ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೧

ಕೃಷಿರಂಗ

ತಬ್ಬಲಿಗಳು

ಡಾ. ಮಿರ್ಜಾ ಬಷೀರ್
೯೪೪೮೧೦೪೯೭೩

ಪ.ವೈ.: ನಿನ್ನೆ ರಾತ್ರಿ ಏಳು ಗಂಟವರೆಗೆ ನಾನು ಹುಲ್ಲೇನಳ್ಳಿನಲ್ಲೇ ಇದ್ನಲ್ಲಪ್ಪ. ಉಪ್ಪಿಟ್ಟಯ್ಯನ ಕುರಿ ರೊಪ್ಪದಲ್ಲಿಯೇ ಇದ್ದೆ. ನೀನು ಗ್ರಾಮದಲ್ಲಿ ನಾಲ್ಕು ಜನರನ್ನು ವಿಚಾರಿಸಿದ್ರೆ ಹೋರಿಗೆ ನಿನ್ನೆ ರಾತ್ರಿಯೇ ಚಿಕಿತ್ಸೆ ಕೊಡಬಹುದಿತ್ತು. ನಂಜಪ್ಪ: ಗೊತ್ತಾಗ್ಲಿಲ್ಲ ಸಾರ್ .... ನಾನೇ ನಾಟಿ ಔಸ್ದಿ ಮಾಡ್ದೆ. ಏನೂ ಪ್ರಯೋಜ್ನ ಕಾಣಿಸ್ತಿಲ್ಲ. ಈ ಏರಿಯಾಗೆ ನಾನು ಹೊಸಬ. ಕಡೂರು ಕಡೆಯಿಂದ ಈ ಕಡೆಗೆ ಬಂದು ಒಂದು ತಿಂಗ್ಳಾಯ್ತು

ಪ.ವೈ.: ನೀನು ಹೇಳೋದನ್ನ ನೋಡಿದ್ರೆ ನಿನ್ನ ಹೋರಿಗೆ ಚಪ್ಪೆರೋಗ ಆಗಿರೊ ಹಾಗೆ ಕಾಣ್ಸತ್ತೆ. ಅದು ಬಹಳ ಸೀರಿಯಸ್ ಕಾಯಿಲೆ ಕಣಯ್ಯ. ನೀನಿರೋ ಗ್ರಾಮದಲ್ಲಿ ಈಗ ಹದಿನೈದು ದಿನದ ಕೆಳಗೆ ಮಳೆಗಾಲ ಪ್ರಾರಂಭ ಆಗೊಕೂ ಮುಂಚೆ ನಾನೇ ಚಪ್ಪೆ ರೋಗದ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಗ್ರಾಮದ ಎಲ್ಲ ದನಗಳಿಗೂ ಇಂಜೆಕ್ಷನ್ ಮಾಡಿದ್ದೀನಿ. ನೀನು ಆಗ ಇಂಜೆಕ್ಷನ್ ಮಾಡಿಸಿದೆಯೋ ಇಲ್ಲವೋ?

ನಂಜಪ್ಪ: ಇಲ್ಲ ದೇವ್ರು, ಪ.ವೈ.: ಯಾಕೆ?, ನಂಜಪ್ಪ: ನಾನು ಯಾವಾಗ್ಲೂ ಮಾಡ್ಸಿಲ್ಲ ದೇವ್ರು, ಪ.ವೈ.: ಯಾಕೆ?, ನಂಜಪ್ಪ-ಕಾಯಿಲೆ ಇಲ್ಲದೆ ಇಂಜೆಕ್ಷನ್ ಯಾಕೆ ಮಾಡಸ್ಬೇಕು ದೇವ್ರು?, ಪ.ವೈ.: ಕಾಯಿಲೆ ಕಾಣಿಸಿಕೊಂಡ ಮೇಲೆ ಚಿಕಿತ್ಸೆ ಕೊಡೋದಕ್ಕಿಂತ ಕಾಯಿಲೇನೇ ಬರದ ಹಾಗೆ ನೋಡಿಕೊಳ್ಳುವುದು ಬುದ್ಧಿವಂತರ ಲಕ್ಷಣ, ರೈತ: ಕರೆಕ್ಟಾಗಿ ಹೇಳಿದ್ರಿ ಸಾರ್, ರೈತ ೨: ಕ ಕ ಕ ಕ ಪ್ಪೆ ಪ್ಪೆ ರೋಗನ?, ರೈತ ೩: ಏಯ್ಯ. . . . ಇವುಂದೊಳ್ಳೆ ಕಪ್ಪೆ ಆತಲ್ಲ. ಚ ಚ ಚ ಚಪ್ಪೆ ರೋಗ!, ಪ.ವೈ-ಕಾಯಿಲೆ ಕಾಣಿಸಿಕೊಳ್ಳೊದಕ್ಕಿಂತ ಮುಂಚಿತವಾಗಿ, ಅಂದ್ರೆ ಮುಂಜಾಗ್ರತಾ ಕ್ರಮವಾಗಿ ಇಂಜೆಕ್ಷನ್ ಮಾಡಿಸಿದರೆ ರೋಗಾನೇ ಬರೋದಿಲ್ವಲ್ಲ. ಕಾಲು ಬಾಯಿ ಜ್ವರ, ಗಂಟಲು ಬೇನೆ, ಚಪ್ಪೆ ರೋಗ, ಇಂತಹ ಅಪಾಯಕಾರಿ ಕಾಯಿಲೆಗೆ ಮುಂಜಾಗ್ರತಾ ಇಂಜೆಕ್ಷನ್ಗಳು ಲಭ್ಯವಿವೆ. ಜೀವನವಿಡೀ ನಿಮ್ಮ ಸೇವೆ ಮಾಡುವ ದನಗಳಿಗೆ ನೀವು ಇಷ್ಟಾದ್ರೂ ಮುತುವರ್ಜಿ ವಹಿಸದಿದ್ದರೆ ಹೇಗೆ? ನಂಜಪ್ಪ ನೀನು ಕಡೂರು ಕಡೆಯಿಂದ ಈ ಏರಿಯಾಗೆ ಯಾಕೆ ಬಂದೆ?

ನಂಜಪ್ಪ-ಕೂಲಿ ಕೆಲಸಕ್ಕೆ ದೇವ್ರೆ! (ಪ.ವೈ. ತನ್ನ ಬ್ಯಾಗನ್ನು ಪರೀಕ್ಷಿಸಿ ಸಂಬಂಧಪಟ್ಟ ಔಷಧಿಗಳಿರುವುದನ್ನು ಖಚಿತಪಡಿಸಿಕೊಂಡು ನಂಜಪ್ಪನನ್ನು ಬೈಕಿನಲ್ಲಿ ಕೂರಿಸಿಕೊಂಡು ಹೊರಡುತ್ತಾನೆ. ಬೇಗ ಬೇಗ ಹೋಗ್ಬೇಕು, ತಡಮಾಡುವ ಹಾಗಿಲ್ಲ. ತಡಮಾಡಿ ಚಿಕಿತ್ಸೆ ಕೊಡೋದಕ್ಕಿಂತ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡಿಸೋದು ಮುಖ್ಯ ನಂಜಪ್ಪ ಎನ್ನುತ್ತಿದ್ದಂತೆ ರಂಗದ ಮೇಲೆ ಕತ್ತಲು.) ದೃಶ್ಯ-೨ ಹಾಡು: ದಯವಿಲ್ಲದಾ ಧರ್ಮ ಅದಾವುದಯ್ಯ? ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲೀ ದಯವೇ ಧರ್ಮದ ಮೂಲವಯ್ಯ (ನಂಜಪ್ಪನ ಗುಡಿಸಲು. ಗುಡಿಸಲಿನ ಎದುರು ಒಂದು ದಷ್ಟಪುಷ್ಟವಾದ ಹೋರಿ ಕರು. ಅಡ್ಡತಲೆ ಹಾಕಿ ಮಲಗಿದೆ. ಬಿಸಿಲನ್ನು ತಡೆಯಲು ಒಂದು ಪ್ಲಾಸ್ಟಿಕ್ ಹಾಳೆಯನ್ನು ಕಟ್ಟಿ ಹೋರಿಗೆ ನೆರಳು ಮಾಡಲಾಗಿದೆ. ನಂಜಪ್ಪನ ಹೆಂಡತಿ ಹೋರಿಯ ಪಕ್ಕದಲ್ಲಿ ಕುಳಿತುಕೊಂಡಿದ್ದಾಳೆ. ನಂಜನ ೭-೮ ವರ್ಷದ ಮಗಳು ಲಂಗ ಜಾಕಿಟಿನಲ್ಲಿದ್ದು, ಪೋಲಿಯೋ ಪೀಡಿತ ತಮ್ಮನನ್ನು ಎತ್ತಿಕೊಂಡಿದ್ದಾಳೆ. ಪಶುವೈದ್ಯ ಹೋರಿ ಕರುವಿನ ಹತ್ತಿರ ಹೋಗುತ್ತಿದ್ದಂತೆ ನಂಜಪ್ಪನ ಹೆಂಡತಿ ಎದ್ದು ನಿಲ್ಲುವಳು. ನಂಜಪ್ಪನ ಮಗಳು ತಮ್ಮನನ್ನು ನೆಲದ ಮೇಲೆ ಬಿಟ್ಟು ಬಂದು ನಂಜಪ್ಪನನ್ನು ಅಪ್ಪಾ... ಅಣ್ಣನ್ನ ಯಾಕೆ ಕರ್ಕೊಂಡು ಬರ್ಲಿಲ್ಲ? ಎಂದು ಪ್ರಶ್ನಿಸಿ ಮತ್ತೆ ತೆವಳುತ್ತಿರುವ ತಮ್ಮನನ್ನು ಹಿಡಿಯುತ್ತ ರಂಗದ ಮೇಲೆಲ್ಲ ಓಡುವಳು. ಪಶುವೈದ್ಯರು ಹೋರಿಯನ್ನು ಪರೀಕ್ಷಿಸುತ್ತಿದ್ದಂತೆ ನಾಲ್ಕೈದು ಜನ ರೈತರು ಬಂದು ಕೂಡಿಕೊಳ್ಳುವರು

