ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೧

ಜೈವಿಕ ಸಾರವರ್ಧನೆ-ಬಯೋ ಫೋರ್ಟಿಳಫಿಕೇಶನ್

ಡಾ. ನಿಶಾಂತ್, ಜಿ. ಕೆ
9844484496

ಸಮತೋಲನ ಆಹಾರ, ಆರೋಗ್ಯಕರ ಸಮಾಜವನ್ನು ನಿರ್ಮಿಸುವಲ್ಲಿ ಮತ್ತು ದೇಶದ ಪ್ರಗತಿಯಲ್ಲಿ ಅತೀಮುಖ್ಯ ಸ್ಥಾನವನ್ನು ಹೊಂದಿದೆ. ಹಸಿವುಮುಕ್ತ, ಆರೋಗ್ಯಕರ ಸಮಾಜದ ನಿರ್ಮಾಣಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಂತರರಾಷ್ಟ್ರೀಯ ಕೃಷಿ ಸಲಹಾ ಸಂಸ್ಥೆಯ ಹಲವಾರು ಅಂಗಸಂಸ್ಥೆಗಳು ತಮ್ಮ ಪ್ರಾಯೋಜನೆಗಳ ಮೂಲಕ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಜಗತ್ತಿನಾದ್ಯಂತ ಮುಂದುವರೆಯುತ್ತಿರುವ ಮತ್ತು ಹಿಂದುಳಿದ ರಾಷ್ಟ್ರಗಳಲ್ಲಿ ಜಾರಿಗೆ ತರುತ್ತಿವೆ. ಮುಂದುವರೆಯುತ್ತಿರುವ ಮತ್ತು ಹಿಂದುಳಿದ ರಾಷ್ಟ್ರಗಳನ್ನು ಬಿಡಿ, ಜಗತ್ತಿನ ಮುಂದುವರೆದ ದೇಶಗಳೂ ಸಹ ಅಪೌಷ್ಠಿಕತೆಯ ಬಗೆಗೆ ಇಂದು ಜಾಗರೂಕರಾಗುವ ಕಾಲ ಸನ್ನಿಹಿತವಾಗಿದೆ. ಇದಕ್ಕೆ ಮುಖ್ಯ ಕಾರಣ ಹೆಚ್ಚುತ್ತಿರುವ ಜನಸಂಖ್ಯೆ. ವಿಶ್ವದ ಬಹುಪಾಲು ಜನಸಂಖ್ಯೆಗೆ ಇಂದು ಆಹಾರದ ಕೊರತೆ ಇಲ್ಲವಾದರೂ ಬೆಳೆವಣಿಗೆಗೆ ಅನುಕೂಲಕರವಾದ ಪೌಷ್ಠಿಕ ಅಂಶಗಳ ಕೊರತೆ ಎದ್ದು ಕಾಣುತ್ತಿದೆ. ಹಲವು ಸಂಶೋಧನೆಗಳ ಮೂಲಕ ಅಹಾರ ತಜ್ಞರು ಇಂದು ಗಮನಿಸಿರುವ ಮುಖ್ಯ ಅಂಶವೆಂದರೆ ನಮ್ಮ ಆಹಾರದಲ್ಲಿರುವ ಬೆಳವಣಿಗೆಗೆ ಅತೀ ಅಗತ್ಯವಾಗಿರುವ ಸೂಕ್ಷ್ಮ ಪೋಷಕಾಂಶಗಳಾದ ಕಬ್ಬಿಣ, ಸತು ಮತ್ತು ’ಎ’ ಅನ್ನಾಂಗದ ಕೊರತೆ. ಈ ಸೂಕ್ಷ್ಮ ಪೋಷಕಾಂಶಗಳು ಬೆಳವಣಿಗೆಗೆ ಸಹಕಾರಿಯಾಗುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿ ಜೀವಕೋಶಗಳ ವಿಭಜನೆಗೆ ಅನುಕೂಲಕಾರಿಯಾಗಿವೆ. ಹಾಗಾದರೆ ಈ ಸೂಕ್ಷ್ಮ ಪೋಷಕಾಂಶಗಳು ಸಮಾಜದ ಪ್ರತೀ ವ್ಯಕ್ತಿಗೆ ಅಹಾರದ ಮೂಲಕ ದೊರೆಯಲು ಏನು ಮಾಡಬೇಕು? ಎಂಬುದು ನಮ್ಮ ಮುಂದಿರುವ ಅತೀ ದೊಡ್ಡ ಸವಾಲು, ಇದಕ್ಕಿರುವ ಮಾರ್ಗವೆಂದರೆ ದಶಕಗಳ ಹಿಂದೆಯೇ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಂತರರಾಷ್ಟ್ರೀಯ ಕೃಷಿ ಸಲಹಾ ಸಂಸ್ಥೆಯ ಆಹಾರ ವಿಜ್ಞಾನಿಗಳು ಸೂಚಿಸಿರುವ ಸೂಕ್ಷ್ಮ ಪೋಷಕಾಂಶಗಳ ಜೈವಿಕ ಸಾರವರ್ಧನ

ಜೈವಿಕ ಸಾರವರ್ಧನೆ ಎಂದರೇನು?

ಜೈವಿಕ ಸಾರವರ್ಧನೆ ಎಂದರೆ ಸಸ್ಯ ತಳಿ ಅಭಿವೃದ್ಧಿಯ ವಿನೂತನ ಕ್ರಮಗಳನ್ನು ಅನುಸರಿಸಿ ಸಂಕರಣದ ಮೂಲಕ ಆಹಾರ ಬೆಳೆಗಳಲ್ಲಿ ನೈಸರ್ಗಿಕವಾಗಿ ಸೂಕ್ಷ್ಮ ಪೋಷಕಾಂಶಗಳನ್ನು ವೃದ್ಧಿಪಡಿಸುವ ವಿಧಾನ. ಈ ಯೋಜನೆಯನ್ನು ವಿಶ್ವ ಆಹಾರ ಸಂಸ್ಥೆ, ಆಹಾರ ಮತ್ತು ಕೃಷಿ ಸಂಘಟನೆ ಮತ್ತು ಅಂತರರಾಷ್ಟ್ರೀಯ ಕೃಷಿ ಸಲಹಾ ಸಂಸ್ಥೆಯ ಸಹಯೋಗದಲ್ಲಿ ೨೦೦೪ರಲ್ಲಿ ರೂಪಿಸಲಾಯಿತು. ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ವಿಶ್ವದ ಅನೇಕ ದೇಶಗಳಲ್ಲಿ ಅವುಗಳ ಪ್ರಮುಖ ಆಹಾರ ಬೆಳೆಗಳನ್ನು ಗುರುತಿಸಿ ಆ ಆಹಾರ ಬೆಳೆಗಳಲ್ಲಿ ಸಸ್ಯ ತಳಿ ಅಭಿವೃದ್ಧಿಯ ಮುಖೇನ ಸೂಕ್ಷ್ಮ ಪೋಷಕಾಂಶಗಳನ್ನು ವೃದ್ಧಿಪಡಿಸುವುದು. ಉದಾಹರಣೆಗೆ ಭಾರತವನ್ನು ಒಳಗೊಂಡು ದಕ್ಷಿಣ ಏಷಿಯಾದ ಎಲ್ಲಾ ರಾಷ್ಟ್ರಗಳ ಪ್ರಮುಖ ಆಹಾರ ಬೆಳೆ ಭತ್ತ, ಭತ್ತದಲ್ಲಿ ನೈಸರ್ಗಿಕವಾಗಿ ಸೂಕ್ಷ್ಮ ಪೋಷಕಾಂಶಗಳನ್ನು ವೃದ್ಧಿಸಿದರೆ ಭತ್ತವನ್ನು ಆಹಾರವಾಗಿ ಸೇವಿಸುವ ಎಲ್ಲಾ ಜನರಿಗೆ ಸುಲಭವಾಗಿ ಸೂಕ್ಷ್ಮ ಪೋಷಕಾಂಶಗಳು ದೊರೆಯುತ್ತದೆ ಎನ್ನುವುದು ಈ ಯೋಜನೆಯ ಉದ್ದೇಶವಾಗಿದೆ. ತಯಾರಿಸಿದ ಆಹಾರದಲ್ಲಿ ಕೃತಕವಾಗಿ ಸೂಕ್ಷ್ಮ ಪೋಷಕಾಂಶಗಳನ್ನು ಸೇರಿಸಿದರೆ ಅದನ್ನು ಸೇವಿಸಲು ಜನ ಹಿಂಜರಿಯಬಹುದು ಆದರೆ ಈ ವಿಧಾನದಿಂದ ನೈಸರ್ಗಿಕವಾಗಿ ಜನರಿಗೆ ತಿಳಿಯದಂತೆಯೆ ಸೂಕ್ಷ್ಮ ಪೋಷಕಾಂಶಗಳು ಅವರ ದೇಹವನ್ನು ಸೇರುತ್ತವೆ. ಈ ಯೋಜನೆಯು ಸುಮಾರು ೩ ಶತಕೋಟಿಗೂ ಅಧಿಕ ಜನರಿಗೆ ಅನುಕೂಲವಾಗಿ ಸೂಕ್ಷ್ಮ ಪೋಷಕಾಂಶಗಳಿಂದಾಗುವ ನ್ಯೂನತೆಯನ್ನು ತೊಲಗಿಸುವ ಉದ್ದೇಶವನ್ನು ಹೊಂದಿದೆ. ಸಾಂಪ್ರದಾಯಿಕ ತಳಿ ಅಭಿವೃದ್ಧಿ ಕ್ರಮಗಳನ್ನು ಅನುಸರಿಸಿ ಸೂಕ್ಷ್ಮ ಪೋಷಕಾಂಶಗಳು ಆಗರವಾಗಿರುವ ದೇಸಿ/ಸ್ಥಳೀಯ ತಳಿಗಳನ್ನು ಸಂಕರಣ ಕಾರ್ಯದಲ್ಲಿ ಉಪಯೋಗಿಸಿಕೊಂಡು ವಿವಿಧ ಬೆಳೆಗಳಲ್ಲಿ ಸೂಕ್ಷ್ಮ ಪೋಷಕಾಂಶಗಳನ್ನು ವೃದ್ಧಿಸುವ ಕಾರ್ಯದಲ್ಲಿ ಈಗಾಗಲೆ ಹಲವು ಸಂಸ್ಥೆಗಳು ನಿರತವಾಗಿವೆ. ಭಾರತದಲ್ಲಿಯೂ ಸಹ ಭಾರತೀಯ ಕೃಷಿ ಅನುಸಂಧಾನ ಪರಿಷತ್ ನವದೆಹಲಿ ಮತ್ತು ಅಂತರ ರಾಷ್ಟ್ರೀಯ ಅರೆ ಶುಷ್ಕ ಮತ್ತು ಉಷ್ಣ ವಲಯಗಳ ಬೆಳೆಗಳ ಸಂಶೋಧನಾ ಸಂಸ್ಥೆ, ಹೈದ್ರಾಬಾದ್ ಇವುಗಳ ಸಹಯೋಗದಲ್ಲಿ ಸಜ್ಜೆ ಬೆಳೆಯಲ್ಲಿ ಅಧಿಕ ಕಬ್ಬಿಣದ ಅಂಶವನ್ನು ಹೊಂದಿರುವ ಧನಲಕ್ಷ್ಮಿ (ಐ.ಸಿ.ಟಿ.ಪಿ೮೨೦೩ ಎಫ್ಈ-೧೦-೨) ಮತ್ತು ಶಕ್ತಿ ೧೨೦೧ (ಐ.ಸಿ.ಎಂ.ಹೆಚ್.೧೨೦೧) ಎಂಬ ಸುಧಾರಿತ ತಳಿಗಳನ್ನು ಅಭಿವೃದ್ಧಿಪಡಿಸಿದೆ ಈ ತಳಿಗಳು ಬರ, ಬೂಜು ರೋಗ, ಕಡಿಮೆ ಅವಧಿ ಮತ್ತು ಅಧಿಕ ಇಳುವರಿ ತಳಿಗಳಾಗಿವೆ ಮತ್ತು ಈ ತಳಿಗಳು ದೇಹಕ್ಕೆ ಬೇಕಾದ ಶೇ. ೮೦ರಷ್ಟು ಕಬ್ಬಿಣದ ಅವಶ್ಯಕತೆಯನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿವೆ. ಇದೇ ರೀತಿಯಾಗಿ ಗೋಧಿಯಲ್ಲಿ ಅಧಿಕ ಸತುವಿನ ಅಂಶವಿರುವ ತುಕ್ಕು ರೋಗ ನಿರೋಧಕ ಅಧಿಕ ಇಳುವರಿ ನೀಡುವ ಬಿ.ಹೆಚ್,ಯು-೩ ಮತ್ತು ಚಿತ್ರ (ಬಿ.