ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೧

ಹಿಪ್ಪು ನೇರಳೆ ಬೆಳೆಯಲ್ಲಿನ ಎಲೆಸುರುಳಿ ಕೀಟ-Leaf roller ನಿರ್ವಹಣೆ

ಸುನಿಲ್ ಕುಮಾರ್, ಟಿ
೭೦೯೦೨೨೧೩೧೦
1

ಹಾವಳಿಯ ಲಕ್ಷಣಗಳು: ಎಲೆಸುರುಳಿ ಕೀಟವು ತನ್ನ ಮೊಟ್ಟೆಗಳನ್ನು (ಸುಮಾರು ೮-೧೫೦ ಮೊಟ್ಟೆಗಳನ್ನು ಒಂದು ಹೆಣ್ಣು ಕೀಟ ಇಡುತ್ತದೆ) ಗಿಡದ ಕುಡಿ ಭಾಗದಲ್ಲಿಡುತ್ತದೆ. ಮೊಟ್ಟೆ ಒಡೆದು ಮರಿಕೀಟವು ಹೊರಬರುತ್ತಿದ್ದಂತೆ ತುದಿಎಲೆಗಳನ್ನು ತಿನ್ನಲಾರಂಭಿಸುತ್ತದೆ. ಬಿಳಿದಾದ ಸೂಕ್ಷ್ಮ ದಾರದಂತಹ(Silky Secretion)ಎಳೆಯಾದ ದಾರವನ್ನ ಉತ್ಪಾದಿಸಿ ಅದರಿಂದ ಕುಡಿ ಎಲೆಗಳ ಅಂಚನ್ನು ಹೆಣೆಯುತ್ತದೆ. ಹೆಣೆದ ಎಲೆಯೊಳಗೆ ಕೀಟ ಸೇರಿಕೊಂಡು ಎಲೆಯನ್ನ ಕೆರೆದು ತಿನ್ನಲು ಆರಂಭಿಸುತ್ತದೆ. ಕ್ರಮೇಣ ಕೀಟದ ಹಾವಳಿಯಿಂದ ಎಲೆಗಳು ತನ್ನ ಹರಿತ್ತನ್ನ(ಹಸಿರನ್ನ) ಕಳೆದುಕೊಂಡು ಕೇವಲ ಬೋಳು ಬೋಳಾದ ಗಿಡದಂತಾಗುತ್ತದೆ(Skeletanization). ಕುಡಿಭಾಗದ ಕೆಳಗಿನ ಎಲೆಗಳ ಮೇಲೆ ಕೀಟದ ಹಿಕ್ಕೆಗಳು ಕಂಡುಬರುತ್ತದೆ. ರೇಷ್ಮೆ ಹುಳುಗಳಿಗೆ ತಗಲುವ ಶಿಲೀಂಧ್ರ (Spares) ಆಧಾರಿತ ರೋಗವಾದ ಮಸ್ಕರ್ಡೈನ್ ಅಥವಾ ಸುಣ್ಣಕಟ್ಟು ರೋಗದ ಅಂಡಾಕಾರದ ಹೊಳೆಯುವ ಚಿಕ್ಕದಾದ ಚಲಿಸುವ ಕೋಶಗಳು(Spares) ಗಾಳಿಯಲ್ಲಿ ತೇಲಿ ಬಂದು ಗಿಡದ ಮೇಲೆ ಬೀಳುತ್ತವೆ. ಅಂತಹ ಸಸಿಗಳು ಎಲೆಸುರುಳಿ ಕೀಟದಿಂದ ತಿಂದ ನಂತರ ಅದೇ ಕೀಟವು ಇತರೆ ಗಿಡಗಳ ಮೇಲೆ ತಿನ್ನಲು ಆರಂಭಿಸುತ್ತದೆ. ತಿಂದು ಉಳಿಸಿದ ಅರೆಬರಿ ಸೊಪ್ಪನ್ನು ಪುನಃ ಕತ್ತರಿಸಿ ರೇಷ್ಮೆ ಹುಳುಗಳಿಗೆ ತಿನ್ನಲು ಕೊಟ್ಟಾಗ ಆ ಕೋಶಗಳು(Spares) ರೇಷ್ಮೆ ಹುಳುಗಳಲ್ಲಿ ರೋಗವನ್ನು ತರುತ್ತವೆ. ಇಂತಹ ಪ್ರಕ್ರಿಯೆ ಅಂದರೇ, ರೇಷ್ಮೆ ಹುಳುವಿನಲ್ಲಿಯ ರೋಗ ಕಾರಕ ಶಿಲೀಂಧ್ರದ ಕೋಶಗಳು ಹಿಪ್ಪು ನೇರಳೆ ತೋಟಕ್ಕೆ ಗಾಳಿಯ ಮುಖಾಂತರ ಪ್ರಸರಣಗೊಂಡು ಅಲ್ಲಿಂದ ಇತರೆ ಸಸಿಗಳಿಗೆ ಕೀಟದ ಮೂಲಕ ಹರಡಿ ಪುನಃ ಕೀಟಬಾಧಿತ ಸಸಿಯ ಸೊಪ್ಪನ್ನು ರೋಗಮುಕ್ತ ರೇಷ್ಮೆ ಹುಳುವಿಗೆ ತಿನ್ನಿಸಿದಾಗ ರೋಗ ಬರುವ ಪ್ರಕ್ರಿಯೆಗೆ ಕ್ರಾಸ್ ಇನಾಕ್ಯೂಲೇಷನ್(Cross innoculation) ಎನ್ನಲಾಗುತ್ತದೆ. ಈ ಕ್ರಿಯೆ ಎಲೆಸುರುಳಿ ಕೀಟದ ಮುಖಾಂತರ ಪ್ರಸರಣವಾಗುತ್ತದೆ/ಹರಡುತ್ತದೆ

ನಿರ್ವಹಣೆ: ಕೀಟಬಾಧಿತ ಕುಡಿಯ ಭಾಗವನ್ನ ತೆಗೆದು ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಿ ಸುಡಬೇಕು. ತೋಟದೊಳಗಿನ ಕಸಕಡ್ಡಿ ಹಾಗೂ ಕಳೆಗಳನ್ನ ಆಯ್ದು ಸುಡುವುದರಿಂದ ಕೀಟಗಳ ಕೋಶಗಳು ನಾಶವಾಗುತ್ತವೆ. ನಾಟಿ ಮಾಡಲು ಕೀಟರಹಿತ ಸಸಿಗಳನ್ನು ಆಯ್ಕೆ ಮಾಡಬೇಕು. ಪರಭಕ್ಷಕ ಕೀಟವಾದ ಟೈಕೊಗ್ರಾಮಾ ಚಿಲೋನಿಸ್(Trichogramma Chilonis) ೩ ಟ್ರೈಕೊಕಾರ್ಡ್ಗಳು/ ವಾರಕ್ಕೊಮ್ಮೆ/ಎಕರೆಗೆ ಬಿಡುವುದರಿಂದ ಇವು ಕೀಟದ ಮೊಟ್ಟೆಯನ್ನ ಭಕ್ಷಿಸುವುದರಿಂದ ಕೀಟವನ್ನು ನಿಯಂತ್ರಿಸುತ್ತದೆ. ಕೀಟಕೋಶ(pupa)ಗಳನ್ನ ನಾಶಪಡಿಸಲು ಟೆಟ್ರಸ್ಟಿಕಸ್ ಹವಾರ್ಡಿ (Tetrastichus howardii)ಅನ್ನುವ ಪ್ರೌಢಪರಭಕ್ಷಕಗಳನ್ನು ಪ್ರತಿ ಎಕರೆಗೆ ಸುಮಾರು ೫೦೦೦೦ ಪ್ರೌಢಪರಭಕ್ಷಕಗಳನ್ನು ಬಿಡುವುದು. ಅವಶ್ಯವಿದ್ದಲ್ಲಿ ಶೇ.೧೫(೦.೧೫)ರಷ್ಟು ಡಿ.ಡಿ.ವಿ.ಪಿ. ಕೀಟನಾಶಕ ದ್ರಾವಣವನ್ನು ಸಿಂಪಡಿಸಬೇಕು. ಕೀಟದ ಹಾವಳಿ ಹೆಚ್ಚಿದ್ದಲ್ಲಿ ೧೦ ದಿನಗಳ ಅಂತರದಲ್ಲಿ ಮತ್ತೊಮ್ಮೆ ಕೀಟನಾಶಕವನ್ನು ಸಿಂಪಡಿಸಬೇಕು. ಸೂಚನೆ: ಸಿಂಪಡಿಸಿದ ೧೫ ದಿನಗಳ ನಂತರ ಸೊಪ್ಪನ್ನು ರೇಷ್ಮೆ ಹುಳುಗಳಿಗೆ ಆಹಾರವಾಗಿ ನೀಡಬಹುದು