ಸಂವಹನವು ಒಂದು ಮಹತ್ವದ ಕಾರ್ಯ: ಪ್ರಯೋಗಶಾಲೆಗಳಲ್ಲಿ ರೂಪುಗೊಳ್ಳುತ್ತಿರುವ ಆಧುನಿಕ ಕೃಷಿ ತಂತ್ರಜ್ಞಾನವನ್ನು ಕಾಲಕಾಲಕ್ಕೆ ಕೃಷಿಕರಿಗೆ, ವಿಸ್ತರಣಾ ಕಾರ್ಯಕರ್ತರಿಗೆ ತಲುಪಿಸಿ, ಹೊಸ ತಂತ್ರಜ್ಞಾನವನ್ನು ಅಳವಡಿಸಿ ಸಫಲರಾದ ಕೃಷಿಕರ ಯಶೋಗಾಥೆಗಳನ್ನು ಜನ ಸಾಮಾನ್ಯರಿಗೆ ತಲುಪಿಸಿ, ಆಧುನಿಕ ಕೃಷಿ ಪರಿಕರಗಳ ಲಭ್ಯತೆಯ ಬಗ್ಗೆ ಸೂಕ್ತ ಮಾಹಿತಿ ನೀಡಿ, ಹಸಿರು ಕ್ರಾಂತಿಗೆ ವೇಗವನ್ನು ನೀಡಲು ಕಾರಣರಾದ ಕೃಷಿ ಸಾಹಿತ್ಯ ಬರಹಗಾರರು (ವಿಜ್ಞಾನಿಗಳು, ವಿಸ್ತರಣಾ ಕಾರ್ಯಕರ್ತರು, ಪತ್ರಿಕೋದ್ಯಮಿಗಳು, ರೈತರು) ಹಾಗೂ ಈ ಬರಹಗಳನ್ನು ಜನರಿಗೆ ತಲುಪಿಸಿದ ಮಾಧ್ಯಮದವರು (ಕೃಷಿ ಪತ್ರಿಕೋದ್ಯಮ, ಆಕಾಶವಾಣಿ, ದೂರದರ್ಶನ, ಇಲಾಖಾ ಪ್ರಕಟಣೆಗಳು, ಇತ್ಯಾದಿ) ಅತ್ಯಂತ ಪ್ರಶಂಸನೀಯ ಕೆಲಸ ಮಾಡಿರುವರೆನ್ನುವುದರಲ್ಲಿ ಅನುಮಾನವೇ ಇಲ್ಲ. ಒಂದು ಕಾಲದಲ್ಲಿ ಹೊರಜಗತ್ತಿನ ಬೆಳವಣಿಗೆಗಳಿಗೆ ಕಣ್ಣು ಕಿವಿ ಮುಚ್ಚಿಕೊಂಡಂತಿದ್ದ ಭಾರತೀಯ ಕೃಷಿಕನು ವಿಜ್ಞಾನದ ಬೆಳವಣಿಗೆಗಳಿಗೆ, ಇತರೆಡೆ ಆಗುತ್ತಿರುವ ಅಭಿವೃದ್ಧಿಯೆಡೆಗೆ ಈಗ ಅತಿ ವೇಗದಲ್ಲಿ ಸ್ಪಂದಿಸುತ್ತಿರುವನೆಂದರೆ ಅದರ ಕೀರ್ತಿಯು ಕೃಷಿ ವಿಜ್ಞಾನ ಬರಹಗಾರರಿಗೆ ಹಾಗು ಸಂವಹನಕಾರರಿಗೆ ಸಲ್ಲಬೇಕು. ಕಳೆದ ೨೦-೨೫ ವರ್ಷಗಳಿಂದ ಚಾಲನೆಯಲ್ಲಿ ಬಂದ ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣಗಳ ಲಾಭವನ್ನು ಪಡೆದುಕೊಂಡು ಜಾಗತಿಕ ಅಭಿವೃದ್ಧಿಯಲ್ಲಿ ಭಾರತೀಯ ಕೃಷಿಕನದ್ದೂ ಸಹ ಒಂದು ಪಾಲು ಇದೆಯೆನ್ನುವಂತೆ ಮಾಡುವಲ್ಲಿಯೂ ಇವರ ಪಾತ್ರ ಇದೆ. ಹಿಂದೆಂದಿಗಿಂತಲು ಇಂದು ಭಾರತೀಯ ಕೃಷಿಕನು ಮಾಧ್ಯಮಗಳು ಮತ್ತು ಅಂತರ್ಜಾಲದ ಮೇಲೆ ಅತಿ ಹೆಚ್ಚು ಅವಲಂಬಿಸಿರುವನು. ಇಂದು ಮಾಹಿತಿ ಸಂವಹನ ತಂತ್ರಜ್ಞಾನವು ಕೃಷಿ ಅಭಿವೃದ್ಧಿಯ ಒಂದು ಅವಿಭಾಜ್ಯ ಅಂಗವಾಗಿದೆ. ಪ್ರಾರಂಭದ ವೇಗದ ಅಭಿವೃದ್ಧಿಯ ಹಂತಗಳನ್ನು ದಾಟಿ ಇಂದು ನಾನಾ ಸಂಕಷ್ಟಗಳನ್ನು ಎದುರಿಸುತ್ತಿರುವ ಕೃಷಿ ರಂಗವು ಹಲವಾರು ಆಯ್ಕೆಗಳ ಮಧ್ಯೆಯೂ ಸುರಕ್ಷತೆಯನ್ನು ಕಾಣದಾಗಿದೆ. ಇಂದಿನ ಕೃಷಿ ಅಭಿವೃದ್ಧಿಯಲ್ಲಿ ಬಹಳ ವೇಗವಾದ ಬದಲಾವಣೆಗಳಾಗುತ್ತಿವೆ. ಮಾಧ್ಯಮಗಳಲ್ಲಿ ಪ್ರಚುರಗೊಂಡ ವಿಷಯಗಳನ್ನು ನಂಬಿ ಹೊಸ ಹೊಸ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಕೃಷಿಕರ ಸಂಖ್ಯೆಯು ಹಿಂದಿಗಿಂತಲೂ ಇಂದು ಹೆಚ್ಚಾಗಿದೆ. ಆದ್ದರಿಂದ ಸಮಾಜದ ಆಗುಹೋಗುಗಳಿಗೆ ಕನ್ನಡಿಯಾಗಿರುವ ಮಾಧ್ಯಮದಲ್ಲಿ ಕೃಷಿ ಸಾಹಿತ್ಯದ ಬಗ್ಗೆ ಬರೆಯುವವರ ಜವಾಬ್ದಾರಿಯೂ ಸಹ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ

ಕೃಷಿ ಸಾಹಿತ್ಯ ಬರಹಗಾರರ ಗುರಿ ಏನು? ಕೃಷಿ ಸಾಹಿತ್ಯ ಬರಹಗಾರ ಒಟ್ಟಾರೆ ಕೃಷಿ ಅಭಿವೃದ್ಧಿಯ ಒಂದು ಅಂಗ. ಜನ ಸಾಮಾನ್ಯರಿಗೆ ಅಸಾಂಪ್ರದಾಯಿಕ ಶಿಕ್ಷಣವನ್ನು ನಿರಂತರವಾಗಿ ನೀಡುವ ಬರಹಗಾರರು ಒಟ್ಟಾರೆ ಸಮಾಜಕ್ಕೆ ಉಪಯುಕ್ತವಾಗುವ ಮನೋಭಾವ ಹೊಂದಿರಬೇಕು. ಒಂದು ರೀತಿಯಲ್ಲಿ ನೋಡಿದರೆ ಉತ್ತಮ ಬರಹಗಾರರನ್ನು ಸಮಾಜವು ತನ್ನ ಆಸ್ತಿಯಂತೆ ಪೋಷಿಸುತ್ತದೆ. ಬರಹಗಾರರು ತಮ್ಮ ಬರಹವನ್ನು ಓದಿದವರ ಮೇಲೆ ಯಾವ ರೀತಿಯ ಪ್ರಭಾವವುಂಟಾಗಬೇಕೆನ್ನುವುದನ್ನು ಮೊದಲೇ ನಿರ್ಧರಿಸಬೇಕು. ಮೊದಲನೆಯದಾಗಿ ತಲೆಬರಹ, ಜೊತೆಯಲ್ಲಿರುವ ಸಾರಾಂಶ, ಚಿತ್ರ, ರೇಖಾಚಿತ್ರ, ಛಾಯಾಚಿತ್ರ ಮುಂತಾದವುಗಳು ಓದುಗರನ್ನು ತನ್ನೆಡೆಗೆ ಸೆಳೆಯುವಂತಿರಬೇಕು. ತನ್ನ ಯಾವುದೋ ಸಮಸ್ಯೆಗೆ ಉತ್ತರ ದೊರಕುವಂತಿದೆಯೆನ್ನುವ ಮನೋಭಾವ ಓದುಗರಿಗೆ ಬರಬೇಕು. ತಾನು ಬಹಳ ದಿನಗಳಿಂದ ತಿಳಿದುಕೊಳ್ಳಬೇಕೆಂದಿದ್ದ ತಿಳುವಳಿಕೆಯನ್ನು ಪಡೆದುಕೊಳ್ಳುವ ಅವಕಾಶ ಇಲ್ಲಿದೆ ಎನ್ನಿಸಬೇಕು. ಬರವಣಿಗೆಯ ಶೈಲಿಯು ಕೊನೆಯವರೆಗೆ ಕುತೂಹಲವನ್ನು ಉಳಿಸಿಕೊಂಡು ಆಸಕ್ತಿಯಿಂದ ಓದುವಂತಿರಬೇಕು. ಸರಳವಾಗಿ ಸತ್ಯವನ್ನು ತಿಳಿಸಬೇಕು: ಉತ್ತಮ ಕೃಷಿ ಸಾಹಿತ್ಯವು ಓದುಗರ ಮನೋಭಾವವನ್ನು ಕೃಷಿ ವಿಜ್ಞಾನದೆಡೆಗೆ, ವೈಜ್ಞಾನಿಕ ದೃಷ್ಟಿಕೋನದೆಡೆಗೆ ಧನಾತ್ಮಕವಾಗಿ ಮೂಡಿಸುವಂತಿರಬೇಕು. ದುರಾದೃಷ್ಟವಶಾತ್ ಇಂದಿನ ಅನೇಕ ಬರಹಗಳು ವಿಜ್ಞಾನಕ್ಕೆ ಸವಾಲು ಹಾಕುವಂತಿದ್ದು ಓದುಗರ ಮನದಲ್ಲಿ ಗೊಂದಲವನ್ನುಂಟು ಮಾಡುತ್ತಿವೆ. ಒಂದೆಡೆ ಪರಿಸರದ ಹೆಸರಿನಲ್ಲಿ ವೈಜ್ಞಾನಿಕ ಬೆಳವಣಿಗೆಗಳನ್ನೂ, ವಿಜ್ಞಾನಿಗಳನ್ನೂ ತುಚ್ಛೀಕರಿಸುವ ಪ್ರಯತ್ನಗಳಾಗುತ್ತಿದ್ದರೆ, ಇನ್ನೊಂದೆಡೆ ವೈಜ್ಞಾನಿಕ ಬೆಳವಣಿಗೆಯೇ ಎಲ್ಲಾ ಸಮಸ್ಯೆಗಳಿಗೆ ರಾಮಬಾಣವೆಂದು ಬಿಂಬಿಸಿ ವಿಜ್ಞಾನವನ್ನು ವೈಭವೀಕರಿಸಲಾಗುತ್ತಿದೆ. ಇವೆರಡೂ ಅಲ್ಲದೇ, ವಿಜ್ಞಾನದ ಅವಶ್ಯಕತೆಗಳನ್ನೂ, ಅದರ ಇತಿಮಿತಿಗಳನ್ನೂ ಸ್ಪಷ್ಟವಾಗಿ, ಸತ್ಯವನ್ನು ಮರೆಮಾಚದೆ, ಅರೆಬರೆ ಸತ್ಯಾಂಶಗಳನ್ನು ತಿಳಿಸದೆ, ಕನ್ನಡಿ ಹಿಡಿದಂತೆ ತೋರಿಸಿ, ವಿಜ್ಞಾನದ ಲಾಭದಾಯಕತೆಯು ಅದನ್ನು ಬಳಸುವವನ ವಿವೇಚನೆಯ ಮೇಲೆ ಅವಲಂಬಿಸಿದೆ ಎನ್ನುವುದನ್ನು ತಿಳಿಸುವ ಪ್ರಯತ್ನಗಳಾಗಬೇಕಾಗಿದೆ

ಓದುಗರಿಗೆ ಅರ್ಥವಾಗದ ಭಾಷೆಯಲ್ಲಿ ಬರೆದು ದಂತಗೋಪುರದ ವಿಜ್ಞಾನಿಗಳೆನಿಸಿಕೊಳ್ಳುವುದು ಬೇಡ. ಸರಳ ಆದರೆ ಸ್ಪಷ್ಟವಾದ ವಿಷಯ ಪ್ರತಿಪಾದನೆ ಇರಬೇಕು. ಸುಲಭವಾಗಿ ಅರ್ಥವಾಗುವಂತೆ ಅವಶ್ಯಕ ಉದಾಹರಣೆಗಳನ್ನು ಕೊಡಬೇಕು. ಯಾವುದೇ ಮೂಲಭೂತ ವೈಜ್ಞಾನಿಕ ಕುತೂಹಲದ ವಿಷಯಗಳನ್ನು ಅತಿಯಾಗಿ ವಿವರಿಸದೇ, ಬರವಣಿಗೆಯ ವಸ್ತುವಿಗೆ ಪೂರಕವಾಗಿ ತಿಳಿಸಬೇಕು. ಬರವಣಿಗೆಯ ವಸ್ತು ಆಯ್ಕೆ: ಬರವಣಿಗೆಯ ವಸ್ತುವನ್ನು ಆರಿಸಿಕೊಳ್ಳುವಾಗ ಓದುಗರ ಆಸಕ್ತಿಯೆಡೆಗೆ ಮೊದಲ ಗಮನ ನೀಡಬೇಕು. ಹೆಚ್ಚಿನ ಕೃಷಿ ವಿಜ್ಞಾನ ಓದುಗರು ತಮ್ಮ ಅನೇಕ ದಿನನಿತ್ಯದ ಸಮಸ್ಯೆಗಳಿಗೆ ಪರಿಹಾರಗಳನ್ನು ನಿರೀಕ್ಷಿಸುತ್ತಾರೆ. ಆದಕಾರಣ, ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳಲ್ಲಿನ ಪ್ರಚಲಿತ ಸಮಸ್ಯೆಗಳ ಬಗ್ಗೆ ಅರಿವಿಟ್ಟುಕೊಂಡು ಹಂಗಾಮಿಗನುಗುಣವಾಗಿ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಓದುಗರ ನಿರ್ದಿಷ್ಟ ಕೋರಿಕೆಯ ವಿಷಯಗಳಿಗೆ ಆದ್ಯತೆ ಕೊಡಬೇಕು. ಕೃಷಿಕರು ಎದುರಿಸುತ್ತಿರುವ ಹಲವಾರು ಸಮಸ್ಯಾತ್ಮಕ ಸನ್ನಿವೇಶಗಳ ವಿಶ್ಲೇಷಣೆಯೂ ಸಹ ಬರವಣಿಗೆಗೆ ಒಂದು ಉತ್ತಮ ವಸ್ತುವಾಗಬಲ್ಲದು. ತಂತ್ರಜ್ಞಾನದಲ್ಲಿ, ದೇಶ ವಿದೇಶಗಳ ಸಂಶೋಧನಾ ಕೇಂದ್ರಗಳಲ್ಲಿ ಆಗುತ್ತಿರುವ ಉಪಯುಕ್ತ ಅಭಿವೃದ್ಧಿಯನ್ನು ಓದುಗರಿಗೆ ಮುಟ್ಟಿಸುವ ಕೆಲಸವೂ ಸಹ ಉತ್ತಮವಾಗಬಲ್ಲದು. ಹವಾಮಾನ ಮುನ್ಸೂಚನೆ, ವಿವಿಧ ಬೆಳೆ ಪ್ರದೇಶಗಳಲ್ಲಿ ಬೆಳೆ ಪರಿಸ್ಥಿತಿ, ಕೀಟ, ರೋಗಗಳ ಸಂಭಾವ್ಯತೆ, ವಿವಿಧ ಮಾರುಕಟ್ಟೆಗಳ ಏರಿಳಿತಗಳು, ನಿರ್ದಿಷ್ಟ ಬೆಳೆಯಲ್ಲಿ ಜಾಗತಿಕ ಬೆಳವಣಿಗೆಗಳು ಮುಂತಾದ ವಿಷಯಗಳೂ ಸಹ ಓದುಗರಿಗೆ ಉಪಯುಕ್ತವಾಗಬಲ್ಲವು. ಇದಲ್ಲದೇ, ತಜ್ಞರೊಂದಿಗೆ, ರೈತರೊಂದಿಗೆ ಸಂದರ್ಶನ, ನಿರ್ದಿಷ್ಟ ಉದ್ದೇಶದೆಡೆಗೆ ರೈತರನ್ನು ಪ್ರೇರೇಪಿಸಲು ಪ್ರೇರಪಣಾತ್ಮಕ ಲೇಖನಗಳು ಹಾಗೂ ಕೃಷಿ ವಿಷಯಕ್ಕೆ ಸಂಬಂಧಿಸಿದ ಕಥೆ, ಕವನ, ನಾಟಕ, ಚಿತ್ರಕಥೆ, ಕಾರ್ಟೂನು, ಇತ್ಯಾದಿಗಳಿಗೂ ಸಹ ಅವಕಾಶವಿದೆ