ಹೆಚ್,ಯು-೬) ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ, ಈ ತಳಿಗಳು ದಿನನಿತ್ಯ ದೇಹಕ್ಕೆ ಅಗತ್ಯವಿರುವ ಶೇ. ೫೦ರಷ್ಟು ಸತುವಿನ ಅಂಶವನ್ನು ಒದಗಿಸುತ್ತವೆ. ಭತ್ತದಲ್ಲಿ ಅಧಿಕ ಪ್ರೋಟೀನ್ ಅಂಶ ಹೊಂದಿರುವ ಸಿ.ಆರ್ ಧನ್-೩೧೦ ಮತ್ತು ಡಿ.ಆರ್.ಆರ್ ಧನ್-೪೫ ಎಂಬ ಆಧಿಕ ಸತುವಿನ ಅಂಶ ಹೊಂದಿರುವ ತಳಿಗಳನ್ನು ಸಹ ಅಭಿವೃದ್ಧಿಪಡಿಸಿ ಬಿಡುಗಡೆಗೊಳಿಸಲಾಗಿದೆ. ನಮ್ಮ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳು ಸಹ ಜೈವಿಕ ಸಾರವರ್ಧನೆಯಲ್ಲಿ ಸಂಶೋಧನೆಯಲ್ಲಿ ತೊಡಗಿದ್ದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಪೌಷ್ಠಿಕ್-೯ ಎಂಬ ಅಧಿಕ ಪ್ರೋಟೀನ್ ಹೊಂದಿರುವ ತಳಿಯನ್ನು ಬಿಡುಗಡೆಗೊಳಿಸಿದೆ. ಜೊತೆಗೆ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವೂ ಸಹ ಈ ವಿಷಯವಾಗಿ ಸಂಶೋಧನೆಯಲ್ಲಿ ತೊಡಗಿದೆ. ಮಾನವನ ದೇಹಕ್ಕೆ ರೋಗನಿರೋಧಕತೆ ಮತ್ತು ಬೆಳವಣಿಗೆಯಲ್ಲಿ ಸಹಕಾರಿಯಾಗುವ ಸೂಕ್ಷ್ಮ ಪೋಷಕಾಂಶಗಳನ್ನು ನೈಸರ್ಗಿಕವಾಗಿ ನಮ್ಮ ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಸುಧಾರಿತ ತಳಿಗಳ ಮೂಲಕ ದೊರೆಯುವಂತಾಗಬೇಕು. ಜೊತೆಗೆ ಜೈವಿಕ ಸಾರವರ್ಧನೆಯ ಮೂಲಕ ಬಿಡುಗಡೆಗೊಳಿಸಿರುವ ತಳಿಗಳ ಬಗೆಗಿನ ಮಾಹಿತಿ ರೈತರಿಗೆ ತಲುಪಿ ಜನಸಾಮಾನ್ಯರೂ ಕೂಡ ಈ ಬೆಳೆಗಳ ಉತ್ಪನ್ನವನ್ನು ಉಪಯೋಗಿಸುವಂತಾಗಬೇಕು. ಆಗ ಜೈವಿಕ ಸಾರವರ್ಧನೆ ಎಂಬ ಯೋಜನೆ ಆರೋಗ್ಯಕರ ಸಮಾಜದತ್ತ ಹೊಸಹೆಜ್ಜೆ ಇಟ್ಟು ಸದೃಢ ದೇಶವನ್ನು ನಿರ್ಮಿಸಬಹುದು