ಪ.ವೈ.: (ನಂಜಪ್ಪನ ಹೆಂಡತಿಗೆ) ಅರ್ಧ ಚೆಂಬಿನಷ್ಟು ನೀರು ಕಾಯಿಸಮ್ಮ, ರೈತ ೧-ಚಳ್ಳಮಳ್ಳ ಕಾಯ್ಬೇಕು ನೋಡು ನೀರು, ಪ.ವೈ-ಇದು ಚಪ್ಪೆರೋಗ ನಂಜಪ್ಪ. ಈ ಹೋರಿಗೆ ಕಾಯಿಲೆ ಕಾಣಿಸಿಕೊಂಡು ಹಲವು ಗಂಟೆಗಳೇ ಕಳೆದಿವೆ. ಅದೇ ದೊಡ್ಡ ತೊಂದರೆ. ಕೂಡಲೆ ಚಿಕಿತ್ಸೆ ದೊರೆಯದೆ ಹೋರಿಕರು ವಿಷಮ ಸ್ಥಿತಿ ತಲುಪಿದೆ. ನಂಜಪ್ಪ-ಹೋರಿಕರುಗೆ ಕಣ್ಣೆಸುರಾಗಿ ಹಿಂಗಾಗಿರ್ಬೌದಾ ದೇವ್ರು?, ಪ.ವೈ-ಅಲ್ಲ. ಬರಿ ಕಣ್ಣಿಗೆ ಕಾಣಿಸದ ಕ್ರಿಮಿಯಾದ ಬ್ಯಾಕ್ಟೀರಿಯಾದಿಂದ ಬರುವ ಕಾಯಿಲೆ ಇದು. ನಂಜಪ್ಪ-ದೂರದ ಊರಿಂದ ನಡೆಸಿಕೊಂಡು ಬಂದದ್ದಕ್ಕೆ ಹೀಗಾಗಿರ್ಬೌದಾ ದೇವ್ರು?, ಪ.ವೈ-ಅಲ್ಲಪ್ಪ, ಹೇಳಿದ್ನೆಲ್ಲ ಬ್ಯಾಕ್ಟೀರಿಯಾದಿಂದ ಬರುವ ಕಾಯಿಲೆ ಇದು. ನಂಜಪ್ಪ-ಈ ಕಾಯಿಲೆ ಇಷ್ಟು ಸೀರಿಯಸ್ ಅಂತ ಗೊತ್ತಿರ್ಲಿಲ್ಲ ದೇವ್ರು

ರೈತ ೩-ತಪ್ಪು ಮಾಡಿಬಿಟ್ಟೆ ನಂಜಪ್ಪ ನೀನು. ಊರಿನ ದನಗಳಿಗೆಲ್ಲ ಇಂಜೆಕ್ಷನ್ ಮಾಡಿದ ದಿನ ನಾನೇ ಗಿಣಿಗೆ ಹೇಳ್ದಂಗೆ ಹೇಳ್ದೆ ನಿಂಗೆ. ನೀನು ಇಂಜೆಕ್ಷನ್ ಮಾಡಿಸ್ಲಿಲ್ಲ. ಅದ್ಕೆ ನಾನು ಪ್ರತಿವರ್ಷ ಯಾವ ಕೆಲಸ ಇದ್ರೂ ಬಿಟ್ ಬಿಟ್ಟು ದನಗಳಿಗೆ ಇಂಜೆಕ್ಷನ್ ಮಾಡಿಸ್ತೀನಿ

ನಂಜಪ್ಪ-ಹೆಂಡತಿಗೆ)ಜಲ್ದಿ ಬಿಸನೀರ್ ತಾರಮ್ಮಿ ಎಷ್ಟೊತ್ತು ಮಾಡ್ತೀಯ (ನಂಜಪ್ಪನ ಹೆಂಡತಿ ದೊಡ್ಡದೊಂದು ಅಲ್ಯುಮಿನಿಯಂ ಪಾತ್ರೆಯಲ್ಲಿ ಬಿಸಿನೀರು ತಂದು ವೈದ್ಯನ ಮುಂದಿಡುತ್ತಾಳೆ

ಪ.ವೈ.-ಬಿಸಿನೀರು ಸ್ವಲ್ಪ ಇದ್ರೆ ಸಾಕು. ಒಂದು ಬಕೆಟ್ ನೀರು ಕಾಯಿಸಿದ್ದೀಯಲ್ಲಮ್ಮ. ನಾನೇನು ಸ್ನಾನ ಮಾಡ್ತಿನೀಂತ ತಿಳಿಕೊಂಡ್ಯ? (ಸಿರೀಂಜ್ ಹಾಗೂ ಸೂಜಿಯನ್ನು ತೆಗೆದು ಬಿಸಿನೀರಿನಲ್ಲಿ ಸ್ಟೆರಿಲೈಜ್ ಮಾಡಿಕೊಂಡು ಒಂದೊಂದೇ ಇಂಜೆಕ್ಷನ್ ಕೊಡುತ್ತಾನೆ)- ಈ ರೋಗದಲ್ಲಿ ಊತ ಬಂದ ಕಡೆ ಮಾಂಸಖಂಡಗಳಲ್ಲಿ ಬ್ಯಾಕ್ಟೀರಿಯಾಗಳಿದ್ದು, ವಿಷ ಉತ್ಪತ್ತಿ ಮಾಡುತ್ತವೆ. ವಿಷದಿಂದ ಮಾಂಸಖಂಡಗಳು ಕೊಳೆಯುತ್ತವೆ. ಅದಕ್ಕೇ ಊತ ಬಂದ ಕಡೆ ಒತ್ತಿದರೆ ನರನರ ಎಂಬ ಶಬ್ದ ಬರುತ್ತೆ. ವಿಷ ನಿಧ ನಿಧಾನಕ್ಕೆ ರಕ್ತ ಸೇರತೊಡಗಿದಂತೆ ತೊಂದರೆ ಹೆಚ್ಚಾಗುತ್ತದೆ

ಇಂಜೆಕ್ಷನ್ ಕೊಟ್ಟಂತೆ ಹೋರಿ ನೋವಿನಿಂದ ಒದ್ದಾಡುತ್ತಿದೆ