ಬರಹಗಾರನ ಸಾಮರ್ಥ್ಯ: ಪ್ರತಿಯೊಬ್ಬ ಲೇಖಕನೂ ಬರೆಯುವುದಕ್ಕಿಂತ ಮೊದಲು, ವಿಷಯದಲ್ಲಿ ತನ್ನ ತಜ್ಞತೆ, ತಿಳುವಳಿಕೆ ಮತ್ತು ಅನುಭವದ ಆಧಾರದ ಮೇಲೆ ಬರೆಯಬಲ್ಲೆನೇ ಎಂದು ಸ್ವಯಂ ಪ್ರಶ್ನಿಸಿಕೊಳ್ಳಬೇಕು. ಕೃಷಿಯು ವಾಸ್ತವಿಕ ಪ್ರಪಂಚದ ಬದುಕಿಗೆ ಸಂಬಂಧಿಸಿದ, ಆರ್ಥಿಕ ಪ್ರಾಮುಖ್ಯತೆಯುಳ್ಳ ಒಂದು ವಿಜ್ಞಾನ. ಕೇವಲ ಇತರೆ ಮೂಲಗಳಿಂದ ಸಂಗ್ರಹಿಸಿದ, ತನಗೇ ಅರ್ಥವಾಗದ ವಿಷಯಗಳನ್ನು ಬರೆಯುವುದು ಒಂದು ಅಪರಾಧಕ್ಕೆ ಸಮ. ಕೇವಲ ತನ್ನ ಪ್ರತಿಷ್ಠೆಯನ್ನೂ, ಲೇಖನಗಳ ಸಂಖ್ಯೆಯನ್ನೂ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ತನ್ನ ಅನುಭವಕ್ಕೆ ಬಾರದ ವಿಷಯಗಳನ್ನು ಅಥವಾ ಕೇವಲ ತರ್ಕದ ಮೇಲೆ ಅವಲಂಬಿತ ವಿಷಯಗಳನ್ನು ಬರೆಯುವುದು ಬೇಡ. ಒಬ್ಬ ಪ್ರಾಮಾಣಿಕ ಬರಹಗಾರನು, ತಾನು ಸ್ವಂತ ಮಾಡಿ, ಫಲಿತಾಂಶದ ಬಗ್ಗೆ ಸಕಾರಾತ್ಮಕ ಅನುಭವ ಮೂಡಿದ್ದರೆ ಮಾತ್ರ ಅದನ್ನು ಇತರರಿಗೆ ಬರಹದ ಮೂಲಕ ತಿಳಿಸುವನು. ಕೊನೆಯ ಪಕ್ಷ ಇತರರು ಮಾಡಿದಾಗ ಸಕಾರಾತ್ಮಕ ಫಲಿತಾಂಶವನ್ನು ನೋಡಿದ ಅನುಭವವಿರಬೇಕು. ಉತ್ತಮ ಬರಹದ ಲಕ್ಷಣಗಳು: ವಿಷಯ ನಿರ್ದಿಷ್ಟತೆ ಇರಬೇಕು. ನಿರ್ದಿಷ್ಟ ಓದುಗರ ಗುಂಪನ್ನು ಮನದಲ್ಲಿರಿಸಿಕೊಂಡು ಹೇಳಬೇಕಾದ ವಿಷಯವನ್ನು ನೇರವಾಗಿ, ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ಹೇಳುವುದನ್ನು ರೂಢಿಸಿಕೊಳ್ಳಬೇಕು. ನಿಖರ ಅರ್ಥದ ಅತಿ ಸಮಂಜಸ ಪದ, ಪದಗುಚ್ಛ ಮತ್ತು ವಾಕ್ಯಗಳ ರಚನೆ ಇರಬೇಕು. ಬಳಸುವ ಭಾಷೆಯು ವ್ಯಾಕರಣ ಶುದ್ಧವಾಗಿರಬೇಕು. ಅನವಶ್ಯಕ ಪದ ಬಳಕೆ ಬೇಡ. ಕ್ಲಿಷ್ಟ ಪದಗಳ ಬಳಕೆ ಕಡಿಮೆ ಇರಲಿ. ಪಾರಿಭಾಷಿಕ ಶಬ್ದಗಳನ್ನು ಅನಿವಾರ್ಯವಾದರೆ ಬಳಸಿ, ಅರ್ಥವನ್ನು ಕೊಡಬೇಕು. ಕೆಲವು ಪದಗಳ ಅತಿಯಾದ ಮರುಬಳಕೆಯ ಕ್ಲೀಷೆ ಬೇಡ. ಯಾವುದೇ ರೀತಿಯ ಲಿಂಗ ತಾರತಮ್ಯ, ವಯೋ ತಾರತಮ್ಯ ಅಥವಾ ವರ್ಗ ತಾರತಮ್ಯಗಳನ್ನು ಮಾಡಬಾರದು. ಬರಹದ ಮುಖ್ಯ ಉದ್ದೇಶವನ್ನು ಸದಾ ಮನದಲ್ಲಿರಿಸಿಕೊಂಡು ಎಲ್ಲಿಯೂ ವಿರೋಧಾಭಾಸದ ಬರಹವು ಬಾರದಂತೆ ಎಚ್ಚರಿಕೆ ವಹಿಸಬೇಕು

ವಿಷಯ ಜೋಡಣೆ: ಲೇಖನದ ತಲೆಬರಹವು ಉದ್ದೇಶವನ್ನು ಸ್ಪಷ್ಟವಾಗಿ ತೋರಿಸುವಂತಿರಲಿ. ಬರಹವು ಯಾವ ಮುಖ್ಯ ವಿಷಯ ಅಥವಾ ಸಮಸ್ಯೆಗೆ ಸಂಬಂಧಿಸಿರುವುದೆನ್ನುವ ಪರಿಚಯದೊಂದಿಗೆ ಲೇಖನವನ್ನು ಆರಂಭಿಸಿ. ಅವಶ್ಯಕತೆ ಇರುವಲ್ಲಿ ವಿಷಯಗಳನ್ನು ವಿಂಗಡಿಸಿ ಉಪತಲೆಬರಹಗಳೊಂದಿಗೆ ಪ್ರತ್ಯೇಕ ಪ್ಯಾರಾಗಳಲ್ಲಿ ಬರೆಯಿರಿ. ಸೂಕ್ತ ಅಡಿ ಬರಹ ಮತ್ತು ಪರಿವಿಡಿಗಳ ಸಹಾಯ ಪಡೆಯಿರಿ. ಮುಖ್ಯ ವಿಷಯಗಳು ಎದ್ದು ಕಾಣುವಂತೆ ಮಾಡಲು ಸೂಕ್ತ ದಪ್ಪ ಅಕ್ಷರಗಳು, ಇಟಾಲಿಕ್ ಅಕ್ಷರಗಳು, ಅಡಿಗೆರೆ, ಪಟ್ಟಿ ಮಾಡುವುದು, ಚೌಕಟ್ಟುಗಳಲ್ಲಿ ಬರೆಯುವುದು ಮುಂತಾದವುಗಳನ್ನು ಬಳಸಬೇಕು. ಲೇಖನದ ಇತಿ ಮಿತಿಗಳನ್ನು ಪ್ರಮಾಣಿಕವಾಗಿ ತಿಳಿಸಿ. ಅಂತಿಮವಾಗಿ, ತೀರ್ಮಾನ ಹಾಗೂ ಸಾರಾಂಶವನ್ನೂ, ಮುಂದಿನ ಓದಿಗೆ ಅನುಕೂಲವಾಗಲು ಗ್ರಂಥಋಣವನ್ನೂ ನೀಡಿ. ಬರವಣಿಗೆಯ ಪರಿಣಾಮಕತೆಯನ್ನು ಹೆಚ್ಚಿಸಲು ಹಾಗೂ ನಿಖರವಾದ ಅರ್ಥವನ್ನು ಕೊಡಲು ಸೂಕ್ತ ಸ್ಥಳಗಳಲ್ಲಿ ಉತ್ತಮ ಗುಣಮಟ್ಟದ ದೃಶ್ಯ ಸಾಧನಗಳಾದ ರೇಖಾ ಚಿತ್ರ, ಛಾಯಾ ಚಿತ್ರ, ಗ್ರಾಫ್, ಫ್ಲೋ ಛಾರ್ಟ್, ಕೋಷ್ಟಕ ಮುಂತಾದವುಗಳನ್ನು ಬಳಸಬೇಕು. ಪೂರ್ವ ಸಿದ್ಧತೆಗಳು ಮತ್ತು ಕರಡು ತಯಾರಿ: ಬರವಣಿಗೆಯು ಒಮ್ಮೆಲೇ ಮಾಡುವ ಒಂದು ಹಂತದ ಪ್ರಕ್ರಿಯೆಯಾಗಬಾರದು. ಹಂತ ಹಂತವಾಗಿ ಸಿದ್ಧತೆ ಮಾಡಿಕೊಂಡು ನಂತರ ಅಂತಿಮ ರೂಪು ಕೊಡಬೇಕು. ಮೊದಲನೆಯದಾಗಿ, ಬರವಣಿಗೆಯ ವಿಷಯ, ರೀತಿ ಮತ್ತು ಬರವಣಿಗೆಯ ಶೈಲಿಯನ್ನು ನಿರ್ಧರಿಸಬೇಕು. ಎರಡನೆಯದಾಗಿ, ವಿಷಯಕ್ಕೆ ಸಂಬಂಧಿಸಿದ ಲಭ್ಯವಿರುವ ಎಲ್ಲಾ ಮಾಹಿತಿಯನ್ನೂ ಸಂಗ್ರಹಿಸಿ ಅದರ ಸತ್ಯಾಸತ್ಯತೆಯನ್ನು ಪರೀಕ್ಷಿಸಬೇಕು. ತಿಳಿದವರಲ್ಲಿ, ಆಸಕ್ತರಲ್ಲಿ ವಿಷಯವನ್ನು ಚರ್ಚಿಸಿ, ಅನುಭವ ವಿನಿಮಯ ಮಾಡಿಕೊಂಡು ಅದರ ಆಧಾರದ ಮೇಲೆ ಮಾಹಿತಿಯ ಪುನರ್ವಿಮರ್ಶೆ ಮಾಡಬೇಕು. ಅವಶ್ಯಕ ದೃಶ್ಯ ಸಾಧನಗಳ ತಯಾರಿ ಮಾಡಿಕೊಳ್ಳಬೇಕು.ಮಾಹಿತಿ ಸಂಗ್ರಹಣೆ ಹಾಗೂ ಮಾಹಿತಿಯ ಪುನರ್ವಿಮರ್ಶೆ ಸಂಪೂರ್ಣಗೊಂಡ ನಂತರ, ಬರವಣಿಗೆಯ ಪರಿಚಯ, ವಿಷಯ ಪ್ರತಿಪಾದನೆ, ಲಾಭ ನಷ್ಟಗಳ, ಇತಿ ಮಿತಿಗಳ ಚರ್ಚೆ, ದೃಶ್ಯ ಸಾಧನಗಳು, ಅಂತಿಮ ತೀರ್ಮಾನ, ಸಾರಾಂಶ ಹಾಗೂ ಗ್ರಂಥಋಣಗಳ ಒಂದು ಸ್ಥೂಲ ಹಂದರವನ್ನುಳ್ಳ ಕರಡು ಪ್ರತಿಯನ್ನು ತಯಾರು ಮಾಡಬೇಕು. ಸಮಯಾವಕಾಶವಿದ್ದರೆ, ಕರಡು ಪ್ರತಿಯನ್ನು ಕೆಲಕಾಲ ಬದಿಗಿಟ್ಟು ಒಂದೆರಡು ದಿನಗಳ ನಂತರ ಪೂರ್ತಿ ತಾಜಾ ಹಾಗೂ ತೆರೆದ ಮನಸ್ಸಿನಿಂದ ಅದನ್ನು ಪುನರಾವಲೋಕನ ಮಾಡುವುದು ಒಳ್ಳೆಯದು. ಪುನರಾವಲೋಕನ/ಸಂಪಾದನೆ: ಅತಿ ಮುಖ್ಯವಾಗಿ ಲೇಖನವು ಮೂಲ ಉದ್ದೇಶಕ್ಕನುಗುಣವಾಗಿ ಮೂಡಿ ಬಂದಿದೆಯೇ? ಓದುಗರ ಮೇಲೆ ಉದ್ದೇಶಿತ ಪರಿಣಾಮ ಬೀರಬಲ್ಲದೇ ಎನ್ನುವುದನ್ನು ವಸ್ತುನಿಷ್ಠವಾಗಿ ಪರಿಶೀಲಿಸಬೇಕು. ವಿಷಯದ ಸತ್ಯಾಸತ್ಯತೆ ಹಾಗೂ ವಿಷಯ ಜೋಡಣೆಯ ಕ್ರಮಬದ್ಧತೆಯ ಬಗ್ಗೆ ಗಮನ ಹರಿಸಬೇಕು. ಪದಗಳ, ಪದಪುಂಜಗಳ ಸರಿಯಾದ ರಚನೆ, ವ್ಯಾಕರಣ ಬದ್ಧತೆ ಹಾಗೂ ನಿರಾಳವಾಗಿ ಓದಿಸಿಕೊಂಡು ಹೋಗುವ ಗುಣಗಳಿಗಾಗಿ ಪರಿಶೀಲಿಸಿ; ಕಾಗುಣಿತದ ತಪ್ಪುಗಳನ್ನು ಹಾಗೂ ಬೆರಳಚ್ಚು ಮಾಡುವಾಗ ಆಗಿರಬಹುದಾದ ಅನೈಚ್ಛಿಕ ತಪ್ಪುಗಳನ್ನು ಸರಿಪಡಿಸಿ. ಬರಹಗಾರರ ಹೊಣೆ: ವಿಷಯವನ್ನು ಪೂರ್ಣ ಗ್ರಹಿಸಿ ಬರೆಯಿರಿ; ನಿಮಗೇ ಅರ್ಥವಾಗದ ವಿಷಯಗಳನ್ನು ಬರೆಯಲೇ ಬೇಡಿ. ಸ್ವಂತ ಅನುಭವದ ಮೇಲೆ ಬರೆಯುವುದು ಉತ್ತಮ. ಇತರರ ಅನುಭವದ ಮೇಲೆ ಬರೆಯುವುದು ಮಧ್ಯಮ, ಅನುಭವವಿಲ್ಲದೇ ಬರೆಯುವುದು ಅಧsಮ ಕಾರ್ಯ. ರೈತರಿಗೆ ಆರ್ಥಿಕ ಲಾಭದಾಯಕತೆ ಮತ್ತು ಆದಾಯದಲ್ಲಿ ಸ್ಥಿರತೆ ಬಹಳ ಮುಖ್ಯ. ನಿಮ್ಮ ಬರಹವು ರೈತರು ತಮ್ಮ ಗುರಿಯನ್ನು ತಲುಪಲು ಸ್ಪಷ್ಟ ಮಾರ್ಗದರ್ಶನ ಮಾಡುವಂತಿರಬೇಕು. ನೂತನ ತಂತ್ರಜ್ಞಾನವನ್ನು ಪರಿಚಯಿಸುವಾಗ ತಂತ್ರಜ್ಞಾನದ ಇತಿ ಮಿತಿಗಳು, ಬರಬಹುದಾದ ತೊಡಕುಗಳು, ಬೇಕಾದ ಮೂಲಭೂತ ಸೌಲಭ್ಯಗಳು, ಬೇಕಾದ ಕೌಶಲ್ಯಗಳು, ಕಾರ್ಮಿಕರ ಅವಶ್ಯಕತೆ, ಇಂಧsನದ ಅವಶ್ಯಕತೆ, ದೊರಕಬಹುದಾದ ಸರ್ಕಾರೀ ಸೌಲಭ್ಯಗಳು, ಮಾರುಕಟ್ಟೆ ಲಭ್ಯತೆ, ಆರ್ಥಿಕ ಲಾಭ ನಷ್ಟಗಳ ವಿಶ್ಲೇಷಣೆ, ಇತ್ಯಾದಿಗಳ ವಿವರವನ್ನು ಕೊಡಬೇಕು. ಮಾರುಕಟ್ಟೆಯ ಲಭ್ಯತೆ ಮತ್ತು ಆರ್ಥಿಕ ವಿಶ್ಲೇಷಣೆ ಮಾಡುವಾಗ ಯಾವುದೋ ಒಂದೆರಡು ವರ್ಷಗಳಲ್ಲಿ ದೊರೆತ ಅತಿರೇಕದ ಬೆಲೆಗಳನ್ನು ಪರಿಗಣಿಸದೇ, ಕಳೆದ ನಾಲ್ಕೈದು ವರ್ಷಗಳಲ್ಲಿ ದೊರೆತ ಸರಾಸರಿ ಬೆಲೆಗಳನ್ನು ಪರಿಗಣಿಸುವುದು ಉತ್ತಮ. ನಿಮ್ಮ ಬರಹ ಕೃಷಿಕನ ಅಳಿವು ಉಳಿವನ್ನು ನಿರ್ಧರಿಸಬಲ್ಲುದು ಎನ್ನುವುದು ನೆನಪಿರಲಿ. ಆರ್ಥಿಕ ಲಾಭವನ್ನು ಪಡೆಯುವುದರ ಜೊತೆಯಲ್ಲಿಯೇ, ಅಮೂಲ್ಯ ಕೃಷಿ ಸಂಪನ್ಮೂಲಗಳನ್ನು ಸಂರಕ್ಷಿಸಲು, ಪರಿಸರವನ್ನು ಉಳಿಸಲು ಹಾಗೂ ಸಾಮಾಜಿಕವಾಗಿ ಉಪಯುಕ್ತ ಕಾರ್ಯ ಮಾಡಲು ರೈತರನ್ನು ಪ್ರೇರೇಪಿಸುವುದು ಬರಹಗಾರರ ಕರ್ತವ್ಯ. ಏನೇ ಆದರೂ ಬರಹಗಾರರು ಯಾವುದೇ ಸಿದ್ಧ ಸೂತ್ರವನ್ನು ಕರಾರುವಾಕ್ಕಾಗಿ ಪಾಲಿಸಬೇಕಿಲ್ಲ. ಪ್ರತಿಯೊಬ್ಬನೂ ಬರವಣಿಗೆಯ ಶೈಲಿಯಲ್ಲಿ ತನ್ನದೇ ಆದ ಛಾಪು ಮೂಡಿಸಲು ಪ್ರಯತ್ನಿಸಬೇಕು; ಕೃಷಿ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿಕೊಳ್ಳಬೇಕು, ಉಳಿಸಿಕೊಳ್ಳಬೇಕು. ಉದಯೋನ್ಮುಖ ಕೃಷಿ ಸಾಹಿತ್ಯ ಬರಹಗಾರರಿಗೆ ಉಜ್ವಲ ಭವಿಷ್ಯವನ್ನು ಆಶಿಸುತ್ತೇನೆ